Sunday, July 19, 2020

2008ರ ಕಾವ್ಯ-ಭಾಗ-1.

ನನ್ನಲ್ಲಿ ನಾನು ಇಲ್ಲ ನಿನಗಾಗಿ ಬರೆದೆನು ಎಲ್ಲ-

ಮಾಯದಾ ಲೋಕದಲ್ಲಿ ನಿನ್ನ ಹೆಸರಿನ ಸುಳಿವೇ ಇಲ್ಲ
ಮನದಲ್ಲಿ ಕುಳಿತೆ ನೀನು ಮೋಡಿಯ ಮಾಡಲೇ ಇಲ್ಲ
ನಿನಗಾಗಿ ಏಕೆ ನಾನು ಹೀಗೇ ಸುಮ್ಮನೆ ವಶವಾದೆನಲ್ಲ!

ವಾಸ್ತವ!
~~~~~~
ಅವಳ ಮನದಲ್ಲಿ
ನನ್ನ ಪ್ರೀತಿಯ
ಬಿತ್ತನೆ ಮಾಡಿ
ನಾನು ಗೆದ್ದೆನೆಂದು
ಬೀಗಿದೆ!
ಆದರೆ,ನಿಜಕೂ
ಗೆದ್ದಿದ್ದು ಅವಳೇ!
ಏಕೆಂದರೆ,
ಯಾರಿಗೂ
ಸೋಲದ ನಾನು
ಸೋತಿದ್ದು
ಅವಳಿಗೆ!

ಇಂಗಿತ.
~~~~~~
ಅರಿವಿರದೆ
ಹುಟ್ಟಿದ್ದು
ಪ್ರೀತಿ,
ಬದುಕನ್ನಾದರೂ
ಅರಿವಿನಿಂದ
ಮಾಡೋಣ
ಕಣೇ!

ಕ(ವ)ದನ!
~~~~~~~
ಹೇಗೆ ಹೇಳಲಿ
ಗೆಳತಿ
ನನ್ನ ಮನದ
ಕದನ
ಎದುರಲ್ಲಿ ನೀನು
ಬಂದು
ತೋರಲು ನಿನ್ನ
ಸುಂದರವಾದ
ವದನ!

ನನ್ನ ಬದುಕಲ್ಲಿ
ಬಂದು
ಅಳುವನ್ನು
ಮರೆಸಿದೆ,
ನನ್ನಿಂದ ನೀ
ದೂರ ಆದರೂ
ಅಳುವೇ
ಬರುತಿಲ್ಲ!
ನನ್ನಲ್ಲಿ ಇಂಥ
ಕಠಿಣ ಸಾಧನೆ
ಮಾಡಿಸುವುದರ ಹಿಂದೆ
ನಿನ್ನ
ಉದ್ದೇಶವೇನಿತ್ತು?1

ಎಲ್ಲ ಸುಳ್ಳಾಡಿ
ಅಭ್ಯಾಸ ನನಗೆ
ಆದರೆ
ನಿನ್ನ ಮೇಲಿನ
ಪ್ರೀತಿಯನು
ನಾ ಹೇಳುವಾಗ
ಅದ್ಹೇಗೆ
ಸತ್ಯ ಹರಿಶ್ಚಂದ್ರ
ಆಗಿಬಿಟ್ಟೆ?!

ಯಕ್ಷಪ್ರಶ್ನೆ.
~~~~~~~~
ಎಂತೆಂಥ ಗುರುಗಳು
ಗುರಾಯಿಸೋ
ಕಣ್ಣೋಟಕೆ
ಬಗ್ಗದ ನನ್ನನ್ನು
ಅದ್ಹೇಗೆ
ಒಂದೇ
ಓರೆಗಣ್ಣಿನ
ನೋಟಕೆ
ಸೋಲಿಸಿದಳೋ?
ಎಂಬುದೇ ಯಕ್ಷಪ್ರಶ್ನೆ!

ಹುಚ್ಚನೂ
ಮೆಚ್ಚುವಂತೆ
ಕವಿತೆಯ
ಬರೆಯಬೇಕಂತೆ
ಹಾಗಾದರೆ
ಹುಚ್ಚನ
ಮನಸನರಿಯಲು
ನಾನೊಮ್ಮೆ
ಹುಚ್ಚನಾಗಬೇಕು!

ಉದ್ದೇಶ
~~~~~~
ಪ್ರಿಯೇ,
ನನ್ನ ಮನದ
ವಾಂಛೆ!
ನಿನಗೆ ವಂಚನೆ
ಮಾಡೋದಲ್ಲ,
ಅದನು ನಿನಗೆ
ತಿಳಿಸಿ ಬದುಕಿನುದ್ದಕ್ಕೂ
ಪ್ರೀತಿ ಹಂಚುವುದು!

ನಿನಗಾಗಿ ಅರಳಿವೆ
ಮೊಗ್ಗುಗಳು
ನಿನಗಾಗಿ ನಗುತಿವೆ
ಸುಮಗಳು
ನಿನಗಾಗಿ ಕಾಡಿವೆ/ಕಾದಿವೆ
ಕನಸುಗಳು
ಹ್ಞೂಂ!..
ಬರೀ ನಿನಗಾಗಿ
ನನ್ನ ಮೇಲೆ ಏಕೆ
ಎಲ್ಲರಿಗೂ
ಹೊಟ್ಟೆ ಕಿಚ್ಚು?!

ಕಾಣದ ಕ್ಷಿತಿಜವನೇ
ನಂಬುವ ನಾವು
ಕಣ್ಮುಂದೆ ಕಾಣುವ
ಜನರನು ಅದೇಕೆ
ನಂಬಲಾರೆವು?!

ಸವಿಮಾತು.
~~~~~~~~
ನಿನ್ನ ಪ್ರತಿ ಮಾತು
ಹೊಳೆಯೋ
ಸ್ವಾತಿ ಮುತ್ತು...
ನಿನ್ನ ಎಲ್ಲ ಮಾತು
ನನಗೆ
ಜೇನಿನ ತುತ್ತು!

ಸಾ(ಸ್ಯಾ)ರಿ.
~~~~~~~~
ಅತ್ತು ಕರೆದು
ರಂಪಾಟ ಮಾಡಿ
ಕೇಳಿದಳು ಹೆಂಡತಿ
ಸ್ಯಾರಿ!
ಸಾಲ-ಸೋಲ ಮಾಡಿ
ಕೈಗೆ ತಂದು ಇಟ್ಟಾಗ
ಅಂದಳು
ರೀ sorry ನಾನ್‌
ಹಾಗ್‌ ಮಾಡ್ಬಾರ್ದಿತ್ತು
ಅಲ್ವೇನ್ರೀ?!
ಹೋಗ್ಲಿ ಬಿಡ್ರಿ...

ಮನದಗಲ
ಮನೆ ಮಾಡಿದ
ಮರೆಯದಂಥ
ನೆನಪುಗಳು
ಅದೆಲ್ಲಿ ಮರೆಯಲ್ಲಿ
ಕಣ್ಮರೆಯಾದವು!
ನೀ-ಈ ಮನವ
ಕದಡಿದ ಮೇಲೆ?1
ಮನದಲ್ಲಿ ಹೊಸ
ಅಲೆಯಾಗಿ
ಹರಿದಾಡಿದ ಮೇಲೆ!

ತೃಪ್ತಿ.
~~~~
ಕತ್ತಲು ಸರಿದು
ಬೆಳಕು ಹರಿವ
ನಸುಕಲ್ಲಿ
ಅವಳು
ನಸು ನಗಲು
ಸಾಕು
ಅಷ್ಟೈಶ್ವರ್ಯದ
ಕನಸು
ನನಗಾದರೂ
ಏಕೆ ಬೇಕು?!

ನನ್ನ ಹರಿವ
ಚಿತ್ತವನು
ಧ್ಯಾನಕೆ
ಸಜ್ಜುಗೊಳಿಸಿದೆ!
ಸಾಧು
ಎಂದುಕೊಂಡಿರಾ?!
ಛೇ! ಅಲ್ಲ
ಚಿತ್ತ ಕೆಡಿಸಿದ
ಅವಳ ಧ್ಯಾನಕೆ!
ನಿರಂತರ
ಸಾನಿಧ್ಯಕೆ!!

ಅಂಧಕಾರವ
ತೊಲಗಿಸಿ ಬದುಕು
ಬೆಳಗಿಸೋದೇ ಜ್ಞಾನ
ಹಾಂ!
ಅವಳು ಪ್ರೇಮ ಜ್ಞಾನ
ಹಂಚಿದ ದೇವಿ
ಪ್ರೇಮವೇ ಜ್ಞಾನ
ದೇಗುಲವಾಯ್ತು
ಅವಳ ಮನದ
ರಂಗಸ್ಥಳದಲ್ಲೇ!

ಬಚ್ಚಿಟ್ಟ ಮಾತು-
ಗುಟ್ಟಾಗೇ ಇತ್ತು!
ಬಿಚ್ಚಿಟ್ಟ ಮೇಲೆ
ಎಲ್ಲ ರಟ್ಟಾಗಿ ಹೋಯ್ತು!
ಗುಟ್ಟಲ್ಲಿ ಪ್ರೀತಿ
ಮನದಲ್ಲಿ
ಹಸಿರಾಗೇ ಇತ್ತು
ರಟ್ಟಾಗಲು
ಮನಸೆಂಬುದೇ
ಇಲ್ಲವಾಗಿ ಹೋಯ್ತು!

ಅರ್ಥವಾಗದ
ಕಗ್ಗಂಟಾದ
ಲೆಕ್ಕಗಳನ್ನು
ಬಿಡಿಸುವಾಗ
ನಲ್ಲೆಯ
ಪ್ರೀತಿಯು
ನಗುತಲಿತ್ತು!

ಬದುಕ ಹಾದಿಗೆ
ಅಂತ್ಯ
ಹಾಡ ಹೊರಟ
ನನ್ನಲ್ಲಿ
ಹೋರಾಟದ ಕಿಚ್ಚು
ಹಚ್ಚಿದಳು
ಅವಳು,
ಬದುಕು ಮತ್ತೆ
ಮೊಳೆತು
ಬೆಳೆವ ಆರಂಭದಲೇ
ಏಕೆ
ನನ್ನ ಬಿಟ್ಟು
ಹೊರಟು ಬಿಟ್ಟಳು?!

ರೊಕ್ಕಕ್ಕೆ ರೊಕ್ಕ
ಲೆಕ್ಕಕ್ಕೆ ಲೆಕ್ಕ
ಚುಕ್ತಾ ಮಾಡೋ
ನೀನು
ಕದ್ದು ಮುಚ್ಚಿ
ನನ್ನ
ಪ್ರೀತಿಸಿದಿಯಲ್ಲ!
ಹೇಳು ಈ ಪ್ರೀತಿಯ
ಲೆಕ್ಕ ಯಾವಾಗ
ತೀರಿಸ್ತೀಯಾ?!
ಕಾಯದೆ ಏನೂ
ದಕ್ಕೋದಿಲ್ಲ
ಅಂತ ಕವಿ ಹೇಳಿದ
ಮಾತಿಗೆ ಮರುಳಾಗಿ
ಅವಳಿಗಾಗಿ ಕಾದೆ,
ಹಸಿರು ನಿಶಾನೆ ತೋರದ
ಅವಳ ಮೌನ
ನೋಡಿ ಸುಸ್ತಾಗಿ
ಕೊನೆಯಲ್ಲಿ ನಿಜಕೂ
ಮರುಳನಾದೆ!

ಎದೆಯ ಹೊರೆಯ,
ದುಗುಡದ
ಗಂಟು ಮೋರೆಯನು
ನಗುವಿನೆಡೆಗೆ
ಕರೆದೊಯ್ದಳು...
ಅವಳ ಪ್ರೀತಿಯ
ಆಲಿಂಗನದಿ
ಎಲ್ಲವು ಮರೆಯಾಗಿ
ನನ್ನ ತೂಗಿರೆ
ಹಗುರಾಗಿ ಹೋಗುವಂತೆ
ಮಾಡಿದಳವಳು!

ನನಸು.
~~~~~~
ಜಗತ್ತು ಹುಟ್ಟಿದ್ದು
ʼಪ್ರೀತಿʼಯಿಂದಲೇ ಅಂತ
ಗೊಡ್ಡು ಉಪದೇಶವನ್ನು
ಕೇಳುತ್ತಲೇ ಬಿದ್ದಿದ್ದೆ
ಎಂದೂ ಕಂಡಿರಲಿಲ್ಲ
ನನ್ನ ಬದುಕಲ್ಲಿ
ನೀ ಪ್ರವೇಶ
ಮಾಡುವ ತನಕ!

ಇರುವ ʼಅದೇʼ ಬಾನ ಕೆಳಗೆ
ʼಅದೇ ʼಭೂಮಿಯ ಮೇಲೆ
ಈ ಸ್ವಚ್ಛಂದ ಪ್ರಪಂಚದಲ್ಲಿ-
ʼನೀನುʼ ನೋಡುವ,
ಯೋಚಿಸುವ
ದೃಷ್ಠಿಯಲ್ಲಿ–ʼನನಗೆʼ
ನೋಡುವ
ಯೋಚಿಸುವಂತೆ ಈ-
ಜೀವ ಸೃಷ್ಠಿ
ಬಿಡುವುದಿಲ್ಲ-
ಅದಕ್ಕೆ
ಎಷ್ಟೋ
ಸಾರಿ
ʼನಾʼ
ನಿನಗೆ
ʼನೀʼ
ನನಗೆ
ಅರ್ಥವೇ ಆಗುವುದಿಲ್ಲ
ಹಾಂ!
ಒಂದು ವಿಷಯ
ಪ್ರಪಂಚ ಮಾತ್ರ
ಇಬ್ಬರಿಗೂ
ಬದುಕಿರುವ ತನಕ
ಎಲ್ಲಾ ರೂಪಗಳಲ್ಲೂ
ಚೆನ್ನಾಗಿ ಪಾಠ
ಕಲಿಸುತ್ತದೆ!

ಏಕೆ?!
~~~~~
ನಿನ್ನೆ ಇದ್ದಂತೆ ಇಂದು
ನಾನಿಲ್ಲ...
ಇದರ ಅರ್ಥ ನಿನ್ನೆಗಳ
ಮರೆತ ಮರೆಗುಳಿ
ನಾನೆಂದು ಅಲ್ಲ!
ʼಇಂದುʼ ನನ್ನನ್ನು
ʼನಿನ್ನೆʼಯಂತೆ
ಉಳಿಸಿಲ್ಲ!
ಆದರೂ, ನಾನೆಂದೂ
ನಿನ್ನ ಪ್ರೀತಿಯ...

ಎಲ್ಲಾ ʼextra’ ನೇ
ಬೇಕು ಅಂತ
4 ವರ್ಷದಿಂದ
ಬಡ್ಕೊಂಡ್ರೂ
ಆ ಭಗವಂತ
ಇವತ್ತು ಕೊಟ್ಟವ್ನೇ
 bonus ದಿನ
ಅದಕ್ಕೇ
Feb 29
ಅನ್ನೋ ಹಣೆ ಪಟ್ಟಿಯನ್ನೂ
ಜೊತೆಗೆ ಅಂಟಿಸಿ!

ಮಹಾತ್ಮರಂತೆ
ಬದುಕಲು ಹೋಗಿ
ಸೋಲುತ್ತೇನೆ!
ಎಷ್ಟೋ  ಸಾರಿ
ಸೋತ ಮೇಲೆ
ಅವರು
ಮಹಾತ್ಮರಾದರೆಂಬ
ಸಣ್ಣ ಸತ್ಯವನ್ನೂ
ಬೇಗ ಮರೆತು ಬಿಡ್ತೇನೆ!
ಆಗ ನಿನ್ನ ನೆನಪಾಗಿ
ಮಹಾತ್ಮನಾಗುವುದೇ
ಬೇಡ ಅನಿಸುತ್ತದೆ!
ಕಾರಣ ಇಷ್ಟೇ!
ನಿನ್ನ ಪ್ರೀತಿಯ ಮುಂದೆ
ಮಹತ್ತರವಾದುದು
ನನಗೆ ಯಾವುದು
ಗೋಚರಿಸುವುದೇ ಇಲ್ಲ!

Nan ಸಿಮ್‌ ಗೆ
‘Limits’ Topic
ಅಂದ್ರೆ Allergy
b.coz it has got
an ‘unlimited’
message sending
Energy!

ನಾವ್‌ ಹುಟ್ಟೋ
ಮುಂಚೇನೂ
ಸತ್‌ ಮೇಲೂ
ಇಲ್ಲೇ ಇರಬೇಕಾದ
ಈ ʼಜೀವʼ ಸೃಷ್ಠೀನ
ಬಿಟ್ಟು ʼನಿರ್ಜೀವʼ ಆಗಿ
ಹೋಗೋ ಈ ಯಾನದಲ್ಲಿ-
ಏನೆಲ್ಲಾ ಕೊಂಡು
ಕೂಡಿಟ್ಟು,ಸಾಯೋವಾಗ
ಎತ್ತುಕೊಂಡು ಹೋಗೋ
ಭ್ರಮೆ ಯಾಕೆ?!

ನನ್ನ ಜೀವನ
ಚರಿತೆ  ಅಲ್ಲ...
ಅದು ನಿನ್ನ ಚರಿತ್ರೆ
ಅಂದರೇನೂ ತಪ್ಪಿಲ್ಲ-
ಅದರ ತುಂಬಾ
ಇರುವುದು ಬರೀ
ನಿನ್ನದೇ
ನೆನಪುಗಳು...

ನನ್ನ ಹಾಗೆಯೇ!
~~~~~~~~~~~
ಒಮ್ಮೊಮ್ಮೆ
ನಗುತ್ತಲೇ
ಕೆಲವೊಮ್ಮೆ
ಅಳುತ್ತಲೇ
ಸಂತಸದಿಂದ
ಇರಲು ನಗುವನು
ಕಲಿತಿದ್ದಾಳೆ.
ನಾ ರಮಿಸಲಿ

ಎಂದು ಅಳುವ
ನಾಟಕ ಮಾಡುತ್ತಾಳೆ!
ಮಗದೊಮ್ಮೆ
ಅರ್ಥವೇ ಆಗದ ಹಾಗೆ
ಸುಮ್ಮನಿದ್ದು
ಬಿಡುತ್ತಾಳೆ...
ಅವಳು ಇರುವುದೇ
ಹಾಗೇ!
ಬಿಲ್‌ ಕುಲ್‌ ನನ್ಹಾಗೇ!!

ಪ್ರೇಮ ರಾತ್ರಿ.
~~~~~~~~~~
ಪ್ರೇಮಿಗಳ
ನಿತ್ಯ ರಾತ್ರಿ
ಶಿವರಾ3
ಅವರಿಗೆ
ಉಪವಾಸ
ಜಾಗರಣೆ
ಮಾಡಿ ಅಂತ
ಯಾರೂ
ಹೇಳ್‌ ಬೇಕಿಲ್ಲ!

ನಿನ್ನ ಕೊಟ್ಟ
ದೇವರು
ಐಶ್ವರ್ಯ ಲಕ್ಷ್ಮೀಯನ್ನು
ಕಳುಹಿಕೊಟ್ಟ!
ಹಾಗೇ ನಿನ್ನ ಮನದಲಿ
ಆಸೆಯ ಬೀಜ ಬಿತ್ತ
ನನ್ನ ಕೈ ಬಿಟ್ಟ!
ನೆಪ ಮಾತ್ರಕೆ
ನನ್ನನು ನಿನ್ನ
ಜೊತೆಗೆ ಕೂಡಿ
ಹಾಕಿಬಿಟ್ಟ!

ಒಮ್ಮೊಮ್ಮೆ
ಜಗದ ಗೊಡವೆ
ಬೇಡ
ಎನಿಸಿ ಬಿಡುತ್ತದೆ
ಆ ಜಗದಲಿ
ನೀನು ಇಲ್ಲ
ಅಂತ ಮನಕೆ
ಅನಿಸಿಬಿಟ್ಟರೆ!

ನಿನ್ನನು
ಕೇಳುವುದು
ಏನೂ ಉಳಿದಿಲ್ಲ
ನನ್ನದೆಲ್ಲವೂ
ನಿನ್ನದೇ!
ನನ್ನ ನೀ
ಒಪ್ಪಿ ಬಿಟ್ಟರೆ-
ಮನದುಂಬಿ
ನಿನ್ನ ನಾ ಒಮ್ಮೆ
ಕೇಳಿ ಬಿಟ್ಟರೆ!

ನಿನ್ನ ಆಗಮನಕ್ಕು
ಮುನ್ನ
ದಶ ದಿಕ್ಕುಗಳು
ಇದ್ದರೂ
ದಿಕ್ಕು ದೆಸೆ ಇಲ್ಲದಾ
ಅಲೆಮಾರಿ
ನಾನಾಗಿದ್ದೆ!

ನೀ ನನಗೆ ಒಲಿದ
ಕ್ಷಣದಿಂದ
ಕೆಲವು ಸಹವಾಸಗಳನು
ಕೈ ಬಿಟ್ಟೆ!
ಎಲ್ಲ ನಿನ್ನ
ಸಹವಾಸಕ್ಕಾಗಿ!

ಲೋಕದ ಎಲ್ಲೆಡೆ
ನಿತ್ಯ ಪ್ರೇಮಾರ್ಚನೆ
ನಡೆಯುತ್ತಿದ್ದರೆ-
ಅದೇಕೆ
ಕೆಲವರಲ್ಲಿ
ಸಂನ್ಯಾಸತ್ವದ
ಮಹದಾಸೆಯನು
ಆ ದೇವರು
ಇಟ್ಟ?!

ಯಾವುದೋ
ಒಂದು
ಹುಚ್ಚಿಗೆ
ಸಿಕ್ರೆ
ಮನುಷ್ಯ
ಕ್ರಾಂತಿಕಾರಿ
ಆಗ್ತಾನಂತೆ!
ಕ್ರಾಂತಿ ಮಾಡುವೆ
ಎಂಬ ಅಮಲಲ್ಲಿ
ಹೋದವನು
ಹುಚ್ಚನೇ ಆಗ್ತಾನೆ!

ಬಹಳ ಒಳ್ಳೇವ್ರು
ನಮ್‌ ಮಿಸ್ಸು
ಏನ್‌ ಕೇಳಿದ್ರೂ
ಎಸ್‌ ಎಸ್ಸು-
ಅದ್ಕೇ 400
ಮಕ್ಳಿಗೂ ದಿನಾ
400 ರೂಪಾಯಿ
ಕಳ್ಕೊಂಡು
ತಪ್ದೇ ಕಳಿಸ್ತಾರೆ
400 ಎಸ್ಸೆಮ್ಮೆಸ್ಸು!

ಗತಿಸಿ ಹೋದುದನೆ
ಮತ್ತೆ ಮತ್ತೆ
ಗಣಿಸಿ
ಇತಿಹಾಸ ಬರೆಯ
ಬೇಕೆಂದಿರುವೆಯಾ?!
ಈಗ ಇರುವ ಎಷ್ಟೋ
ಪುಸ್ತಕಗಳು
ಗೆದ್ದಲು ಹಿಡಿದು
ತಮ್ಮ ಮಂದಹಾಸ
ಮರೆತಿರುವುದು
ನಿನಗೆ
ಗೊತ್ತಿಲ್ಲದೆಯಿಲ್ಲ!

ಅವಳು
ಪ್ರೀತಿಸಿ
ಮರೆತು ಹೋಗಲಿಲ್ಲ
ಮರೆಯದಂಥ
ನೆನಪುಗಳನು
ಉಳಿಸಿ
ಹೋಗಿ ಬಿಟ್ಟಳು
ಅದಕೆ ನನಗೆ
ಮತ್ತೊಬ್ಬ
ಅವಳಂಥವಳು
ಸಿಕ್ಕಲೇ ಇಲ್ಲ!

ಪ್ರೀತಿಯನ್ನು
ʼಕಾಲ ಹರಣʼ ಅಂತ
ಹೇಳಿದನೊಬ್ಬ
ಅನುಭವ ಕಮ್ಮಿ
ಇರಬೇಕು
ʼವ್ಯರ್ಥ ಕಾಲಹರಣʼ
ಎಂಬುದು
ಗೊತ್ತಿರಲಿಕ್ಕಿಲ್ಲ
ಅವನಿಗೆ!

ಬದುಕು
ಬಂಗಾರವಾಗುವ ತನಕ
ಬಂಗಾರದ ಬದುಕನು
ಕಲ್ಪಿಸುವುದು
ಅದೆಂತು ಸರಿ!

ನಿನ್ನ ಕಣ್ಣ ಹನಿಗಳನು
ಸಂಗ್ರಹಿಸುವುದು
ನನಗೆ ಭಾರವಲ್ಲ!
ಗೆಳತಿ,
ನಿನ್ನ ಭಾರವಾದ
ಮನಸು
ಹಗುರ ಮಾಡಲು
ನೆರವಾದ ಅವುಗಳ
ತ್ಯಾಗಕೆ ಕೊನೇ ಪಕ್ಷ
ಸಾಗರವನ್ನಾದರೂ
ಸೇರಲು ನಾ ನೆರವಾದರೆ
ತಪ್ಪೇನು?!

ಸದ್ದಿಲ್ಲದಂತೆ
ಜಗವು
ಚಲಿಸುತ್ತಿರುವುದರ
ಗಮನ ನನಗಿದೆ
ಯಾಕಂದ್ರೆ ನನ್ನ
ಮನ ಇನ್ನೂ
ನನ್ನಲ್ಲೇ ಇದೆ
ಗೆಳತಿ!

ನಿನ್ನೊಂದಿಗೆ
ಮಾತನಾಡುತ
ಇರಲು ದೂರದಿಂದ
ಕರೆದ ಗೆಳೆಯನ
ಕೂಗು ಕೇಳಲಿಲ್ಲ!
ನನಗೆ ಕಿವುಡು
ಅಂತ ಅಲ್ಲ!
ನಿನ್ನ ಸನಿಹದಲಿ
ಕಿವುಡ,ಮೂಗ
ಕುರುಡರಂತೆ-
ವರ್ತಿಸುವ
ಖಯಾಲಿ ನನಗೆ!
ಈ ಖಾಯಿಲೆ ನಿನಗಾಗಿ.

ಸದ್ದಿಲ್ಲದೆ
ಸುರಿಯುತಿದೆ
ಮನದೊಳಗೆ
ಅವಳು ಸುರಿವ
ಪ್ರೇಮದ ಮಳೆ...
ತಂಪಾಗಿದೆ ಬಾಳು
ಹಸಿಯಾಗಿದೆ...
ಹೃದಯದಲ್ಲೇನೋ
ಸಂತಸ
ಸಡಗರ
ಅವಳದೇ ಈ ಅಬ್ಬರ!

ದೇವರೇ
ನಿನ್ನಾಣೆ
ಮಾಡಿ
ಹೇಳಬೇಕಿದೆ
ಅವಳಿಗೆ ಇಂದು
ನಾನು...
ನನ್ನ ಪ್ರೀತಿ
ಸತ್ಯವೆಂದು
ಅವಳ ಮನದಲ್ಲಿ
ಸತ್ಯದ ಅನ್ವೇಷಣೆ
ಆಗುವಂತೆ
ಮಾಡು...
ನಿನ್ನಲಿ ಇದೊಂದೆ
ನನ್ನ
ವಿಜ್ಞಾಪನೆ...

ನಿ(ವೇದನೆ)...
~~~~~~~~
ಗೆಳತಿ,
ನಿನ್ನಲ್ಲಿ
ನನ್ನದೊಂದು
ಪುಟ್ಟ ನಿವೇದನೆ...
ಹೆದರದಿರು,
ಅಳುಕದಿರು
ಕಣ್ಣೀರು
ಸುರಿಸದಿರು
ಬಂದರೆ ಬರಲಿ
ಈ ನಮ್ಮ
ಪ್ರೀತಿಯಲ್ಲಿ
ಅಗಣಿತ ವೇದನೆ!

ನೀ-ವೇದನೆ!
~~~~~~~~
ಪ್ರಿಯೇ,
ನಿನ್ನಲ್ಲಿ
ನನ್ನ
ನಿವೇದನೆ...
ಪ್ರೀತಿಯಲಿ
ಎಷ್ಟೇ
ಕಷ್ಟ ಬಂದರು
ಪಡದಿರು
ನೀ-ವೇದನೆ!

ಅನುರಣಿತವಾಗುತಲೇ ಇದೆ
ಇಂದಿನವರೆಗೂ
ಅವಳ ಆ ನಗು
ನನ್ನ ಮನದಲ್ಲಿ!
ಅದಕೆ ಅಳಿವಿಲ್ಲ
ಮೊದಲ ಸೆಳೆತದ ಆ
ಮಧುರ ಕ್ಷಣವೇ ಹಾಗೆ,
ಮರೆಯಲು
ಮನಸಿಗೆ ಬಿಡುವುದೇ ಇಲ್ಲ!

ಸುಮಧುರ ಸುಂದರ
ಸ್ವಪ್ನಗಳು
ಅರಳುವ ಕಾಲ
ಬದುಕಿನ ಘಟ್ಟದ
ಸುದೈವ ಸಂಭ್ರಮದ
ಮೇರು ಕಾಲ!

ನನ್ನ ಮಡಿಲಲಿ
ಮಗುವಾದೆ
ಮೊಗದಲಿ ನೀ
ನಗುವಾದೆ
ಬದುಕಿನ ಈ
ಆಗು ಹೋಗುಗಳಲಿ
ಜೊತೆಯಾಗಿ ಬಂದು
ಮಾಸದ ರಂಗಾದೆ!

ಕಾಲದ ಜೊತೆಗೆ
ದಿನಗಳು ಉರುಳತಲಿವೆ
ದಿನಗಳ ಜೊತೆಗೆ
ಕಾಲವು ಸರಿಯುತಲಿದೆ
ಬೆಳಕಿನ ಜೊತೆಗೆ
ಕಿರಣಗಳು ಬಂದಂತೆ
ಮೋಡದ ಜೊತೆಗೆ
ಮಳೆಯು ಬರುವುದುಂಟು
ಯುಗ ಚಕ್ರವೇ
ನಿಸರ್ಗದ ಒಡಳಾಗಿ
ಜೊತೆಗೆ ಇರುವಂತೆ-
ಅವಳ ಸಾನಿಧ್ಯದ
ಸಾಂಗತ್ಯದಲಿ ನಾನು
ಜೊತೆಯಾದೆ
ಅದರಲ್ಲಿ ಒಂದಾದೆ
ಇಚ್ಛೆಯಿಂ ಬಂಧಿಯಾದೆ!

ಮೊದಲ ಪ್ರೇಮದ
ಮಧುರ ಕ್ಷಣ
ನೆನೆಸಿರೆ ತಲ್ಲಣ!
ಆ ನೈಜ ಅನುಭವದ
ಆ ತಲ್ಲಣ
ಈ ನೆನೆಸುವಿಕೆಗಿಂತ
ಮಿಗಿಲಾದ
ಭಾವಪೂರಿತ
ವಿಪರೀತ ಭಯದ
ನರ್ತನ!

ಹುಚ್ಚು!
~~~~~~~~
ಇದ್ದರೆ ತಪ್ಪಲ್ಲ
ಹೆಚ್ಚು ಕವನ
ಬರೆಯೋ ಹುಚ್ಚು!
ಇರದಿರಲಿಯಷ್ಟೇ,
ಹುಚ್ಚು ಹುಚ್ಚು
ಕವನಗಳ
ಬರೆಯೋ ಹುಚ್ಚು!

ನಲ್ಲೆಯ ಸನಿಹದಲಿ
ನರಕ ಪೂರಿತ
ಬದುಕು
ಸ್ವರ್ಗವಾಯ್ತು!
ಬದುಕಿನ ಗತಿ
ಕಳೆದು
ನಿಜ ಸ್ವರ್ಗಕೆ
ತೆರಳಲು,
ನಲ್ಲೆಯಿರದ ಆ
ಸ್ವರ್ಗವೂ
ನರಕವಾಯ್ತು!

ಮನದ
ಬರಡು ಭೂಮಿಯಲಿ
ಪ್ರೇಮದ
ಬಣ್ಣದೋಕುಳಿಯ
ಚೆಲ್ಲಿದಳು ಅವಳು!
ಆ ರಂಗಿನ
ಸೊಬಗಲಿ
ಮನದಲಿ
ನಗುವಿನ
ಸಂಭ್ರಮವ ತಂದಳು
ಅವಳು
ಮನಸಲ್ಲಿ ನೆಲೆ ನಿಂತಳು!
ಇಲ್ಲಿ ನಾನಿದ್ದೀನಿ
ಮನಸು ಅಲ್ಲಿರುತ್ತೆ
ಮನಸಲ್ಲಿ ಅಲ್ಲಿದ್ದೀನಿ
ಆದರೆ ನಾನು ಇಲ್ಲಿ
ನರಳುತ್ತಿರುತ್ತೇನೆ!
ಅವಳಿಗೂ ಹೀಗೆ
ನನ್ನಲ್ಲಾದ ಹಾಗೆ
ಏಕೆ ಹೀಗೇ?!
ಎಂದೂ ಈ ಹಿಂದೆ
ಆಗದ ಹಾಗೆ!
ಈ ಮೋಹದ ಸೆಳೆತಕೆ
ವಶವಾಗದೆ ಇರುವುದು ಹೇಗೆ?!
ಹೇಳು, ನೀ ಇದೆಲ್ಲ
ಎಲ್ಲರಲೂ ಏಕೆ ಹೀಗೆ?!

ನೀ ಬದುಕಲಿ
ಬಂದ ಮೇಲೆ
ಗುರಿಯೆಂಬುದು ಬಂತು!
ಅಲ್ಲಿವರ್ಗೂ
ಗುರು ಹೇಳಿದ
ಪಾಠವನು
ಸೋಮಾರಿಯಾಗಿ
ಕೇಳ್ತಾ
ಕುಳಿತಿರುತ್ತಿದ್ದೆ!
ಹಣವನ್ನು ಎಣಿಸಲು
ಬ್ಯಾಂಕಿನವರು ಮಾಡುವ
ಹೆಣಗಾಟವೂ ಹಣಕ್ಕಾಗಿ
ಎಂಬುದನು ಯಾರೂ
ತಳ್ಳಿ ಹಾಕುವಂತಿಲ್ಲ1

ಪ್ರೀತಿ ಅರಳುವಾಗಿನ
ಭೀತಿ
ನಂತರ ಇರುವುದಿಲ್ಲ!
ಭೀತಿಯನು ಮರೆಸಿ
ಧೈರ್ಯವನು ತುಂಬುವುದು
ಅದರ ಒಂದು
ಲಕ್ಷಣ-ಅದಕೆ ತಾನೇ
ಆ ಬದಲಾವಣೆ!

ಒಂದಕ್ಕೊಂದು ಜೋಡಿ
ಸರಿಯಾಯ್ತು ನೋಡಿ
ಮಾಡಿದ್ದೆಂಥೋ ಮೋಡಿ!
ಬೇಕಿತ್ತು ಬದುಕಿಗೆ ಒಟ್ಟುಗೂಡಿ
ಬದುಕೋ ನಮ್ಮಿಬ್ಬರ ಜೋಡಿ

ಮೊದಲ ದಿನವೇ
ನೀನು ಮನದಲಿ
ಮಾಡಿದೆ ಸದ್ದು
ಅದರ ಮಾಧುರ್ಯಕೆ
ಸೋತು ಮಾಡದೇ
ಇರಲು ಆಗಲಿಲ್ಲ ಮುದ್ದು

ನಿತ್ಯ ಯೋಚನೆ
ನಿನ್ನ ಯಾಚನೆ
ಸಿಕ್ಕರೊಂದು ನಿನ್ನಿಂದ
ನಗುವಿನ ಸೂಚನೆ
ಬದುಕಿನ ಪೂರ್ತಿ
ನಿನ್ನದೇ ಅರ್ಚನೆ

ಭಂಗವಿಲ್ಲದ
ಅಭಂಗ ಬೇಡದ
ನಿನ್ನ ಜೊತೆಗಿನ
ಸಂಗವೇ ನನ್ನ ಪಾಲಿನ
ನಿತ್ಯ ʼಸತ್ಸಂಗʼ.

ನಿನ್ನ ಪರಿಚಯಕೂ ಮುನ್ನ
ನನ್ನಲಿ ಪ್ರೀತಿಯ ಕುಡಿ
ಟಿಸಿಲೊಡೆಯಿತು!
ಪ್ರೀತಿಯ ಪರಿಚಯ ನನಗೆ
ಮೊದಲಾಗಲು ಈ
ಬೆಳವಣಿಗೆಯೂ
ಶುರುವಾಯಿತು!
ನಿನ್ನ ಅಲಂಕಾರವನು
ಬೇಕಾದರೆ ಸಹಿಸಿಯೇನು!
ಅಹಂಕಾರದ ಅಲಂಕಾರವನು
ಎಂದೂ ನಾ ಸಹಿಸೆನು!

ಒಂದನು ಪಡೆಯಲು
ಮತ್ತೊಂದನು ಕೈ ಬಿಡಬೇಕಂತೆ!
ಇದೊಂದು ಚಾಲ್ತಿ ಇರೋ
ನಿಯಮವಂತೆ!
ಅದಕೆ ನಾ ಪ್ರೀತಿಯ ಪಡೆಯಲು
ದೇವರ ಮೇಲಿನ ಭಕ್ತಿಯನು
ಕೈ ಬಿಡಲೇ ಬೇಕಾಯ್ತು

ಒಂದು ಸ್ಪೂರ್ತಿ ಬೇಕಿತ್ತು
ನನಗೆ ನೀ ಬಂದೆ ಜೊತೆಗೆ
ಬದುಕು ಪೂರ್ತಿಯಾಯ್ತು!
ಚಿಂತೆ ಮರೆತ್ಹೋಯ್ತು....!

ನೀNo
ನಾNo
ಅಂತಾ ಇಬ್ರೂ
ಹೀಗೆಯೇ
ಅನ್ನುತ್ತಿದ್ರೆ
ಒಂದು ದಿನ
ಎಲ್ರೂನು
ನಮ್ಮನ್ No
ಅಂತಾರಷ್ಟೇ!

ಕೊಂಡಾಡುತ್ತಿದ್ದರು
ಮದುವೆಗೂ ಮುನ್ನ
ನನ್ನದು:
ʼʼಅಗಾಧವಾದ  ಪಾಂಡಿತ್ಯ”ವೆಂದು
ಈಗ ಗೊಣಗುತಿಹರು
ನನ್‌ ಎದುರೇ
ಹೆಂಡತಿ ಬಂದ ಮೇಲೆ
ನನ್ನದು “ಅಗ್ಗದ
ಪಾಂಡಿತ್ಯ”ವಾಯ್ತೆಂದು!

ಕಣ್ರೆಪ್ಪೆ ಮುಚ್ಚಿ
ಮಲಗಲು ಭಯ!
ಅಷ್ಟು ಹೇಡಿಯಂತ
ತಿಳಿಯಬೇಡಿ-
ರೆಪ್ಪೆಯಲ್ಲೂ ಅವಳೇ
ಇಹಳು-ಅವಳಿಗೆ
ಸ್ವಲ್ಪ ನೋವು ಆಗದಿರಲಿ
ಎಂದು ಮುಚ್ಚೆನು
ನಾನೆಂದೆಂದೂ!

ಅವಳ ನಗುವ ಕಂಡು
ನಕ್ಕ ಬಾನ ಚಂದಿರ
ಆಗ ನನ್ನ ಮನದಲ್ಲಿ
ಅವರದೇ ಇಂಚರ!

ಮಿತ್ರನ ಮಿತ್ರ ʼಮಿತ್ರʼ
ಇದು ಜಗವನು ಸ್ನೇಹದಿಂದ
ಕಾಣಲು ಇರುವ
ನನ್ನ ಸಾರ್ವಕಾಲಿಕ ಸೂತ್ರ!

ಬಯಸದೇ ಬಂದ ಭಾಗ್ಯ
ಸೌಭಾಗ್ಯ!
ಬಯಸಿ ಬಯಸಿ ಪಡೆದ
ದೌರ್ಭಾಗ್ಯ ನನ್‌ ಹೆಂಡ್ತಿ
Sow-ಭಾಗ್ಯ!

ಕವನ ಬರೆದ ಮೇಲೆ
ನಾನೂ ಅಗಿದ್ದು ಕವಿ!
ಅಲ್ಲಿಯವರೆಗೂ ಕುಯ್ತಿದ್ರು
ಕವಿಗಳು ನನ್ನ
ಎರಡೂ ಕಿವಿ!!

ಇಹೆನು ನೀ ʼನಿಲ್ಲದೆʼ
ಇರೆನು ನೀ ಇಲ್ಲದೇ!!

ದುಡುಕಬೇಡ ಎಂದಿಹರು
ಹಿರಿಯರು-ನಿಜಕಣೆ
ನಿನ್ನ ವರಿಸಿದ ಮೇಲೆ
ಅರಿವಾಯ್ತು!
ಅಂದೇ ಹಿರಿಯರ
ಮಾತು ನಾ ಕೇಳಬೇಕಿತ್ತು!

ನಿನ್ನೊಲವು
ನನ್ನೊಲವಲಿ
ಒಂದಾದ ಘಳಿಗೆ
ನನ್ನ ಬಂಜರು ಬದುಕು
ಬೆಳಗಿದ
“ಅಮೃತ ಘಳಿಗೆ”

ಎಲ್ಲರನೂ ಬಿಟ್ಟು
ಬದುಕುವುದು ಕಷ್ಟ
ಇರುವುದೆಲ್ಲವನು
ಪರರಿಗೆ ಬಿಟ್ಟು
ಬಾಳುವುದು ಕಷ್ಟವೋ ಕಷ್ಟ!
ಇಷ್ಟಪಟ್ಟವರನ್ನು ಮರೆಯುವುದೂ
ಅಷ್ಟೇ ಬಲುಕಷ್ಟ!
ಹರೆಯುದ ಕನಸು
ಆಗಲು ನನಸು
ಬದುಕು ಬಲು ಸೊಗಸು
ತುಡಿವುದು ಅವಳೆಡೆಗೆ
ಎಂದಿಗೂ ಈ ಮನಸು!

ನಿನ್ನ ಬರುವಿಗಾಗಿ
ಒಂಟಿಯಾಗಿ ಕಾದು ಕುಳಿತೆ...
ನೀ ತಡ ಮಾಡಲು
ತಲೆಯನು ಕಾಯಿಸಿ ಕುಳಿತೆ...
ನೀ ಸುಟ್ಟು
ಇನ್ನಾದರೂ ನನ್ನ ಸುತ್ತ ಸುತ್ತ-
ಆಗಲೇ ನಿನಗೆ ನಿತ್ಯವೂ
ಮು(ತು)ತ್ತು!

ಗೆಳೆಯ,
ಎಲ್ಲರ ಸಂಸಾರ
ನಿಲ್ಲದಾ ಪಯಣ!
ನನ್ನ ಬದುಕು
ನೀ-ನಿಲ್ಲದ
ಪಯಣ!!

ಇಷ್ಟಕ್ಕೆ ತಕ್ಕ
ಹುಡುಗ ಸಿಗಲಿಲ್ಲ
ಅಂತ ಆ ಅಕ್ಕ
ಇಷ್ಟುದ್ದ ಕತೇನ!
ಉಗಿಬಂಡಿ ತರ ಬಿಡ್ತಾವ್ಳೆ...
ಕೇಳಿ ಸಾಕಾತು ಕಣಕ್ಕೋ!

ಎಲ್ಲರಿಗೂ
ಒಂದೊಂದು
ಸಮಸ್ಯೆ ಬಹುಶಃ
ತಮ್ಮ ಬದುಕಿನ
ಸಮಸ್ಯೆ ಬಿಡಿಸಲು
ಹೋಗಿ ಸಮಾಜಕ್ಕೆ
ನೂರಾರು
ಸಮಸ್ಯೆಗಳನು
ದಿನವೂ ಕಾಣಿಕೆ
ನೀಡುತಿಹರೋ ಏನೋ!

ನಿಮಿಷಕ್ಕೊಂದು ಮಾತು
ಬದಲಿಸುವವರು
ಇರುವ ಈ ಜಗದಲ್ಲಿ
ಅವರವರಿಗೆ
ತೋಚಿದಂತೆ ಅವರು
ಬದುಕಿದರೆ ತಪ್ಪೇನು?!
ಎಲ್ಲೆಲ್ಲೂ
ಜನಜಂಗುಳಿ
ಬಂದಿದೆಯಂತೆ
ನೋಡಲು
ಸುದೀಪನ
“ಗೂಳಿ”

ಎಲ್ಲವೂ ಈಗ
ಮುಂಗಡವೇ ಲಭ್ಯ
ಮದುವೆ ಆಗದೇ
ಮಕ್ಕಳನ್ನು
ಪಡೆದವರ ಕತೆಗಳನ್ನು
ಕೇಳಿಲ್ಲವೇ?!
ಎಷ್ಟೇ ಮುಂಗಡ
ಆದರೂ
ಕೊನೆಗೆ ಹೋಗುವಾಗ
ಬರದು ಏನೂ
ನಮ್ಮ ಸಂಗಡ!

ಬದುಕು ನನ್ನದು
ಇನ್ನೂ ಮುಗಿದಿಲ್ಲ!
ಅದ್ಹೇಗೆ ಕಂಡೀತು
ಕೊನೆಯ?!
ನೀ ಇನ್ನೂ ನನ್ನ
ಪ್ರೀತಿಸುವೆ ಎಂದು
ಹೇಳೇ ಇಲ್ಲವಲ್ಲ!

ಸಾಯುವುದಂತೂ
ಸತ್ಯ!
ನಡೀ ಗೆಳತಿ ನಾವಿಬ್ಬರೂ
ಇಂದೇ “ಸಾಯೋ ಆಟವನು”
ಆಡೋಣ!
ಆಗಲಾದರೂ ನಮ್ಮ
ಅಪ್ಪ-ಅಮ್ಮ
ಮದುವೆಗೆ
ಒಪ್ಪಿಗೆ ಕೊಟ್ಟಾರು!

ದುಃಖದ ಭರದಲ್ಲಿ
ಅಂದಿದ್ದೆ
ʼಯಾರಿಗೆ ಬೇಕು ಈ ಲೋಕ?!ʼʼ
ಸುಖದಲ್ಲಿ ಇರಲು
ಅನಿಸಿತು
ʼʼಎಲ್ಲವ ಬಿಟ್ಟು ಒಂದು ದಿನ-
ಹೋಗಲೇ ಬೇಕಾ?!”

ಎದೆಯ ಹೊರೆಯ
ಇಳಿಸಿತು
ಹಾಲುಗೆನ್ನೆಯ ನಿನ್ನ
ಮೊಗದ ನೆನಪು-
ಹಾಲುಕ್ಕಿ ಕೆನೆ
ಬರುವಂತೆ ನೀ
ಎದುರಲಿ ಕಂಡಾಗ
ಎದೆಯಲಿ
ಅದೆಂಥಹುದು
ಹೊಳಪು!

ನಿನಗೆ ಕವನಗಳನು
ಕನ್ನಡದಲ್ಲೇ ಏಕೆ
ಬರೆದು ಕಳಿಸುವೆ?
ಗೊತ್ತೇನು ಓ ಪ್ರಿಯೆ!
ಅದನು ಒಲವಿನಿಂದ
ಓದುವ ಸಲುವಾಗಿಯಾದರೂ
ನಿನ್ನ ಹಾಳು
ಇಂಗ್ಲೀಷು
ಮೋಹ ಮರೆತು
ಕನ್ನಡ ಕಲಿಯಲಿ ಎಂದು!

ನಗುವಿನ ಜೊತೆಗೆ ಅಳು
ಅಳುವಿನ ಜೊತೆಗೆ ನಗು
ಸಹಜವೆಂಬುದನು
ಅನುಭವಿಸಿ ಬಲ್ಲವನು
ನೆಮ್ಮದಿಯಿಂದ ಬಾಳುವನು!

ಇನಿಯನ ಇಂಗಿತವನು
ಅರಿತ ನಲ್ಲೆ
ಪ್ರೀತಿಯನು ಅದ್ಹೇಗೆ
ಹಂಚಬೇಕು
ಅನ್ನುವುದನು
ಬಲ್ಲಳು!

ಅವನೋ ಇವನೋ
ಎಂದು ಸುಳ್ಳು
ಲೆಕ್ಕಾಚಾರ
ಮಾಡದಿರು!
ಯಾವ ಭವಿಷ್ಯಗಾರನನ್ನಾದರೂ
ನೀ ಸಂದರ್ಶಿಸು
ಅವರು ನನ್ನನೇ
ಸೂಚಿಸೋದು!
ಯಾಕಂದ್ರೆ
ಎಲ್ಲರಿಗೂ
ದಕ್ಷಿಣೆ ಕೊಟ್ಟಿದ್ದೇನೆ!
ನನ್ನ ಪ್ರೇಮದ
ಪರಿಯ ನೀ
ಅರಿಯದಿರೆ ಚಿಂತೆ ಇಲ್ಲ!
ನನ್ನನು ಹೇಗೆ
ಪ್ರೇಮಿಸಬೇಕು ಎಂಬುದು
ಹೇಗೋ ನಿನಗೆ
ಕರಗತವಾಗಿದೆ!
ಆ ಪರಿಯನು ನಾ
ಎಂದೂ ಮರೆಯೆನು...

ನನಗೆ ಗೊತ್ತು
ಒಂದಲ್ಲ ಒಂದು ದಿನ
ಎಲ್ಲವೂ ಇಲ್ಲಿ
ನೆಲ ಸಮವಾಗುವುದು ಎಂದು!
ಹಾಗೆ ಆದಾಗಲೂ
ನಾವು ಉಳಿದರೆ
ನನಗೆ ಆಗಲೂ
ಬದುಕ ಬೇಕೆನಿಸಿದರೆ
ಅದಕೆ ಕಾರಣ
ನಿನ್ನ ಪ್ರೀತಿಯೇ!
ಎಂಬುದು ನನಗೆ
ಚೆನ್ನಾಗಿ ಗೊತ್ತು...

ಹೆಂಡ ಬೇಕಾರ್‌
ಬಿಟ್ಟೇನು!
ಹೆಂಡ್ತೀನ
ಬುಡಾಕಿಲ್ಲ!
ಹೆಂಡದ ಮತ್ತು
ನಿಶೆಯು ಕಳೆದು
ನಶೆ ಇಳಿವನಕ
ಹೆಂಡತಿಯ
ಮುತ್ತಿನ ಮತ್ತ
ಘಮ್ಮತ್ತು
ಸಾಯೋತನಕ!

ಏಕಾಂತ
ಇಷ್ಟವೇ!
ಕಾಂತನಿಲ್ಲದೆ
ಕಷ್ಟವೇ!
ಇಷ್ಟ ಕಷ್ಟ
ಹಂಚಿಕೊಳ್ಳಲು
ಮನಸುಗಳನು
ಬಂಧಿಸುವೆ
ಪ್ರೇಮವನು
ತೊರೆಯಲು
ಹೇಗಾದೀತು?!
ಅಂದೊಮ್ಮೆ
ಅಂದಿದ್ದೆ ನೀ
ನಾನೆಂದೂ
ನಿನ್ನವನೆಂದು-
ಏಕೆ ನನ್ನ ಇಂದು
ಅನಾಥನನ್ನಾಗಿ
ಮಾಡಿ ನೀ
ತೆರಳಿದೆ ಈ ಜಗದ
ಜನರ ಜಂಜಾಟ
ಸಾಕೆಂದು
ನನ್ನ ಕೈ ಬಿಟ್ಟು
ಇಲ್ಲೇ ಮರೆತು!

ಯಾರ್ಯಾರ ಅಂತರಾಳ
ಏನೆಂಬುದನು
ಯಾರು ಬಲ್ಲರು?
ಅಷ್ಟಕ್ಕೂ ಅದನು
ಹುಡುಕೋ ಹುಚ್ಚು
ಹುರುಪು ಏಕೆ?
ಅಪರೂಪಕ್ಕೊಮ್ಮೆ
ಸಿಗುವ ಆತ್ಮೀಯ
ಮಾತು ಸಾಕು!
ಅದರ ಮೂಲ
ಅಂತರಾಳದ
ತಿರುಳೇ ಅಲ್ಲದೆ
ಬೇರೇನು?!

ಮಾತು-ಮಾತುಗಳ
ಮಧ್ಯೆ ಮೌನವಿರಬೇಕು
ಮೌನ ಮುರಿಯೋಕೆ
ಮಾತಾಡುತಿರಬೇಕು...
ಮಾತಾಡಳು ನಿನ್ನಂತೋರು
ಸದಾ ನನ್ನ
ಜೊತೆಗಿರಬೇಕು!

ನಿನ್ನ ಮಾತಿನ
ಇಂಚರಕೆ
ಸೋತು
cycleಗೆ ಆಗಿದ್ದ
ಒಂದೇ
ಪಂಚರ್‌ ಗೆ
ಹತ್ತರಷ್ಟು
ರೊಕ್ಕ ಕೊಟ್ಟು
ವ್ಯವಹಾರದಲ್ಲೂ
ಸೋತೆ!
ಯಪ್ಪಾ
ಎಂಥ ಮರುಳು!
ಎಂಥ ಮರುಳು!!
ತಾರೆಗಳ ಲೆಕ್ಕ
ಮಾಡುವ ಹುಚ್ಚು
ಬಂದ
ಘಳಿಗೆಯಿಂದ
ನೆಲದ ಮೇಲಣ
ಹುಡುಗಿಯರನು
ನೋಡುವ ಹವ್ಯಾಸ
ಮರೆತ್ಹೋಯ್ತು!!

ಪ್ರಿಯೇ,
ನಿನ್ನ
ಪ್ರೀತಿಸುವುದು
ದಿಟ
ಬಾಳು ನೀಡುವುದು
ದಿಟ
ಹಾಂ!
ನನ್ನ ಬಾಳು
ಇರುವ ತನಕ...
ಸಾವನೂ
ಎದುರಿಸೋ
ಶಕ್ತಿ ನನ್ನಲ್ಲಿ
ಇಲ್ಲ ಕಣೆ!
ಅದಕೆ ಒಮ್ಮೆ
ವಿಚಾರಿಸಿ ನೋಡು.

ಅರಳಿದ
ಬಯಕೆಗಳನು
ತಡೆಯಲಾಗಲಿಲ್ಲ
ಬಯಕೆಗಳು
ಅರಳದಂತೆ
ತಡೆವ ಅರಿವನು
ನಾ ಕಲಿಯಲಿಲ್ಲ!

ಯಾತನೆಗಳ
ಸರಮಾಲೆ ಸಾಲುಗಟ್ಟಿ
ಅನುದಿನವೂ ನನ್ನ
ಕೊಲ್ಲುತಲಿರಲು
ಮನದನ್ನೆ ಎಂದು
ಮುದ್ದಾಡಿದ
ನನ್ನವಳಿಗೆ
ಸರ-ಮಾಲೆಯ
ಕೊಲ್ಲುವ ಆಸೆ
ಕರಗಲಿಲ್ಲ!

ಕನ್ನಡದಲ್ಲಿ
ಇರುವ ಪದಗಳು
ಎಲ್ಲವೂ ಸರಳ
ಅವುಗಳನು
ಸರಿಯಾಗಿ
ಪೋಣಿಸಿ ವಾಕ್ಯ
ಮಾಡುವವರೇ
ವಿರಳ!

ನನಗೆಂದು
ನೀನೊಂದು
ಇರದಿದ್ದರೆ
ನಾ-ನೊಂದು
ಹೋಗುತ್ತಿದ್ದೆ!

ಪಂಜರದೊಳಗಿಟ್ಟು
ಪ್ರೀತಿಸುವ
ಬಯಕೆ ನನಗಿಲ್ಲ
ಸದಾ ಸ್ವಚ್ಛಂದ
ಹಕ್ಕಿಯಂತೆ
ಹಾರುತ ಬದುಕಿದ
ನನ್ನತನವನು
ಕಳೆದುಕೊಳ್ಳುವ
ಬಯಕೆ
ಎನಗಿಲ್ಲ!

ನಿನ್ನ
ನಲಿವಿನಲೇ
ನನ್ನ
ಉಳಿವಿದೆ!
ಅದಕೆಂದೇ
ಉಳಿದಿಹೆ
ನಿನ್ನ ನಲಿವನೇ
ಸದಾ
ನೋಡ ಬಯಸಿ
ನನ್ನ ನಾ ಉಳಿಸಿ.

ನನ್ನ ಕಣ್ಮುಂದೆಯೇ
ಅಕ್ಕರೆಯಿಂದ
ಬೆಳದವಳೇ!
ಅದೇಕೆ ಜನ್ಮ
ಜನ್ಮಕೂ  ನಿನ್ನ
ಅಕ್ಕರೆ ನನಗೆ
ಸಿಗದಂತೆ ನೀ
ಬಹುಬೇಗ
ಮರೆಯಾದೆ.

ಹಠಾತ್ತನೇ-
ಹುಟ್ಟಿದ
ಪ್ರೀತಿಯನೇ
ಹತೋಟಿಗೆ ತರಲು
ಆಗದ ಈ
ಜಗದಲ್ಲಿ
ಹೆತ್ತ ತಾಯಿಯ
ಮಮತೆಯನು
ಮರೆಯುವುದಾದರೂ
ಅದೆಂತು
ಸಾಧ್ಯ?!

ಅಮ್ಮ ಜನರ ಜೊತೆ
ಮಾತನಾಡಲು
ಕಲಿಸಿಕೊಟ್ಟಳು-
ನಲ್ಲೆ ಮನದ
ಜೊತೆ
ಮಾತನಾಡಲು
ಒಪ್ಪಿಗೆ ಕೊಟ್ಟಳು!

ವನವಾಸದ ಕಷ್ಟ
ವೃಥಾ ನಿನಗೇಕೆ
ಅಂತ ಶ್ರೀ ರಾಮ
ಸೀತೆಗೆ ಕೇಳಿದನಂತೆ!
ʼʼನಿಮ್ಮ ನೆರಳನು
ಬಿಟ್ಟು ಅದ್ಹೇಗೆ
ಹೋಗುವಿರಿ?!”
ಅಂತ ಸೀತೆ
ಮರು
ಪ್ರಶ್ನಿಸಿದಳಂತೆ!
ಇದೂ ಪ್ರೀತಿಯ
ಸೆಳೆತವಲ್ಲದೇ
ಇನ್ನೇನು?

ಇರುವುದಕ್ಕೆ
ನಿನ್ನ ಬೆಂಬಲ
ಬದುಕಲು
ನನ್ನಲಿ ಬಂದಂತಿದೆ
ಬಲ!

ಬದುಕು ಶೂನ್ಯ
ಗೊತ್ತು ಪ್ರಿಯೆ,
ಆದರೆ
ನಿನ್ನ-ನನ್ನ
ಈ ಪಯಣ
ಸುದೀರ್ಘವಾಗಿರಲಿ
ಅಲ್ಲವೇ?!

ಹೆಂಡತಿಯು ಕಾರು
ಬಯಸಿದಳೆಂದು
ಹೊಂದಿಸಿದೆ ಹೇಗೋ
ಧನ!
ಅದ ನೋಡಿಸಲು
ಇರುವ ಚಾಲಕ
ಕೇಳುತ್ತಿದ್ದಾನೆ
ಬೇಕಂತ
ಇಂ-ಧನ!

ಉಷೆಯ
ನಶೆಯಲ್ಲಿ
ನಿಶೆಯಲ್ಲಿ
ಕುಡಿದು
ನಾ ಬೀಳಲು
ಉಷಾಃಕಾಲದಲ್ಲಿ
ನಿಶೆ ಕಳೆದು
ನಶೆಯು
ಮರೆತ್ಹೋಯ್ತು!
ಕ್ಷಣಿಕ ಜಗತ್ತು
ಎಲ್ಲವೂ ಹೀಗೇ
ಅಲ್ಲವೇ?!

ದೂರವಾಗೋ
ದುಃಖದಲ್ಲಿ
ಪ್ರೇಮಿಗಳು ಇರಲು
ಸುತ್ತಮುತ್ತಲಿನವರು
ಹರ್ಷದಿಂದ
ಸಂತಾಪ
ಸೂಚಿಸುತಿಹರು
ಇಂಥವರಿರಲು
ಪ್ರೇಮಕೆ ಅಂತ್ಯ
ಹಾಡಬೇಕಾದೀತು
ಮುಂದೊಮ್ಮೆ
ಈ ಪಾಪಿ ದುನಿಯಾದಲ್ಲಿ!

ಯಾಂತ್ರಿಕತೆಯ
ಜಗಕೆ ಸಿಕ್ಕು
ನಿನ್ನನ್ನೇ
ಮರೆತಿರುವೆ ಗೆಳತಿ
ನಿನ್ನ ಮನಸಿನ
ಯಂತ್ರಕೆ
ಮಿಡಿತದ ಇಂಧನ
ನಾನು-
ಎಂಬುದನು
ಮರೆತು ಬಿಟ್ಟೆಯಾ?
ಛೇ! ಎಂತು
ಇನ್ನು ನಾ
ಹೇಳಲಿ ನಿನಗೆ?!

ಎಲ್ಲವನ್ನು
ಸುಟ್ಹಾಕಿ
ಉಟ್ಟ ಉಡುಗೆಯಲ್ಲಿ
ಬರಬಲ್ಲೆ ನಾ...
ಆದರೆ-ನಿನ್ನ
ನೆನಪುಗಳನು
ಸುಟ್ಟರೆ
ನನ್ನಲಿ ನಾ
ಇನ್ನೆಲ್ಲಿ ಗೆಳೆಯ
ನೀನೇ ಹೇಳು
ಓ ನನ್ನಿನಿಯ!

ನೀನು ಬಯಸಿದ
ಪ್ರೇಮವನು
ದಕ್ಕಿಸಿಕೊಳ್ಳಲು
ಬಿಡದ ನಾನು,
ನನಗೆ ದಕ್ಕಲು
ಕಾದಿಹ
ಪ್ರೇಮಕೆ
ಅರ್ಹನೇ?!
ಖಂಡಿತಾ ಇಲ್ಲ
ವಂಚನೆಗೂ
ದೇವರು ವಂಚನೆ
ಮಾಡಲಿ-
ಈ ರೀತಿಯಲ್ಲಿ
ನಿರಂತರ
ಒಂಟಿತನಕ್ಕೆ ತಳ್ಳಿ
ನನ್ನ ಕೊಂದು
ಕ್ಷಮಿಸಲಿ ತಪ್ಪನು!

ನನ್ನ ನಗುವ ಕಂಡು
ನೀನೆಲ್ಲಿ ಹೆದರುತ್ತೀಯೆಂದು
ನಾ ಮೌನವಿರಲಿಲ್ಲ
ನಿನ್ನ ಆ
ಹೂ ನಗೆಯು ನನ್ನ
ಉಸಿರು ಸೋಕಿ
ಬಾಡದಿರಲಿ ಎಂಬ
ಆಕಾಂಕ್ಷೆಯಷ್ಟೇ!
ತಿಳಿಯಿತೇ?!

ಕಣ್ಮುಂದೆ
ಕಾಣದ ನಿನ್ನೆ-ನಾಳೆಗಳ
ಬಗೆಗೆ ಜನರೇಕೆ
ತಲೆ ಕೆಡಿಸಿಕೊಳ್ಳುತ್ತಾರೋ?!
ಬಹುಶಃ ಇಂದು
ಕಳೆಯಲು
ಎರಡು ದಿನಗಳ
ತಲೆ ಭಾರವಾದರೂ
ತಲೆಯಲ್ಲಿ ಬೇಡವೇ?

ಕದ್ದು ಕದ್ದು
ನಿನ್ನ ನಗುವ
ನೋಡುತ್ತಿದ್ದ
ʼʼಆ ದಿನಗಳನು
ನೆನೆಸಿಕೊಂಡರೆ
ನಿಜಕೂ ಈಗಲೂ
ನಗು ಬರುತ್ತದೆ!”
ಅಸಲು ಆ
ನಗುವಿಗೆ ಸೋತ
ಘಳಿಗೆಯಿಂದಲೇ
ಅಲ್ಲವೇ?!
ನನ್ನ ನೋಡಿ ನಾನೇ
ನಗುವಂತಾಗಿದ್ದು!

ನುರಿತವನು
ನಾನಲ್ಲ
ಎಲ್ಲ ಅರಿತವನು
ನಾನಲ್ಲ
ಮಾತಲ್ಲಿ
ಹರಿತವನು
ಬೆರೆಸುವ
ಕಟುಕನು
ನಾನಲ್ಲ!
ನಿನ್ನೊಡನೆ
ಭಾವ ಸ್ಪುರಿಸಲು
ನಾ ನಿನ್ನ ನಲ್ಲ
ಅಲ್ಲವಲ್ಲ!

ಧುತ್ತೆಂದು
ಅಲೆಗಳಂತೆ
ಧಾವಿಸಿ ಬರುವ
ಭಾವನೆಗಳ
ತುಮುಲುಗಳನು
ತಡೆಯದಾದೆ
ಪ್ರೀತಿಯು
ಕಡಲಂತೆ
ಭಾವಗಳು
ಅಲೆಗಳಂತೆ
ಎಂದು ಆಗ
ಮನಸಿಗೆ
ಸಮಜಾಯಿಸಿದೆ!

ಸಾಗು ಮುಂದೆ...
~~~~~~~~~~~
ಮುಂದೆ ಮುಂದೆ ಸಾಗುವೆ
ಎಂದೂ ಮುಂದೆ ಸಾಗುವೆ...
ಎಂದು ಹೆಜ್ಜೆ ಇಟ್ಟರೆ-
ಗೆಲುವು ನಿಶ್ಚಿತ...ನಿನ್ನ ಗೆಲುವು ಶಾಶ್ವತ

ಸೋಲಿನ ಕಥೆಯನು ನೀನು
ಮರೆಯದೇ ಇದ್ದರೆ-ಗೆಲುವು ಎಲ್ಲಿದೆ?!
ಗೆಲುವಿನ ದಾರಿಯ
ಹುಡುಕದೇ ಇದ್ದರೆ-ಸೋಲು ಕಾದಿದೆ
ನಿನ್ನ ಏಳ್ಗೆಗೆ ನೀನೇ ಶಿಲ್ಪಿಯು
ನಿನ್ನ ದಾರಿಗೆ ನೀನೇ ದೀಪವು
ಹೇಳು ʼಏಳುʼ ಮುಂದೆ ಮುಂದೆ ಸಾಗುವೆ ಎಂದು

ಬಾಳಿನ ದಾರಿಯು ಕಷ್ಟವೆಂದು ಕುಳಿತರೆ-
ನಿನಗೆ ನಷ್ಟ ಕಾದಿದೆ
ಮನದಲಿ ಇಷ್ಟವು ಸ್ಪಷ್ಟವಾಗಿ ಉಳಿದರೆ-
ನಿನಗೆ ಎಲ್ಲವೂ ಸಾಧ್ಯವು...
ನಿನ್ನ ಉಳಿವಿಗೆ ನೀನೇ ಕಾರಣ
ನಿನ್ನ ಅಳಿವಲಿ ನಿನಗೆ ಮರಣ
ಕೇಳು ʼಏಳುʼ ಮುಂದೆ ಮುಂದೆ ಸಾಗುವೆ ಎಂದು.

ಯಕ್ಷಪ್ರಶ್ನೆ.
~~~~~~~
ಎಷ್ಟೇ ಓದಿದರೂ
ಎಷ್ಟೇ ತಿಳಿದರೂ
ಎಷ್ಟೇ ಪ್ರಯತ್ನಿಸಿದರೂ-
ಮುಗಿಯದ ಈ
ಬದುಕಿನ ಅನಂತತೆಯ
ಒಳಗೆ ಇಣುಕಿ ನೋಡುತ
ಸಾಗಿದಂತೆ...
ಎಷ್ಟೋ ಸಾರಿ
ಯಾವುದೋ
ಒಂದು ಘಟ್ಟದಲ್ಲಿ
ಯಾವುದೋ
ಒಂದು ಹೆಜ್ಜೆಯಲ್ಲಿ
ʼʼಯಕ್ಷಪ್ರಶ್ನೆ”
ಆಗಿಯೋ ಉಳಿವ
ಸೂಕ್ಷ್ಮತೆಯ ಪರಿಗೆ
ಏನೆನ್ನಲೂ ಆಗದೇ
ಎಲ್ಲರೂ ಅದೇಕೋ ಸೋಲುತ್ತಾರೆ!
ಆದರೂ ಸುಮ್ಮನೆ-
ಮುಂದೆ ಸಾಗುವವರು
ಮುನ್ನುಗ್ಗುತ್ತಾರೆ!!
ಕೆಲವರು ಅದನ್ನೇ
ತಲೆಗಚ್ಚಿಕೊಂಡು
ಯಕ್ಷಪ್ರಶ್ನೆಗೂ
ಉತ್ತರ ಹುಡುಕುತ್ತ
ಸಾಗುವುದೂ-
ಅದೇಕೋ
ನನಗೆ ಅರ್ಥವಾಗದ
ʼಯಕ್ಷಪ್ರಶ್ನೆʼಯಾಗಿ
ಕಾಡುತ್ತಲೇ ಇರುತ್ತದೆ...
ಅದಕ್ಕೆ ಉತ್ತರ
ನನ್ನಲ್ಲೂ ಇಲ್ಲದೇ
ಇರುವುದು!!
ಏಕೆ ಹೀಗೆ ಎಂದರೆ
ಯಾರಾದರೂ,
ಆ ಅವರ ಪ್ರಶ್ನೆಯೂ
ನನಗೆ-
ಬಿಡಿಸದ ಒಗಟಾಗಿಯೂ
So called
“ಯಕ್ಷಪ್ರಶ್ನೆ”ಯಾಗಿಯೂ
ಎದುರು ನಿಲ್ಲುತ್ತದೆ...
ಮನಸ್ಸಿನಲ್ಲಿ
ತನ್ನ ನರ್ತನವನು
ಮಾಡುತಲೇ ಇರುತ್ತದೆ!.

ಮೀಸಲು.
~~~~~~
ಅರಳುವ ಪ್ರತಿ
ಹೂವು
ನನ್ನವಳಿಗೆ
ಮೀಸಲು..
ಮಿನುಗುವ ಪ್ರತಿ
ತಾರೆಯೂ
ನನ್ನವಳಿಗೇ
ಮೀಸಲು
ಅಷ್ಟೇ ಏಕೆ!
ನಮ್ಮೂರಿನಲ್ಲಿ
ಕನ್ಯೆಯರಿಗೇನು
ಬರವೇ?!
ಆದರೂ,-
ಈ ನನ್ನ ಹೃದಯ
ಸದಾ
ನನ್ನವಳಿಗೇ ಮೀಸಲು...

ಈ ಹುಡುಗಿಯರೇ
ಹೀಗೆ ಕಾಯುತ್ತಾರೆ
ಮೊದಲ ಭೇಟಿಯಲ್ಲಿ-
ಮುಂದಿನ ಎಲ್ಲಾ
ಭೇಟಿಗಳಲ್ಲಿ
ಕಾಯಿಸೋದು ಹೇಗೇಂತ
ಚೆನ್ನಾಗಿ
ಗೊತ್ತಿರುತ್ತದಲ್ಲ
ಅದಕ್ಕೇ!



No comments:

Post a Comment