Sunday, July 19, 2020

ಶಿಶುಕವನಗಳು...


ಕೊರೋನಾ ಟಿಕ್‌ ಟಾಕ್‌ ಸ್ಟಾರ್!
~~~~~~~~~~~~~~~~~~~~
ಬೇಸಿಗೆ ಪೂರ್ತಿ ಕೊರೋನಾ ಭೀತಿ
ಆಡುವ ರಜೆಯನ್ನು ನುಂಗಿತ್ತು
ನಿಲ್ಲಲೇ ಇಲ್ಲ ಕಾಲದ ಎಂದಿನ ರೀತಿ
ಟಿಕ್‌ ಟಿಕ್‌ ಸದ್ದನು ಮಾಡುತಲೇ ಇತ್ತು

ಗೆಳೆಯರ ಜೊತೆಯಲಿ ಇರುವುದೇ ಪ್ರೀತಿ
ಸ್ನೇಹಿತರ ಸಂಪರ್ಕವೇ ಕಡಿದಿತ್ತು
ಮಾಡಲು ಕೆಲಸ ಇಲ್ಲದೆ ಫಜೀತಿ
ಟಿಕ್‌ ಟಾಕ್‌ ಮಾಡುವ ಕಲೆಯನು ಕಲಿಸಿತ್ತು

ಮನೆಯಲೇ ಇರುವುದು ಸಾಕಾದ ರೀತಿ
ಬಾಗಿಲು ತೆರೆಯುವ ಹಾಗೆ ಮಾಡಿತ್ತು
ಹೊರಗೇ ಇರುವ ನನ್ನ ಹಳೆಯ ಸಂಗಾತಿ
ಗಲ್ಲಿಯ ಬೆಕ್ಕು ನಮ್ಮನೆಯನು ಹೊಕ್ಕಿತ್ತು

ಬೇಗನೆ ಅಯ್ತು ನನಗದು ಟಿಕ್‌‌ ಟಾಕ್ ಜೊತೆಗಾತಿ‌
ಹಾಡುವ ಹಾಡಿಗೆ ದನಿಗೂಡಿಸಿತ್ತು
ಎಲ್ಲರೂ ನೋಡಿ ಮೆಚ್ಚಿ ತಂದಿತ್ತು ನನಗೆ ಕೀರ್ತಿ
ಕೊರೋನಾ ಹೀಗೆ ನನ್ನಲಿ ಹೊಸ ಹುರುಪನು ತಂದಿತ್ತು.


ಕೊರೋನಾ ರಜೆ ಕಳೆಯಿತು

~~~~~~~~~~~~~~~~~~~
ಶಾಲೆಯು ಶುರುವಾಯ್ತು ನೋಡಿ
ಮಕ್ಕಳು ಬಂದರು ರಭಸದಿ ಓಡಿ
ಮನೆಯಲಿ ಎಲ್ಲರನೂ ದಿನವೂ ಕಾಡಿ
ಕೊರೋನಾ ರಜೆಗೆ ಹಾಕಿದರು ಬೇಡಿ

ಸ್ಮಾರ್ಟ್ಫೊನಲೇ ಕಾಲವ ಕಳೆದರು
ಗೆಳೆಯರ ಮುಖವ ಮರೆತೇ ಬಿಟ್ಟರು
ಪಿಕ್ನಿಕ್‌,ಟೂರ್ಕಳೆದುಕೊಂಡರು
ಟಿ.ವಿ. ಅಂತರಂಗವ ಅರಿತೇ ಬಿಟ್ಟರು

ಮುಖಕ್ಕೆ ಆಗದ ಮಾಸ್ಕನು ಬಿಗಿದು
ಸ್ಯಾನಿಟೈಸರ್ನಲ್ಲೇ  ಕೈಯನು ತೊಳೆದು
ಸಾಮಾಜಿಕ ಅಂತರದ ಸದ್ಗತಿಯ ತಿಳಿದು
ಕಳೆದರು ರಜೆಯ ನಿದ್ರೆಯಲ್ಲಿ ಗೊರಕೆ ಹೊಡೆದು

ಪಾರ್ಕು-ಮಾರ್ಕು ಮರತೇ ಬಿಟ್ಟರು
ಆಟದ ಉಸಾಬರಿ ಬಿಟ್ಟೇ ಬಿಟ್ಟರು
ತಿಂದು ಉಂಡು ಚೆಂದ ಕೊಬ್ಬಿದರು
ಹೀಗೆಯೇ ರಜೆಯ ಮುಗಿಸಿಬಿಟ್ಟರು


 ಮಕ್ಕಳಿರಾ ಏಳಿ. . .
~~~~~~~~~~~~
ಮಕ್ಕಳಿರಾ ಏಳಿ. . .
ಸುಮ್ಮನೆ ಕುಳಿತಿರಬೇಡಿ
ಸುಮ್ಮನೆ ಕುಳಿತು ಮುಂದೆ ಕೊರಗಬೇಡಿ

ಮಕ್ಕಳಿರಾ ಏಳಿ. . .
ವ್ಯರ್ಥ ಕಾಲವ ಕಳೆಯಬೇಡಿ
ಕೆಲಸದಲಿ ತೊಡಗಿ ನಿಮ್ಮ ಗುರಿಯ ಸೇರಿ

ಮಕ್ಕಳಿರಾ ಏಳಿ. . .
ಚಿಂತೆ ಮಾಡಬೇಡಿ
ಶಾಂತಿಯಿಂದ ಎಲ್ಲರೂ ಒಂದಾಗಿ ಬಾಳಿ

ಮಕ್ಕಳಿರಾ ಏಳಿ. . .
ಸಾಧನೆಗೆ ಮನಸು ಕೊಟ್ಟು
ನಿಮ್ಮ ಹೆಜ್ಜೆಯೊಂದನ್ನು ಇಲ್ಲಿ ಬಿಟ್ಟು ಹೋಗಿ.



No comments:

Post a Comment