ಪಾಲಿನಿಂದ ಕೇಡು.
~~~~~~~~~~~~~~~~~~~~
ಹಿಂದಾನೊಂದು ಕಾಲದಲ್ಲಿ ವಿಭವಸು ಎಂಬ ಋಷಿಯಿದ್ದರು.ಅವರ ಸಹೋದರ ಸುಪ್ರತಿಕ.ಸುಪ್ರತಿಕ ತನ್ನ ಅಣ್ಣನ ಜೊತೆಯಲ್ಲಿ ಮಾತನಾಡುವಾಗಲೆಲ್ಲ ಆಸ್ತಿಯನ್ನು ಪಾಲು ಮಾಡುವ ಬಗ್ಗೆಯೇ ಹೆಚ್ಚಾಗಿ ಪ್ರಸ್ತಾಪಿಸುತ್ತ ಒತ್ತಾಯಿಸುತ್ತಿದ್ದ.ಆಗ ವಿಭವಸು,
"ಹೇ ಹೆಮ್ಮೆಯ ಸಹೋದರನೇ! ಪಾಲು ಮಾಡುವುದರಿಂದ ಹಲವು ತಪ್ಪುಗಳಿಗೆ ಎಡೆಮಾಡಿಕೊಟ್ಟಂತಾಗಬಹುದು.ಅಲ್ಲದೆ, ಆಸ್ತಿಯನ್ನು ಪಾಲು ಮಾಡಿಕೊಂಡ ನಂತರ ತೃಪ್ತಿಯುಂಟಾಗುತ್ತದೆಂದು ಹೇಳಲಾಗದು.ನಾನು ನಿನಗೆ ಅದನ್ನು ಕೊಡಲಿಲ್ಲವೆಂದು ನೀನು ಯಾವುದರ ಬಗ್ಗೆಯಾದರೂ ಅಸಮಾಧಾನಪಟ್ಟುಕೊಳ್ಳಬಹುದು.ಅದೇ ರೀತಿಯಲ್ಲಿ ನೀನು ಇದನ್ನು ತೆಗೆದುಕೊಂಡುಬಿಟ್ಟೆ ಎಂದು ನಾನೂ ಬೇಸರಗೊಳ್ಳಬಹುದು.ಈ ರೀತಿಯಲ್ಲಿ ಇಬ್ಬರಲ್ಲಿ ಯಾರಾದರೂ ಒಬ್ಬರಿಗೆ ಅಸಮಾಧಾನವಾದರೆ,ಆಗ ಅಭಿಪ್ರಾಯ ಭೇದ ತಲೆದೋರಿ ಅದುವೇ ಹಗೆಯಾಗಿ ಬದಲಾಗುತ್ತದೆ."
''ಇಂತಹ ಸಂದರ್ಭಗಳಲ್ಲಿ, ಅವಕಾಶವಾದಿಗಳು ಮಧ್ಯಸ್ಥಿಕೆಯನ್ನು ಮಾಡಿಸುತ್ತೇವೆಂದು ನುಡಿಯುತ್ತಾ ತಮ್ಮ ಮೂಗನ್ನು ತೂರಿಸುತ್ತಾರೆ.ಈ ರೀತಿ ಮೂಗು ತೂರಿಸುವವರು ನನ್ನ ಪರವಾಗಿ ಕೆಲವರು ಹಾಗೂ ನಿನ್ನ ಪರವಾಗಿ ಕೆಲವರು ಎಂಬ ರೀತಿಯಲ್ಲಿ ತಂಡವಾಗಿ ರೂಪುಗೊಳ್ಳುತ್ತಾರೆ.ಆಗ ಕೌಟುಂಬಿಕ ಜಗಳವು ಪಕ್ಷದ ಜಗಳದಂತೆ ಬದಲಾಗುತ್ತದೆ.ಆದ್ದರಿಂದ ಪಾಲು ಮಾಡುವುದರ ಬಗ್ಗೆ ಮಾತನಾಡಬೇಡ'' ಎಂದು ತಮ್ಮನಿಗೆ ಹಿತವನ್ನು ನುಡಿದರು.
ವಿಭವಸು ಇಷ್ಟೆಲ್ಲಾ ಒಳ್ಳೆಯ ಮಾತುಗಳನ್ನು ನುಡಿದರೂ ಕೂಡ ಸುಪ್ರತಿಕನು ಪಾಲು ಮಾಡುವಿಕೆಯ ಬಗ್ಗೆಯೇ ಮತ್ತೆ ಮತ್ತೆ ಮಾತನಾಡುತ್ತಿದ್ದನು.ಇದರಿಂದ ಕೋಪಗೊಂಡ ವಿಭವಸು ಋಷಿಯು ತಮ್ಮನನ್ನು ಕುರಿತು,''ಸುಪ್ರತಿಕ!ನಾನು ಎಷ್ಟೋ ರೀತಿಯಲ್ಲಿ ಒಳ್ಳೆಯತನದಿಂದ ಹೇಳಿದರೂ ಕೂಡಾ ನೀನು ಕೇಳುತ್ತಿಲ್ಲ.ಪಾಲು ಮಾಡುವುದನ್ನೇ ಬಯಸುತ್ತಿದ್ದೀಯ.ಮದ ಹಿಡಿದವನಂತೆಯೇ ಮಾತನಾಡುತ್ತಿದ್ದೀಯ.ಆದ್ದರಿಂದ ನೀನು ಆನೆ ಜನ್ಮವನ್ನು ತಾಳುವಂತವನಾಗು'' ಎಂದು ಶಪಿಸಿದರು.ಇದನ್ನು ಕೇಳಿದ ಸುಪ್ರತಿಕ, ''ನೀನೂ ಸಹ ಸೊಕ್ಕಿನಿಂದಾಗಿ ಪಾಲು ಮಾಡಲು ಸಮ್ಮತಿಸುತ್ತಿಲ್ಲ.ಅಲ್ಲದೆ,ನನಗೆ ಶಾಪವನ್ನೂ ನೀಡಿದ್ದೀಯ.ಆದ್ದರಿಂದ ನೀನು ಆಮೆಯ ಜನ್ಮವನ್ನು ತಾಳುವಂತಾಗಲಿ.''ಎಂದು ಮರು ಶಾಪವನ್ನಿತ್ತರು.
ಇಬ್ಬರೂ ಋಷಿಗಳಾದ್ದರಿಂದ ಅವರ ಶಾಪ ಫಲಿಸಿ ಮುಂದಿನ ಜನ್ಮದಲ್ಲಿ ವಿಭವಸು ಆಮೆಯಾಗಿಯೂ,ಸುಪ್ರತಿಕನು ಆನೆಯಾಗಿಯೂ ಜನಿಸಿದರಲ್ಲದೆ,ಮಹಾ ಬಲಶಾಲಿಗಳಾಗಿದ್ದರು.ಈ ಬಗೆಯ ಜನ್ಮ ತಾಳಿದ ನಂತರವೂ ಇವರ ಮಧ್ಯೆ ಇದ್ದ ಭಿನ್ನಾಭಿಪ್ರಾಯವು ಬಗೆಹರಿದಿರಲಿಲ್ಲ. ಇಬ್ಬರೂ ಒಬ್ಬರನ್ನೊಬ್ಬರು ಕೊಂದು ಹಾಕಲು ಯತ್ನಿಸುತ್ತಾ,ಅದರಲ್ಲಿ ವಿಫಲವಾಗುತ್ತಾ ದೀರ್ಘಕಾಲದವರೆಗೆ ಹೋರಾಡುತ್ತಲೇ ಇದ್ದರು.
ಈ ಸಮಯದಲ್ಲಿ ಒಂದು ಗರುಡ ತನ್ನ ತಂದೆಯ ಬಳಿಯಲ್ಲಿ,ತನ್ನ ಹಸಿವೆಯನ್ನು ನೀಗಿಸುವಷ್ಟು ಆಹಾರವು ಎಲ್ಲಿ ಸಿಗುತ್ತದೆ ಎಂದು ಕೇಳಿದಾಗ,ಆ ಗರುಡನ ತಂದೆಯಾದ ಕಶ್ಯಪರು ಆ ಆನೆ ಮತ್ತು ಆಮೆಯ ಬಗ್ಗೆ ಹೇಳಿ,ಅವೆರಡನ್ನೂ ತಿಂದು ಹಸಿವೆಯನ್ನು ನೀಗಿಸಿಕೊಳ್ಳುವಂತೆ ನುಡಿದರು.ಅವರು ಹೇಳಿದಂತೆ ಕೆರೆಯ ಬಳಿಗೆ ಹೋದ ಗರುಡ,ಅಲ್ಲಿದ್ದ ಆನೆ ಮತ್ತು ಆಮೆಗಳೆರಡನ್ನೂ ಕಬಳಿಸಿತು.
(ಜಾನಪದ ಕತೆ)
No comments:
Post a Comment