Sunday, November 17, 2019

ಹನಿ ಕತೆ


                                                        ಹೊಸ ದೃಷ್ಟಿಕೋನ.
                                                       ~~~~~~~~~~~~~~
ಬಾಣಂತಿತನ ಮುಗಿಸಿಕೊಂಡು ಅದೇ ತಾನೇ ಬೆಂಗಳೂರಿಗೆ ಮತ್ತೆ ಸಾಫ್ಟ್‌ ವೇರ್‌ ಕೆಲ್ಸಕ್ಕೆ ಬಂದಿದ್ದಳಾಕೆ. ಆರು ತಿಂಗಳಲ್ಲಿ ಕಂಪೆನಿ,ಉದ್ಯಮದಲ್ಲಿ ಆದ ಹಲವು ಬದಲಾವಣೆಗಳು ಕೆಲ್ಸ ಸಾಕಪ್ಪಾ ಅನಿಸಲು ಬಹಳ ದಿನಗಳು ಆಕೆಗೆ ಬೇಕಾಗಲಿಲ್ಲ.ಮನೆಗೆ ಬಂದು ನೋಡಲು ಎಳೆ ಕಂದಮ್ಮನ ನಗು ಖುಷಿ ಕೊಡುತ್ತಿತ್ತು. . . ಮಗು ಅತ್ತಾಗ ರಮಿಸಲು,ತನಗೆ ಜೊತೆಯಾಗಿ ಅಮ್ಮ ಇಲ್ಲವಲ್ಲ ಅನ್ನೋ ಕೊರಗೂ ಇತ್ತು.
. . . ಮಕ್ಕಳು ಅತ್ತಾಗ ಹಿರಿಯರು ಏನು ಮಾಡುತ್ತಿದ್ದರೆಂದು ಹೇಳಿಕೊಡಲು ಬಳಿಯಲ್ಲಿ ಯಾರೂ ಇರಲಿಲ್ಲ.
    ಒಂದು ದಿನ ಮಗುವಿಗೆ ಸ್ನಾನ ಮಾಡಿಸಿದಾಗ ವಿಪರೀತ ಅಳಲು ಆರಂಭಿಸಿತು.ಹೀಗೆ ಮಗು ಅತ್ತಾಗ ಊರಲ್ಲಿ ಅಜ್ಜಿ ದೃಷ್ಟಿ ತೆಗೆಯುತ್ತಿದ್ದ ರೀತಿಯು ಈಕೆಗೆ ಆಗಲೇ ಮರೆತಿತ್ತು.ಅದಕ್ಕಾಗಿ ತಾನೇ ಶುರು ಹಚ್ಚಿಕೊಂಡ್ಳು ನೋಡಿ ಹೊಸ ಪದ್ಧತಿ:  “ಆ ದೃಷ್ಟಿ ಈ ದೃಷ್ಟಿ .. ವಾಟ್ಸಪ್‌ ದೃಷ್ಟಿ..ಫೇಸ್ಬುಕ್‌ ದೃಷ್ಟಿ..ಯಾಂಡ್ರೈಡ್‌ ದೃಷ್ಟಿ..ಶೇರ್‌ ಇಟ್‌ ದೃಷ್ಟಿ..ಫ್ಲಿಪ್‌ ಕಾರ್ಟ್‌ ದೃಷ್ಟಿ..ಹಾರ್ಡ್‌ ವೇರ್‌ ದೃಷ್ಟಿ..ಸಾಫ್ಟ್‌ ವೇರ್‌ ದೃಷ್ಟಿ..ಥೂ..ಥೂ..ಥೂ...”

                                                                 ದೃಷ್ಟಿ.
                                                            ~~~~~~~~
ಆ ದೃಷ್ಟಿ..ಈ ದೃಷ್ಟಿ..ಕೆಟ್ಟ ಕಣ್ಣವರ ದೃಷ್ಟಿ..ದೆವ್ವದ ದೃಷ್ಟಿ..ಕಳ್ಳ-ಕಾಕರ ದೃಷ್ಟಿ..ಪಾಪಿ ದೃಷ್ಟಿ..ಕರ್ಮಿ ದೃಷ್ಟಿ..ಹಂದಿ ದೃಷ್ಟಿ..ಮಂದಿ ದೃಷ್ಟಿ..ತಾಯಿ ದೃಷ್ಟಿ..ನಾಯಿ ದೃಷ್ಟಿ..ಸರ್ವ ಚಂಡಾಲರ ದೃಷ್ಟಿ...ಥೂ..ಥೂ..ಥೂ..ಅಂತ ಮೂರು ತಿಂಗಳ ಕಂದಮ್ಮನ ಮುಂದೆ ಅಜ್ಜಿ ಲೋಬಾನ ಹಾಕುತ್ತಾ ದೃಷ್ಟಿ ತೆಗೆಯುತ್ತ ಇರುವಾಗ-
ತದೇಕ ಚಿತ್ತದಿಂದ ಒಂದೇ ದೃಷ್ಟಿಯಲ್ಲಿ ಕಂದಮ್ಮನ ಆ ಪುಟ್ಟ ಅರಳಿದ ಕಂಗಳು ಈ ಮೂರು ತಿಂಗಳಲ್ಲಿ ನಮ್ಮ ತಾಯಿಯನ್ನು ಬಿಟ್ಟು ಉಳಿದವರು ಯಾರನ್ನೂ ತಾನು ನೋಡೇ ಇಲ್ಲವಲ್ಲ ಎಂಬಂತೆ ಬೆರಗು ಕಂಗಳಿಂದ ಅಜ್ಜಿಯನ್ನೇ ದಿಟ್ಟಿಸಿ ಪ್ರಶ್ನಿಸುವಂತೆ ನೋಡುತ್ತಿದ್ದವು!

ಮ್ಯಾನೇಜ್ ಮೆಂಟ್‌ ಪಾಠ.-ಹನಿ ಕತೆ.



                                                 ಮ್ಯಾನೇಜ್ ಮೆಂಟ್‌ ಪಾಠ.

ಒಂದೇ ಆಫೀಸ್‌ ನಲ್ಲಿ ಕೆಲಸ ಮಾಡುವ ಸೀನಿಯರ್‌ ಮ್ಯಾನೇಜರ್‌,ಕ್ಲರ್ಕ್‌,ಸೇಲ್ಸ್‌ ರೆಪ್ರೆಸೆಂಟೇಟಿವ್‌ ಕಾಕತಾಳೀಯವೆಂಬಂತೆ ಒಂದೇ ಬಸ್‌ ಸ್ಟ್ಯಾಂಡ್ ನಲ್ಲಿ ಬಸ್‌ ಗಾಗಿ ಕಾಯುತ್ತಿದ್ದರು.ಸಂದರ್ಭ‌ ಹೀಗಿರಲು, ದಾರಿಹೋಕ ಪವರ್‌ ಫುಲ್‌ ಸ್ವಾಮೀಜಿಯ ದೃಷ್ಠಿ ಇವರ ಮೇಲೆ ಬಿದ್ದು ಹತ್ತಿರ ಬಂದು, ʼನಿಮಗೇನು ವರ ಬೇಕು ಕೇಳ್ಕೊಳ್ಳಿʼಎಂದು ಹೇಳಿದರು.
  ಕೂಡಲೇ‌ ಕ್ಲರ್ಕ್, ”ಸ್ವಾಮಿ. . ನಾನು ಅರ್ಜೆಂಟಾಗಿ ಅಮೆರಿಕಾಗೆ ಪ್ರವಾಸ ಹೋಗಬೇಕು”
ಸ್ವಾಮೀಜಿ ತಥಾಸ್ತು ಎಂದ!
ಕ್ಲರ್ಕ್‌ ನ್ಯೂಯಾರ್ಕ್‌ ನಲ್ಲಿ ತಿರುಗಲಾರಂಭಿಸಿದ!
ಸೇಲ್ಸ್‌ ರಿಪ್ರೆಸೆಂಟೇಟಿವ್‌: “ಒಬ್ಬ ಸುಂದರಿಯೊಡನೆ ಗೋವಾ ಬೀಚಿಗೆ ಹೋಗುವ ಅವಕಾಶ ಕಲ್ಪಿಸಿ”
ಸ್ವಾಮೀಜಿ:ತಥಾಸ್ತು!   ಅವನು ಗೋವಾ ಕಲ್ಲಂಗೂಟ್‌ ಬೀಚ್ ಹತ್ರ ಹೋದ.
ಸ್ವಾಮೀಜಿ:ನಿನಗೇನು ಬೇಕು ಕೇಳಪ್ಪಾ?!
ಸೀನಿಯರ್‌ ಮ್ಯಾನೇಜರ್ (ಅಣಕಿಸುವಂತೆ): ”ಅವರಿಬ್ಬರೂ ಇನ್ನೊಂದು ನಿಮಿಷದಲ್ಲಿ ನನ್ನೆದುರು ಬಂದು ನಿಲ್ಲಬೇಕು, ಹಾಗೆ ಮಾಡಿ ಸಾಕು.”
ಸ್ವಾಮೀಜಿ:ತಥಾಸ್ತು!!!.

                                                                   ಪರಿವರ್ತನೆ.
                                                                ~~~~~~~~~~
ಆ ಮಿತ್ರರಿಬ್ಬರೂ ಚಿಕ್ಕಂದಿನಿಂದಲೂ ಪ್ರಶ್ನಿಸದೇ ಯಾವುದನ್ನೂ ಒಪ್ಪುತ್ತಿರಲಿಲ್ಲ.ಎಲ್ಲವನ್ನೂ ವೈಜ್ಞಾನಿಕ ಮನೋಭಾವನೆಯಿಂದ ವಿಶ್ಲೇಷಿಸದೇ ತೀರ್ಮಾನಕ್ಕೆ ಬರುತ್ತಿರಲಿಲ್ಲ.ಕಾಲ ಸರಿಯಿತು. ಪ್ರತಿಭೆಗೆ ತಕ್ಕಂತೆ ಒಳ್ಳೆಯ ಕಡೆ ಕೆಲಸ ಪಡೆದು ಮದುವೆಯೂ ಆದರು.ಫೋನಿನಲ್ಲಿ,ಎದುರು ಸಿಕ್ಕಾಗಲೂ ತಮ್ಮ ಸ್ವಭಾವ ಮೀರಿ ಹೋದವರಲ್ಲ!
  ಒಂದು ಭಾನುವಾರದ ದಿನ ಅವರಲ್ಲಿ ಒಬ್ಬನಿಗೆ ತನ್ನ ಗೆಳೆಯನ ಮಗುವನ್ನು ನೋಡಿ ಬರಬೇಕೆನಿಸಿ ಹೋದ.ಮನೆಯಲ್ಲಿಯೇ ಇದ್ದ ಗೆಳೆಯ ನಿದ್ರೆಗೆ ತೊಡಗಿದ್ದ ಮಗುವನ್ನು ತೊಟ್ಟಿಲಲ್ಲಿ ಹಾಕಿ ಒಂದೇ ಸಮನೆ ಬಿಟ್ಟೂ ಬಿಡದೆ ಹಾಡು ಹೇಳುತ್ತಾ ತೂಗುತ್ತಲಿದ್ದ.
  ಮಗುವನ್ನು ನೋಡಲು ಬಂದಿದ್ದ ಗೆಳೆಯ ಕೇಳಿದ, “ಇಷ್ಟು ಸತತವಾಗಿ ಏಕೆ ತೊಟ್ಟಿಲನ್ನು ತೂಗುತ್ತಿದ್ದೀಯಾ?ಕೈ ನೋವಾಗುವುದಿಲ್ಲವೇ?ಪೆಂಡೂಲಮ್‌ ನ ಬಗ್ಗೆ ಓದಿಲ್ಲವೇ?ಒಂದು ಸಾರಿ ತೂಗಿದರೆ ಒಂದಿಪ್ಪತ್ತು ಬಾರಿ ತೊಟ್ಟಿಲು ತಾನೇ ತೂಗುತ್ತದೆ.”
ಅದಕ್ಕೆ ಪ್ರತಿಯಾಗಿ ಗೆಳೆಯ ಉತ್ತರ ಕೊಟ್ಟ:”ಈ ಮಗುವಿನ ಮುದ್ದು ಮುಖವನ್ನು ನೋಡುತ್ತಾ ತೊಟ್ಟಿಲು ತೂಗುತ್ತಿದ್ದರೆ ನಾನು ಮಾಡುತ್ತಿರುವ ಕೆಲಸವೇ ನನಗೆ ನೆನಪಿರುವುದಿಲ್ಲ.ಇನ್ನು ವೈಜ್ಞಾನಿಕ ತಳಹದಿಯ ವಿಚಾರಗಳು ಎಲ್ಲಿ ಬರಬೇಕು?ಮಗುವಿನ ಮೇಲಿನ ಮಮತೆ ಎಲ್ಲ ಜ್ಞಾನವನ್ನು ಮರೆಸಬಲ್ಲದು.”

                                                                        ಪರಿಣಿತ.
                                                                             ~~~~~~~~
ರಭಸದಿಂದ ಬಾರ್‌ ನೊಳಗೆ ನುಗ್ಗಿದ ಪೈಲ್ವಾನ್‌,ಅಲ್ಲಿ ಕುಳಿತು ಕುಡಿಯುವುದರಲ್ಲಿ ಮಗ್ನರಾಗಿದ್ದವರನ್ನೆಲ್ಲ ನೋಡಿ,ಒಂದೇ ಸಮನೆ ಗಟ್ಟಿಯಾಗಿ ಅರಚಿದ.ʼನೀವೆಲ್ಲರೂ ಬಾರ್‌ ಗೆ ದಿನಾ ಬಂದು ಕಂಠಪೂರ್ತಿ ಕುಡೀತೀರಿ ಅಂತ ಕೇಳಿದ್ದೀನಿ.ನಿಮ್ಮಲ್ಲಿ ಯಾರಾದರೂ ಎರಡು ಫುಲ್‌ ಬಾಟ್ಲಿ ವಿಸ್ಕಿ ಗಟಗಟ ಅಂತ ಕುಡಿದರೆ ಸಾವಿರ ರೂಪಾಯಿ ಕೊಡ್ತೀನಿ.ʼಅಂತ ರಾಜಾರೋಷವಾಗಿ ಘೋಷಿಸಿದ.
   ಕೂಡಲೇ ಬಾರ್‌ ನಿಂದ ತುಂಬಾ ಅವಸರದಲ್ಲಿ ಒಬ್ಬ ವ್ಯಕ್ತಿ ಹೊರಹೋದ.ಅರ್ಧಗಂಟೆ ನಂತರ ಆ ವ್ಯಕ್ತಿ ಮತ್ತೆ ಬಾರ್‌ ಒಳಗೆ ಬಂದು:ಸಾರ್ ಆ ಪಂದ್ಯದಲ್ಲಿ ಪಾಲ್ಗೊಳ್ಳಲು ಇನ್ನೂ ಅವಕಾಶ ಇದೆಯಾ?!ʼ ಅಂತ ಕೇಳಿದ.
   ʼಇದೆʼಎಂದ ಪೈಲ್ವಾನ್‌.ಸರಿ ಅಂತ ಒಂದೆಡೆ ಕುಳಿತು ಎರಡು ಬಾಟ್ಲಿ ವಿಸ್ಕಿ ಖಾಲಿ ಮಾಡಿದ.ಬಾರ್‌ ನಲ್ಲಿ ಕುಳಿತವರೆಲ್ಲ ಅವನನ್ನು ಮೆಚ್ಚಿ ಎದ್ದು ನಿಂತು ಚಪ್ಪಾಳೆ ತಟ್ಟಿದರು.ಈತನ್ಮಧ್ಯೆ ಪೈಲ್ವಾನ್‌ ಆಶ್ಚರ್ಯದಿಂದ ಬಂದು ಸಾವಿರ ರೂಪಾಯಿ ನೋಟನ್ನು ಕೈಗಿತ್ತು,ʼಭೇಷ್.‌ . ಭೇಷ್.‌ .ನಂಗೊಂದು ಸಂದೇಹ.ನೀವು ಹೊರಗ್ಹೋಗಿ ಅರ್ಧ ಗಂಟೆ ಆದ ಮೇಲೆ ಬಂದ್ರಲ್ಲ!ಎಲ್ಲಿಗೆ ಹೋಗಿದ್ರಿ ಅಂತ ಕೇಳ್ಬೋದಾ?!ʼ
   ʼಓ ಅದಾ! ನಾನು ಈ ಬೀದಿಯ ಕೊನೆಗಿರೋ ಬಾರ್‌ ಗೆ ಹೋಗಿ,”ನಾನು ಅಷ್ಟು ಕುಡಿಯಬಲ್ಲೆನಾ ಅಂತ ಎರಡು ಬಾಟ್ಲಿ ವಿಸ್ಕಿ ಕುಡಿದು ನೋಡಿದೆ”ಎಂದನಾತ ತೂರಾಡುತ್ತಾ!


ಹಡೆಯೋದ್ರಾಗ ಗ್ಯಾಪ್‌ ಇರಲಿ. . .

ರಮಾಬಾಯಿ ಮಧ್ಯಮ ವರ್ಗದ ಹೆಂಗಸು.ಒಮ್ಮೆ ರಜೆಗೆಂದು ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಬಸ್ಸಿನಲ್ಲಿ ತನ್ನ ತವರು ಮನೆಗೆ ಹೊರಟಿದ್ದಳು.ಗಂಡ ಕೊಟ್ಟು ಕಳಿಸಿದ ದುಡ್ಡಿನಲ್ಲಿ ಒಂದಷ್ಟು ದುಡ್ಡು ಉಳಿಸುವ ಆಸೆಯಿಂದ ಮಕ್ಕಳಿಗೆ ಟಿಕೆಟ್‌ ತೆಗೆಸುವಾಗ ಅವರ ವಯಸ್ಸುಗಳನ್ನು ತಪ್ಪಾಗಿ ಹೇಳಿ ತಲಾ ಅರ್ಧ ಟಿಕೆಟ್‌ ತೆಗೆಸುವ ಪ್ಲಾನ್‌ ಮಾಡಿದಳು.
     ನಿರ್ವಾಹಕ ಟಿಕೆಟ್‌ ತೆಗೆಸುವಂತೆ ಕೇಳಿದಾಗ ರಮಾಬಾಯಿ ಎರಡೂವರೆ ಟಿಕೆಟ್‌ ಕೊಡುವಂತೆ ಕೇಳಿದಳು.ಎರಡು ಸೀಟ್‌ ಪೂರ್ತಿ ಈಕೆಯ ಮಕ್ಕಳು ಆವರಿಸಿಕೊಂಡಿದ್ದು ನೋಡಿ “ನಾಲ್ಲು ಜನ ಇದ್ದೀರಿ.ಇದೇನ್‌ ಬೇ ಬರೀ ಒಂದೇ ಫುಲ್‌ ಮೂರು ಹಾಫ್‌ ಟಿಕೆಟ್‌ ತಗೊಳ್ಳಿಕತ್ತಿಯಲ್ಲ!” ಅಂದ.
      ʼನೋಡಪ್ಪಾ,ಈಕಿ ಉಮಾ ಮೂರು ವರ್ಷ,ಆಕಿ ಸುಮಾ ಮೂರುವರೆ ವರ್ಷ ಇಂವಾ ಯೆಂಕ ನಾಲ್ಕು ವರ್ಷದಾಂವ ಇದಾನ!ʼ ಎಂದಳು ರಮಾಬಾಯಿ.
ನಿರ್ವಾಹಕ: ʼಮೂರೂ ನಿಮ್ಮವ ಏನ್ರೀ ಮಕ್ಕಳು?!ʼ
 ರಮಾಬಾಯಿ: ʼಯಾಕೋ ತಮ್ಮಾ ಹೆಂಗದ ಮೈಗ ಮನ್ಯಾಗ ಹೇಳೇ ನೌಕರಿಗೆ ಬಂದೀಯಾ ಹ್ಯಾಂಗ ಇಲ್ದಿದ್ರ ಅದಾ ನಿಂಗ. . .ʼ
 ಆಕೆಯನ್ನು ಹೆಚ್ಚು ತಡವಿಕೊಂಡ್ರ ಆಗಬಹುದಾದ ಅನಾಹುತವನ್ನು ಮನಗಂಡ ನಿರ್ವಾಹಕ: ʼಹಾಂಗ ಅಲ್ಲ ಬೇ. . . ನಾಲ್ಕನೇಯದು ಏನಾರ ಹಡೆದ್ರ ಈ ಸಾರಿ ಮಗುನ ಹಡೆಯಾಕ ಒಂಭತ್ತು ತಿಂಗ್ಳನಾರ ಸಮಯ ತಗೊಂಡು ಹಡಿ ಅಷ್ಟ... ತಗೋ ನಿನ್ನ ಎರಡೂವರಿ ಟಿಕೆಟ್‌ ..ತಾ..ತಾ..ರೊಕ್ಕ ತಾ. ದೌಡ. . ಇನ್ನೂ ಮಂದಿಗ್‌ ಟಿಕೆಟ್‌ ಕೊಡೋದ್‌ ಅದ..ʼ
  ರಮಾಬಾಯಿ ʼಅಷ್ಟು ಕೆಲ್ಸ ಇಟ್ಟುಕೊಂಡ್‌ ಎಷ್ಟ್‌ ಊರ್‌ ಹಿರೇತನ ಬಡೀತೀಯಲ್ಲಲೇ ತಮ್ಮಾ!ʼ
 ನಿರ್ವಾಹಕ ಸುಮ್ಮನಾದ.



                                              ಬದಲಾಗದ ರಾಶಿಫಲ!

     ತನ್ನ ರಾಶಿಫಲ ಬರೆದವರನ್ನು ಸದಾ ಬೈಯುತ್ತಿದ್ದ ರಂಗಸ್ವಾಮಿ ಒಂದು ದಿನ ತನ್ನ ರಾಶಿಫಲದಲ್ಲಿ “ಈ ದಿನ ಟು ವ್ಹೀಲರ್‌ ಅನ್ನು ಬಿಟ್ಟು ನೀವು ಫೋರ್‌ ವ್ಹೀಲರ್‌ ಅನ್ನು ಹತ್ತುತ್ತೀರಿ” ಎಂದಿದ್ದು ಕಂಡು ಹಿರಿಹಿರಿ ಹಿಗ್ಗಿದ.
    ತಾನು ಇಂದು ಕಾರಿನಲ್ಲಿ ಹೋಗುವವನಿದ್ದೇನೆ ಎಂದು ಭ್ರಮಿಸಿ ಹೆಂಡತಿ ಮುಂದೆ ಬೀಗಿದ.
    ಸಂಜೆ ಮನೆಗೆ ಜೋಲು ಮುಖ ಹೊತ್ತು ಬಂದ ಗಂಡನನ್ನು ಹೆಂಡತಿ ಕೇಳಿದಳು “ಹೇಗಿತ್ತು ರೀ ಯಾವುದೋ ಕೇಸಿನ ವಿಚಾರವಾಗಿ ನಿಮ್ಮನ್ನು ಪೋಲಿಸ್‌ ಜೀಪ್‌ನಲ್ಲಿ ಕರೆದುಕೊಂಡು ಹೋಗಿದ್ರಂತಲ್ಲ?!”
    ಗಂಡ ಮತ್ತೆ ರಾಶಿಫಲ ಬರೆದವನನ್ನು ಶಪಿಸಿದ.


                                                        ಕುಡಿಯೋಕೆ ಬರೊಲ್ವಾ . . .

ಮೀಟಿಂಗ್‌ ಮುಗಿಸಿ ಗೆಳೆಯರಿಬ್ಬರು ಜೊತೆಯಾಗಿ ಬೈಕಿನಲ್ಲಿ ಬರುತ್ತಿದ್ದರು.ಒಬ್ಬನು ತನ್ನ ಮನೆ ಹತ್ತಿರ ಇಳಿದು,”ಬಾರೋ ಗೆಳೆಯ ನಮ್ಮ ಮನೆಯಲ್ಲಿ ಟೀ ಕುಡಿದು ಹೋಗುವಿಯಂತೆ!”
ಇನ್ನೊಬ್ಬ,”ಇರ್ಲಿ ಬಿಡಪ್ಪಾ,ಮನೆಗೆ ಹೋಗೋಕೆ ಹೊತ್ತಾಯಿತು ನಾನಿನ್ನು ಬರ್ತೇನೆ.”
ಒಬ್ಬ, “ಹೋಗ್ಲಿ ಹೋಟಲ್‌ ನಲ್ಲಾದ್ರೂ ಕುಡಿದು ಹೋಗು ಬಾ”
ಇನ್ನೊಬ್ಬ(ತನ್ನಲ್ಲಿ ದುಡ್ಡಿಲ್ಲದ ಕಾರಣ)ʼʼಹೋಗ್ಲಿ. . . ಕುಡಿಸು ಬಾ. . .”
ಒಬ್ಬ,”ಮುದಿ ಕತ್ತೆ ವಯಸ್ಸಾಗುತ್ತ ಬಂತು ನಿನಗೆ ಇನ್ನೂ ಯಾರಾದರೂ ಕುಡಿಸಬೇಕಾ?!ನಿನಗೆ ಕುಡಿಯೋಕೆ ಬರೊಲ್ವಾ!”


  ಹೈಕುಗಳು.

          -ಬಿ.ರಾಮಪ್ರಸಾದ ಭಟ್.‌



ಗಳಿಕೆಯ ಅಮಲು
ಮೆಟ್ಟಿದಾಗಲೇ
ಅಹಂಕಾರ ಹುಟ್ಟಿತ್ತು.

ಚಿಮ್ಮುವುದು ಆಗಾಗ
ನಗೆಯ ಬುಗ್ಗೆ
ಅವಳ ನೆನೆದಾಗ!

ಅವನು ಸೊರಗುತ್ತಾ
ಸಣಕಲಾದ
ಆಕೆ ಮದುವೆಯಾಯ್ತು!



ಕತೆಗಳೋದೋ ಪರಿ
ಶುರುವಾದದ್ದು
ಅವಳ ಕಂಗಳಿಂದ!

ಅವಳ ಸಾವಿನಲ್ಲಿ
ಮಡುಗಟ್ಟಿದ
ಪ್ರೀತಿ ಹೊರಹೊಮ್ಮಿತ್ತು.

ಅವಳ ಮುಗುಳ್ನಗೆ
ಮರೆಸಿತ್ತಂತೆ
ನೂರಾರು ಮೈಲಿ ದಾರಿ!

ಅವಳು ದಣಿದಳು
ಸ್ಮಾರ್ಟ್ ಫೋನ್‌ ನ
ಕಸ ಗುಡಿಸೆಂದಾಗ.

ಅವನ ಹಂಗಿಸುವ
ಅವಳ ಪರಿ
ಪ್ರೀತಿಯೊಳಗೊಂಡಿತ್ತು!

ಕದಿಯುವ ಖಯಾಲಿ
ಬಿಡಲೇ ಇಲ್ಲ
ಕದ್ದು ಮದುವೆಯಾದ!

ಅವರ ನೆನಪಿನ
ಅಂಚಿನಲ್ಲಿದೆ
ನನ್ನ ಅವಳ ಪ್ರೀತಿ.

ಹಾತೊರೆಯುತ್ತಿದ್ದರೂ
ಮನದಾಗಸ
ಸರಸಕ್ಕಿಲ್ಲ ಕಾಲ.

ಜಗ್ಗದಿದ್ದರೂ ನಾನು
ತಪ್ಪೆನ್ನಲಾರೆ
ನಾನವಳಿಗೆ ಬಂಧಿ!

ತಡವರಿಸಬೇಕು
ಒಮ್ಮೆ ಮತ್ತೊಮ್ಮೆ
ಮಾತಾಡಿದರೆ ಹೋಯ್ತು!

ನಿಲ್ಲದ ಸಂತೆಯಲ್ಲಿ
ನಿಲ್ಲಲೇ ಬೇಕು
ನಿನಗೆ ಸಾವಾದಾಗ.



ಕಂಬನಿಸಿ ಕಳೆದು
ಕೊಂಡಂತಾಯಿತು
ಕಳೆಬರದ ಪ್ರೀತಿ.

ಜೀವವೆರೆದ ಸುಮ
ಅವಳೊಂದಿಗೆ
ಹಂಚಿಕೊಂಡ ಪ್ರೇಮ.

ಆತುರದ ನಿರ್ಧಾರ
ಅನಾಹುತಕ್ಕೆ
ನಾಂದಿ ಹಾಡಿದ್ದು ನಿಜ!

ಹಾದಿಯಗುಂಟ ಹೋದ
ಆತನ ಆಕೆ
ನೋಡುಗರ ವೇದಿಕೆ!

ಸಾವಿನೊಂದಿಗೆ ಸತ್ತಿತ್ತು
ಅವನು ಸ್ವತ್ತೆಂದು
ತಿಳಿದಿದ್ದ ಅಹಂಕಾರ!