Sunday, July 19, 2020

ಹನಿಗವನಗಳು...


ಪ್ರೇ(ಹೋ)ಮ.
~~~~~~~~~~
ಲಜ್ಜೆ ಬಿಟ್ಟು ನೀ
ಹೆಜ್ಜೆ ಇಟ್ಟು ಸಜ್ಜಾಗಿ
ಬಂದ ಘಳಿಗೆಯಲ್ಲಿ
ಕುಡಿಯೊಡೆಯಿತು
ಪ್ರೇಮ...
ಅಂದಿನಿಂದಲೇ
ಶುರುವಾಯ್ತು
ಎದೆಯಲ್ಲಿ
ವಿರಹದಾ
ಹೋಮ!

ಬೇಡಿಕೆ.
~~~~~~
ನಿಲ್ಲದು ಬಾಳ
ಪಯಣ
ಒಪ್ಪದು ಒಮ್ಮೆ
ಮರಣ
ಆಗುತಿಹುದು ವ್ಯರ್ಥ
ಕಾಲಹರಣ
ಗೆಳತಿ
ಬೇಗ ಶುರು ಮಾಡು
ನಿನ್ನ ಪ್ರೇಮದ ಪಾರಾಯಣ!

ಶೈ(ಮೈ)ಲಿ.
~~~~~~~
ನನ್ನ ಕವನಗಳಲ್ಲಿ
ನನ್ನದು
ವಿಶೇಷ ಶೈಲಿ
ಅದಕೆ ಜನ ಕೇಳಲು
ಆಗದೆ
ಓಡ್ತಾರೆ ನೂರು ಮೈಲಿ!

ನಲ್ಲೆಗೆ ಸ್ವಾಗತ.
~~~~~~~~~~
ಅಲ್ಲಿ ಇಲ್ಲಿ ಓಡುವ
ನನ್ನ ಚಂಚಲ
ಮನಸನು ನೀ
ನಿನ್ನಲ್ಲೇ
ಏಕಾಗ್ರವಾಗುವಂತೆ
ಮಾಡಿದೆಯಲ್ಲೇ...
ಹಾಂ! ಆಗಲೇ
ನಾನೂ,ನೀನೇ
ನನ್ನ ನಲ್ಲೆಯೆಂಬುದನು
ಒಪ್ಪಿಕೊಂಡೆನಲ್ಲೇ!

ಹಾರೈಕೆ.
~~~~~~
ಚಲಿಸದ ಕಾಲದ
ನದಿಯಲ್ಲಿ
ನಿನ್ನ-ನನ್ನ
ಪ್ರೇಮದ ದೋಣಿ
ಎಡೆಬಿಡದೆ
ಸಾಗಲಿ
ಪ್ರೀತಿಗೆ ಅಂತ್ಯವಿಲ್ಲ
ಎಂಬುದನು
ಮತ್ತೊಮ್ಮೆ ಅದು
ಈ ಜಗಕೆ
ಸಾರಲಿ.

ಆಕಸ್ಮಿಕ.
~~~~~~
ರೆಪ್ಪೆ ಮುಚ್ಚಿ
ಕಣ್ಣಲ್ಲೆ ನೆನೆದೆ
ನೀ ಬಂದು
ಕಣ್ಣ ಮುಂದೆ ನಿಂತಂತೆ
ಕಣ್ಣ ತೆರೆದು ನೋಡಲು
ನೀನೇ ನಿಂತಿದ್ದೆ
ಎದುರಲ್ಲಿ
ನನಸೇ ಎದ್ದು ಬಂದಂತೆ!

ಪ್ರತಿಕ್ರಿಯೆ.
~~~~~~~~
ನಮ್ಮೆರಡು ಆತ್ಮಗಳ
ನಡುವಿನ ಈ
ಅಮರ ಮಧುರ ಸಂಗಮ
ಕಂಡು
ನಸು ನಾಚಿ ನಕ್ಕು
ಸುಮ್ಮನೆ ಮರೆಯಾದ
ಆ ಬಾನ ಚಂದ್ರಮ.

ಮೌನದಲ್ಲಿ...
~~~~~~~~~~
ಮೌನದಲ್ಲಿ ಮಾತು
ಮಾತನಾಡದು
ಮನಸು ತನ್ನೊಳು
ತಾ ಮಾತಾಡುವುದು.

ಪ್ರತಿಬಿಂಬ.
~~~~~~~~
ಸಲಿಲದಲ್ಲೂ ನಿನ್ನದೇ
ಪ್ರತಿಬಿಂಬ
ಲೀಲಾಜಾಲವಾಗಿ ಹರಡಿತ್ತು
ಮುಟ್ಟಲೆಂದು ಬಂದೆ
ಪಟ್ಟು ಜಂಭ
ನಿನ್ನ ಮುಖ ಚಿತ್ರ ಆಗ
ಅಲೆ ಅಲೆಯಾಗಿ ಹರಡಿತ್ತು!

ವಾಸ್ತವ-1.
~~~~~~~~
ಪಲ್ಲವಿಯೇ ಇರದೆ
ಚರಣವಿರಬಹುದು
ಚರಣಗಳೇ ಇರದೆ
ಪಲ್ಲವಿಯೊಂದೇ
ಹಾಡಾಗಬಹುದು
ಜಗದ ಚಿಂತೆಯಲ್ಲಿ
ಪ್ರೀತಿ ಇರದೇ
ಹೋದರೆ ಎಲ್ಲವೂ
ಶೂನ್ಯವೇ ಆಗುವುದು!

ವಾಸ್ತವ-2.
~~~~~~~~
ಅರ್ಧ ಬದುಕು
ಸದ್ದಿಲ್ಲದಂತೆಯೇ
ಸರಿಯುತ್ತದೆ
ಇನ್ನರ್ಧವನ್ನು
ನಾವೇ
ಸರಿಸಬೇಕಾಗುತ್ತದೆ!

ವಾಸ್ತವ-3.
~~~~~~~~
ನಿನ್ನೆಯಂತೆ ಇಂದು
ನಾನಿರುವುದಿಲ್ಲ-
ಅದ್ಯಾವ ನಂಬಿಕೆಯ
ಮೇಲೆ ಒಪ್ಪಿ ಆಕೆ
ಸತಿಯಾದಳೋ?!
ನನಗಿಂದೂ ಅರ್ಥವೇ
ಆಗಿಲ್ಲ!

ಸ್ವಾಧೀನ.
~~~~~~~
ಸದ್ದಿಲ್ಲದಂತೆ ಜಗವು
ಚಲಿಸುತ್ತಿರುವುದರ
ಗಮನ ನನಗಿದೆ
ಯಾಕೆಂದರೆ ನನ್ನ
ಮನ ಇನ್ನೂ
ನನ್ನಲ್ಲೇ ಇದೆ ಗೆಳತಿ!

ಪ್ರೀ(ಭೀ)ತಿ.
~~~~~~~~
ಉಸಿರುಗಟ್ಟಿದಂತಿದ್ದ
ಬದುಕಿನಲ್ಲಿ
ಚಿಗುರೊಡೆಯುವಂತೆ
ಮಾಡಿತ್ತು ಅವಳ ಪ್ರೀತಿ!
ಯಾರ ವಕ್ರ ದೃಷ್ಟಿ
ಬಿತ್ತೋ ನಮ್ಮ ಮೇಲೆ!
ಚಿವುಟಿ ಹಾಕಿ ಕೊಲ್ಲುತ್ತಿದೆ
ನಿತ್ಯವೂ ಮನೆ ಮಾಡಿ
ಮನದಲ್ಲಿ ಭೀತಿ.

ರೀ-ಯಾಕ್ಟೀವ್!‌
~~~~~~~~~~
ಅವಳ ಪ್ರೇಮದಲ್ಲಿ
ಇದ್ದಾಗ
ಅವನು ವೆರಿ
ರಿಯ್ಯಾಕ್ಟೀವ್
ಪ್ರೇಮ ವೈಫಲ್ಯಕ್ಕೆ
ತಿರುಗಿದಾಗ
ವರಿ ಆಗಿ ಅಗಿ
ಆಗಬೇಕಿದೆ ಈಗ
ರೀ-ಯಾಕ್ಟೀವ್!‌

ರೀ ಫ್ರೆಶ್!‌
~~~~~~~
ತಾಕಲಾಟಗಳ
ಮಧ್ಯೆ ಕೊರಗುತ್ತ
ಮಲಗಿರಲು
ಅವಳು ತನು
ತಾಕಿದಾಟದಲಿ
ಕ್ಷಣಕಾಲ ಹಾಯೆನಿಸಿತು!

ಅನಿವಾರ್ಯ.
~~~~~~~~~
ನಿನ್ನ ಹಿಂದೆಯೇ
ಸಾಗಲು
ಏನೋ ಸಂತಸ
ಅದು ಪ್ರೀತಿಯೇನಲ್ಲ
ಮಳೆ ಬಂದಾಗ
ಇದು ಅನಿವಾರ್ಯ
ಓಡಲಾಗದಲ್ಲ!

ವಿಶ್ವಾಸ.
~~~~~~
ಹೇಳಬಲ್ಲೆ ನಾ
ನಿಸ್ಸಂದೇಹವಾಗಿ,
ನಿನ್ನ ಮೇಲಿನ
ವಿರಹವೇ ಕಾರಣ
ನಿನ್ನ ಹೆಚ್ಚು
ಪ್ರೀತಿಸುವ
ದಾರಿಯಲ್ಲಿ ನಾ
ಸದಾ ಇರಲು.

ನಿ(ನೀ)ವೇದನೆ.
~~~~~~~~~~
ಪ್ರಿಯೇ,
ನಿನ್ನಲ್ಲಿ ನನ್ನ
ನಿವೇದನೆ...
ಈ ಪ್ರೀತಿಯಲಿ
ಎಷ್ಟೇ ಕಷ್ಟ ಇರಲಿ
ಪಡದಿರು
ನೀ ವೇದನೆ.

ದ್ವಂದ್ವ.
~~~~~~
ದುಃಖದ ಭರದಲ್ಲಿ ಅಂದಿದ್ದೆ
“ಯಾರಿಗೆ ಬೇಕು ಈ ಲೋಕ?!”
ಸುಖದಲ್ಲಿರಲು ಅನಿಸಿತು
“ಎಲ್ಲವ ಬಿಟ್ಟುಒಂದು ದಿನ-
ಹೋಗಲೇಬೇಕಾ?!”

ಹೊಸ ರೂಪ.
~~~~~~~~~~
ಕನಸೆಂಬ ಕನ್ನಡಿಯ
ಪ್ರತಿಬಿಂಬ ನನಸಾದಾಗ
ಚಿತ್ರವಾಗಿತ್ತು!

ಸನಿಹ.
~~~~~
ಓರೆಕೋರೆಯ
ರೇಖೆಗಳಿಂದ
ರಚಿಸಿದ್ದು ಚಿತ್ರ
ಪ್ರೀತಿ-ಪ್ರೇಮಗಳಿಂದ
ಬದಲಾದೀತು
ಜಗದ ವಿಚಿತ್ರ!
ನೀ ದೂರವಿದ್ದರೂ
ನಿನ್ನ ಮಾತುಗಳಲ್ಲಿ
ಎಂದಿಗೂ ನಾ ಹತ್ರ!

ಕ(ವ)ದನ.
~~~~~~~
ಹೇಗೆ ಹೇಳಲಿ
ಗೆಳತಿ
ನನ್ನ ಮನದ
ಕದನ
ಎದುರಲ್ಲಿ ನೀ
ಬಂದು
ತೋರಲು ನಿನ್ನ
ಸುಂದರ ವದನ!

ಆತ್ಮ ವಿಶ್ವಾಸ.
~~~~~~~~~~~
ಬದುಕು ನನ್ನದು
ಇನ್ನೂ ಮುಗಿದಿಲ್ಲ!
ಅದ್ಹೇಗೆ ಕಂಡೀತು
ಕೊನೆಯ?
ನೀ ಇನ್ನೂ ನನಗೆ
ನನ್ನ ಪ್ರೀತಿಸುವೆ
ಎಂದು ಹೇಳೇ
ಇಲ್ಲವಲ್ಲ!

ಅಂತರಾಳ.
~~~~~~~~~
ಅವಳು ಪ್ರೀತಿಸಿ
ಮರೆತು ಹೋಗಲಿಲ್ಲ
ಮರೆಯದಂಥ
ನೆನಪುಗಳನುಳಿಸಿ
ಹೋಗಿ ಬಿಟ್ಟಳು!
ಅದಕೆ ನನಗೆ ಮತ್ತೊಬ್ಬ
ಅವಳಂಥವಳು
ಸಿಕ್ಕಲೇ ಇಲ್ಲ!

ಬತ್ತಿ ಅಜ್ಜಿ.
~~~~~~~~
ಆಕೆಗೆ ಈ ಹೆಸರು
ಬಂದದ್ದು
ಜೀವನದಲ್ಲಿ ದುಗುಡ
ಅನುಭವಿಸಿ
ಬತ್ತಿ ಹೋದ ಕಾರಣಕ್ಕಾಗಿ
ಅಲ್ಲ
ಪೂಜೆಗೆ ಬತ್ತಿ ಮಾಡುತ್ತಾ
ಕುಳಿತಾಗ
ಅವರಿವರ ಮುಂದೆ
ಅವರಿವರ ಬಗ್ಗೆ
ಬತ್ತಿ ಇಡೋ ಕೆಲ್ಸ
ಮಾಡಿದ ಪ್ರಸಿದ್ದಿಗಾಗಿ!

ಸವಿ-ಜೇನು.
~~~~~~~~
ನಿನ್ನ ಪ್ರತಿ ಮಾತು
ಹೊಳೆಯೋ
ಸ್ವಾತಿ ಮುತ್ತು
ನಿನ್ನ ಎಲ್ಲ ಮಾತು
ನನಗೆ
ಜೇನಿನ ತುತ್ತು.

ಹುಚ್ಚು.
~~~~~~~
ಇದ್ದರೆ ತಪ್ಪಲ್ಲ
ಹೆಚ್ಚು ಕವನ
ಬರೆಯೋ ಹುಚ್ಚು!
ಇರದಿರಲಿಯಷ್ಟೇ,
ಹುಚ್ಚು ಹುಚ್ಚು ಕವನ
ಗೀಚುವ ಹುಚ್ಚು!

ನಿನಗೆ ನಾ...
~~~~~~~~
ನೀ ರೆಕ್ಕೆಯಾದರೆ
ನಾ ಗಾಳಿಯಾಗುವೆ
ನೀ ನಕ್ಕೆಯೆಂದರೆ
ನಾ ಮಗುವಾಗುವೆ
ಸಂಗಾತಿ ನಿನ್ನ
ಸಾನಿಧ್ಯ ಸಿಕ್ಕರೆ
ಹಗಲಲ್ಲೂ ಇರುಳಲ್ಲೂ
ಅನುಕ್ಷಣವೂ
ನಾ ನಿನ್ನ
ಕಾವಲುಗಾರನಾಗಿರುವೆ!

ಇಂಗಿತ.
~~~~~~
ನಾನು ಒಂಟಿಯಾಗಿ
ಇರೆನು ಎಂದು
ಅವಳಿಗೆ ಗೊತ್ತು
ಅದಕೆ
ಜಂಟಿಯಾಗಲು ನನ್ನ
ಗಂಟು ಬಿದ್ದಳು!

ವಾದ.
~~~~~
ನನ್ನದು ಒಂದೇ ವಾದ
ನಮ್ಮ ಪ್ರೇಮ
ವಿವಾದಕ್ಕೆ
ಈಡಾಗುವುದು ಬೇಡ!

ವೈರಾಗ್ಯ.
~~~~~~~
ಬೇಕಿತ್ತು ನನಗೆ
ದಿನವೂ ಗಳಿಕೆ
ಈಗ ಇನ್ನೇಕೆ?
ಎಲ್ಲವ ಮರೆಸಿತು
ನನ್ನಲಿ ನಿನ್ನ
ಅಗಲಿಕೆ!

ನೀತಿಯ ಪಾಠ.
~~~~~~~~~~
ಎನಗೆ ಬೇಕಿಲ್ಲ
ನಿನ್ನ ಪ್ರೀತಿಯ
ಪರಿಪಾಠ
ಮನದಲ್ಲಿ ಹಾಸುಹೊಕ್ಕು
ನಾ ನಿನ್ನ ಮಡಿಲಲ್ಲಿ
ತಲೆಯಿಟ್ಟು
ಮಲಗಿದಾಗ!

ನಟನೆ.
~~~~~
ಸಾಯುವುದಂತೂ
ಸತ್ಯ -ನಡಿ ಗೆಳತಿ
ನಾವಿಬ್ಬರೂ ಇಂದೇ
ʼಸಾಯೋ ಆಟ-
ಆಡೋಣ!”
ಆಗಲಾದರೂ ನಮ್ಮ
ಅಪ್ಪ ಅಮ್ಮ
ಮದುವೆಗೆ
ಒಪ್ಪಿಗೆ ಕೊಟ್ಟಾರು!

ಅಲ್ಲೇ-ಇಲ್ಲೇ!
~~~~~~~~~
ನಲ್ಲೆ ನೀ ಇದ್ದರೂ
ನಿನ್ನ ತವರಲ್ಲೇ
ಮನಸ್ಸು ಮಾತ್ರ
ಮಿಡಿಯುವುದು ಇಲ್ಲೇ!
ನಲ್ಲೆ ನೀ ಇದ್ದರೂ
ಅಲ್ಲೇ! ಕನಸಲ್ಲಿ
ಮಾತ್ರ
ಇದ್ದಂತೆ ಇಲ್ಲೇ!

ನೆಪ.
~~~~~
ಎರಡು ಮಕ್ಕಳ ತಂದೆ
ಮನೆಯಲ್ಲಿ ನೊಂದೆ
ಕಾರ್ಯಕ್ರಮಕ್ಕೆ ತಡವಾಗಿ ಬಂದೆ
ದಯವಿಟ್ಟು ಕ್ಷಮಿಸಿ ಎಂದೆ.

No comments:

Post a Comment