ಮನದ ಅಂಗಳದಲ್ಲಿ
ನಿನ್ನ ನೆನಪು
ಕುಣಿಯುತ್ತದೆ...
ನಲಿಯುತ್ತದೆ
ಅಲೆಯುತ್ತದೆ
ಎಲ್ಲೆಂದರಲ್ಲಿ-
ಹೇಗೆಂದರೆ ಹಾಗೆ,
ಸಂಚರಿಸುತ್ತದೆ!
ಮನದನ್ನೆ ನೀನಲ್ಲವೇ-
ನಿನ್ನಿರಿವಿನಿಂದ
ನನ್ನೀ ಬಾಳು
ನಳನಳಿಸುತ್ತದೆ
ನನ್ನ ಮನದ ನೆಲವೂ
ನಿನ್ನ ಪಾದ ಸೋಕಿ
ಹಸನಾಗುತ್ತದೆ
ಪಾವನ ಮಾಡಿ
ನನ್ನ ಮನವನ್ನು
ವನದಂತೆ
ಹಸಿರುಗೊಳಿಸುತ್ತದೆ
ಉಸಿರ ಬಿಗಿಯನು
ಸಡಿಲಗೊಳಿಸುತ್ತದೆ...
ಕಷ್ಟಗಳು
ಮೇಲಿಂದ ಮೇಲೆ
ಬರುತ್ತಿದ್ದರೆ
ಕಲ್ಲಾಗಬೇಕಂತೆ...
ನಮ್ಮ ಧೈರ್ಯ
ನೋಡಿ ಆ
ಕಷ್ಟಗಳೂ
ಕರಗಿ ಸರಿದು
ಹೋಗುತ್ತವಂತೆ!
ಅರೆಕ್ಷಣವೂ ನಿಲ್ಲುವುದಿಲ್ಲ...
ನೀ ಬರುವನಕ ನಾ ಕಾಯಲು
ಎಂದೆಂದೂ ಸಿದ್ಧನಿರಲು
ಕಾಲದ ಪರಿಧಿಯಲ್ಲಿ
ಜಗವು ಸಾಗಲೇಬೇಕು
ಅದು ನಿಯಮ
ಆದರೆ ನನಗಾವುದರ ಹಂಗಿಲ್ಲ
ನಿನ್ನ ಕಾಣಲು ನಾ
ಹಾತೊರೆಯುವೆ
ಎಂದೆಂದೂ ನನ್ನೆಲ್ಲಾ
ಕಾಲ ಬಂಧನಗಳ ವ್ಯಾಪ್ತಿಯನು
ಮರೆತು
ಎಂದಿಗೂ ನಿನ್ನವನೇ
ಎಲ್ಲವ ಕೈ ಬಿಡುವೆನು
ನೀ ಕಣ್ಣ ಮುಂದೆ
ಬಂದು ನಿಲ್ಲಲು ಮುಂದಾಗಲು...
ಮುಸ್ಸಂಜೆ ಮಾತಿನ
ಹುಡುಗಿ
ಇಂದೇಕೆ ನಿನ್ನ
ಸುಳಿವಿಲ್ಲ
ಮುಸ್ಸಂಜೆ ಎಂದಿನಂತೆ
ಆಗುತಲಿಹುದು
ಆದರೆ
ಮಾತಿಗೇಕೆ ಬರ
ಮೌನವೇ ಇಷ್ಟವಾಯ್ತೇ?
ಮಾತು ಮರೆಸುವ
ಮೌನದಲ್ಲೇನು
ವಿಶೇಷ?!
ಎಷ್ಟು ನರಳಿದೆನು!
ಗೊತ್ತೇ ನಿನಗೆ?!
ನೀ ಇಲ್ಲದಿರುವಾಗ-
ನೀನೂ ನರಳಿರಬಹುದು
ಇಲ್ಲವೆಂದಲ್ಲ...
ನನ್ನ ನರಳಾಟ
ನನಗೇ ಗೊತ್ತು
ನರಳಿದವನು ನಾನು ತಾನೇ!
ಹೀಗೆ ನರಳಲೆಂದು
ನಿನ್ನ ನಾ ಪ್ರೀತಿಸಲಿಲ್ಲ...
ಆದರೆ-
ಈ ಪ್ರೀತಿ ಇಂಥಹ
ನರಳಾಟವನು
ಕರುಣಿಸುವುದೆಂದು
ಪ್ರೀತಿಸುವ ಮುನ್ನ
ತಿಳಿದಿರಲಿಲ್ಲ...
ಎಂಥ ಅದ್ಭುತ ಈ ಪ್ರೀತಿ!
ಒಮ್ಮೆ ಹತ್ತಿರಕ್ಕೆ
ಕರೆ ತರುತ್ತದೆ
ಮತ್ತೊಮ್ಮೆ ವಿರಹಕ್ಕೆ
ದೂಡುತ್ತದೆ...
ಒಮ್ಮೆ ಬೇಕೆನಿಸುತ್ತದೆ
ಮತ್ತೊಮ್ಮೆ ಎಲ್ಲವನ್ನೂ
ಮರೆಸುತ್ತದೆ...
ಒಮ್ಮೆ ಅಳಿಸುತ್ತದೆ
ಮಗದೊಮ್ಮೆ ನಗಿಸುತ್ತದೆ
ಬದುಕಿನುದ್ದಗಲವನೆಲ್ಲ
ದಾಟಿ ಬಂದಂತನಿಸುವಂತೆ
ಮಾಡಿ ಬಿಡುತ್ತದೆ
ಅರೆಕ್ಷಣದಲ್ಲಿ ಎಲ್ಲವೂ
ತಿರುವು-ಮುರುವಾಗುವಂತೆ
ಮಾಡುತ್ತ ಎಡೆಬಿಡದೆ
ಸತಾಯಿಸುತ್ತದೆ...
ಕಾದು ಬಾಗಿದಷ್ಟೂ
ಪ್ರೀತಿ ಮಾಗುತ್ತದೆ!
ನನಗಾರೂ ಇಲ್ಲವೆನಬೇಡ
ಅನುದಿನವೂ ನಿನ್ನೆದುರು
ನಿನ್ನನೂ ಎಲ್ಲರಂತೆ
ಸ್ವಾಗತಿಸಲು ನಾಳೆಯೊಂದಿದೆ!
ಅವಳು ಎದುರಾಗುವ
ಕ್ಷಣವ ನಿರೀಕ್ಷಿಸುವ
ಇಂಗಿತದ ಹಿಂದಣ
ಅವಳು ನನ್ನ ಮನದಲ್ಲಿ
ಮನೆ ಮಾಡಿದ
ಪ್ರೀತಿಯ ಕಾರಣವಿದೆ!
ಹೀಗೆ ಬಂದು
ಹಾಗೆ ಹೋಗಲು
ನೀನಲ್ಲ ಅತಿಥಿ
ನಾ ʼʼನಲ್ಲ”
ಅದಕೆ ನೀನಾಗು
ನನ್ನ ಮನದೊಡತಿ!
ನಿನಗಾಗಿ ನನ್ನ
ಈ ಮನದಲ್ಲಿ
ಬೆಟ್ಟದಷ್ಟು ಜಾಗವಿಲ್ಲ
ಇರುವ ಪುಟ್ಟ
ಮನಸ್ಸು ನಿನ್ನ
ಪ್ರೀತಿಯನ್ನು ಬೆಟ್ಟದಷ್ಟು
ಗಟ್ಟಿಯಾಗಿ ಹಿಡಿದಿಟ್ಟುಕೊಳ್ಳಬಲ್ಲದು!
ಬಾನೆತ್ತರಕೆ
ಹಕ್ಕಿಯಂತೆ
ಸ್ವಚ್ಛಂದವಾಗಿ
ಹಾರ ಬೇಕಿಲ್ಲ
ಈ ನನ್ನ ಪ್ರೀತಿ
ನಿನ್ನ ನನ್ನ
ಹತ್ತಿರಕ್ಕೆ ತಂದಾಗ್ಯೂ
ಹಕ್ಕಿಯ ಸ್ವಾತಂತ್ರ್ಯ
ಕಿತ್ತುಕೊಳ್ಳದಿರಲಿ
ಈ ನನ್ನ ಪ್ರೀತಿ.
~~~~~
ಮುಳ್ಳಾಗದಿರಲಿ
ಕಲ್ಲಾಗದಿರಲಿ
ಈ ನಮ್ಮ ಪ್ರೀತಿ
ಪ್ರೀತಿಯ ದಾರಿಯಲ್ಲಿ
ಕಲ್ಲು ಮುಳ್ಳುಗಳು
ಎಲ್ಲೆಂದರಲ್ಲಿ
ಚೆಲ್ಲಾಪಿಲ್ಲಿಯಾಗಿ
ಬಿದ್ದುದು ಕಂಡಾಗ್ಯೂ!
ಎಷ್ಟೋ ವೇಳೆ
ನನ್ನ ಬಗ್ಗೆ ನನಗೇ
ಅನುಮಾನ
ಆದರೆ ಅಳಿಯದು
ಎಂದಿಗೂ ನಿನ್ನ ಮೇಲಿನ
ಅಭಿಮಾನ!
ಮುಸ್ಸಂಜೆಯಾಗುತ್ತಲೇ
ಮನಸ್ಸು ಮತ್ತೆ
ಹಿಂದಕ್ಕೆ ತಿರುಗುತ್ತದೆ
ಅಂದಿನ ಮುಸ್ಸಂಜೆಗಳನ್ನು
ನೆನಪಿಸುತ್ತ...
ಇಂದಿನ ಮುಸ್ಸಂಜೆ
ಕಾಲಗರ್ಭಕ್ಕೆ ಸರಿಯುತ್ತದೆ
ನಾ ಸರಿವವರೆಗೂ
ನೀ ಜೊತೆಗಿರದಿದ್ದರೂ
ನನ್ನ ಮುಸ್ಸಂಜೆಗಳು
ನಿನ್ನೊಡನೆ ಕಳೆದ ಸಂಭ್ರಮ
ಘಳಿಗೆಗಳನ್ನು ನೆನೆಸುತ್ತ
ಮರೆಯಾಗುತ್ತವೆ!
ನಿನ್ನೆ-ನಾಳೆಯ
ಚಿಂತೆ ಎನಗಿಲ್ಲ
ಇಂದು ನಿನ್ನ ಪ್ರೀತಿ
ನನ್ನ ಜೊತೆಗಿರಲು...
ಅಂದಂದಿನ ಪ್ರೀತಿ
ಅಂದಂದೇ ನನಗೆ
ಸಿಗುತಲೇಯಿರುವಾಗ
ನಿನ್ನೆ-ನಾಳೆಗಳಾದರೂ
ಏಕೆ ಬೇಕು ನನಗಿಲ್ಲಿ
ಈ ತುಂಬು ಬದುಕಿನಲ್ಲಿ!
ನನಗೊಂದು ಜೊತೆ ಬೇಕು
ಚಿತೆಗೇರುವವರೆಗೂ...
ಚಿತೆಯಲ್ಲೂ ಜೊತೆಯಾಗುವವಳು
ಅವಳಾಗಿರಬೇಕು!
ನಿನ್ನ ಮನಸಿನೊಡನೆ
ನನ್ನ ಮನಸಿನ ಸಂಕಲನ!
ಹೃದಯದಲ್ಲೆಲ್ಲ ಪ್ರೇಮದ
ಮಧುರ ಸಂಚಲನ!
ಎಲ್ಲವನೂ ವ್ಯವಕಲನಕೆ
ಕೈ ಬಿಟ್ಟು-
ನಿನ್ನರಸುತ್ತಾ ಬರಲು
ಆಯಿತು ನಮ್ಮಿಬ್ಬರ ಮಿಲನ!
ಹೌದೌದು
ನೀನಂತೂ
ಮೂಕಿಯಾಗ್ಬಿಟ್ಟೆ!
ಈ cellphone
ಜಗತ್ತು ಬರುವ
ಮೊದಲು ನಮ್ಮಿಬ್ಬರ
ಮಾತಿನ ಚಕಮಕಿಯ
ಪ್ರಪಂಚವೇ ಬೇರೆ ಇತ್ತು!
ಈಗ sms ಗಳೇ
ನಿನ್ನೆಲ್ಲ ಮಾಹಿತಿ ನೀಡ್ತಿವೆ.
ನಿನ್ನಲ್ಲಿ ನಮ್ರತೆಯಿದ್ದರೆ
ಸಾಕು ಗೆಳತಿ-
ಆಗ ನಿನ್ನ ಕಣ್ಣ ಹನಿಗಳು
ನನ್ನ ಪಾಲಿಗೆ
ಅಮೃತವಾಗುತ್ತದೆ!
ಮೊಸಳೆ ಕಣ್ಣೀರು
ಎಂದೆಂದಿಗೂ
ವಿಷವೇ ಆಗುತ್ತದೆ.
ನನ್ನ ಆಕೆ ತುಂಬಾ
ಕಾಡ್ತಾ ಇದ್ಲು!
ಅದ್ಕೇ
ನನ್ನಾಕೆಯನ್ನಾಗಿ
ಮಾಡಿಕೊಂಡೆ!
ಆಮೇಲೆ ಅವಳ
ಕಾಟ ಇನ್ನೂ
ಜಾಸ್ತಿಯಾಗಿ
ನಾನಂದುಕೊಂಡೆ
ನನ್ನೇ ನಾ ಕೊಲೆ
ಮಾಡಿಕೊಂಡೆ!
ಅಂದಿನಂತೆ
ಸಂದೇಶ ಕಳಿಸುತ್ತಿಲ್ಲ
ನಾನು-ನನ್ನ
ಹವ್ಯಾಸಗಳು
ಬದಲಾಗಿವೆ
ಅದಕ್ಕೇ ಈಗ
Some ದೇಶ
ಸುತ್ತೋ ಹೊಸ
ಹುಚ್ಚು!
ಇಂದು ಭಾನುವಾರ
ಎಂದು ನಿಮ್ಗೂ
ಬಿಡುವು!
ಇಲ್ಲದಿರೆ message
ಮಾಡಲು
ನಿಮಗಾದರೂ ಎಲ್ಲಿ
ಗಡುವು!
ವಾರಕ್ಕೊಂದಾವರ್ತಿ
message ಕಳ್ಸೋ
ಪರಿಪಾಠ ಶುರು
ಆಗೋ ಹಂಗೆ
ಯಾಕೋ
ಕಾಣಕತ್ತದ...
ಮನಸಿನ ಇಂಥ
ಮೋಹ
ಮರೆಯದ ಇಂದ್ರಜಾಲ
ಕನಸಿನಲ್ಲೂ ಇಂಥ
ದಾಹ
ಅರಿಯದ ಪ್ರೇಮಜಾಲ!
ಯಾವ ಮಾಯೆಯ
ಸ್ಪರ್ಶದ ಸನಿಹವೋ?
ಸಾಂಗತ್ಯಕೆ ಇನಿಯನ
ಸನ್ನಾಹವೋ!
ನನ್ನ ಈ ಮೊದಲ
ಪ್ರೇಯಸಿಯರೆಲ್ಲ
ಈಗ ನಿನ್ನಲ್ಲೇ
ವಿಲೀನ...
ಅದಕೆಂದೇ ನಲ್ಲೆ
ನಾನೀಗ ನಿನ್ನ
ಪ್ರೇಮದಾರಾಧನೆಯಲ್ಲೇ
ತಲ್ಲೀನ...!
ಶರಾಬ್ ಮತ್ತು
ಬರಿಸಿ ನಮ್ಮನ್ನೇ
ನುಂಗಿದಂತೆ!
ಅವಳ ʼಶ್!ʼ ಅಂತ
ರಮಿಸಿ ‘Rob’
ಮಾಡಿ ಬಿಟ್ಲು ಈ
ನನ್ನ Heartನ್ನ!
ಹೃದಯದ ಪೂರ್ತಿ
ತುಂಬಿಕೊಂಡಾಗ
ಅಕ್ಕ ಪಕ್ಕ
ಏನಿರುವುದು
ನನಗೆ ಬೇಕೇ ಇಲ್ಲ
ʼಅಕ್ಕʼ,ʼಪಕ್ಕʼ ಬಂದು
ತಲೆಗೆ ಬಾರಿಸೋವರ್ಗೂ
ಆಕೆಯ ಗುಂಗು
ತಲೆ ಬಿಟ್ಟು
ಸರಿದಿರಲೇ ಇಲ್ಲ!
ನನಗೂ ಅಂತ
ಒಬ್ಬಳು
ಅಲ್ಲೆಲ್ಲೋ
ಕಾದಿರುವಳು!
ಅವಳಿಗೂ ನಾನೇ
ಬೇಕೆಂದು-
ನನಗೇ ಎಂದು
ಆ ದೇವರು
ಬರೆದಿಟ್ಟಿರುವಾಗ
ಜನರ ನಿರೀಕ್ಷೆಗಳನು
ಹುಸಿ ಮಾಡಿ
ನನ್ನನೇ ಸೇರಲೆಂದು!
ನನ್ನ ಮನದ
ಅಂಗಳವನು
ಹಸನು ಮಾಡಿದ
ಓ ನನ್ನ ನಲ್ಲೆ...
ನನ್ನ ಬದುಕ
ಪಯಣಕೆ ಬೇಗ
ಜೊತೆಯಾಗಲು ಬಾ
ನನ್ನ ಆಸೆಗಳು ಎಲ್ಲಾ
ನಿನ್ನ ಮನಸಿನಲ್ಲೇ!
ಹೇಳಿಕೆ!
~~~~~
ಇಗೋ! ನಿನ್ನ
ಅವಗಾಹನೆಗೆ
ತರುತ್ತಿದ್ದೇನೆ ಚಿನ್ನ
ಆವಾಹನೆ
ಮಾಡಿಕೊಂಡಿರುವೆ
ನನ್ನೊಳಗೆ ನಿನ್ನ!
ಏನೋ ಹೇಳೋದಿದೆ!
ಹೇಳಿದ್ದೆಲ್ಲ ಆಗಿದೆ...
ಹೇಳಲು ಬಹಳವಿದೆ
ಹೇಳಲೆಂದೇ ಅಂದುಕೊಂಡ
ಎಲ್ಲವೂ ಮನಸಿನಲ್ಲಿ
ಎಲ್ಲೋ ಕಾಣದಂತೆ
ಅದಾಗಿದೆ...
ಉಳಿದಿದೆ ನಾ
ಅಲ್ಲಿ ಅಳಿಯದೆ
ಉಳಿವವರೆಗೂ...
ಮರೆತ ಪುಟಗಳಲೂ
ನೆನೆದು ನೆನೆದು
ನೊಂದುಕೊಳ್ಳುವೆ
ಒಮ್ಮೊಮ್ಮೆ...
ನೆನೆಯುವಾಗಲೂ
ಏನೋ ಮರೆವೆ
ನನಗೆ ತಿಳಿಯದೆ
ಮತ್ತೊಮ್ಮೆ!
ಏನೋ ಕಳೆದು ಹೋಗಿದೆ!
ಅಂದಿನಂತೆ ಇಂದಿಲ್ಲ
ಇಂದಿನ ದಿನ ಅಂದು
ಗೊತ್ತಿರಲಿಲ್ಲ
ಅಂದು ನಾವು
ಇಂದಿನಂತಿರಲಿಲ್ಲ!
ಏನೋ ಇದ್ದರೂ-
ಮುಂಚಿನಂತೆ ಮತ್ತೆ
ನಾವಾಗಲಿಕ್ಕಿಲ್ಲ!
ಪ್ರೀ(ಭೀ)ತಿ.
~~~~~~~
ಉಸಿರುಗಟ್ಟಿದಂತಿದ್ದ
ಬದುಕಿನಲ್ಲಿ
ಚಿಗುರೊಡೆಯುವಂತೆ
ಮಾಡಿತ್ತು
ಅವಳ ಪ್ರೀತಿ-
ಯಾರ ವಕ್ರ ದೃಷ್ಟಿ
ಬಿತ್ತೋ ನಮ್ಮ ಮೇಲೆ!
ಚಿವುಟಿ ಹಾಕಿ-ಇಂದು
ಕೊಲ್ಲುತಿದೆ ನಿತ್ಯವೂ
ಮನೆಮಾಡಿ
ಮನದಲ್ಲಿ ಭೀತಿ.
ನನಗಂತ ಇರೋ
ಒಂದು ಜೀವ
ಅದು ನೀನು
ನೀ ನನ್ನ ಜೀವವೇ
ಆದಾಗ...
ನಿನಗಂತ ಇರೋ
ಒಂದು ಜೀವ
ಅದು ನಾ
ನಾ ನಿನ್ನವನೇ
ಆದಾಗ!
ಭಯಗಳನೆಲ್ಲ
ಬಿಟ್ಟು ನಿರ್ಭೀತ
ನಾನಾದಾಗ
ನನ್ನಲಿ ಅರಳಿದ್ದು
ಪ್ರೇಮ
ಪ್ರೀತಿ ದೂರಾಗಿ
ನನ್ನನೇ ನಾ.
ಮರೆತಾಗ
ಆಗಲೇ ಮನಸಿನ
ಮಾರಣ ಹೋಮ!
ನೀ ಏಕೆ ಇಷ್ಟು
ನೆನಪಾಗುವೆ?
ಪ್ರೇಮದ ಮರುಳೋ!
ಅಥವಾ
ನೆನಪಿನ ಶಕ್ತಿ
ಹೆಚ್ಚಿಸಿಕೊಳ್ಳುವ
ನೆಪದಲಿ
ನನ್ನಲ್ಲೇ
ಉದಯಿಸಿದ
ಭ್ರಮೆಯ
ಅರಳು ಮರಳೋ?!
ನನಗೆ ನೆನೆಯೋಕೆ
ಮಳೆಯ ಹನಿಗಳೇ
ಬೇಕಿಲ್ಲ...
ನನಗಾಗಿ ನೀ
ಕಣ್ಣಲ್ಲಿ ಹನಿಸುರಿಸಿ
ನನ್ನ ಮನ ಗೆದ್ದದ್ದು
ನಾ ಎಂದೂ
ಮರೆಯೋದಿಲ್ಲ!
ಸತ್ಯ.
~~~~
ಬದುಕಿನ ಯಾನದಲ್ಲಿ
ನೂರೆಂಟು ಯಾತನೆ
ಇದಕೆ ಕಾರಣ
ಬಗೆ ಬಗೆಯ ಕಾಮನೆ!
ಮರೆಯಾದೆ ಮರೆಯಾದೆ
ನನ್ನಿಂದ ನೀನೇಕೆ ದೂರಾದೆ
ಮನಸಲ್ಲಿ ನೆನಪಾಗಿ
ಉಸಿರಲ್ಲಿ ಹಸಿರಾದೆ...
“ಪ್ರೀತಿ”
Out of ಸಿಲೆಬಸ್ಸು...
ಅದರೊಳಗೆ ಬಿದ್ರೆ
ಅದುವೇ
Complete ಪ್ರೋಗ್ರೆಸ್ಸು
ಮಿಕ್ಕೆಲ್ಲಕ್ಕೂ
ಬಂದಂತೆ ರಿಗ್ರೆಸ್ಸು
ಎಲ್ಲಕ್ಕೂ ನೋ..No
ಅಂದ್ರೂ
ಅವಳಿಗೇ ಎಲ್ಲಾ yesಸ್ಸು...
ತಿಳಿದುಕೋ...
~~~~~~~~~
ತಿಳಿದುಕೋ ನನ್ನ
ಈ ಕಂಗಳ ನೋಡಿ
ತಿಳಿದುಕೋ ಮನಸನ್ನ
ಈ ಮಾತುಗಳ ಕೇಳಿ
ಹೇಳದೇ ಇದ್ದರೂ,
ಅರಿಯಲು ನಿನಗಾದರೆ
ಈ ದೂರ ತಡೆಯಲು
ಆಗದಿರುವ ಈ ಒಳನೋಟವ
ನಿನ್ನಲ್ಲೇ ನೀ ತಿಳಿದುಕೋ...
ತಿಳಿದುಕೋ ಬತ್ತಿದ
ಬದುಕನು ಬಿತ್ತರಿಸಲಾಗದ
ಈ ಮೌನದಿಂದ!
ತಿಳಿದುಕೋ ಅರ್ಥವಾಗದೇ
ಮೃತನಂತಿಹ ಇವನ
ತ್ಯಾಗದಂತಹ ಅಮೃತ
ಗುಣದಿಂದ!
ಕಲ್ಪನೆಯನ್ನೇ ಕನವರಿಸಿ
ನಗುವವನಿಂದ!
ತಡವರಿಸಿಯಾದರೂ ಯಾರ
ಕಂಗಳಿಗೂ ಬೀಳದೆ
ಕಂಬನಿ ಸುರಿಸುವವನಿಂದ!
ಹೋಗು ಹೊರಟ್ಹೋಗು
ಎಂದು ನೀ ಅಂದರೂ
ಹೋಗೆನು ನಾನು!
ನಿನ್ನ ಜಿೊತೆಗೆ
ಸಾಗೋ ನೆರಳೇ ನಾನು
ನನ್ನ ಮೇಲೆ ನಿನಗೆ
ಕೋಪವೆಂದು
ನಿನ್ನ ಕೈ ಬಿಟ್ಟು
ಹೋಗೆನು!
ನನಗೆಂದೇ ನೀ
ಅಂದಾಗ ನಿನ್ನ
ಕೈ ಬಿಡೆನು!
ಲೋಕವೆಲ್ಲಾ ತಿರುಗಿದರೂ
ನಿನ್ನಂಥ ಅಂದಗಾತಿ
ಸಿಗಳು ಎನಗೆ...
ಕಾರಣವೇನು(?!)
ನನಗೂ ಗೊತ್ತಿಲ್ಲ
ನೀ ಸಿಕ್ಕರೆ ಸಾಕು
ಕಾರಣವಿಟ್ಟುಕೊಂಡು
ಬದುಕುವವನು
ಮೊದಲೇ ಅಲ್ಲ ನಾನು!
ಅಷ್ಟೋ –ಇಷ್ಟೋ
ಕವನಗಳನು
ಈಗಲೂ ಬರೆಯುತ್ತೇನೆ
ನಾನು...
ಆದರೆ, ಎಂದಿನಂತೆ
ಅರ್ಧಂಬರ್ಧ
ಓದಿ ಮರೆತು
ಬಿಡುತ್ತೀ ನೀನು!
ಸ್ವತಂತ್ರವಾಗಿ ಯೋಚಿಸಿ
ಕವನಗಳನ್ನು
ನಿನಗಾಗಿ ಬರೆಯುತ್ತೇನೆ
ನಾನು...
ನಿನ್ನ ಧಾರಾಳತನವನ್ನು
ಇಲ್ಲೂ ಬಳಸಿ
ಸ್ವೇಚ್ಛೆಯಾಗಿ ಎಲ್ಲೆಂದರಲ್ಲಿ
ಅವುಗಳನು
ಹಂಚದಿರು ನೀನು!
ಕಟ್ಟಿಸಬೇಕೆಂಬ
ಆಸೆಯು ಹುಟ್ಟಿದ್ದು
ಕನಸಲ್ಲೇ!
ಅದಕ್ಕೇ ಕಣೆ
ನನಸಾಗಲಿಲ್ಲ ಯಾವ್ದೂ-
ಏಳುತ್ತಲೇ ನಾ ಕಂಡ
ಕನಸು
ಮರೆತು ಹೋಗಿತ್ತು !
ನನಸಾಗಲು
ನೂರೆಂಟು
ಆಪತ್ತು-ವಿಪತ್ತು
ಆದರೂ ಗೆಳತಿ
ನೀ ಎಂದೆಂದೂ
ನನ್ನ ಸ್ವತ್ತು!
ಹತ್ತಿರ ಬರುತ್ತೀಯಾ
ಏಕೆ ಕೈ ಬಿಟ್ಟು
ಮತ್ತೆ ಹೊರಟು
ಹೋಗುತ್ತೀಯ!
ಆಸೆ ಫಲಿಸಿತು
ನನ್ನಾಕೆ ನನಗೆ
ಸಿಕ್ಕಳೆಂದು
ಸಂಭ್ರಮಿಸುತ
ನಿಂತಿರಲು
ಮರೀಚಿಕೆಯಂತೆ
ಮಾರು ದೂರ
ಹೋಗಿ ಬಿಡ್ತೀಯ!
ನಿನ್ನ ಮನಸಿನ
ಯೋಚನೆ-
ಭಾವನೆಗಳ
ಅಳತೆ ಮಾಡಲು
ಇರುವ ಮಾಪನ
ನನ್ ಈ ಮನಸಲ್ಲದೇ
ಬೇರೇನು
ಇರಲು ಸಾಧ್ಯ!
ಆದರೆಲ್ಲೋ
ನನ್ನಲ್ಲಿ ದೋಷ
ಇನ್ನು ನಿನ್ನ
ಅಳೆಯಲು
ನನಗಾಗೇ ಇಲ್ಲ!
ನೀ ಸ್ವಲ್ಪ ಇಷ್ಟ
ನೀ ಸ್ವಲ್ಪ ಕಷ್ಟ
ಲೈಲಾ-ಮಜ್ನುರಂತೆ
ಸಂಪೂರ್ಣ
ಪ್ರೀತಿಸಲಾರೆ ನಿನ್ನ!
ಹೋಗಲಿ...
ನಿನಗೂ ನಾನು ಸಂಪೂರ್ಣ
ಇಷ್ಟವೇ?!
ಊಹುಂ!
ಇಲ್ಲವೇ ಇಲ್ಲ...ಅಲ್ವೇ?!
ಅದ್ಕೆ ಕೊಂಚ
ಇ(ಕ)ಷ್ಟ!!
ನೀ ಇಡುವ ಪ್ರತಿ
ಹೆಜ್ಜೆಗೂ ಕಾರಣ
ಕೇಳುವಷ್ಟು
ಕಟುಕ ನಾನಲ್ಲ!
ಆದರೂ ನೀನೇಕೆ
ಅನುಕ್ಷಣವೂ
ಎಡೆಬಿಡದೆ ನನ್ನ
ಹೆಜ್ಜೆಗಳನ್ನೇ
ಅನುಮಾನದಿಂದ
ನನ್ನ ಹೆಜ್ಜೆಗಳನ್ನೇ..
ನನ್ನ ಹೆಜ್ಜೆಗಳನ್ನೇ..
ಗಮನಿಸುತ್ತೀ?!
ಎಂದೂ
ಕಾಣದೂರಿನಲ್ಲಿ
ನನಗಾಗಿ
ಕಾದಿದ್ದಳೆಂದು
ನನಗಾದರೂ
ಹೇಗೆ ತಿಳಿಯಬೇಕು?
ಹೇಳಿ ಕೇಳಿ
ಕುರುಡ ನಾನು!
ಕಾಣದೂರು
ಅದೆಲ್ಲಿಂದ
ಕಂಡೀತು?!
ನನ್ನೇ ನೋಡಲೆಂದು
ನೀ ಬಂದಿರುವೆಯೆಂದು
ನನಗೆ ಗೊತ್ತು!
ಹೀಗಿರಲು
ದೂರದಲ್ಲೇಕೆ ನಿಲ್ಲುವೆ?!
ಬಚ್ಚಿಟ್ಟುಕೊಳ್ಳುವುದ್ಯಾತಕೆ?
ಪ್ರೀತಿ ಬಿಚ್ಚಿಡಲು
ಇಹುದೆಂಬುದು
ಮರೆತೆಯೇನು?!
ದಿನ ಪೂರ್ತಿ ದುಡಿದು
ದಣಿದು ಬರುತೀನಿ...
ನನ್ನ ಮನೆಗೆ
ಸ್ವಾಗತಿಸಲು
ಬೇಸರ ಹುಟ್ಟಿಸೋ
ಕಾಲ ಗತಿಸಲು
ಜೊತೆಯಾಗಿ ನೀ
ಇರೆಯಾ
ನಿನ್ನವನೊಡನೆ?
ನಿನಗೂ
ನಾನಿಲ್ಲದೆ
ಬೇಸರವಾಗದೇ?!
....ನಲಿ
~~~~~
ನೀ ಬರುವ ದಾರಿಯಲ್ಲಿ
ನಗೆಹೂವು ಚೆಲ್ಲಿರಲಿ
ನೀ ನಿಲ್ಲುವ ಜಾಗದಲಿ
ನಗೆ ಹೊನಲು ಹರಿದಿರಲಿ
ನೀ ಸುಮ್ಮನೆ ನಿಂತರೆ
ಮಾತೆಲ್ಲ ಜೇನಾಗಲಿ
ಜೇನೇ ಮಾತಾಗಲಿ
ನೀ ನಲಿ...
ವಿರಹಿಗಳಿಗೆ
ಪ್ರತಿರಾತ್ರಿ
ಶಿವರಾತ್ರಿ
ಮತ್ತೊಂದು ರಾತ್ರಿ
ಭಾರವೇ?
ಜಾಗರಣೆ ಏನೋ
ಮಾಡುವರು
ಶಿವನ ನೆನೆಸಿಯಲ್ಲ!
ತನ್ನವನ/ಳ
ನೆನಪನೇ
ಸಂಭ್ರಮಿಸಿ.
ನನ್ನ ಮನಸಿನಲ್ಲಿ ನೀ
ಅರೆಕ್ಷಣ ಇಲ್ಲದಿದ್ದರೆ
ಆಗಲೇ ನಿನ್ನ ಮನಸ್ಸು
ನಿನಗೆ ಹೇಳುತ್ತದೆ
ನಿನಗೆ ನಾ ಇಲ್ಲವೇನೋ ಅಂತ!
ನನ್ನಲಿ ಎಂದು ನೀ
ʼನಲಿʼಯುತಿರಲಿ.
ಪ್ರತಿಕ್ರಿಯೆ.
~~~~~~~
ನಮ್ಮೆರಡು ಆತ್ಮಗಳ
ನಡುವಿನ ಈ
ಅಮರ ಮಧುರ ಸಂಗಮ
ಕಂಡು
ನಸು ನಾಚಿ ನಕ್ಕು
ಸುಮ್ಮನೆ
ಮರೆಯಾದ ಆ
ಬಾನ ಚಂದ್ರಮ.
ಎಷ್ಟೋ ಸಂತೋಷಗಳು...
ಅವುಗಳನು ಅನುಭವಿಸಲು
ಇರುವ ಅಡೆತಡೆಗಳು
ಮರೆಯಾಗುವ ಸ್ವಾತಂತ್ರ್ಯ!
ನಮ್ಮನ್ನೇ ತಿರಸ್ಕರಿಸುವ
ತಾತ್ಸರ
ಕವಲುಗಳಿರದೇ!
ಗೊಂದಲಗಳಿರದೇ!
ತೆವಳುತ್ತಲೇ ಸಾಗೋ ಈ ಪಥ
ಅರ್ಥಪೂರ್ಣ ಆಗುವುದೆಂತು...
ಸತ್ಯದ ಸಾಕ್ಷಾತ್ಕಾರದಲ್ಲಿ
ಎಲ್ಲವೂ ಮೌನವಾಗುವ
ಎಲ್ಲವೂ ಗೌಣವಾಗುವ
ಆಂತರ್ಯದ ಎಲ್ಲ
ಒಳನೋಟಗಳೂ ಸ್ತಬ್ಧವಾಗುವ
ಆ ದಿಗಂತದಗಲ ಸಮಾನ
ಜ್ಞಾನಕ್ಕೆ ನಾ ವಂದಿಸುವೆ...
ಆ ಜ್ಞಾನವೇ ನಾನಾಗಿ-
ನನ್ನ ಅಜ್ಞಾನ ಮಾಯವಾಗಿ
ನಾ ನಲಿಯಲು
ನಾ ಎಂದೆಂದೂ
ಹಾತೊರೆಯುವೆ...
ಅದಕೆಂದು ನಾ ಎಲ್ಲ
ʼತೊರೆಯುವೆ”
ಎಂದೂ ಮುಗಿಯದಂತಿರುವ
ಬದುಕಿನ ತುದಿಯ
ಎಡೆಗೆ ಇಂದೇ ಏಕೆ
ಹವಣಿಕೆ?
ಅಂತ್ಯದ ಪರಿವಿದ್ದರೂ
ನಿತ್ಯವೂ ಮನದಲ್ಲಿ
ನೂರೆಂಟು ಬಯಕೆ!
ಯಾತರದ ಎಣಿಕೆ?
ಸತ್ಯದಲ್ಲೇ ಇರಲಿ ನಂಬಿಕೆ.
ಮರೆಯದ ನೆನೆಯದ
ನೆನಪಿನ ಗೂಡಿಗೆ
ಎಂದೋ ಒಮ್ಮೆ ಹಾರಿದಾಗ
ಬೆಳೆದು ಬದುಕಿ ಬಾಳಿದ
ಮನದ ಕದಗಳು
ತೆರೆಯುತ್ತವೆ....
ಅಂತರಾವಲೋಕನಕೆ
ಚಾಲನೆ ನೀಡಲೋ
ಎಂಬಂತೆ!
ನನ್ನವಳ ಪ್ರೀತಿ
ಒಮ್ಮೊಮ್ಮೆ ಸುರಿಮಳೆ
ಒಮ್ಮೊಮ್ಮೆ ಜಡಿಮಳೆ
ಮನಸೋ ಇಚ್ಛೆ
ಇವಳು ತೋರುವುದನು
ಕಂಡಾಗ ಇವಳು
ವರುಣನ ತಂಗಿಯೇ
ಇರಬೇಕೆಂಬ ಶಂಕೆ
ಆಗಾಗ ಕಾಡುತ್ತದೆ!
ಆಸೆಗಳೆಲ್ಲ
ಅಸ್ಪಷ್ಟವಾಗಿರುತ್ತವೆ
ಈಡೇರುವ ತನಕ...
ಅವಕಾಶಗಳು
ಕನಸಿನಂತೆ ಬಂದು
ಮರೆಯಾಗುತ್ತಲಿರುತ್ತವೆ
ನನಸು ಮಾಡಿಕೊಳ್ಳಲು
ಮುಂದಾಗಿ
ಸಾಧಿಸುವ ತನಕ!
ಇರುವುದೆಲ್ಲವ ಬಿಟ್ಟು
ಇರದುದರ ಕಡೆಗೆ
ತೆರಳುವ ಮನಸ್ಸಾದಾಗ
ಸಿಗುವುದೇ ಪ್ರೀತಿ
ಪ್ರೀತಿಯ ಸುಳಿಗೆ
ಸಿಕ್ಕಾಗ
ಇರುವುದೆಲ್ಲವೂ
ಅದರಲ್ಲೇ
ಕೊಚ್ಚಿಕೊಂಡು
ಹೋಗಿಬಿಡುತ್ತದೆ!
ಜಗವನ್ನು ಮೀರಿದ್ದು
ಪ್ರೀತಿ
ಮನುಷ್ಯನಿಗೆ ಅವನ
ಭಾವನೆಗಳಿಗೆ ಈ
ಜಗದ ರಾಜ್ಯದಲ್ಲಿ
ಬೆಲೆ ಇಲ್ಲದಿದ್ದರೂ,
ಪ್ರೇಮ ಸಂಕುಲದಲ್ಲಿ
ಮನಸೇ ಶ್ರೇಷ್ಠ!
ಬದಲಿಸಿದ ಮಾತ್ರಕ್ಕೆ
ಊಸರವಳ್ಳಿ
ನಾವಾಗುವುದಿಲ್ಲ
ಹೀಗೇ
ಮುಂದುವರಿದರೆ
ಎಂದೋ ಒಂದು ದಿನ
ತಲೆಕೆಟ್ಟು ದಿವಾಳಿಯಾಗದೇ
ನಾವು ಉಳಿಯುವುದಿಲ್ಲ!
ಕಂಡೂ ಕಾಣದಂತೆ
ಉಳಿಯುವುದು
ನನ್ನವಳ ಸ್ವಭಾವ!
ಎದುರು ಕಂಡಾಗ
ಮನದಲ್ಲೇನೋ
ಹೊಸ ಕಲರವ
ಅವಳ ಪ್ರೀತಿಯು
ಬದುಕಿಗೆ ಸಿಕ್ಕ
ಹೊಸಾನುಭವ
ಹೆಚ್ಚಿದೆ ನನ್ನಲಿ
ಅವಳ ಮಧುರ ಪ್ರಭಾವ
ನನ್ನುಸಿರಲಿ ನಿನ್ನುಸಿರು
ಬೆರೆತು
ಮೌನ ಮಾತಾಗಿ
ಮಾತು ಪದವಾಗಿ
ಪದ ಪದ್ಯವಾಗಿ
ಪದ್ಯ ಗದ್ಯವಾಗಿ
ಗದ್ಯದ ಮಧ್ಯೆ
ವಾದ್ಯ ಸೇರಿ
ಪ್ರೇಮ ಸಂಗೀತವಾಗಿ
ಮೇಳೈಸಿದಾಗ
ನಾನು ಗೆಲ್ಲುವ ಸಂಭವ
ದೃಗ್ಗೋಚರವಾಯ್ತು!
ಎಲ್ಲಿಯೋ ಹೋಗಬೇಕಿತ್ತು!
ಎಲ್ಲಿಯೋ ಸಾಗುತ್ತಿದ್ದೇನೆ
ಈ ಭೂಮಿಯಲ್ಲಿದ್ದುಕೊಂಡೇ!
ಮೂಲ ಅಂತ್ಯಗಳ ಭಯವಿಲ್ಲ
ಅದಕ್ಕೋ ಏನೋ?!
ಹೀಗಾಗಿದ್ದೇನೆ ನಾನು
ಆದರೂ, ನನಗೆ
ನನ್ನ ಚಲನೆಯ ಬಗೆಗೆ
ಗಮನವಿದೆ...
ನಿನ್ನೆಯ ನೆನಪಿದೆ
ನಾಳೆಯ ಗುರುತಿದೆ.
ನಿರಾಶೆ.
~~~~~~
ನಾನೂ
ಪ್ರೀತಿಸಬೇಕೆಂದಿದ್ದೆ
ಅಂಥವಳು ನನಗೆ
ಸಿಕ್ಕಲೇ ಇಲ್ಲ
ತಾಜಮಹಲನ್ನು
ಕಟ್ಟಿಸಬೇಕೆಂದು
ಕಾದಿದ್ದೇನೆ
ಏಕೋ ನನ್ನವಳು
ಬೇಗ ಸಾಯುತ್ತಿಲ್ಲ!
ಹೆಣ್ಣಿನ ಸೌಂದರ್ಯ
ದೇವರ ಸ್ಮರಣೆಯಲ್ಲಿಯೇ
ಇರುವವರನ್ನೂ
ಚಂಚಲಗೊಳಿಸುವುದಂತೆ!
ಈಗ ಹೇಳಿ
ಯಾರು ಶ್ರೇಷ್ಟರು
ಹೆಣ್ಣೋ?!
ದೇವರೋ?!
ಇತ್ಯರ್ಥವಾಗದ
ಎಷ್ಟೋ ವಿಷಯಗಳು
ವಿವಾದಗಳಾಗೇ
ಉಳಿಯುತ್ತವೆ!
ಪರಿಹಾರ ಸಿಗುವ
ವೇಳೆಗೆ
ಅರ್ಧ ಜೀವನವೇ
ಕಳೆದು ಹೋಗಿರಲಿಕ್ಕುಂಟು
ಮಾಯೆಯ
ಹಿಂದಣದ
ಕೈವಾಡವೇನೋ?
No comments:
Post a Comment