Sunday, August 16, 2020
Rudyard Kipling's IF poem Kannada Translation.
Friday, August 7, 2020
ಹೈಸ್ಕೂಲ್ ದಿನಗಳಲ್ಲಿ ಬರೆದದ್ದು ಹಳೆ-ಹೊಸ ಕನ್ನಡದ ಸಮ್ಮಿಶ್ರ ಕವನ..
ಓ ಮನುಜ.
~~~~~~~~
ಗಿಡದೆಲೆಗಳು ಉದುರಿಹೋಗಿ ಇಲ್ಲ ಗಿಡದಲ್ಲೊಂದೂ ಎಲೆ
ನಸು-ನಸುಕಿನಲ್ಲೆದ್ದು ನೋಡಿದರೆ ಕಾಕಾಳಿಯೇರಿ
ತರುವಿನ ಮೇಲಿದ್ದ ಕಾಗೆಗಳುಂ ಕಾ..ಕಾss ಎಂದು ಶಬ್ದಮಂ
ಮಾಡುತಿರಲು,ನಿದ್ರಾಭಂಗವಾಯಿತೆಂದು,ಊರ ಜನರೆಲ್ಲ
ಅಲ್ಲಿ ಬಂದು ಸೇರಿ ಶಪಿಸಿ,ಬೈಯ್ದು ತಮ್ಮ ತಮ್ಮ
ಗೃಹಗಳಿಗೆ ಪೋದೊಡೆ,ಕಾಗೆಗಳುಂ ಚಿಂತಿಸುತಿರಲು
ಅಯ್ಯೋ! ಏನಿದು ಮನುಜ ಜಾತಿ, ನಮ್ಮಂಥ
ಕೀಳು ಪಕ್ಷಿಗಳು,ಇಲ್ಲಿ ದಿನ ಬೈಯಿಸಿಕೊಂಡು
ವಾಸಿಸಬಾರದೆಂದು ನಿಶ್ಚಯಿಸಿ,ಚದುರಿತು ಕಾಗೆ
ಗುಂಪು ಕಂಡ ಕಂಡಲ್ಲಿ ಇದನ್ನು ಕಂಡ ಊರ ಜನರು
ಸೋಗಮದಿಂದ ಇರತೊಡಗಿದರು,ಆದರೇನು?
ಎಲ್ಲ ಕಾಗೆಗಳ ವಾಸ ಎಲ್ಲಿರುವವೋ ಏನು?
ಯಾರೂ ಇದರ ಬಗ್ಗೆ ಚಿಂತಿತರಾಗದೆ
ತಮ್ಮ ತಮ್ಮಗಳ ಬಗ್ಗೆ ಚಿಂತಿಸುತಿರಲು
ಪಕ್ಷಿ ದೇವನು-ಪ್ರತ್ಯಕ್ಷನಾಗಿ(ಖಗ ದೇವ)
ಎಲ್ಲದರಲ್ಲೂ ಕರುಣೆ ಇಡು ಅವೇ,ನಿನಗೆ
ದಾರುಣ ಸ್ಥಿತಿಯೊಳ್ ನಿಮಗೆ ಒಳ್ಳೆಯದನ್ನು
ಮಾಡುವುದೆಂದೊಡೆ, ಪ್ರತಿಯೊಬ್ಬರಿಗೂ ನೀತಿ
ಸ್ಪರುಶವಾಗಿ ತಮ್ಮ ದುಶ್ಚಟಗಳನ್ನು ಬಿಡಲು
ಮತ್ತೆಂದಿಗೂ ಊರಜನರು ಯಾರಿಗೂ ಕಾಟ ಕೊಡಲಿಲ್ಲ
ತನ್ನೊಬ್ಬನ ಚಿಂತೆಯನ್ನು ಬಿಟ್ಟು ಪರರ
ದುಃಖದಲ್ಲಿಯೂ ಬಾಗಿಯಾಗಬೇಕೆಂದು ನಮ್ಮ ನೀತಿ
ಮಂಜರಿ ಹೇಳುತ್ತದೆ(ತಿಳಿಸುತ್ತದೆ) ಓ ಮನುಜ!
-ಬಿ.ರಾಮಪ್ರಸಾದ
ಭಟ್, ಹೊಸಪೇಟೆ. (ಪುಟ:-133, ಸ್ನೇಹ ಸಮ್ಮಿಲನ ಕವನ ಸಂಕಲನ.)
Tuesday, August 4, 2020
2020 Poems....
ಅವಳ ಸಾವಿನ ಸುತ್ತ…
~~~~~~~~~~~~~~~
ಅವಳು ಸತ್ತಿದ್ದಳು
ಯಾವೊಂದು ಸುಳಿವಿರದೆ
ಅತ್ತಿದ್ದವು ಮಕ್ಕಳೆರಡು
ಬಿಕ್ಕಿ ಬಿಕ್ಕಿ ಕಾರಣವೇ ತಿಳಿಯದೆ!
ದುಗುಡದ ಮಡುವಿನಲ್ಲಿ
ನರಳುತ್ತಿದ್ದವು ಹತ್ತಾರು
ನಿಜವೆಷ್ಟೋ ಸುಳ್ಳೆಷ್ಟೋ
ಅವಳು ಸತ್ತಿದ್ದಂತೂ ನಿಜ!
ಆತುರದ ಸಾವು ಅವಳಿಗೇಕೆ
ಬಂದಿತ್ತೋ? ಹೇಳಲೊಲ್ಲರು-
ಊಹಾ-ಪೋಹಗಳೇ ಅಲ್ಲಿ
ನಾಲಿಗೆಯ ಮೇಲೆ ಹರಿದಾಡುತ್ತಿತ್ತು
ಕಟ್ಟಿದ ಕಟ್ಟಿಕೊಂಡ ಟೊಂಕ ಕಟ್ಟಿ
ನಿಂತ ಎಂಟೆದೆ ಭಂಟ ಗಂಡನೋ!
ಎಲ್ಲಿದ್ದನೋ ಏನೋ ಅವನು
ತಿಳಿದಿರಲಿಲ್ಲ ಯಾರಿಗೂ-ಅವ್ನು ಬರುವನೋ?!
ಸಾವಿನ ಆಘಾತವೇ ಹೀಗೆ
ಬಂದು ಬಸವಳಿಸಿಬಿಡುವುದು
ದಿಢೀರನೇ ಸಂತಸದ ಕಳೆಯ ಸರಿಸಿ
ತಿಳಿಯದೇ ಮೇಳೈಸಿ ಬಿಡುವುದು.
ಯಾರೂ ಏನನೂ ಮಾಡಲಾರರು
ಸಾವೆಂಬುದು ಶತಸಿದ್ಧವಾಗಿ ಬಂದಾಗ
ಮಾಡುವುದಕ್ಕಾದರೂ ಏನೂ
ಉಳಿದಿರುವುದಿಲ್ಲ ಯಾರ ಕೈಯಲ್ಲೂ!
--ಬಿ.ರಾಮಪ್ರಸಾದ ಭಟ್ ಹೊಸಪೇಟೆ.
17:02- ದಿನಾಂಕ:- 02-08-2020.