ನಗು-ಮಗು
ನಿನ್ನಂತೆ ನೀ ಆಗು.
~~~~~~~~~~~~~
~~~~~~~~~~~~~~~~~~~~~~~~~
ತನ್ನ ನಗುವ ಮೊಗದಿ
ಎಲ್ಲರ ನಗಿಸುವುದು ಮಗು
ಮರೆತು ಹೋದೀತು
ದಿನದ ದುಃಖದ ಆಗುಹೋಗು
ಅಂತಃಕರಣ ಶುದ್ಧಿಯಿಂದ
ಏನನ್ನೋ ಹೇಳಲು ಬರುವುದು
ಜಗದ ಜಾಡ್ಯದಲ್ಲಿ ಬೆಂದ
ನಮಗೆ ಅದೇಕೆ ಸಿಟ್ಟು ಬರುವುದು!
ಪ್ರಪಂಚದ ಎಲ್ಲವನೂ ಅರಿಯಲು
ಎಲ್ಲರ ಮನದ ಸೋಜಿಗ ತಿಳಿಯಲು
ಬೆರಗುಗಣ್ಣಿನಿಂದ ನೋಡುವುದು
ಬಯಸಿದ್ದು ಸಿಕ್ಕರೆ ಸಂಭ್ರಮಿಸುವುದು
ನಾಳೆಗೆ ಅದೇನೋ ಅಗುವುದಕ್ಕಿದೆ
ಆದರೆ ಆಗಲಿ ಅಂದುಕೊಂಡ ಹಾಗೆ
ಮೇರು ಪರ್ವತವನ್ನೇ ಏರಲಿದೆ
ಸಿಕ್ಕಲ್ಲಿ ಪೊಷಣೆ ಯಥೇಚ್ಛವಾಗೇ.
ಎಂದೂ ಬತ್ತುವುದಿಲ್ಲ.
~~~~~~~~~~~~~~~~~
ನೀ ನನ್ನವಳು ಎಂದು
ತಿಳಿದ ಕ್ಷಣದಿಂದ
ನನ್ನಲಿ ಒಡಮೂಡಿದ ಪ್ರೀತಿ
ಎಂದೂ ಬತ್ತುವುದಿಲ್ಲ
ನೀ ನನ್ನ ಸೇರುವ ಕ್ಷಣ
ಅದೆಂದು ಕಾದಿದೆಯೋ
ತಿಳಿಯದ ವಾಸ್ತವವಾದ್ದರಿಂದ
ಬಯಕೆಗಳು ನನ್ನಲ್ಲಿ
ಎಂದೂ ಬತ್ತುವುದಿಲ್ಲ
ನಿನಗಾಗಿ ಎಂದು ನಾ
ಕಾಯುತ್ತಲೇ ಇರುವಾಗ
ನೂರು ವರ್ಷಗಳೇ ಆದರೂ
ನಿನ್ನ ಮೇಲಿನ ಈ ಪ್ರೀತಿ
ಎಂದೂ ಬತ್ತುವುದಿಲ್ಲ
ಸೋಲು-ಗೆಲುವಿನ
ಗೊಂದಲಗಳಲ್ಲೇ ನರಳುವ
ಈ ಪ್ರೀತಿ
ಅದೆಷ್ಟೇ ಕಾಡಿದರೂ
ನನ್ನ ಪ್ರೀತಿ
ಎಂದೂ ಬತ್ತುವುದಿಲ್ಲ
ಮನದಲ್ಲಿಯೇ ಇದ್ದರೂ
ಅದು ಎಂದೂ ಬತ್ತುವುದಿಲ್ಲ
ಎಂದೂ ಬತ್ತುವುದಿಲ್ಲ.
ಎದೆ ತುಂಬಿ ಹಾಡಾಗಿದೆ.
~~~~~~~~~~~~~~~
ಎದೆ ತುಂಬಿ ಹಾಡಾಗಿದೆ ಈ ದಿನ
ಒಲವಲ್ಲಿ ಗೂಡಾಗಿದೆ ಈ ಮನ
ಮಾತಲ್ಲಿ ಕತೆಯು,ಪ್ರೀತಿಯ ಲತೆಯು
ನನ್ನಲ್ಲಿ ಚಿಗುರೊಡೆದಿದೆ ಈ ಕ್ಷಣ
ಜೇನಂತೆ ಸವಿಯಾಗಿದೆ
ನಿನ್ನ ಮನಸು ಬೇಕಾಗಿದೆ.
ಊಹೆಗೂ ನಿಲುಕದಾ ಈ ಪರಿಚಯ
ಊರಾಚೆಗೂ ನಿನ್ನ ನೆನಪಿದೆ
ಲೆಕ್ಕಕೂ ಸಿಗದಾ ಈ ದಿನಚರಿ
ನಿನ್ನ ಓಟವ ತಾ ಬರೆಸಿದೆ
ಈ ಲೋಕದಿ ನಿನ್ನ ಪ್ರೀತಿಯು
ಇತಿಹಾಸಕೆ ಅಧ್ಯಾಯವು
ಈ ಮಾಯೆಯು ಅಂಗೈಯಲಿ
ನಿನ್ನ ಆಸೆಯ ಚಿತ್ತಾರವು.
ಲೇಖಕನಾ ಲೇಖನಿಗೆ ಸಿಗದಂತಿದೆ
ನಿನ್ನ ರೂಪವು
ನಾವಿಕನಾ ದಿಕ್ಸೂಚಿಗೂ ಸಿಗದಂತಿದೆ
ನಿನ್ನ ದಾರಿಯು
ಆಕಾಶದಿ ನಿನ್ನ ತಾರೆಯು
ನನಗಾಗಿಯೇ ಹೊಳೆದಂತಿದೆ
ಹೂ ಮನಸ್ಸಿನ ಕರೆಯೋಲೆಯು
ನನಗೀಗ ಕಾದಂತಿದೆ.
ಅವಳ ಕೊನೆಯ ಮಾತು.
~~~~~~~~~~~~~~~~
ಹೇಳಲು ಮಾತು ಬರುತ್ತಿಲ್ಲ-
ಗೆಳೆಯ,ಹೇಗೆ ಹೇಳಲಿ
ನನ್ನ ಈ ಕೊನೆಯ ಮಾತು
ಬತ್ತಿದ ಒಡಲಿನಿಂದ
ಕಂಬನಿಯ ಕಂಗಳಿಂದ
ಹೇಗೆ ಹೇಳಲಿ ನಾ ಎದೆಯ ಮಾತು
“ಮರೆಯದಿರು ಎನ್ನ”-
ಇಷ್ಟು ಹೇಳಲು ಆಗುತ್ತಿಲ್ಲ
ನೋಡು ನನ್ನದೆಂಥ ಭಾಗ್ಯ?!”
ನಿನ್ನನ್ನು ಅಗಲುವುದು-
ವಿಧಿಯು ವಿಧಿಸಿದ ನಿಯಮ
ಮಾಡಿದ್ದೇನೇ(?!) ದುಷ್ಕರ್ಮ!
ನೀನು ಇಲ್ಲದೆ ಇರಲಾರೆ
ಎಂದಿದ್ದೆ:ಪ್ರೀತಿ ಕುಡಿಯೊಡೆದ
ಆ ಮೊದಲ ಮಧುರ ಕ್ಷಣ
ನೋಡು ಅದೆಷ್ಟು ಬೇಗ
ಸರಿಯಿತು ಪ್ರೇಮ ಪ್ರಕರಣದಲ್ಲಿ
ಕಾಲವು ಬಸವಳಿಯಿತು!!
ಅವಳು ಸಾವಾಗಬಹುದಿತ್ತು.
~~~~~~~~~~~~~~~~~
ಅವಳು ಸಾವಾಗಬಹುದಿತ್ತು....
ನಡೆವ ಎಲ್ಲ ಆಗುಹೋಗುಗಳಿಗೆ
ಮಂಗಳ ಹಾಡಲು-
ಕೊನೆಪಕ್ಷ ದುಃಖ ಮರೆತು
ಕಿರುನಗೆಯನ್ನು ಬೀರಲು
ತನ್ನ ಮರೆತು ಮತ್ತೋರ್ವಳೆಡೆಗೆ
ತುಡಿವ ಮನದೊಡೆಯನಿಗೆ
ಸಹಕಾತ ನೀಡಿ ಉಪಕರಿಸಲು
ಎಲ್ಲ ಚಿಂತೆಗಳಿಗೆ ಅಂತ್ಯವನು
ನಿಖರವಾಗಿ ಹುಡುಕಲು
ಬಿಡದ ಬೇಗುದಿಯ ಮರೆತು
ನಿರಾಳತೆಯ ಕಡೆಗೆ ತೆರೆಳಲು
ಅನಂತತೆಯ ವ್ಯಾಪಾರವ ಬಿಟ್ಟು
ಶೂನ್ಯತೆಯೆಡೆಗೆ ಸಾಗಲು
ಬಹುಬೇಗ ಬೇಸರವನುಣಿಸುವ
ಬದುಕಿಗೂ ಪಾಠವನು ಕಲಿಸಲು
ಆಗಬಹುದಿತ್ತು ಅವಳಿಗೆ-
ಅವಳೇ ಸಾವಾಗಬಹುದಿತ್ತು
ತನ್ನನೇ ತಾ ಅರ್ಪಿಸಿ
ಹಿಂತಿರುಗಿ ನೋಡದಂತೆ
ಕಾಣದ ನಿಶ್ಚಲತೆಯ ಕಡೆಗೆ
ಅನಿಶ್ಚಿತತೆಯ ಜಗದ ಗೊಡವೆ ಬಿಟ್ಟು
ಮಣ್ಣಲ್ಲಿ ಮಣ್ಣಾಗಬಹುದಿತ್ತು!
ಅವಳು ಸಾವಾಗಬಹುದಿತ್ತು
ಅವಳು ಸಾವಾಗಬಹುದಿತ್ತು.
ನಾ ಹುಟ್ಟಲಿಲ್ಲ...
~~~~~~~~~~~
ಒಂದಲ್ಲ ಒಂದು ದಿನ ಸಾಯುವೆನೆಂದು
ತಿಳಿದು ನಾ ಹುಟ್ಟಲಿಲ್ಲ
ತಂದೆ-ತಾಯಿಯರ ಭೋಗದ ಫಲವು
ನಾನೆಂಬುದ ತಿಳಿದು ನಾ ಹುಟ್ಟಲಿಲ್ಲ
ಜೀವನವೊಂದು ದುಃಖದ ಸಾಗರವೆಂಬುದ
ತಿಳಿದು ನಾನಿಲ್ಲಿ ಹುಟ್ಟಲಿಲ್ಲ
ಬದುಕೊಂದು ತಿರುವುಗಳ ಸಂಗಮ
ಎನ್ನುವುದನರಿತು ನಾ ಹುಟ್ಟಲಿಲ್ಲ
ಸೋಲು-ಗೆಲುವುಗಳನೆದುರಿಸಿ
ಬದುಕಬೇಕೆಂದು ತಿಳಿದು ನಾ ಹುಟ್ಟಲಿಲ್ಲ
ಸಂಬಂಧಗಳ,ಸಂಪ್ರದಾಯಗಳ
ಕಟ್ಟಾಚಾರಗಳ,ರೂಢಿ ನಿಯಮಗಳ
ತಿಳಿದು ನಾ ಹುಟ್ಟಲಿಲ್ಲ
ಅನಂತತೆಯ ವಿಶ್ವದೊಳಡಗಿದ
ನೂರೆಂಟು ಸತ್ಯಗಳನರಿತು ನಾ ಹುಟ್ಟಲಿಲ್ಲ
ಹುಟ್ಟುವಾಗ ನಾನೇಕೆ ಹುಟ್ಟಿದೆ
ಎಂದು ತಿಳಿದೇನೂ ನಾ ಹುಟ್ಟಲಿಲ್ಲ
ಹುಟ್ಟಿದ ಮೇಲಿನ ಗೊಂದಲಗಳನು
ಮೊದಲೇ ಅರಿತು ನಾ ಹುಟ್ಟಲಿಲ್ಲ
ಈ ಜಗವು ಹೀಗೆಂದು ತಿಳಿದಿದ್ದರೆ
ನಾನಿಲ್ಲಿ ಹುಟ್ಟುತ್ತಲೇ ಇರಲಿಲ್ಲ
ನನ್ನ ಹುಟ್ಟನು ಬ್ರಹ್ಮನು ನಿಶ್ಚಯಿಸಿದ್ದೇ
ನಿಜವಿದ್ದರೆ ಈಗ ನಾನೇನೂ ಮಾಡುವಂತಿಲ್ಲ
ಆದರೂ ನಾನು ಹುಟ್ಟಿದ್ದೇನೆ
ತಪ್ಪಿಸಲಾರೆ ನಾನೀಗ ಈ ಜನ್ಮವ
ಸಾವು ಬರುವನಕ ಹೇಳ ಬಯಸುವುದೊಂದೇ
ನನ್ನಲಿ ಕೊನೆಗೂ “ನಾನು” ಹುಟ್ಟಲಿಲ್ಲ.
ಮುಳುಗದಿರು...
~~~~~~~~~~
ಸೂರ್ಯನೇನೋ ಮುಳುಗಬೇಕೆಂದು
ಹವಣಿಸುತ್ತಿರುವನೇನೋ ನಿಜ!
ಆದರೆ...
ಸೂರ್ಯ ಮುಳುಗುವ ಮುನ್ನ
ಸಂಗಾತಿಯ ಸಂಧಿಸುವೆನೆಂದು
ಮಾತು ಕೊಟ್ಟ ನಾನು
ಅದನೊಪ್ಪುವುದಿಲ್ಲ
ಪ್ರಕೃತಿಯ ನಿಯಮ
ತಪ್ಪಲೊಲ್ಲದ ಅವನನು
ತಡೆವ ಶಕ್ತಿ ಪ್ರೀತಿಗಿಲ್ಲವೇ!
ಮುಸ್ಸಂಜೆಯ ಹೊತ್ತಲಿ
ಅವಳೊಡನಾಡ ಬಯಸುವ
ಪಿಸುಮಾತುಗಳನು
ಕೇಳಲಾದರೂ ರವಿ ನಿಲ್ಲಲಾರನೇ!
ಪ್ರೇಮದ ಮಧುರ ಮಾತುಗಳನು
ಆಲಿಸಿ,ತಾನೆಲ್ಲಿ
ಚಂದ್ರನಂತೆ ತಂಪಾಗಿ ಬಿಡುವೆನೆಂಬ
ಭಯವೇ?!
ಏನೋ!ಎಂತೋ!!
ಹೇ ಸೂರ್ಯದೇವ
ನಿನ್ನಲ್ಲೊಂದು ಮುಗ್ಧ ಮನವಿ
ನೀ ಮುಳುಗುವ ಮುನ್ನ
ಅವಳ ಮುಂದೆ ನಾ
ಇರುವಂತೆ ಹರಸು.
ಬದುಕು.
~~~~~~
ಒಂದೊಂದು ಸ್ತರದಲ್ಲೂ
ಹುಡುಕಾಟ,ನಿರಂತರ ಅನ್ವೇಷಣೆ
ಪ್ರತಿ ಕ್ಷಣದಲ್ಲೂ
ವಿಶ್ಲೇಷಣೆ,ವಿಷಯಗಳ ಸಂಶ್ಲೇಷಣೆ
ಎಲ್ಲೂ ಎಂದಿಗೂ ನಿಲ್ಲಲೂ
ಆಗದು ಈ ಮನಕೆ ನೀಡಲು ವಿವರಣೆ
ಕಣಕಣದಲ್ಲೂ
ಅದೇನೋ! ಬೀಗುತ್ತ ನಡೆವ ವಿಚಾರಣೆ
ಹೇಗೆ?ಏಕೆ?ಏನು?ಎಲ್ಲಿ?ಯಾವಾಗ?
ಎಂತು?ಏಕಿಂತು?ಯಾರಿಂದ?
ಪ್ರಶ್ನೆ-ಪ್ರಶ್ನೆಗಳ ಬತ್ತಳಿಕೆ ಆಗದು ಬರಿದು
ಹುಟ್ಟು-ಸಾವುಗಳ ಮಧ್ಯೆ ಕುಸಿದು
ಪರ್ವಗಳ ಸಮುಚ್ಛಯದಲ್ಲಿ ಒಂದು
ಬದುಕು ಹೇಳಹೊರಟರೆ ನಿಲ್ಲದು
ಅದೆಂದೂ ಮುಗಿಯದು ಅಮರತ್ವದ ಬಿಂದು
ಮಾನವತ್ವವೊಂದೇ ಬದುಕಿಗೆ ನೀಡುವ ಬೆಲೆ
ಮೀರದಿರಲಿ ನಡೆ-ನುಡಿಯಲ್ಲಿ ಎಲ್ಲೆ
ಹಸನಾಗಲು-ಹಸಿರಾಗಲು-ಹುಲುಸಾಗಲು
ಬದುಕು,ಶ್ರಮ-ಕರ್ಮ-ಭಕ್ತಿ-ವಿನಯಗಳ
ಸಂಗಮದಲ್ಲಿ ಸಾಗೀತು ಗುರಿಯೆಡೆಗೆ
ನಿಶ್ಚಿತ-ಅನಿಶ್ಚಿತತೆಯ ಮಧ್ಯೆ
ಅದೆಂದಿಗೂ ತೊಳಲಾಡುವ ಜೀವದುಂಬಿ.
ಅನ್ವೇಷಣೆ.
~~~~~~~
ಇಹುದೇ?!
ಅಂತಹದ್ದೊಂದು ಮಾರ್ಗ
ದೇಹದೊಳಿರ್ದು ಇಲ್ಲದಂತಿರುವುದು
ಪ್ರೇಮದೊಳಿರ್ದು
ಸ್ವತಂತ್ರಕ್ಕರ್ಹವಾಗಿರುವಂತಹುದು
ಸೋಲಲ್ಲೂ ನಿಶ್ಚಲವಾಗಿಹಂತಹುದು
ಮೋಹದಲ್ಲೂ
ನಿಶ್ಕಲ್ಮಶವಾಗುಳಿದಿರುವಂತಹುದು
ಆತ್ಮವೆಲ್ಲ
ಪರಮಾತ್ಮನ ನೆಲೆಯಾಗಿರುವಂತಹುದು
ಆನಂದಕ್ಕೆಲ್ಲೆಯೇ ಇಲ್ಲದಂತಿರುವುದು
ಜ್ಞಾನದ ಮಡುವಲ್ಲಿ
ಮುಳುಗಿರುವಂತಹುದು
ವೈರಾಗ್ಯದ ದೆಸೆಯಲ್ಲಿ
ಜಗ ಮರೆತಿರುವಂತಹುದು
ಭಕ್ತಿ ಭಾವಕೆ ಕೊನೆಯಿಲ್ಲದಂತಿರುವುದು
ರಾಗ-ದ್ವೇಷಕೆ
ಕೈ ಮುಗಿದಿರುವಂತಹುದು
ಮುಕ್ತಿ ಮಾರ್ಗಕೆ
ಸೋಪಾನವಾಗಿರುವಂತಹುದು
ಇಹುದೇ?! ಇಹುದೇ?! ಇಹುದೇ?!
ಇರಲಿಕ್ಕುಂಟು ಅಂತಹದ್ದೊಂದು...
ಸಿಕ್ಕಲ್ಲಿ –ತಮ್ಮ ಜೊತೆಗೆ
ನಾನೂ ಬರಲಿಕ್ಕೆ ಮನ ಬಯಸಿದ್ದುಂಟು.
ತೊಳಲಾಟ.
~~~~~~~~
ಕನಸುಗಳಿರದ ರಾತ್ರಿಗಳು
ಸಾಂತ್ವನ ಕಾಣದ ಉದ್ವೇಗಗಳು
ಭಯದಲ್ಲೇ ಕೆಣಕುವ ಭಾವನೆಗಳು
ನಗುವೇ ಕಾಣದ ನಿಸ್ಸಾರದ
ಮೂಖ (ನಿ)ವೇದನೆಗಳು.
ಆನಂದ ತುಂದಿಲನಾಗಿ
ಇಂದಾದರೂ ನಾ
ಮಲಗುವೆನೇ?!ಎಂದೊಮ್ಮೆ
ನನ್ನಲ್ಲೇ ನಾ ಕೇಳಲಾಗಿ
ಅವೇ!ಚಿತ್ರಗಳು.
ಏಕಿಂತು ದುಗುಡಗಳನು
ಉಣಿಸುವುದೀ ಪರಪಂಚ
ನಿತ್ಯಾನಂದವಿಲ್ಲವೇಕೆ ಈ
ಭವ ಸಂಜಾತರಿಗೆ
ದಿಕ್ಕಿದೆಸೆಯಿಲ್ಲದ ತಿರುಕರಿಗೆ.
ಹೀಗೆ ಕಳೆದು ಅನಂತದಲ್ಲಿ
ಜಾರುವ ದಿನಗಳನ್ನೆಲ್ಲ
ಲೆಕ್ಕಾಚಾರ ಹಾಕಲಾಗಿ
ವ್ಯರ್ಥವೆನಿಸದೇ ಜಗದ ಗೋಳು?!
ಜಂಜಾಟಮಯದ ಒಡಲು.
ಇಲ್ಲ ಉಳಿವಿಲ್ಲ
ಹೋರಾಡದೆ ಬದುಕಿಲ್ಲ
ಸುಮ್ಮನೆ ಕೂರುವವಗೆ
ಇಲ್ಲಿ ಹಿತವೆಂಬುದಿಲ್ಲ
ನಿಲ್ಲದಂತೆ ನಡೆಯದೆ ಜಯವಿಲ್ಲ.
ನೀನು ಬಂದ ಮೇಲೆ...
~~~~~~~~~~~~~~
ಬಯಕೆಗಳಿಗೆ ಬರವಿಲ್ಲ
ಬೇಕುಗಳಿಗೆ ಕೊನೆಯಿಲ್ಲ
ಯತನೆಗಳ ಸುಳಿವಿಲ್ಲ
ಅತ್ತ ನೆನಪಿಲ್ಲ
ಸೋತ ರಟ್ಟೆಗಳೂ
ಗೆಲುವನ್ನೇ ಸಾರುತಿಹವಲ್ಲ!
ನೀನು ಬಂದ ಮೇಲೆ...
ಯಾರನ್ನೂ ನೆನದಿಲ್ಲ
ಕಳೆದ ದಿನಗಳ ಮರೆತಿಲ್ಲ
ಜಗದ ಚಿಂತೆಗೆ ಮನಸು ಕೊಟ್ಟಿಲ್ಲ
ಹೆತ್ತವರ ಮಮತೆ ಮರೆತಿಲ್ಲ
ನಾಳೆಯ ಬಗ್ಗೆ ವೃಥಾ ಭಯವಿಲ್ಲ
ನನ್ನಲ್ಲಿ ಹುಸಿಯಿಲ್ಲ
ನೀನು ಬಂದ ಮೇಲೆ...
ಅತ್ತಿತ್ತ ಸರಿದಿಲ್ಲ
ಎತ್ತಲೂ ವಾಲಿಲ್ಲ
ನನ್ನತನವ ಬಿಟ್ಟಿಲ್ಲ
ಪ್ರೀತಿಯ ಸವಿಸೊಲ್ಲನು ಹಳಿದಿಲ್ಲ
ಯಾರನ್ನೂ ಜರಿದಿಲ್ಲ
ಹಗೆಯೆಂಬುದು ಯಾರಲ್ಲೂ ಹುಟ್ಟಿಲ್ಲ
ನೀನು ಬಂದ ಮೇಲೆ...
ನಿದಿರೇನೇ ಮಾಡಿಲ್ಲ
ಉಸಿರಾಡಲು ಆಗಲೇ ಇಲ್ಲ
ಯಾರ ಹತ್ತಿರವೂ ಹೋಗಲಿಲ್ಲ
ಯಾವುದರ ಪರಿವೆಯೂ ಎನಗಿಲ್ಲ
ಹವ್ಯಾಸದ ವ್ಯಾಸವು ಹೆಚ್ಚಲಿಲ್ಲ
ನನ್ನ ಮನದಲ್ಲಿ ನೀನು ಬಂದ ಮೇಲೆ...
ಬೇಸರವು ನನಗಿಲ್ಲ
ಐಸಿರಿಯ ಆಸೆಯೂ ಇಲ್ಲ
ದಿಟ್ಟ ಹೆಜ್ಜೆಗಳನು ಇಟ್ಟಿಲ್ಲ
ಇತಿಹಾಸವನು ಕದ್ದು ಸಾರಿಲ್ಲ
ಮಾತಿಗೆ ಮಾತು ಬೆರೆಸಿ,
ಸದ್ದು ಗದ್ದಲವ ಮಾಡಿಲ್ಲ
ನೀನು ಬಂದ ಮೇಲೆ...
ಪ್ರಶ್ನೆಗಳನು ಮಾಡಿಲ್ಲ
ಉತ್ತರಗಳನು ಹುಡುಕಿಲ್ಲ
ಕಾರಣಗಳನು ಹೇಳಿ ತಪ್ಪಿಸಿಕೊಂಡಿಲ್ಲ
ಅರೆಕ್ಷಣವೂ ಮೈ ಮರೆತಿಲ್ಲ
ಆಶ್ವಾಸನೆಗಳ ನೀಡಿಲ್ಲ
ನನ್ನಲ್ಲಿ-
ನೀನು ಬಂದ ಮೇಲೆ...
ಆಸೆಯ ಬಲೆಯ ಹೆಣೆಯಲಿಲ್ಲ
ದುಃಸ್ವಪ್ನವ ಕಂಡಿಲ್ಲ-
ಹರೆಯದ ಹುಮ್ಮಸ್ಸನು ಹರಿಯ ಬಿಟ್ಟಿಲ್ಲ
ಹೆರವರ ಸಂಸ್ಕೃತಿಗೆ ಮಾರು ಹೋಗಿಲ್ಲ
ಮನದ ಮೌನವ ಹಂಚಲಿಲ್ಲ
ನೀನು ಬಂದ ಮೇಲೆ...
ನೆನೆಗುದಿಗೆ ತಳ್ಳಿಲ್ಲ
ಮೈಚಳಿಯು ಹೋಗಿಲ್ಲ
ಅಂಧಕಾರವನು ಸನಿಹ ಬಿಟ್ಟಿಲ್ಲ
ಅತ್ತಿಲ್ಲ ಕರೆದಿಲ್ಲ ರಂಪಾಟ ಮಾಡಿಲ್ಲ
ದಿನವೂ ಮಾತಿರದೇ ಮಲಗಿಲ್ಲ
ಬದುಕಿನಲ್ಲಿ-
ನೀನು ಬಂದ ಮೇಲೆ...
ಓ ಹನಿಗಳೇ ಏನು ನಿಮ್ಮಯ ಲೀಲೆ!
~~~~~~~~~~~~~~~~~~~~~~
ಹನಿಹನಿಯಂತೆ ಉದುರುವುವು
ಬಾನಂಚಿನಿಂದ-
ಇನಿಯ ಜೊತೆಯಿಲ್ಲದಾಗ
ಕಂಗೊಳಿಸುತಿಹವು
ಮುತ್ತುಗಳಂತೆ!
ಹರ್ಷದ ಹೊನಲೆನಗೆ
ಒಂಟಿ ಇರುವಾಗ
ಆಡಲು ಇವುಗಳ ಜೊತೆಗೆ
ಹನಿಗಳನು ಕೂಡಿಸಿ ಕೂಡಿಸಿ
ಕೈಯಲಿ ಹಿಡಿದು
ಅದರಲಿ ಮನದೊಡೆಯನ
ಮುಖ ಚಿತ್ರ ಕಲ್ಪಿಸುವೆ.
ಓ ಹನಿಗಳೇ ಏನು ನಿಮ್ಮಯ ಲೀಲೆ
ತಂಪನೀಯುವೆ ಜಗಕೆ ಕಂಪನೂ!
ಭಾವಗಳು ತಂಪಾಗಬೇಕು
ಆಗಾಗ ಹೀಗೆ ಮಳೆ ಬರುತಿರಬೇಕು.
ಬೀದಿಗೆ ಬಂದು ನೆನೆವ ಆಸೆಯೇನೋ ಇದೆ
ನಾಜೂಕಿಲ್ಲದವಳೆಂಬ ಅಪವಾದಕೆ
ಗುರಿಯಾದರೆ?
ನಸುನಗುವಂತೆ ಮಾಡಿರುವುವು
ಸೆಲ್ಫಿ ತೆಗೆವ ಆಸೆಯಿತ್ತು ನನಗೇ!
ಈ ಭಂಗಿಯಲ್ಲಿ ಕ್ಲಿಕ್ಕಿಸಿ ಇಟ್ಟರು
ನಿಮ್ಮ ಮುಂದೆ
ಮಳೆ ನಿಲ್ಲುವವರೆಗೆ ಆಡುತಲೇ ಇರುವೆ
ಇನಿಯ ಬರುವತನಕ ಮಳೆ ನಿಲ್ಲದಿರಲಿ
ಎಂಬ ವಾಂಛೆ ಮನದಲ್ಲಿ
ಓ ಮಳೆಯ ಹನಿಗಳೇ ಏನು ನಿಮ್ಮ
ಚಿಟಪಟ ಸದ್ದು
ಅದಕ್ಕೆಂದೇ ಎಲ್ಲ ಕೆಲಸ ಬಿಟ್ಟು ಬಂದಿರುವೆ
ನೀವೆಂದರೆ ಎನಗೆ ಮುದ್ದು.
ಹೇಗಿದ್ದರೂ ಬದುಕಲೇಬೇಕು!
~~~~~~~~~~~~~~~~~~
ಇಷ್ಟ-ಕಷ್ಟ-ನಷ್ಟಗಳ ಅರಿವಿರದೆ
ಜನಿಸಿದ ಜಗದೊಳಗೆ
ನಾಳೆ ನನ್ನದೆಂಬ ಪರಿವಿರದೆ
ಸಾಗುತಿಹ ಕಾಲದೊಳಗೆ
ಸೋಲು-ಗೆಲುವು-ಒಲವುಗಳ
ಚಕ್ರದ ಸುಳಿಯೊಳಗೆ
ಕನಸು-ನನಸು-ಮನಸುಗಳ
ಮಿಶ್ರಣ ಒಳಗೊಳಗೆ
ಆಚಾರ-ವಿಚಾರ-ಗ್ರಹಚಾರಗಳ
ಬೆಂಬಿಡದ ಶರಧಿಯೊಳಗೆ
ನಾನು-ನೀನು-ತಾನುಗಳ
ವ್ಯರ್ಥ ತಾಕಲಾಟಗಳೊಳಗೆ
ಹಿಂದು-ಇಂದು-ಮುಂದುಗಳ
ಬಿಡಿಸದ ಬಂಧನದೊಳಗೆ
ಎಣಿಕೆ-ಇಳಿಕೆ-ಏರಿಕೆಗಳ
ಅಗಣಿತ ಲೆಕ್ಕಾಚಾರದೊಳಗೆ
ಆಸೆ-ನಿರಾಸೆ-ದುರಾಸೆಗಳ
ಅ-ಕಲ್ಪಿತ ಸಂಕೋಲೆಗಳೊಳಗೆ
ತುಡಿತ-ಮಿಡಿತ-ಹಿಡಿತಗಳ
ಪ್ರೇಮ-ಮೋಹ-ಮಾಯೆಯೊಳಗೆ
ಅರ್ಥ-ವ್ಯರ್ಥ-ಸ್ವಾರ್ಥಗಳ
ನಿರಂತರ ಪರಿಧಿಯೊಳಗೆ
ಕ್ರೌರ್ಯ-ಶೌರ್ಯ-ಕಾರ್ಯಗಳ
ಅನುಕ್ಷಣ ಕಾದಾಟದೊಳಗೆ
ಹೌದು ಹೇಗೆ ಇದ್ದರೂ ಈ ಜಗ
ಮುಂಗಾಣದ ಬದುಕಿನಲಿ
ಎಲ್ಲವೂ ಏನೆಂಬುದು ತಿಳಿಯದೆಯೂ
ಹೇಗಿದ್ದರೂ ಬದುಕಬೇಕು.!
ನೀನಿಲ್ಲದಿದ್ದರೆ...
~~~~~~~~~~
ಕಡಲಾಳದೊಳು ಧುಮುಕಿ ಬಂದು
ನೀ ಬಯಸಿದನು ನಾ ಸಾಧಿಸಿ ತೋರಿ
ಕೀರ್ತಿಯನೆಲ್ಲವ ನೀಡಲು ನಿನಗೆಂದು
ಸಂಭ್ರಮವ ಹಂಚುವ ಸಮಯದಲಿ
ನೀ ನಿಲ್ಲದಿದ್ದರೆ...
ಮಧುಮಾಸದ ಹೊಂಗನಸಲಿ
ನಿನ್ನ ನಾ ಬಾಚಿ ತಬ್ಬಲೆಂದು
ಪ್ರೀತಿಯ ಉಡುಗೊರೆಯ ನೀಡಲೆಂದು
ಆತುರಾತುರವಾಗಿ ಕಾತುರದಿಂದ ನಾ ಬರಲು
ನೀ ನಿಲ್ಲದಿದ್ದರೆ...
ಹೊಸಬಾಳಲಿ ಹೊಸ ಹೆಜ್ಜೆಯನಿಕ್ಕಿ
ಹೊಸ ಗೃಹದೊಳು ಶುಭ ಹಾಲುಕ್ಕಿ
ಬೇಯಿಸಲೆಂದು ಮನದಲಿ ಪ್ರೀತಿಯೆಂಬ ಅಕ್ಕಿ
ಮನದ ನವಿರು ಪ್ರೇಮ ಭಾವಗಳನೆಲ್ಲ ಹೆಕ್ಕಿದಾಗ
ನೀ ನಿಲ್ಲದಿದ್ದರೆ...
ಝೇಂಕಾರದ ಜೇನಿನ ಮಾಧುರ್ಯವನುಣ್ಣಲು
ಮಧುರಾನುಭೂತಿಯ ಸವಿಯ ನೀಡಲು
ಜಗದ ಬೇಸರ ಗೊಂದಲಗಳಿಂದ ಮುಕ್ತನಾಗಲು
ಒಡಲೊಡಲಲ್ಲಡಗಿದ ಪ್ರೇಮವನುಸುರಲು
ನೀ ನಿಲ್ಲದಿದ್ದರೆ...
ಮೌನದ ನಗುವಲ್ಲಿ ಬೇಟದ ಸುಖದಲ್ಲಿ
ರಾಗ ಲಹರಿಗಳ ಅನುರಣಿತದಲ್ಲಿ
ಸ್ಪರ್ಶ ಸಾನಿಧ್ಯದ ಹಂಬಲದಲ್ಲಿ
ಎಲ್ಲ ಸುಖಗಳ ಮರೆತು ನಿನ್ನಲಿ ಲೀನವಾಗಲೆಂದಿರಲು
ನೀ ನಿಲ್ಲದಿದ್ದರೆ...
ಕಾರ್ಮುಗಿಲು ಸರಿದು ಜಗವನ್ನು ತೊಯ್ದು
ಸಪ್ಪಳವಿಲ್ಲದೆ ಹಪ್ಪಳವೆಲ್ಲ ಮುಗಿದು
ಎನಿತು ನೋವು ಎಲ್ಲಿತ್ತೋ ಹಾವು
ಹೊಡೆದೋಡಿಸುತ್ತಲಿರಲು ಕೂಗಿತ್ತು ಗೋವು
ಆದರೆ ಜೊತೆಗೆ ನೀ ನಿಲ್ಲದಿದ್ದರೆ...
ಎಲ್ಲಿತ್ತೋ ಹೇಗಿತ್ತೋ ಹೇಳಲಾರೆ
ಯಾರಿತ್ತರೋ..ಏಕೆ ತಂದಿತ್ತರೋ
ಪ್ರತಿ ಜೀವಿಯ ಜತೆಗಿನ ಸಹಚಾರ್ಯದಲ್ಲಿ
ಅನುಸ್ವರವಾಗಿ ಕಾಡುವ ಪ್ರೀತಿಯ ನೀಡಲೆನಗೆ
ನೀ ನಿಲ್ಲದಿದ್ದರೆ...
ಪ್ರತಿ ಉಸಿರಿನ ಪ್ರತಿ ಕ್ಷಣದಲ್ಲೂ
ಪ್ರತಿ ನಿಮಿಷದ ಎಪ್ಪತ್ತೆರೆಡು ಮಿಡಿತದಲ್ಲೂ
ನೀನೇ ಸರ್ವಸ್ವ ಎಂದು ಸಾರುವ ಮನಸಲ್ಲಿ
ಮಾಯಾ ಸಾಗರದ ಪ್ರೇಮ ಮತ್ಸ್ಯವ ನಾ ಹಿಡಿದು
ತಂದಾಗ ನೀ ನಿಲ್ಲದಿದ್ದರೆ...
ನೀ ನಿಲ್ಲದಿದ್ದರೆ
ನಾನು ನಲ್ಲನೇ!
ನಲ್ಲೆಯೇ ಕೇಳ್
ನೀ ನಿಲ್ಲದಿದ್ದರೂ ನಾನ್
ಈ ವೇಗ ಜಗದೊಳು
ನಿನ್ನ ಜೊತೆಗೆ ಸಾವು ಬರುವನಕ
ಓಡುತ್ತಲೇ ಇರುವೆ
ನಿನಗೊಪ್ಪಿಗೆಯೇ ಓ...
ʼನೀ-ನಿಲ್ಲದಿರೆʼ ನಾನಿಲ್ಲ!
ತೆರೆದಿಡದ ಭಾವಗಳು.
~~~~~~~~~~~~~~
ಮನಸಲಿ ಇರುವುದು ಹೇಳಲು ಆಗದು
ಹೇಳುವೆನೆಂದರೆ ನಾ...
ಉಸಿರದು ತಡೆದು ಬಿಡುವುದು
ಪ್ರತಿ ಜನ್ಮ ಪ್ರತಿ ಕ್ಷಣವು ನಿನಗಾಗಿಯೇ
ಮನಸಿದು ಮಿಡಿಯುತಿರುವುದು
ವೇದನೆ ಇರುವುದು ತೋರಲು ಆಗದು
ತೋರುವೆನೆಂದರೆ ನಾ...
ಭಯವದು ತಡೆದು ಬಿಡುವುದು
ಪ್ರತಿ ಸ್ವರವು ಪ್ರತಿ ಮಾತು ನಿನಗಾಗಿಯೇ
ಸುಮವದು ಅರಳುತಿರುವುದು
ಪ್ರೇಮದ ಚಿತ್ರವ ಬಿಡಿಸಲು ಆಗದು
ಬಿಡಿಸುವೆನೆಂದರ ನಾ...
ಮೌನವದು ತಡೆದು ಬಿಡುವುದು
ಈ ಕನಸು ಈ ಮನಸು ನಿನಗಾಗಿಯೇ
ಸುಮವದು ಆರಳುತಿರುವುದು
ಸ್ನೇಹದ ಬಂಧವ ಕಳಚಲು ಆಗದು
ಕಳಚುವೆನೆಂದರೆ ನಾ...
ಮನವದು ಬಿರಿದು ಬಿಡುವುದು
ಈ ಸ್ಪರ್ಶ ಈ ಧಾರೆ ನಿನಗಾಗಿಯೇ
ಚೈತ್ರವದು ಚಿಗುರುತಿರುವುದು
ಎಲ್ಲವನು ಮರೆತು ಮುಳುಗಲು ಆಗದು
ಮುಳುಗುವೆನೆಂದರೆ ನಾ...
ಅಲೆಯದು ತಡೆದು ಬಿಡುವುದು
ಈ ಜೀವ ಈ ಹೃದಯ ನಿನಗಾಗಿಯೇ
ಮನಸಿದು ಕರೆಯುತಿರುವುದು.
ಅರಳಿದೆ ಪ್ರೇಮ...
~~~~~~~~~~~
ಇಗೋ ಈಗಲೇ...ಅರಳಿದೆ ಪ್ರೇಮ
ಎಲ್ಲಾ ಮರೆಸಿ ನನ್ನಲಿ-ನಿನ್ನಲಿ...
ಹೃದಯದ ಪದಗಳನು ಮಾತಲಿ ಬೆರೆಸಿ
ನಿನ್ನೆ-ನಾಳೆಗಳ ದುಃಖ-ಭಯಗಳ ಮರೆಸಿ
ನಿನ್ನ ಹೆಜ್ಜೆಗಳ ಜೊತೆಗೆ ನನ್ನ ಹೆಜ್ಜೆಗಳನು
ಸೇರಿಸಿ
ಕಡಲಾಚೆಗಿನ ತೀರದಲಿ ಹೋಗುವ ಆಸೆ ಬೆರೆಸಿ...
ಪ್ರಾಣದೊಳಗೆ ಮೌನದಿಂದ ಪಯಣ ಬೆಳೆಸಿ
ರಾಗದಲಿ ಅನುರಾಗದ ಮೊಳಕೆಯನುದಯಿಸಿ
ಭಾವಬಂಧನದ ಜೊತೆಗೆ ಬಾಹುಬಂಧನಕೆ
ಆಹ್ವಾನ ತಾ ನೀಡಿ-ಸ್ನೇಹ ಸಾಮೀಪ್ಯಕೆ
ಸರಾಗವಾಗಿ ಸಾಗಲೆಂದು ಈ ಜೀವನ
ಇಗೋ ಈಗಲೇ ನಮ್ಮಲಿ ಅರಳಿದೆ ಪ್ರೇಮ
ಲೋಕದಲ್ಲೆಲ್ಲ ಇರುವ ಯಾವ ಕನ್ಯೆಯನ್ನೂ
ಕಣ್ಣೆತ್ತಿ ನೋಡದಿರಲೆಂದೋ ಏನೋ...
ನಿನ್ನಲ್ಲೇ ನನ್ನೀ ಮನ ಏಕಾಗ್ರವಾಗಲೆಂದೋ
ಅರಳಿದೆ ಇಗೋ ಈಗಲೇ ನಮ್ಮಲಿ ಈ ಪ್ರೇಮ.
ಕೊ(ಕ್ಯೂಂ)ರೋನಾ.
ಬಂದಿತೆಂದು ಕೊರೋನಾ
ವಿನಾಕಾರಣ ಕ್ಯೂಂ ರೋನಾ
ಚಿಂತೆ ಬೇಡ ಓ ಚಿನ್ನಾ
ಸುಮ್ಮ ಸುಮ್ಮನೆ ಭಯವನ್ನ
ತೋರಿ ಹೆದರಿಸದಿರು ನನ್ನ!
ಯಾರು ತಂದರೋ ಮಾರಿಯನ್ನ
ಹೊತ್ತಿಸಿ ಬಿಟ್ಟಿದೆ ಬೆಂಕಿಯನ್ನ
ನುಂಗಲಾರದ ಬಿಸಿಯಾದ ತುತ್ತನ್ನ
ಉಣಿಸುವೆ ಎಂದು ಬಂದ ಆ ದೇವರನ್ನ
ಏನೆನ್ನಬಹುದು, ನೀನೇ ಹೇಳು ನಿನ್ನ ರನ್ನ?!
ಹಿಂದೆಯೂ ನೋಡಿಲ್ಲವೇ ಇಂತಹ ಘಟನೆಗಳನ್ನ
ಕೇಳಿ ಹೆದರುತ್ತಿದ್ದಂತೆಯೇ ಸರಿದಂತಹುವುಗಳನ್ನ
ಆತಂಕ-ಗೀತಂಕ ಇಲ್ಲಿಯತನಕ ಎನ್ನ
ಮನದತ್ತ ಸುಳಿದಂತಹುಗಳನ್ನ
ಮರೆಮಾಚಲು ನಾನೇ ಮೊರೆ ಹೊಕ್ಕಿದ್ದಿಲ್ಲವೇ
ನಿನ್ನ
ಆದರೂ ಹೆಮ್ಮೆ ನನಗೆ, ಇಲ್ಲ ಎನಗೆ ವಿಪತ್ತು
ನಿನ್ನ ಜೊತೆಯಲ್ಲೇ ಜೀವನ ಯಾವತ್ತೂ
ಕಾಣದ ಕಣ್ಣಿಗೆ ಕಾಡುವ ಕೋವಿಡ್ ಹತ್ತೊಂಭತ್ತು
ಉಳಿಯಲಿಕ್ಕಿಲ್ಲ ನಿನ್ನಂತೆ ನನ್ಹತ್ರ ಮೂರ್ಹೊತ್ತು
ಕಟ್ಟಿಕೊಂಡ ಮೇಲೆ ನಿನ್ನ ಇಲ್ಲೆನಗೆ ಬೇರೆ
ಆಪತ್ತು!
ನೀನು ಕಾಡಿದ ಪರಿಯಂತೆ ನನ್ನ
ಕಾಡಲಿಕ್ಕಿಲ್ಲ ಆ ವೈರಸ್ಸು ಈ ನನ್ನ ತನುವನ್ನ
ಅದಕೆ ಸದಾ ಹೊಗಳುವೆ ನಾ ನಿನ್ನ
ಅದಕ್ಕಿಂತ ನೀನೇ ತುಂಬಾ ಚೆನ್ನ
ಸತಿಯೇ ಬಂತೆಂದು ಕೊರೋನಾ-ಕ್ಯೂಂರೋನಾ?!
ಅಲ್ಲೊಂದು
ಲ್ಯಾಂಡ್
ಮಾರ್ಕು.
~~~~~~~~~~~~~~~~~~~~~~~~~~
ಬಿಡುವು ಸಿಕ್ಕಾಗ
ಮನೆಯವರೆಲ್ಲಾ
ಬೇಕೆಂದ ಹಾಗೆ
ಇರಲೆಂದು
ಘಳಿಗೆ ಹುಡುಕಿ
ಹೊರಟ ಜಾಗ
ಅದೊಂದು ಪಾರ್ಕು!
ಮನೆಯವರೆಲ್ಲಾ
ಬೇಕೆಂದ ಹಾಗೆ
ಇರಲೆಂದು
ಘಳಿಗೆ ಹುಡುಕಿ
ಹೊರಟ ಜಾಗ
ಅದೊಂದು ಪಾರ್ಕು!
ಟಿಕೆಟ್ ಪಡೆದು
ಜಂಜಡಗಳ ಮಧ್ಯೆ
ಸರಿಪಡಿಸಲೆಂದು
ಕೆಟ್ಟ ತಲೆಯ
ಕಂಡಿತವಗೆ ಅವನ ಕೈಯ
ಅವನದೇ ಹಳೆಯ
ಟ್ಯಾಟೂ ಮಾರ್ಕು!
ಜಂಜಡಗಳ ಮಧ್ಯೆ
ಸರಿಪಡಿಸಲೆಂದು
ಕೆಟ್ಟ ತಲೆಯ
ಕಂಡಿತವಗೆ ಅವನ ಕೈಯ
ಅವನದೇ ಹಳೆಯ
ಟ್ಯಾಟೂ ಮಾರ್ಕು!
ಮಕ್ಕಳು ಆಟದ ದಾರಿ
ಹಿಡಿದು ಹೊರಟರೆ
ಅವರಿಬ್ಬರಿಗೆ ಬೇಕಿತ್ತು
ಅವರದೇ ಕೈತಪ್ಪಿದ್ದ
ಮೈದಬ್ಬುವ ಪ್ರೈವೆಸಿ
ಹಾಗೆಂದು ಬಿಟ್ಟಿರಲಿಲ್ಲ
ಅವರ ಮಧ್ಯೆ ಬಿರ್ಕು!(ಬಿರುಕು)
ಹಿಡಿದು ಹೊರಟರೆ
ಅವರಿಬ್ಬರಿಗೆ ಬೇಕಿತ್ತು
ಅವರದೇ ಕೈತಪ್ಪಿದ್ದ
ಮೈದಬ್ಬುವ ಪ್ರೈವೆಸಿ
ಹಾಗೆಂದು ಬಿಟ್ಟಿರಲಿಲ್ಲ
ಅವರ ಮಧ್ಯೆ ಬಿರ್ಕು!(ಬಿರುಕು)
ದಿನಗಳೆಷ್ಟೋ ಹೋಗಿದ್ದವು ಉರುಳಿ
ಬಾರದಂತಹವು ಮತ್ತೆ ಮರಳಿ
ಕ್ಷಣಗಳದೆಷ್ಟೋ ಮಾಡಿಸಿ
ಹೋಗುವಂತೆ ಕೆರಳಿ
ಜೀವನವೇ ಹೀಗೆ
ಮುಂದೆ ಮುಂದೆ ಸಾಗುವ
ಧಾವಂತದ ಸರ್ಕು!(ಸರಕು)
ಬಾರದಂತಹವು ಮತ್ತೆ ಮರಳಿ
ಕ್ಷಣಗಳದೆಷ್ಟೋ ಮಾಡಿಸಿ
ಹೋಗುವಂತೆ ಕೆರಳಿ
ಜೀವನವೇ ಹೀಗೆ
ಮುಂದೆ ಮುಂದೆ ಸಾಗುವ
ಧಾವಂತದ ಸರ್ಕು!(ಸರಕು)
ಅವರು ಅದೇನೋ ಗುಸು ಗುಸು
ಪಿಸು ಪಿಸು ಮಾತಿನಲ್ಲಿ...
ಮನಸುಗಳ ಮಾರ್ದನಿಯ
ಹಂಚಿಕೊಂಡರು ಬಗೆ ಬಗೆ
ನೆನಕೆಗಳ ಜೀವಂತ ನಿ-ದರ್ಶನ
ಪುಟ್ಟ ಹಸಿವೆಗೆ ಅವಧಾನವಿರದೆ
ತಿಂದದ್ದಾಯ್ತು ಹಾಳು-ಮೂಳು ಮುರ್ಕು!(ಮುರುಕು)
ಪಿಸು ಪಿಸು ಮಾತಿನಲ್ಲಿ...
ಮನಸುಗಳ ಮಾರ್ದನಿಯ
ಹಂಚಿಕೊಂಡರು ಬಗೆ ಬಗೆ
ನೆನಕೆಗಳ ಜೀವಂತ ನಿ-ದರ್ಶನ
ಪುಟ್ಟ ಹಸಿವೆಗೆ ಅವಧಾನವಿರದೆ
ತಿಂದದ್ದಾಯ್ತು ಹಾಳು-ಮೂಳು ಮುರ್ಕು!(ಮುರುಕು)
ಕಾಲ ಸರಿಯುತ್ತಲಿತ್ತು
ದಿನ ಮತ್ತೆ ಹೀಗೆ ಇನ್ನೆಂದು
ಬಾರದೇ ಇರದು ಎಂಬ
ಹಸಿಗನಸಿನಲ್ಲಿ ಹುಸಿ ಮುನಿಸು
ಮರೆತು ತಮ್ಮನ್ನು ತಾವೇ
ಗತಿಸಿದ್ದನ್ನು ಕೆದಕದೆ ಸಾಗಿತ್ತು
ಎದುರಿಸಲು ಸಿದ್ಧಗೊಂಡಂತೆ
ಬರಲಿವೆ ಬಯಸದಿದ್ದರೂ ಇನ್ನದೆಷ್ಟು ಜರ್ಕು!
ದಿನ ಮತ್ತೆ ಹೀಗೆ ಇನ್ನೆಂದು
ಬಾರದೇ ಇರದು ಎಂಬ
ಹಸಿಗನಸಿನಲ್ಲಿ ಹುಸಿ ಮುನಿಸು
ಮರೆತು ತಮ್ಮನ್ನು ತಾವೇ
ಗತಿಸಿದ್ದನ್ನು ಕೆದಕದೆ ಸಾಗಿತ್ತು
ಎದುರಿಸಲು ಸಿದ್ಧಗೊಂಡಂತೆ
ಬರಲಿವೆ ಬಯಸದಿದ್ದರೂ ಇನ್ನದೆಷ್ಟು ಜರ್ಕು!
No comments:
Post a Comment