Sunday, July 19, 2020

ಪುಸ್ತಕ ವಿಮರ್ಶೆ.


ನಾನು ಓದಿದ ಪುಸ್ತಕ.                                                                                ಪುಸ್ತಕ ವಿಮರ್ಶೆ.

                               ಅನ್ನ.

          ರಜಾ ಅವಧಿಯಲ್ಲಿ ಮನೆಯಿಂದಲೇ ಕರ್ತವ್ಯ ನಿರ್ವಹಿಸಲು ಸೂಚಿಸಿ ವಹಿಸಿದ ಆರು ಅಂಶದ ಕಾರ್ಯಕ್ರಮಗಳಲ್ಲಿ, ನಾನು ಓದಿದ ಎರಡು ಪುಸ್ತಕಗಳಲ್ಲಿ ಒಂದರ ವಿಮರ್ಶೆ ಬರೆಯಲು ಸೂಚಿಸಿದ್ದು ಒಂದಾಗಿದೆ. ಮಿತ್ರರೋರ್ವರಿಂದ ಎರವಲು ಪಡೆದು ನಾನು ಓದಿದ ಒಂದು ಪುಸ್ತಕ “ಅನ್ನ”

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ  ಕೃತಿಯಾದ “ಅನ್ನ”ವನ್ನು ಹನೂರು ಚನ್ನಪ್ಪನವರು ಬರೆದಿದ್ದಾರೆ.ಇದೊಂದು ಕಥಾ ಸಂಕಲನ ಪ್ರಕಾರಕ್ಕೆ ಬರುವ ಏಳು ಕಥೆಗಳಾದ ಜೀತ,ಕಾವಲು,ಬೆತ್ತಲ ಬೇರು,ಅನ್ನ,ಲೈಟು,ಹರಕೆ ಮತ್ತು ಹೊಲ ಎಂಬ ಪುಟ್ಟ ಹೆಸರುಗಳುಳ್ಳ ಪುಸ್ತಕವಾಗಿದೆ.

ಪುಸ್ತಕದ ಲೇಖಕರಾದ  ಶ್ರೀ ಹನೂರು ಚನ್ನಪ್ಪನವರು ಕೊಳ್ಳೇಗಾಲ ತಾಲೂಕಿನ ಹನೂರಿನವರು. ಪ್ರಸ್ತುತ ಗಂಗಾವತಿ ತಾಲೂಕಿನ ಹಿರೇಖೇಡದ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲೇಖಕರು ಮುಖ್ಯವಾಗಿ ದಲಿತ ಸಮುದಾಯಗಳಲ್ಲಿ ಸ್ಥಾಯಿಯಾಗಿರುವ ಅಂತಃಶಕ್ತಿಯನ್ನು ಕಾಣುತ್ತಾರೆ. ದಲಿತ ಸಮುದಾಯಗಳ ಪರಿಸರವನ್ನು ನೈತಿಕವಾದ ಸಂಯಮದಿಂದ ಕತೆಗಳನ್ನು ಬರೆಯುವಲ್ಲಿ ಕುವೆಂಪು, ದೇವನೂರು ಮಹಾದೇವರಂತೆ ಸಿದ್ಧ ಹಸ್ತರು.
ಜೀತ ಕತೆಯಲ್ಲಿ ರಾಚ ಜೀತಗಾರ. ಸುಂದ್ರಿ ಎಂಬ ಮಗಳಿದ್ದು,ಆಕೆಯನ್ನು ಓದಿಸಿ,ಸರ್ಕಾರಿ ಕೆಲಸಕ್ಕೆ ಕಳಿಸುವ ಹಂಬಲವುಳ್ಳವನು. ದಲಿತ ವಿದ್ಯಾವಂತ ನಾಗ್ರಾಜನ  ಪ್ರೀತಿಗೆ ಸಿಕ್ಕು ಸುಂದ್ರಿ ಮದುವೆಯಾಗುತ್ತಾಳೆ. ಸಂಸಾರ ತಾಪತ್ರಯ ಸುಂದ್ರಿಯನ್ನು ವರದಕ್ಷಿಣೆಗಾಗಿ ನಾಗ್ರಾಜನು ಪೀಡಿಸುವಂತೆ ಮಾಡುತ್ತದೆ. ಹೋರಾಟಗಾರನಾದರೂ ನಾಗ್ರಾಜನ ದ್ವಂದ್ವ ನೀತಿ, ರಾಚನ,ಸುಂದ್ರಿಯ ಅಸಹಾಯಕತೆ ಕತೆಯಲ್ಲಿ ಎದ್ದು ಕಾಣುತ್ತದೆ.

ಕಾವಲು ಕತೆಯಲ್ಲಿ ಮಾದ, ಅವರ ನಾಯಿ ಮದ್ದ ಎರಡು ಜೀವಿಗಳ ನಡುವಿನ ಅನ್ಯೋನ್ಯ ಸಂಬಂಧಗಳ ಬಗ್ಗೆ ವ್ಯಕ್ತವಾಗಿದೆ.

ಬೆತ್ತಲ ಬೇರು ಕತೆಯು ದಲಿತ ಕೆಂಪನ ಮಗ ಸಿದ್ರಾಜನು ಮೇಲ್ವರ್ಗದ ಜನತೆಯ ಶೋಷಣೆಗೀಡಾಗಿ ಸಾವನ್ನಪ್ಪುವ  ಬಗೆಗೆ, ಬಡತನ, ಜಾತಿ,ದಲಿತರಿಗೆ ಶಾಪವಾದ ಬಗ್ಗೆ ಕತೆಯಲ್ಲಿ ವ್ಯಕ್ತವಾಗುತ್ತದೆ.
ಲೈಟು ಕತೆಯಲ್ಲಿ ಜಾತಿಯಿಂದ ಆಗುವ ಅವಮಾನಗಳಿವೆ. ಈ ಅವಮಾನಗಳನ್ನು ಮೀರುವ ಪ್ರಯತ್ನಗಳು ನಡೆಯುತ್ತದೆ. ಹಲವು ಆಯಾಮಗಳನ್ನು ಈ ಕತೆ ಹೊಂದಿದೆ.
ಅನ್ನ ಕತೆಯಲ್ಲಿ ರಾಗಿಗಿಂತ ಅನ್ನದ ಆಕರ್ಷಣೆ ಎಷ್ಟು ಎಂಬುದು ಮಾದೇಶನ ಮಾತುಗಳಲ್ಲಿ ವ್ಯಕ್ತವಾಗುತ್ತ ಹೋಗುತ್ತದೆ.

ಹರಕೆ ಮತ್ತು ಹೊಲ ಈ ಎರಡು ಕತೆಗಳಲ್ಲಿ ದುರಂತವೇ ಕಾಣುತ್ತದೆ. ಕತೆಯಲ್ಲಿ ನಂಜ ಮತ್ತು ಆತನ ಸಮಾಜದ ಅಂತರ್‌ ಸಂಬಂಧ ಹೀಗೂ ಇರುತ್ತದೆ  ಎಂಬುದು ತಿಳಿದು ಬರುತ್ತದೆ.

ಹೊಲ ಕತೆ ಕುತೂಹಲಕರವಾಗಿದೆ. ಊರಲ್ಲಿ ಮನೆ, ಅಡವಿಯಲ್ಲಿ ಭೂಮಿ ಇಲ್ಲದ ದಲಿತರು ಕಾಣುವ ಕನಸು, ಭೂಮಿಯನ್ನು ಪಡೆದುಕೊಳ್ಳುವ  ಸಹಜವಾದ ಮಹಾಬಯಕೆ ಇಲ್ಲಿ ಎದ್ದು ಕಾಣುತ್ತದೆ.  

 ಎರಡು ಬಾರಿ  ಮುದ್ರಣ ಕಂಡ ಈ ಕೃತಿಯ ಬಗ್ಗೆ ಶ್ರೀ ಕೆಂಪಯ್ಯ ಐ.ಪಿ.ಎಸ್;‌ ಶ್ರೀ ಕುಂ.ವೀ; ಡಾ.ಹನೂರು ಕೃಷ್ಣಮೂರ್ತಿ ಮುಂತಾದವರು ಸಕಾರತ್ಮಕ ಅಭಿಪ್ರಾಯಗಳನ್ನು ತಿಳಿಸಿದ್ದಾರೆ. ಅವುಗಳನ್ನು ಹಿಂಬದಿ ರಕ್ಷಾಪುಟದಲ್ಲಿ ಸಂಗ್ರಹಿಸುವ ಕಾರ್ಯವೂ ನಡೆದಿದೆ.
ದಲಿತ ಸಮುದಾಯದ ಸುಪ್ತ ಬಂಡಾಯದ  ಗುಣಾತ್ಮಕ ಮಿಡಿತವೇ ಹನೂರು ಚನ್ನಪ್ಪನವರ ಅನ್ನ ಕೃತಿ.

ಮೊದಲನೇ  ಆವೃತ್ತಿಗೆ ಶ್ರೀ ಕೃಷ್ಣಮೂರ್ತಿ ಹನೂರು ರವರು ಮುನ್ನುಡಿ ಬರೆದರೆ, ಎರಡನೇ ಬಾರಿ ಆ ಸ್ಥಾನವನ್ನು ಶ್ರೀ ಅಮರೇಶ ನುಗಡೋಣಿಯವರು ತುಂಬಿದ್ದಾರೆ.

ಒಟ್ಟಾರೆಯಾಗಿ ರಜಾ ದಿನದಲ್ಲಿ ವಿಶಿಷ್ಟ ವಿಷಯದ ನೂತನ ಬಗೆಯ ಕಥಾ ಪ್ರಕಾರವನ್ನು ಓದಲು ಅವಕಾಶ ಕಲ್ಪಿಸಿದ ಮಿತ್ರರಾದ ಶ್ರೀ ಶಂಭು ರವರನ್ನು ಈ ಸಂದರ್ಭದಲ್ಲಿ ನೆನೆಸುತ್ತೇನೆ.

No comments:

Post a Comment