ಮಾರ್ಗದರ್ಶಿ.
ಈ ಬದುಕಲ್ಲಿ...
~~~~~~~~~~
ನಿನ್ನ ಬದುಕಿನ ಕನ್ನಡಿ
ನಿನ್ನನೇ ಹುಡುಕಿ ತೋರಿಪುದು
ನಿನ್ನ ಬದುಕಿಗೆ ತಾನ್
ಮುನ್ನುಡಿಯ ಬರೆದಿಹುದು
ನೀನು ನೋಡಿದಂತೇ ಅದುವು
ನಿನ್ನನೇ ನೋಡಿಹುದು ಆ ಕ್ಷಣವೇ
ನಿನ್ನ ಕ್ರಿಯೆ, ನಿನ್ನ ವರ್ತನೆಯನು
ಅನುಕರಣೆಯ ಮಾಡಿಹುದು ನಿನ್ನನು
ಕನ್ನಡಿಯೊಳಗಿನ ಗಂಟು
ನಿನ್ನ ಮನಸಿಗೆ ಉಂಟೇ ನಂಟು?!
ಬಾಹ್ಯರೂಪವ ತೋರಿತೆನಲು,
ನಿನ್ನ ನೀ ಅರಿಯಲು ದಾರಿ
ತೋರುವುದೇನು?
ಸತ್ಯ... 2002.
~~~~~
ನಾನು ಹೇಳಿದ್ದೆಲ್ಲ ಸತ್ಯವೆಂದಲ್ಲ
ನಾನು ಸುಮ್ಮನಿದ್ದ ಮಾತ್ರಕ್ಕೆ
ಸತ್ಯವಂತನಲ್ಲವೆಂದಲ್ಲ
ಸತ್ಯ ಹೇಳಿದೆ ಎಂದೋರೆಲ್ಲ
ಸತ್ಯವಂತರಲ್ಲ
ಸತ್ಯ ಹೇಳಿದವರು ಬಹಳಿಲ್ಲ
ಸತ್ಯ ಹೇಳು ಎನ್ನುವವರು ಕಮ್ಮಿಯಿಲ್ಲ
ಸತ್ಯಕ್ಕಾಗಿ ಸಾಯುವವರು ವಿರಳ
ಹೀಗೆಂದ ಮಾತ್ರಕ್ಕೆ ʼಸತ್ಯʼಕ್ಕೆ
ಬೆಲೆಯಿಲ್ಲವೆಂದಲ್ಲ
ಸತ್ಯವೆಂದರೆ ಸುಳ್ಳಲ್ಲ ಸುಳ್ಳೆಂದರೆ
ಸತ್ಯವಲ್ಲ
ಸತ್ಯ ಸುಳ್ಳಾಗಬಲ್ಲದು ಸುಳ್ಳು
ಸತ್ಯವಾಗಬಲ್ಲದು
ಸುಳ್ಳಲ್ಲದ ಸತ್ಯವೇ ಸತ್ಯ;ಸುಳ್ಳೆಂಬ
ಸುಳ್ಳು ಸತ್ಯ
ಸತ್ಯದ ಮರ್ಮವ ಅರಿಯ ಹೊರಟರೆ
ಕರ್ಮ ಒಂದು ʼಸತ್ಯʼದ ಮೂಲವನ್ನೇ
ಮರೆಸಿತಂತೆ!
ಬದುಕಿನಲ್ಲಿ...
~~~~~~~~~~
ಹೇಗಿತ್ತು. . . ಹೇಗಾಯ್ತು!
ಈ ನಮ್ಮ ಬದುಕು
ಕನಸು ಕಾಣುವ ನೆನಪು ಮಾಡಿ
. .
ನೋವಾ . . ಮರೆತಿತ್ತು
ನೆನಪುಗಳಿರುವುದು ಮರೆಯೋಕ್ಕಲ್ಲ-
ಮನಸಲಿ ಎಂದಿಗೂ ಉಳಿಯೋಕೆ
ಕನಸುಗಳಿರುವುದು ಕಾಣೋಕ್ಕಲ್ಲ
ನನಸನು ಮಾಡುವ ಹೆಬ್ಬಯಕೆ
ಬಯಕೆಗಳಿರುವುದು ಮನುಷ್ಯನಿಗಲ್ಲ
ಮನಸ್ಸು ಹೂಡುವ ತಂತ್ರಕ್ಕೆ
ತವಕಗಳಿರುವುದು ಜೀವನಕ್ಕಲ್ಲ
ಹೃದಯವು ಸಹಿಸದ ಭಾವಕ್ಕೆ
ನೋವುಗಳಿರುವುದು ಸಾಯೋಕ್ಕಲ್ಲ
ಜೀವನದ ಅರ್ಥವ ತಿಳಿಯೋಕೆ
ನೀತಿಗಳಿರುವುದು ಹೇಳೋಕ್ಕಲ್ಲ
ಗುರಿಯನು ತಲುಪುವ ಮಾರ್ಗಕ್ಕೆ.
ಸಿನೀಮಿಯಾ.(Cinemia)
~~~~~~~~~~~~~~~~
ಕಬ್ಬಿಣಾಂಶದ
ಅಭಾವದಿಂದ
ಬರುವುದಂತೆ
ಅನೇಮಿಯಾ
ವಿಪರೀತ ಸಿನಿಮಾ
ನೋಡಿ ನೋಡಿ
ಬಂದಿದೆ ಅಣ್ಣಗೆ
ಸಿನೀಮಿಯಾ.
ಎಲ್ಲಾ ಅಡಗಿದೆ ಇದರೊಳಗೆ.
. .
~~~~~~~~~~~~~~~~~~~~
ಏನಾಯ್ತು ಸ್ನೇಹ... ಮರೆತೋಯ್ತಾ
ಸ್ನೇಹ...
ಕೆಸರಾಯ್ತಾ ಸ್ನೇಹ... ಜಾರಿಹೋಯ್ತಾ
ಸ್ನೇಹ...
ಏಕೆ ನೀನು ಹೀಗೆ ಕಾಡುವೆ
ಮನಸನ್ನು ನೀ ಕೊಲ್ಲುವೆ
ಎದೆಯಲ್ಲಿ ನೀನು ಕಂಪನ ಮಾಡುವೆ
ಏನೆಂದು ತಿಳಿದಿರುವೆ ಓ ನನ್ನ
ಒಲವೇ
ಕ್ಷಣ ಕ್ಷಣಕೂ ಮೌನ
ಏನಾಯ್ತು ಅವಮಾನ
ಏಕಿಷ್ಟು ಬಿಗುಮಾನ
ಬೆಟ್ಟದಷ್ಟು ದುಮ್ಮಾನ
ಕತ್ತಲ ಮರೆಯಲ್ಲಿ ಓಡುವೆ
ಈ ಹೃದಯಾನ ಮರೆತಿರುವೆ
ಏನಾಯ್ತೋ...ಕನಸುಗಳು
ಸೀಳಿಹೋಯ್ತು ಸೇತುವೆಯು
ಈ ಬಂಧವಿರದೆ ಹೇಗೆ ಸಾಧ್ಯ?
ಈ ಬಾಳು ಬರಡಾಯ್ತು ಇದುವೇ
ಸತ್ಯ!
ಮಾತುಗಳಿಲ್ಲದೆ ಮನಸುಗಳಿಲ್ಲ
ಸ್ನೇಹವು ಇರದೆ ಜೀವನವಿಲ್ಲ
ಕಂಬನಿಯು ಕೇಳದಾಯಿತೇ
ಮರೆತ್ಹೋಯ್ತಾ ಈ ಒಡಲು.
ವಿಜ್ಞಾನದ ಅಧ್ಯಯನವೊಂದು
ಹೇಳಿತು-
“ಬ್ರಹ್ಮಚಾರಿಗಳಿಗಿಂತ ಸಂಸಾರಿಗಳಲ್ಲಿ
ಜಾಸ್ತಿ ಸಂತಸವಿರುತ್ತೇಂತ!”
ಇದ್ದನೊಬ್ಬ ಬ್ರಹ್ಮಚಾರಿ-
ಆದರೂ ಸದಾ ಸಂತಸದಿಂದಿದ್ದ
ಅದು ಹೇಗೆ ಎಂಬುದೇ
ವಿಜ್ಞಾನದ ಪ್ರಶ್ನೆ?
ಅವನನ್ನು ಕೇಳಿದರೆ ಹೇಳಿದ-
ʼʼನೋಡಿ ನಾನು ವಿಜ್ಞಾನವನ್ನು
ಸುತಾರಾಂ ನಂಬುವುದಿಲ್ಲ...”
ಇತಿಮಿತಿ.
~~~~~~~
ಇತಿಮಿತಿಯಲ್ಲಿ
ಬದುಕುತಿರುವುದು
ಅವನ
ಇತಿಮಿತಿ!
ಸೋತವರಿಗೆ ಬರವಿಲ್ಲ
ಗೆದ್ದವರಿಗೆ ಬರವಿಲ್ಲ
ಸೋತು ಗೆದ್ದವರಿಗೂ ಬರವಿಲ್ಲ
ಗೆದ್ದು ಸೋತವರು ಮಾತ್ರ ವಿರಳ.
ನೀನಿದ್ರೆ ನಾನು
ನೀನಿಲ್ದೆ ಏನು?!
ಎನ್ನುತ್ತ ಕುಂತವನು
ಮೋಸ ಹೋದಾಗ
ಸೇರಿದ
ಮಾನಸಿಕ ಆಸ್ಪತ್ರೆ ಬೋನು!
ಏನಾಯ್ತು?!
~~~~~~~~~
ನೀತಿಯು ಬೆರೆತ ಸತ್ಯವ ಮರೆತ
ಭಾರತ ದೇಶವು ನಮದಾಯ್ತು...
ಕ್ರಾಂತಿಯು ಬೆರೆತ ಶಾಂತಿಯ
ಮರೆತ
ಭಾರತ ಭೂಮಿಯು ಏನಾಯ್ತು?!
ರಾಷ್ಟ್ರಭಕ್ತಿಯ ಮೆರೆದ ಕುವರರ
ಮರೆಯುವುದೊಂದೇ ಗುರಿಯಾಯ್ತು...
ಅವರ ಸಾಧನೆ ಮಾಡಲಾಗದೆ
ದೇಶದ ಕಥೆಯು ಏನಾಯ್ತು?!
ದೇಶದೊಳಿತಿಗೆ ತ್ಯಾಗ ದೀವಿಗೆ
ಬೆಳಗುವ ಛಾತಿ ಮರೆತ್ಹೋಯ್ತು...
ಯುದ್ಧಭೂಮಿಯಲಿ ಬದ್ಧ ವೈರಿಯೆದೆ
ಸೆದೆಬಡಿಯುವುದೆಲ್ಲಾ ಏನಾಯ್ತು?!
ಖಾಲಿಯಾಗಿಯೇ ಉಳಿದ
ಈ ಪುಟಗಳ
ವರ್ಷಾನಂತರ...ಮತ್ತೆ
ಚಾಲನೆಗೆ
ಎಂದೋ ಸಲ್ಲಿಸದ
ಮನವಿಗೆ
ಸರ್ಕಾರದೋರು ತೋಚಿದಾಗ
ಎತ್ತಿಕೊಳ್ಳುವಂತೆ!
ಭಾರಿ ಓದಿದೋನು!
~~~~~~~~~~~~~
ತಿಳಿದಿದ್ದನ್ನ ತಿಳಿದಂಗೆ
ಹೇಳಿದ್ರೆ ...ಬಯ್ತಾರೆಲ್ಲ
ಭಾರಿ ಓದ್ ದೋನು ನೀನಪ್ಪ
ನಮಗೆಲ್ಲಿ ಬರ್ಬೇಕು
ನಿನ್ನಂತ ಬುದ್ಧಿ...ದೊಡ್ಡೋನಾದೆ
ಭಾರಿ ಓದ್ ದೋನು ನೀನಪ್ಪ
ಓದಿದ್ ತಪ್ಪಾ ಓದ್ಸ್ದೋರ್
ತಪ್ಪಾ
ಹೇಳಿ ಯಾಕ್ ಬಯ್ತಾರೆಲ್ರೂ
ಭಾರಿ ಓದ್ ದೋನು ನೀನಪ್ಪ
ಓದದೇ ಇದ್ದರೂ ಓದಿಸಿ
ಪುಣ್ಯ ಕಟ್ಕೊಂಡೋರೆಲ್ಲ ಅಲ್ಲವೇ
ನಿಜಕ್ಕೂ ಹೇಳಿ ಓದಿದ್ದು
ಅವ್ನಲ್ಲ
ಅವರಪ್ಪಾಂತ!
ವಿಸ್ಮಯ.
~~~~~~
ಅಂದು ʼಬರಡುʼ
ಎಂದು ತಿಳಿದಿದ್ದ
ಬದುಕು
ಇಂದು
ಪ್ರೀತಿ-ಸ್ನೇಹಗಳ
ಒರತೆ ತುಂಬಿದ
ʼಮಡುʼ
ವಿಚಿತ್ರ.
~~~~~~
ಅಂದು ತಿಳಿದಿದ್ದೆ
ಈ ಬದುಕು
ಬರಡು
ಆದರೆ ಇಂದು
ಪ್ರೀತಿ-ಸ್ನೇಹಗಳ
ಮಡು.
ಬದುಕು.
~~~~~~
ಮಾತೆಂಬ
ಪರಿಧಿಯ
ಮಧ್ಯೆ ಸಿಕ್ಕ
ʼಬದುಕೇʼ ಅದರ
ಕೇಂದ್ರ.
ಸೋಜಿಗ.
~~~~~~
ದುಃಖಾಂತವಾಗಬೇಕಿದ್ದ
ನನ್ನ ಬದುಕು
ʼನಾನು ಬದಲಾದುದಕೆʼ
ಆಗಿದ್ದು ಧನಕನಕದಿಂದ
ಕೂಡಿದ ʼಸಂದೂಕುʼ
ಲಭ್ಯ.
~~~~
ವಾತ್ಸಲ್ಯ
ಸಿಗದುದಕೆ
ಬೇರೆಯವರಲ್ಲಿ
ಸಿಕ್ಕಿದ್ದು
ಮಾತ್ಸರ್ಯ.
ಗತಕಾಲ.
~~~~~~~
ನಾನು ...ಹಾಗನ್ನಬಾರದಿತ್ತು
ನಾನು...ಹಾಗೆ ದೂಷಿಸಬಾರದಿತ್ತು
ಛೇ! ಎಲ್ಲವೂ ಆ
ಗತಕಾಲದಲ್ಲಿ ನನ್ನನ್ನು
ಆ ವಿಧಿ ಪಣಕ್ಕಿಟ್ಟಿತು.
ಅಂತ್ಯ.
~~~~~~
ವಿದ್ಯೆಯ ಅಂತ್ಯ
ವಿನಯ
ವಿನಯ ಬರುವನಕ
ವಿದ್ಯೆ.
ಬಾಂಧವ್ಯ.
~~~~~~~~~
ಬದುಕು ಮುಗಿಯುತ್ತಿದೆ
ಎಂದು ತಿಳಿದಾದ ಮೇಲೂ
ದುಃಖ ಅವನ ಕೈ
ಬಿಡಲಿಲ್ಲ.
ಆಯ್ಕೆ.
~~~~~~
ಸತ್ಯವ ಬಿಟ್ಟರೆ
ಸಂಬಂಧ
ಆ ಮೌಲ್ಯವ ತೊರೆದರೆ
ಪ್ರಾರಬ್ಧ.
ಸಮೃದ್ಧಿ.
~~~~~~~
ಸಮೃದ್ಧಿಯ ಫಸಲು
ಬೆಳೆದ
ನಮ್ಮ ರೈತ
ಕೊನೆಗೂ ಆದ
Some-ವೃದ್ದಿ.
ಅಭ್ಯಾಸಗಳು.
~~~~~~~~~
ಈ ʼಅಭ್ಯಾಸʼಗಳೇ
ಹೀಗೆ...
ಬೇಸರದಿಂದಲೇ
ಹುಟ್ಟಿ,ಕೊನೆಗೆ
ಕರಗತವಾದ ಮೇಲೆ
ಬೇಸರದಿಂದಲೇ
ಅಂತ್ಯ ಕಾಣುತ್ತವೆ.
ಸದಭಿರುಚಿಗಳೆಂದರೇನೆಂದು
ತಿಳಿಯದವ
ಸಾದಾ ಅಭಿರುಚಿಗಳಿಗೆ
ದಾಸಾನುದಾಸನಾದ.
ರಾ-ಜೀವ.
~~~~~~~
ಎಲ್ಲೋ ಹುಟ್ಟಿದ
ರಾಜೀವ
ಜೀವ ಮಾತ್ರ
ಇಲ್ಲೇ ಬಿಟ್ಟ.
ವಿಚಿತ್ರ,
~~~~~
ಜೀವನದಲ್ಲಿ
ದಿಕ್ಕೆಟ್ಟವ...
ಎಲ್ಲವ ತೊರೆದು
ದೂರ ಹೋಗುವಾಗ
ಮತ್ತೆ ದಿಕ್ಕು
ತೋಚದಾಯ್ತು.
ಪ್ರೀತಿ.
~~~~~
ನನ್ನ ಹೃದಯದಲ್ಲಿ
ಪ್ರೀತಿಗೆ ಸ್ಥಾನವಿಲ್ಲ...!
ಎಂದು ಸದಾ
ಹೇಳುತ್ತಿದ್ದವನಿಗೆ
ʼಪ್ರೀತಿʼ ಎಂದರೇನು
ಎಂಬುದೇ
ತಿಳಿದಿರಲಿಲ್ಲ.
ಹೀಗಿದೆ...
~~~~~~
ಇರುವುದನ್ನು
ಇರುವ ಹಾಗೆ
ಹೇಳಿ ಬಿಡಿ ಎಂಬುದೇ
ಇಂದಿನವರ ʼಊವಾಚʼ
ಅದಕ್ಕೆಂದೇ
ಕೇಳ್ತಾರೆ ನೋಡಿ
ಸರ್ಕಾರಿ ಕಛೇರಿಗಳಲ್ಲಿ
ನೇರವಾಗಿ ʼಲಂಚʼ
ಲಕ್ಷ್ಯ-ಅಲಕ್ಷ್ಯ.
~~~~~~~~~
ಲಕ್ಷ ಲಕ್ಷ
ಉಳಿಸುತ್ತೇನೆಂದು
ಎಲ್ಲವನ್ನು
ಮಾಡಿದ
ಅಲಕ್ಷ್ಯ
ಲಕ್ಷ್ಯವಿಲ್ಲದೆ
ಆರೋಗ್ಯ
ಕೆಡಿಸಿಕೊಂಡು
ಕಳೆದುಕೊಂಡ
ಕೂಡಿಟ್ಟ
ಲಕ್ಷ-ಲಕ್ಷ!
ಸಪ್ನ ಸಂಚಾರಿ.
~~~~~~~~~~
ನಿಜಕ್ಕೂ ಇವನೇ
ಜಗತ್ತಲ್ಲಿ
ದೀರ್ಘ ಪ್ರಯಾಣ
ಮಾಡಿದವ...
ಕಾಸಿನ ಖರ್ಚಿಲ್ಲ
ಪೆಟ್ರೋಲ್ ನ ಬಳಕೆಯಿಲ್ಲ
ಎಲ್ಲೆಂದರಲ್ಲಿ
ಹೇಗೆಂದ ಹಾಗೆ
ಇರಬಲ್ಲವನೊಬ್ಬನೇ
ಅವನೇ ʼಸ್ವಪ್ನ ಸಂಚಾರಿʼ
ಜೀನ
ಜೀವನ
ನಡೆಸಬಲ್ಲ...
ಬದುಕಲ್ಲಿ ಬದಲಾಗಬೇಕು
ನಾವೊಮ್ಮೆ ಗೆಲ್ಲಬೇಕು
ಛಲವೊಂದು ಇರಬೇಕು
ನಾವೇಕೆ ಹೆದರಬೇಕು?!
ಸಾಧನೆಯ ಮಾಡಬೇಕು
ಮನಸದಕೆ ತುಡಿಯಬೇಕು.
ಹಣ ಇಲ್ಲದಿದ್ದರೆ
ಹೆಣ ಬೇಗ ಉರುಳುತ್ತಿರಲಿಲ್ಲ
ಚಿಂತೆಯೇ ಇರುತ್ತಿರಲಿಲ್ಲ
ಯಾರು ಯಾರಿಗೂ ಬೇಕಾಗುತಿರಲಿಲ್ಲ.
ವಿಪರ್ಯಾಸ/ಬದಲಾವಣೆ.
~~~~~~~~~~~~~~~~~~
ನಿನ್ನೆ-ಮೊನ್ನೆ ಕಣ್ಣ ಮುಂದೆ
ಓಡಿ-ಆಡುತ್ತಿದ್ದ ಬಾಲೆ
ಇದೋ ನನ್ನ ಅದೇ ಕಣ್ಣ ಮುಂದೆ
ಅವಳಾಗಲೇ ಇನ್ನೊಬ್ಬರ ಬೆನ್ನೇರಿದ
ನಲ್ಲೆ.
ಅವಳು
ನಕ್ಕಳೆಂದು
ಇವನು
ಗುಕ್ಕಿದನಂತೆ!
ಮರೆಯಾದ ʼಕಲ್ಪನಾʼ 2003
~~~~~~~~~~~~~~
ಅವಳ ಹೆಸರೇನೋ ʼಕಲ್ಪನಾʼ
ಆದರೆ ಅವಳ ಸಾಧನೆ ಕಲ್ಪನೆಯಲ್ಲ!
ದಿಟ್ಟ ದಾರಿಯಲಿ ನಡೆದ ಧೀರೆ
ಹೆಣ್ಣು ಕೀಳೆಂಬ ಭಾವನೆ ಮೀರೇ
ಗಗನದಗಲ ನಲಿದ ಮಹಿಳೆ
ಅದರಲ್ಲೂ ಅವಳು ಮೊದಲೇ
ಕೆಲವರು ಸಾಧನೆಗೆಂದೇ ಜನ್ಮತಳೆದು
ಎಲ್ಲವನು ಬದುಕಲಿ ತೊರೆದು
ಮುಡಿಪಾಗಿಟ್ಟು ತನುಮನಧನವನು
ಸಾಧಿಸಿಯೇ ಬಿಡುವರು ಬಯಸಿದನು
ಕಷ್ಟಗಳಿಲ್ಲದೇ ಸಾಧನೆಯಿಲ್ಲ
ನಗುಮೊಗದಿ ಎದುರಿಸಿದವರು
ಬಹಳಿಲ್ಲ
ಗಗನನೌಕೆಯನೇರಿದಳು ಮತ್ತೊಮ್ಮೆ
ವಿಧಿಯೇನೋ ಬಯಸಿತು ಒಮ್ಮೆ
ತನ್ನ ಕೈವಾಡವ ಅಲ್ಲಗಳೆಯದೆ
ಬಲಿ ತೆಗೆದುಕೊಳ್ಳಬೇಕಿತ್ತೇ,ಬಿಡದೆ
ಸಾಧನೆಯ ಗೋಚರ ದೃಷ್ಠಿ ಬೀರಿ
ಕಲ್ಪನಾ ಲೋಕದಲಿ ಈ ನೀರೆ
ಕಲ್ಪನೆಯಾಗಿಯೇ ಉಳಿವಂತಾದಳೇ...
ಸಾಧಿಸಲಿ ಇವಳ ಕನಸನು ಮತ್ತೋರ್ವ
ʼಕಲ್ಪನಾʼಳೇ!
ಎಲ್ಲಿದ್ದರೆ ಬದುಕು
ಹೇಗಿದ್ದರೆ ಬದುಕು
ದೇವರ ಒಂದು ಇಣುಕು
ಮನದಲ್ಲಿದ್ದರೆ ಸಾಕು
ಪ್ರಕೃತಿಯ ಮಡಿಲಲ್ಲಿ ಶಕ್ತಿಯ
ಸಾನಿಧ್ಯ
ನಂಬಿಕೆ ಒಂದಿದ್ದರೆ ಎಲ್ಲವೂ
ಸಾಧ್ಯ
ಮುಗಿಲಲ್ಲಿ ಚಂದಿರನು ಬೆಳಗುವ
ಲೀಲೆ
ಪಂಡಿತ ಬರೆದನು ಪ್ರಭುಲಿಂಗಲೀಲೆ
ಜನಪದ, ಕಾವ್ಯಗಳಲಿ ಅರಳಿದ
ಭಾಷೆ
ಕನ್ನಡವು ಕಳೆವುದು ಜಗದಾ
ನಿರಾಶೆ.
ಜ್ಞಾನಾನೇ ನಾ ಪ್ರೀತಿಸಿದೆ
Lifeನ್ನೇ ನಾ ತ್ಯಜಿಸಿದೆ
ಸಾಕಾಗೋಯ್ತು ಈ ಪರಪಂಚ
ಅನ್ನುತ್ತಿದ್ದ ಅಂವಾ ಕೊಂಚ
21ರ ವೈರಾಗ್ಯ
ಅದುವೇ ಅವನ ಭಾಗ್ಯ!
ನನ್ನ ಲೇಖನ ನೋಡುವ ಭಾಗ್ಯಕ್ಕೆ
ಕಾಯುತ್ತಿರಬೇಕು ಆ ಪತ್ರಿಕೆ.
ಹವ್ಯಾಸಗಳ ಪೋಷಣೆ
ನನ್ನದೇ ಆದ ಸ್ವತಂತ್ರ ಪ್ರಪಂಚದಲ್ಲಿ
ಒಂಟಿಯಾಗಿ ನಾನು ಬದುಕುತ್ತಾ
ಹೋದಾಗ
ʼಚಿಂತೆʼಯ ಭಯ ಎನಗಿಲ್ಲ.
~~~~~~~~~~
ನಿನ್ನೆಯ ದಿನಗಳನ್ನೆಲ್ಲ
ನೆನಪಾಗಿ ಉಳಿಸುವ ಭರದಲ್ಲಿ
ನಾಳೆಯ ನೆಮ್ಮದಿಯ ದಿನಗಳಿಗಾಗಿ
ಕಾತುರದಿಂದ ಕಾಯುವ ಬಗೆಯಲ್ಲಿ
ಇಂದಿನ ದಿನವನಂತೂ ನೀ
ವ್ಯರ್ಥವಾಗಿ ಕಳೆದು ಹಾಳುಗೆಡವ
ಬೇಡ ಈ ನಿನ್ನ ಬದುಕಿನಲ್ಲಿ.
ಮಕ್ಕಳಿರಾ ಏಳಿ. . .
~~~~~~~~~~~~
ಮಕ್ಕಳಿರಾ ಏಳಿ. . .
ಸುಮ್ಮನೆ ಕುಳಿತಿರಬೇಡಿ
ಸುಮ್ಮನೆ ಕುಳಿತು ಮುಂದೆ
ಕೊರಗಬೇಡಿ
ಮಕ್ಕಳಿರಾ ಏಳಿ. . .
ವ್ಯರ್ಥ ಕಾಲವ ಕಳೆಯಬೇಡಿ
ಕೆಲಸದಲಿ ತೊಡಗಿ ನಿಮ್ಮ ಗುರಿಯ
ಸೇರಿ
ಮಕ್ಕಳಿರಾ ಏಳಿ. . .
ಚಿಂತೆ ಮಾಡಬೇಡಿ
ಶಾಂತಿಯಿಂದ ಎಲ್ಲರೂ ಒಂದಾಗಿ
ಬಾಳಿ
ಮಕ್ಕಳಿರಾ ಏಳಿ. . .
ಸಾಧನೆಗೆ ಮನಸು ಕೊಟ್ಟು
ನಿಮ್ಮ ಹೆಜ್ಜೆಯೊಂದನ್ನು
ಇಲ್ಲಿ ಬಿಟ್ಟು ಹೋಗಿ.
ಬದುಕಿನ ದಾರಿ...
~~~~~~~~~~~
ಮಬ್ಬುಗತ್ತಲಿನ ಸಂಜೆ ಎದ್ದೆ...
ಮಾರ್ಗ ಮಧ್ಯೆ ಹಾದು ಹೋಗುತ್ತಿದ್ದೆ
ನನ್ನ ಪಕ್ಕದಲ್ಲೊಂದು ಅರಳಿಕಟ್ಟೆ
ವ್ಯಾಪಾರ ಮಾಡುವ ನಾಲ್ಕಾರು
ಜನ-
ಸೇರಿ ರಾಜಿ ಮಾಡುತ್ತಾ ಮಾರಾಟ
ನನ್ನ ಬಲಬದಿಗೆ ಈ ರೀತಿ
ಎಡಬಲಕ್ಕೆ ಇನ್ನೊಂದು ಫಜೀತಿ
ನನಗಿಂತ ಎತ್ತರದಲ್ಲಿ ಬೆಳಗುತಿದೆ
ಇನ್ನೂ
ಸರ್ಕಾರ್ದೋರ್ ನೆಟ್ಟು ಹೋದ
ಕರೆಂಟ್ ಕಂಬ-
ನನ್ನ ನೆರಳು ಈಟುದ್ದ ಬಿತ್ತು
ಅವರ ಮೇಲೆ
ಅಷ್ಟಕ್ಕೆ ಎಗರಾಡಬೇಕೇ ನನ್ಮೇಲೆ
ಇನ್ನು ನಾನು ಬಿದ್ದಿದ್ರೆ
ಹೇಗಿತ್ತು ಸ್ಥಿತಿ?!
ಕಲ್ಪಿಸಿದೆ, ಮನದೊಳಗೆ ಲೆಕ್ಕ
ಹಾಕಿದೆ,
ಅವರ ಕೂಗು ಕೇಳದೆ ನೇರ ಮುಂದೆ
ಬಂದೆ
ಬದುಕಿನ ದಾರಿ ಇಷ್ಟು ವಿಚಿತ್ರವೇ?!
ಈ ಭಾವನೆ ಹಿಂದೆಂದೂ ಬರಲಿಲ್ಲವೇ!
ನೆರಳನು ಕಂಡು ಹೆದರುವ ಜನಕೆ
ನೆರಳು ಬೇಡ ಬದುಕು ಬೇಕು-
ಸ್ವಾರ್ಥಪರ ನಿಲುವಿಗೆ ಜೈ
ಎನ್ನಬೇಕೇ?
ಅಸ್ತಿತ್ವಕ್ಕಾಗಿ ಜನ ಬಡಿದಾಡಬೇಕೆ
ಇಷ್ಟು
ಅಂತಹದ್ದು ಏನಿದೆ ಹೇಳಿ ಈ
ಬದುಕಲ್ಲಿ?!
ಹೆದರಿಕೆಗಾಗಿ ಮನಸ್ಸಿನ ಈ
ಸೈರಣೆ
ತಮ್ಮ ಮನದ ನಿಗ್ರಹಕೆ ಈ ನಿಂದನೆ
ಈ ದೂಷಣೆಯಲ್ಲಿ ನೆಮ್ಮದಿಯನೆಂದೂ
ನಾ ಕಾಣೆ
ಬದುಕಿನ ದಾರಿ ಇನ್ನಷ್ಟು
ಚಿಕ್ಕದು
ʼಭರವಸೆʼ ಎಂಬುದೊಂದು ಭಾವ
ವಲಸೆ ಹೋಗಿ ಬರಬಂದಿದೆ ಈ
ನೆಲಕೆ
ಹೀಗೆ ಇನ್ನೆಷ್ಟು ಹರದಾರಿಗಳ
ಪಯಣ
ಕಂಡು ಹಿಡಿದರೆ ಬೇಗ ನರಕಕ್ಕೊಂದು
ನಿಜ ವಿಮಾನ
ಬೆಳೆದು ಬೆಳೆದು ವಿಜ್ಞಾನ-
ಬದಲಾಗುತ್ತಲಿದೆ ಜನರೆಲ್ಲೆ
ಮನ!
ನನ್ನೆದೆಯ ಧಮನಿಯಲ್ಲಿ
ಸರಿಗಮಪದನಿ ಹಾಡಿದಳು
ನನಗಾಗಿ ಅವಳು ಧರೆಗಿಳಿದು
ಬಳಿ ಬಂದಳು
ಅವಳಿಗಾಗಿ ನಾನು ನನ್ನ ಜೀವನವ
ತ್ಯಾಗ ಮಾಡಿ ಎಲ್ಲವ ಸಹಿಸುವೆನು.
No comments:
Post a Comment