Monday, July 20, 2020

2008ರ ಕಾವ್ಯ ಭಾಗ-5.


ನಿನ್ನ ಮಾತಿಗೆ ನಾನು
ಕಾಯುತ್ತಿದ್ದೇನೆ
ನಿನ್ನ ಮಾತು
ಬಹು ಮುಖ್ಯ
ನಿನ್ನ ಮಾತೇ ಮಾಣಿಕ್ಯ
ನಿನ್ನ ಜೊತೆ ಹರಟುತ್ತ
ಬದುಕುವುದೇ ನನ್ನ
ಬದುಕಿಗೆ ಲಾಲಿತ್ಯ
ನಮ್ಮ ಪ್ರೀತಿಯೇ
ಸಾಹಿತ್ಯ
ಪ್ರೇಮದಿ ಉಸಿರಿದ
ಮಾತೇ ವೇದ ವಾಕ್ಯ.

ಉಸಿರುಗಟ್ಟಿದಂತಿದ್ದ
ಬದುಕಿನಲ್ಲಿ...
ಚಿಗುರೊಡೆಯುವಂತೆ
ಮಾಡಿತ್ತು
ಅವಳ ಪ್ರೀತಿ
ಪ್ರಪಂಚದ
ವಕ್ರದೃಷ್ಠಿಯೇಕೆ
ಬಿತ್ತೋ ನಮ್ಮ ಮೇಲೆ
ಇಂದು ಕೊಲ್ಲುತಿದೆ
ನಿತ್ಯವೂ ಮನೆ ಮಾಡಿ
ಮನದಲ್ಲಿ ಭೀತಿ!

ಉಸಿರುಗಟ್ಟಿದಂತಿದ್ದ
ಬದುಕಿನಲ್ಲಿ
ಚಿಗುರೊಡೆಯುವಂತೆ
ಮಾಡಿತ್ತು
ಅವಳ ಪ್ರೀತಿ-
ಯಾರ ವಕ್ರ ದೃಷ್ಠಿ
ಬಿತ್ತೋ ನಮ್ಮ ಮೇಲೆ
ಚಿವುಟಿ ಹಾಕಿ
ಇಂದು ಕೊಲ್ಲುತಿದೆ
ಮನೆ ಮಾಡಿ
ಮನದಲ್ಲಿ ಭೀತಿ.

ಓ ಮನಸೇ ಓ ಮನಸೇ ಸಮ್ಮತಿಸೇ ಪ್ರೀತಿಸೇ
ಓ ಕನಸೇ ಹೊಂಗನಸೇ ಒಮ್ಮತದಿ ಪೂಜಿಸೇ
ನಾನೇ ನಿನ್ನವನೆಂದು ಹೂಂಕರಿಸೇ...
ನಿನ್ನವನೇ ಆಗುವೆನೆಂದು ಹಾರೈಸಿ
ಪ್ರೇಮ ಸೂತ್ರಗಳ ಪರಿಪಾಲಿಸೇ...
ಲೋಕ ಸುಖಗಳ ನೀ ತೋರಿಸಿ.

ಪ್ರೇಮ ಇದು ನಿಜವೇನಾ?
ಏಳೇಳು ಜನ್ಮದಲ್ಲೂ ಸರಿಯೇನಾ?!
ಮನದಲ್ಲಿ ಅರಳಿದ ಮೇಲೆ
ಹೃದಯಾನ ತೆರೆದಿಟ್ಟ ಮೇಲೆ
ಅಳಿಸಲಾಗದಾ ಅನುಭವ
ಮಾಸದಂತಹ ಕಲರವ
ಪ್ರೇಮ ಇದು ನಿಜವೇನಾ?!

ಒಲವಿರದ ಪುಟದಲಿ
ನನ್ನ ಬದುಕಿನ
ಬರವಣಿಗೆ ಹೇಗೋ
ತೋಚಿದಂತೆ ಗೀಚಿತ್ತು
ನೀ ಬಂದ ಮೇಲೆ
ಅದು ಸುಶ್ರಾವ್ಯ
ಕಾವ್ಯವಾಯ್ತು.

ಬಯಕೆಗಳು ಬೆನ್ನತ್ತಿ
ಬಂದಾಗ ನನ್ನ
ಮನದಲ್ಲಿ
ನನಗೆ ನಾನೇ ಸೋತು
ಪ್ರೀತಿಗೆ ಶರಣಾದೆ...
ಅವಳ ಮಿದುವೆದೆಯಲ್ಲಿ
ನನ್ನನೇ ಅರ್ಪಿಸಿ
ಪ್ರಿಯತಮೆಯ
ವಶವಾದೆ.

ನನ್ನುಸಿರು ಈಗೀಗ
ಉಸಿರಾಡೋದನ್ನೇ
ಮರೆತಿದೆ ನಲ್ಲೆ-
ಅದಕೆ ನಿನ್ನ
ಹೆಸರನೇ
ಜಪಿಸುವುದರ ಚಿಂತೆ
ಈ ನಿನ್ನ ನೆನಪಲಿ
ಅದೇಕೋ ತನ್ನ
ಗುರಿಯನೇ
ಮರೆತಿದೆಯಲ್ಲೇ!

ನನ್ನದೆಂಬ ಲೋಕ
ಬೇರೆಯೇ ಇತ್ತು
ನೀ ಬಂದ ಮೇಲೆ
ಅದೇ ಲೋಕ
ನಮ್ಮ ಲೋಕವಾಯ್ತು
ಈ ಪ್ರೇಮಲೋಕದಲ್ಲಿ
ಪ್ರೀತಿ ನಮ್ಮಿಬ್ಬರ
ಜೊತೆಯಾಯ್ತು.

ನೀ ನನಗೆ
ಪ್ರೀತ್ಸೋದನ್ನ
ಕಲಿಸಿದ್ದು ನಿಜ
ನೀ ನನ್ನವಳು
ಆಗದೇ ಕೈ ತಪ್ಪಿ
ಹೋಗುವಾಗ
ಆ ನೋವಿನಿಂದ
ಹೊರ ಬರುವುದನು
ಅದೇಕೆ ಕಲಿಸಲಿಲ್ಲ?!

ನೀ ಕೊಡುವ
ಮೊದಲ ಮುತ್ತಿಗೆ
ನನ್ನ ಹಂಬಲ
ನೀ ಇರದೇ
ಇದ್ದಾಗ ಇರಲಿಲ್ಲ
ಈ ಕಳವಳ
ಈ ತಳಮಳ
ಈ ಪ್ರೀತಿ ಕಲಿಸಿತು
ಎಲ್ಲವನು ಸರಳ
ಬೀರುತ ತನ್ನ
ಮಧುರ ಪರಿಮಳ

ನಾ ನಲ್ಲ
~~~~~~~
ನಿನ್ನ ಮುತ್ತಿಗೆ
ಬೆಲೆಕಟ್ಟಿ ಬಿಡುವಷ್ಟು
ಸಿರಿವಂತ ನಾನಲ್ಲ
ನಿನ್ನ ಮುತ್ತನು
ಕೊಳ್ಳಬಲ್ಲ ಕನಿಷ್ಠ
ಗಿರಾಕಿಯೂ ನಾನಲ್ಲ
ಎಷ್ಟೇ ಆದರೂ,
ನಿನ್ನ ಮುತ್ತನು
ಸವಿಯ ಬಲ್ಲವನು
ನಾ-ನಲ್ಲ!

ಆಹಾ!
ಎಂಥ ಮೋಸ
ಕಣೋ ನಿಂದು
ಸಮುದ್ರದಲ್ಲಿ ಒಂದು
ಮತ್ತು ಸಿಕ್ಕರೆ
ಲಕ್ಷ ರೂಪಾಯಿ ಬೆಲೆ
ನಂದು ಜೀವಂತವಾದ
ಅಪರೂಪದ ಮುತ್ತು
ಅದಕೆ ಕೊಡುವೆ ಏನು
ಕಾದು ಕುಳಿತಿಹಳು
ನಿನ್ನ ನಲ್ಲೆ!

ಅದಕೆಂದೇ ನಿನಗಾಗಿ
ಬಚ್ಚಿಡುವೆ ನನ್ನ
ಮುತ್ತನ್ನೆಲ್ಲಾ...
ಅದನು ಪರರಿಗೆ
ಕೊಡುವಂಥವಳು
ನಾನಲ್ಲ-ನಲ್ಲ!

ನೀ ಬಚ್ಚಿಟ್ಟ ಮನಸು
ನನ್ನದೆಂದ ಮೇಲೆ
ಅದರಲಿ ಬಚ್ಚಿಟ್ಟ
ಮುತ್ತಿನ ಕಣಜ
ನನ್ನದೇ ಅಲ್ಲವೇ
ನೀ ನನಗೆ
ಕೊಡಲು ಮುಂದಾಗಲು
ನಾ ಬೇಡ ಅನ್ನುವೆನೇ?
ಆಗದು ನಲ್ಲೆ
ಬಿಟ್ಟಿರಲು ನಿನ್ನನ್ನಲ್ಲೇ!

ಮುತ್ತಿಗೆ...
~~~~~~~
ನಿನ್ನೆದೆ ಕೋಟೆಗೆ
ಹಾಕಿದೆ ನಾ
ಮುತ್ತಿಗೆ
ಹೆಚ್ಚೇನೂ
ದೋಚಲೆಂದಲ್ಲ
ಆಗಲಾದರೂ ನೀ
ಕೊಡಬಹುದಾದ
ಒಂದೇ ಒಂದು
ಮುತ್ತಿಗೆ.

ಈ ವಿರಹ ವೇದನೆ
ಸಹಿಸೆನು ಗೆಳತಿ
ನೀ ಅಲ್ಲಿ ನಾ ಇಲ್ಲಿ
ಮರೆಯೆನು ಚರಿತೆ
ನಾ ನಿನ್ನವನು
ನೀ ನನ್ನವಳು
ನೀ ನನ್ನವಳು
ನಾ ನಿನ್ನವನು
ಎಂದು ಎಷ್ಟೋ ಸಾರಿ
ಹೇಳಿದರೂ,
ಮುಗಿಯದು
ಬದುಕಿನ ಕವಿತೆ!

ನೀನು ನನ್ನವಳು
ಅಹುದೋ ಅಲ್ಲವೋ?!
ಆದರೆ,ನಾನು ಮಾತ್ರ
ನಿನ್ನವನೇ
ನಾನು ನಿನ್ನವನಾಗುವೆನೋ
ಇಲ್ಲವೋ?!
ಮನಸಲಿ ಎಂದೂ ನೀ
ನನ್ನವಳೇ!
ಮನಸಿನಿಂದ ಬಂದ ಈ
ತುಂಬು ಪ್ರೀತಿ
ಸತ್ಯವಲ್ಲದೇ ಬೇರೇನು?!
ಹೊಸ ಹೊಸ ಕನಸುಗಳು
ಕೊನರುವಂತೆ ಮಾಡಿದ್ದು
ನಿನ್ನ ಮಧುರ ಪ್ರೀತಿ
ಅದು ಅರಳಿದ
ಘಳಿಗೆಯಿಂದಲೇ
ಮಾಯವಾಯ್ತು
ನನ್ನಲಿ ಅಡಗಿದ್ದ
ಎಲ್ಲಾ ಭೀತಿ.

ನಿನ್ನೆಗಳು ಸಾಯುತ್ತವೆ
ನಾಳೆಗಳಾಗಿದ್ದ
ಇಂದುಗಳಿಗೆ
ಜನ್ಮವನು ನೀಡಿ
ಹೀಗೆಯೇ ಬದುಕಿನ ಬಂಡಿ
ಮುಂದೆ ಮುಂದೆ
ಸಾಗುತ್ತದೆ.

ನಿನ್ನ ಕಣ್ಣೀರು
ನಿನ್ನ ಕಂಗಳಿಂದ
ಜಿನುಗಿದರೆ
ಅದರ ನೋವು
ಯಾಕೆ ನನ್ನ ಮನದಲ್ಲಿ
ಹೆಪ್ಪುಗಟ್ಟಿ ನಿಲ್ಲುತ್ತದೆ?

ಹೇಳದೇ ಕೇಳದೇ ಪ್ರೀತಿ ಶುರುವಾಗಿದೆ-
ಅವಳನು ನೋಡದೇ ಮನಸು ನೀಡಿಯಾಗಿದೆ
ಯಾಕೆ ಈ ಥರ ನನ್ನಲ್ಲಿ ಹೊಸತನ
ಯಾಕೆ ಈ ಸ್ವರ ನನ್ನಲ್ಲಿ ಅನುಕ್ಷಣ
ಕಾಡಿದೆ ಬೇಡಿದೆ ಅವಳೇ ಬೇಕು ಅಂದಿದೆ

ಎಲ್ಲೇ ಹೋದರೂ-ನಾ ಎಲ್ಲೇ ನಿಂತರೂ,
ಅವಳ ನೆನಪು ನನ್ನನಿಂದು ಹುಚ್ಚು ಮಾಡಿದೆ
ಯಾರೇ ಬಂದರೂ ಏನೇ ಅಂದರೂ
ಅವಳ ಮನಸು ನನ್ನನು ಮೆಚ್ಚಿಯಾಗಿದೆ-
ಈ ಪ್ರೀತಿಯು ಏನೋ ಮೋಡಿಯು
ಮಾಡಿ ಹೋಗಿದೆ-ಹಾಡಿ ನಲಿದಿದೆ
ಈ ರೀತಿಯು ಎಲ್ಲ ಭೀತಿಯು
ಮರೆಸಿ ಹೋಗಿದೆ ನನ್ನ ಹರಸಿದೆ

ಅವಳು ದಕ್ಕಿದ ಕ್ಷಣದಲ್ಲಿಯೇ
ಸಂತೋಷವು ಸುರಿದಂತಿದೆ-
ಅವಳು ಅಪ್ಪಿದ ಕ್ಷಣದಲ್ಲಿಯೇ
ಉನ್ಮಾದವು ಹರಿದಂತಿದೆ-
ಹೊಸ ನೋಟಕೆ ಹೊಸ ಸ್ಪರ್ಶವು
ಹೊಸ ಪ್ರೀತಿಗೆ ಹೊಸ ಹರ್ಷವು
ಜೊತೆಯಾಗಿದೆ-ಕತೆಯಾಗಿದೆ
ವ್ಯಥೆಯೆಲ್ಲವೂ ಮರೆಯಾಗಿದೆ.

ಮನಸಿಂದು ಹಾಡಿದೆ
ಗರಿ ಬಿಚ್ಚಿ ಹಾರಿದೆ
ನಿನ್ನ ಹೆಸರೇ ಹೇಳಿದೆ
ನಿನ್ನ ಉಸಿರನೇ ಬೇಡಿದೆ
ನಿನ್ನ ಹಾದಿಯ ಕಾದಿದೆ-
ನಿನ್ನ ಪ್ರೀತಿಯ ಕೇಳಿದೆ!


ನೀನೇ ನೀನೇ ನೀನೇ ತಾನೇ ನನ್ನ ಸೆಳೆದೋಳು

ಕಣ್ಣ ಅಂಚಿನಲ್ಲಿ ನಿಂತು ಒಳಗೆ ಕರೆದೋಳು

ಮನಸಿನ ಮಾತಿದು ತುಟಿಯಲಿ
ಹೇಳುವ ಆತುರ ನನ್ನಲಿ
ಆಸೆಗೂ ನಿಲುಕದ ಪ್ರೀತಿಯು
ಕಂಡೆನು ಈ ದಿನ ನಿನ್ನಲಿ

ಉಸಿರಲಿ ಚೆಲ್ಲಾಟ ಹೆಸರಲಿ ತುಂಟಾಟ
ಗುಣದಲಿ ಹುಡುಗಾಟ ನಿನ್ನಲಿ ಹುಡುಕಾಟ
ಏನು ಮಾಯೆಯೋ ಹೇಳಲಾರೆನು
ಏನು ಯೋಗವೋ ಅರಿಯದಾದೆನು

ನಡಿಗೆಯ ಸಮ್ಮಿಲನ
ಅಪ್ಪುಗೆಯ ಆ ಮಿಲನ
ಮನಸುಗಳ ಪಯಣಕ್ಕೆ
ಕಾಯುತಿಹೆ ಅನುಕ್ಷಣ
ಸ್ವರ್ಗವೇ ತೆರೆದಿದೆ ಮನದಲಿ
ಸಂಭ್ರಮ ಕಾದಿದೆಮೊಗದಲಿ

ನೀನು ಇರದೇ ಬಾಳು ಬರಿದು
ಆಗಿ ಹೋಗಿದೆ ಬಾ ಪ್ರೀತಿಸು
ನೀ ಬಾರದೇ ಪ್ರೀತಿ ಕರಗಿ
ಮುಳುಗಿ ಹೋಗಿದೆ ಬಾ ಪ್ರೀತಿಸು
ಈ ಜೀವನ ಸುಖ ಜೀವನ
ಮಾಡೋಕೆ ನೀ ಬರಬಾರದೇ?
ಈ ಬಾಳಿನ ಸಮ್ಮೋಹನ
ಸೆರೆ ಮಾಡಲು ಸಿಗಬಾರದೇ!

ಈ ಮನಸು ತುಂಬ
ನಿನ್ನದೇ ಕನಸು
ಈ ಕನಸು ಆಗಲಿ
ಬೇಗ ನನಸು
ಈ ಜಗವು ಎದುರೇ ಆದರೂ-
ಈ ಮೌನವು ನಿದಿರೇ ಹೋದರೂ
ನೀ ಸಿಗದೇ ಹೋದರೆ,ನಾ ಹೇಗೆ ಇರಲಿ?
ನೀ ಇರದೇ ಹೋದರೆ,ನಾ ಹೇಗೆ ಇರಲಿ?
ನೀ ಬೇಕು ನೀ ಇರಬೇಕು
ನಿನ್ನಿಂದ ತಾನೇ ನನ್ನೀ ಬದುಕು.

ನೀನೇನಾ?ನೀನೇನಾ?ಹೃದಯ ಕದ್ದೋಳು?
ನನ್ನೊಳಗೆ ನನ್ನೊಳಗೆ ಮನಸು ಇರದಂತ
ಪ್ರೀತಿಯ ಆಸೆ ತಂದೋಳು...
ಹೇಳು ನೀನು ಯಾರು? ಆಸೆ ತಂದೋಳು
ಯಾರೂ ಅಳಿಸದಂತ ಚಿತ್ರ ಬರೆದೋಳು
ಎಂದೂ ಮರೆಯದಂತ ಭಾಷೆ ಕೊಟ್ಟೋಳು.

ನೀನೇ ನೀನೇ ಸರ್ವಸ್ವ
ನೀನೇ ನನ್ನ ಸಂಕಲ್ಪ
ನೀನೇ ನೀನೇ ಸಂಸರ್ಗ
ನೀನೇ ನನ್ನ ಸಾಂತ್ವನ
ಲೋಕದ ದೃಷ್ಠಿಯಲಿ
ಯಾರಿಗೆ ಯಾರೂ ಬೇಕಿಲ್ಲ
ಪ್ರೀತಿಯ ದೃಷ್ಠಿಯಲಿ
ನೀನು ಇಲ್ಲದೇ ಉಳಿವಿಲ್ಲ

ನೀನೇ ನೀನೇ ಸಂದೇಶ
ನೀನೇ ನನ್ನ ಸಾಹಿತ್ಯ
ನೀನೇ ನೀನೇ ಸಲ್ಲಾಪ
ನೀನೇ ನನ್ನ ಸಂಭಾವ್ಯ
ಲೋಕದ ದೃಷ್ಠಿಯಲಿ
ಪ್ರೀತಿಗೆ ಸಮಯವೇ ಸಿಕ್ಕೊಲ್ಲ
ಪ್ರೀತಿಯ ದೃಷ್ಠಿಯಲಿ
ಲೋಕದ ಗೊಡವೆಯೇ ಬೇಕಿಲ್ಲ

ನೀನೇ ನೀನೇ ಸಾಂಗತ್ಯ
ನೀನೇ ನನ್ನ ಸಂಬಂಧ
ನೀನೇ ನೀನೇ ಸಂತಾಪ
ನೀನೇ ನನ್ನ ಸಂದರ್ಭ
ಲೋಕದ ದೃಷ್ಠಿಯಲಿ
ನಾಳೆಯ ಚಿಂತೆಯೇ ಬೇಕಿಲ್ಲ
ಪ್ರೀತಿಯ ದೃಷ್ಠಿಯಲಿ
ನೀನು ಇಲ್ಲದೇ ಬದುಕಿಲ್ಲ.

ಜೋಕು ಜೋಕು ಜೋಕಾಲಿ ಜೀಕಾಡಿದೆ
ನಿನ್ನ ಕುಳ್ಳಿರಿಸಿ ಲಾಲಿ ಹಾಡಿದೆ
ಪ್ರೀತಿಯ ಈ ಕೂಗಾಟ
ಮನಸಲಿ ಹೊಸ ಆಟ...
ಸನಿಹದಿ ನೀ ಇರಲು
ದಿನ ನಿತ್ಯ ಹೊಸ ಪಾಠ
ಹೀಗೇ ಸಾಗಲಿ..ಬದುಕಿನ ಹೋರಾಟ
ಹೀಗೇ ಸಾಗಲಿ..ಪ್ರೀತಿಯ ಪರಿಪಾಠ.

ಬಾನಿಂದ ಜಾರಿಬಂದ
ಕಾಮನ ಬಿಲ್ಲಲಿ ನಿನ್ನ ಕಂಡು
ನಾನು ನನ್ನೇ ಮರೆತೆನು!
ಯುಗವೊಂದು ಸಾಗದು
ದಿನವಿಂದು ಓಡದು
ನೀನು ಇದ್ದರೆ ಈ ಬಾಳು ಬರಡು
ಅಂತ ಎಂದೂ ಅನಿಸದು.

ದುನಿಯಾ ದುನಿಯಾ
ನನ್ನ ದುನಿಯಾ...
ನೀನೇ ಕೇಳು ನನ್ನ ಇನಿಯ
ದುನಿಯಾ ದುನಿಯಾ ನನ್ನ ದುನಿಯಾ
ಬಾರೋ ನೀನು ನನ್ನ ಸನಿಹ.

ಈ ಹೃದಯವ ತೆರೆದಿಟ್ಟೆನು
ನಿನಗಾಗಿಯೇ ಮುಡಿಪಿಟ್ಟೆನು
ಈ ಮನಸನು ಬರೆದಿಟ್ಟೆನು
ನಿನಗಾಗಿಯೇ ಕಾದಿಟ್ಟೆನು.
ಕದ್ದು ಕದ್ದು ನೋಡಿದಳು
ಕಣ್ಣಲ್ಲೇ ಉಳಿದಳು
ಎದ್ದ ಘಳಿಗೆ ಕಾಡಿದಳು
ಮನಸಲ್ಲೇ ಉಳಿದಳು
ಯಾರವಳು ನನ್ನವಳು
ಅವಳು ಎಲ್ಲಿಹಳು?!
ಏತಕ್ಕೆ ನನ್ನಲ್ಲಿ ಅವಳು ಬಂದಿಹಳು?!

ಹುಡುಗಿ ಓ ಹುಡುಗಿ
ನೀನಿಲ್ಲದೆ ಹೇಗಿರಲಿ?!
ಬೆಡಗಿ ಓ ಬೆಡಗಿ
ನಿನ್ನ ನೆನಪು ನನಗಿರಲಿ.

ಕಣ್ಣಲ್ಲೇ ಕಣ್ಣಲ್ಲೇ ಸೆಳೆಯುವೆ ಏತಕ್ಕೆ?
ಉಸಿರಲ್ಲೇ ಉಸಿರಲ್ಲೇ ನುಡಿಯುವೆ ಏತಕ್ಕೆ?!
ಮನಸನು ಬಿಚ್ಚಿ ಒಮ್ಮೆ ಹೇಳ ಬಾರದೆ!
ಕನಸನು ಅದರಲಿ ತುಂಬಿ ಬಾಯಿ ಬಿಟ್ಟರೆ ಆಗದೇ!
ನನ್ನ ಒಲವು ನಿನಗೇ ಮೀಸಲು ಅನ್ನ ಬಾರದೇ?!

ಅರೆಕ್ಷಣ ನನ್ನನು ಮರೆತೇ ಹೋದೆನು
ಬದುಕಿನ ಪುಟವನು ತೆರೆದು ನಿಂತೆನು
ಅವಳ ಕಿರುನಗೆ ಹುಚ್ಚೇ ಹಿಡಿಸಿತು
ಅವಳ ಮುಗುಳ್ನಗೆ ನೋವೇ ಮರೆಸಿತು
ತಂಪು ಗಾಳಿಗೆ ಮನಸು ಓಡಿತು
ಇಂಪು ಗೀತೆಗೆ ಕನಸು ಜಾರಿತು!

ಮನದ ಮುಗಿಲಲ್ಲಿ ತೇಲಿದೆ ಹೊಸ ಕನಸು
ಅವಳೇ ಬೇಕು ಎಂದಿದೆ ನನ್ನ ಮನಸು
ಏತಕಿ ನನ್ನಲಿ ಹೊಸಬಗೆ ಈ ದಿನ
ಅವಳನೇ ನೋಡುತ ನಲಿದೆನು ಈ ಕ್ಷಣ
ಏಕಾಂತವ ಮರೆಸಿ ಹೋದಳು!
ಪ್ರೀತಿಯ ಭ್ರಾಂತಿಯ ಹರಸಿ ಹೋದಳು.

ಓ ಹೂವೇ ನೀ ನಾಚದಿರು
ಓ ಹೂವೇ ನೀ ಬಾಡದಿರು
ಮನಸಿನ ಅಲೆ ಮೇಲೆ ಪ್ರೀತಿಯ ಕಂಪು
ಬೀರಿ ನೀನು ಹೋಗದಿರು,
ಮನಸಿನ ಪುಟದಲ್ಲಿ ಪ್ರೀತಿಯ ಪದ
ಬರೆದು ನೀನು ಅಳಿಸದಿರು-
ಈ ಜೀವದ, ಅಪರೂಪದ
ಒಲವನ್ನು ನೀನು ಮರೆಯದಿರು
ನೀ ನನ್ನ ಹೀಗೆ ಕಾಡದಿರು.

ಓ ಮನಸೇ ಓಹೋ ಮನಸೇ
ಏಕೆ ಸುಮ್ಮನೇ ಕೊರಗುವೆ?
ಓ ಮನಸೇ ಪ್ರಿಯ ಮನಸೇ
ಇಷ್ಟು ಬೇಗನೇ ಕರಗುವೆ?!
ಅರ್ಥವಿಲ್ಲದೇ ವ್ಯರ್ಥವಾಗದೇ
ಕಾಲವನು ನೀ ಕಳೆಯುವೆ!

ನಾ ಸೋತೆನು ನಿನ್ನ ಈ ಅಂದಕೆ
ಬೆರಗಾದೆನು ನಿನ ಈ ಚೆಂದಕೆ-
ಏಕೆಂದು ಕಾರಣ ನೀ ಕೇಳ ಬೇಡ
ಸುಳ್ಳೆಂದು ಇದನು ನೀ ಹೇಳ ಬೇಡ
ಅನುಕ್ಷಣ ಈ ತನುಮನ ಪ್ರತಿಕ್ಷಣ ಬೇಡಿದೆ ನಿನ್ನನ್ನ!

ಇರಬೇಕು ಇರಬೇಕು ನಿನ್ನ ಹಾಗೆ ಇರಬೇಕು
ಇರಬೇಕು ಇರಬೇಕು ನಿನ್ನ ಜೊತೆಗೆ ಇರಬೇಕು
ಯಾವ ಮೋಡಿ ಮಾಡದೇನೇ ಮನಸಿನಲ್ಲಿ ಉಳೀಬೇಕು-
ನನ್ನ ಪ್ರೀತಿ ಮಾಡದೇನೇ ಹೋಗದ ಹಾಗೆ ಇರಬೇಕು.

ಸಿಕ್‌ ಸಿಕ್ಕಲ್ಲಿ ಸಿಕ್ಕೋದಿಲ್ಲ-
ಕಂಡ್‌ ಕಂಡಲ್ಲಿ ದಕ್ಕೋದಿಲ್ಲ
ಹುಡುಗಿ ಮನಸು ಅಂದ್ರೆ ಸುಮ್ನೇ ಅಲ್ಲ!
ಕೇಳಿದ್‌ ಕೂಡ್ಲೇ ಕೊಟ್‌ ಬಿಡೊಲ್ಲ
ಕೇಳದೇ ಇದ್ರೆ ಬಿಟ್‌ ಬಿಡೊಲ್ಲ
ಹುಡುಗಿ ಕನಸು ಅಂದ್ರೆ ಸುಮ್ನೇ ಅಲ್ಲ.

ಆಸೆ ಬಂದ್ರೆ ತಬ್ಕೊಳ್ಳೊಲ್ಲ
ಮುತ್ತಿಟ್ರೆ ಸಹಿಸೋದಿಲ್ಲ-
ಮೋಜು-ಮಸ್ತಿ ಮಾಡೋಕ್ ಒಪ್ಪೊಲ್ಲ
ಯಾರ್‌ ಯಾರ್‌ ಜೊತೆಗೋ ಸುತ್ತೋದಿಲ್ಲ
ಯಾಕಿಂಗಂದ್ರೆ ಹೇಳೋದಿಲ್ಲ
ಹುಡುಗೀರ್‌ ಮನ್ಸು ಅರ್ಥ ಆಗೊಲ್ಲ.

ಇರಲಾರೆ ಇರಲಾರೆ ನಿನ್ನ ಬಿಟ್ಟು ನಾನು-
ಬಿಡಲಾರೆ ಬಿಡಲಾರೆ ಕೈಯ್ಯಕೊಟ್ಟು ನಾನು...
ನನ್ನ ಬಾಳಿನಲ್ಲಿ ಒಮ್ಮೆ ನೀನು ಬಂದ ಮೇಲೆ
ನನ್ನ ಮನಸಿನಲ್ಲಿ ಒಮ್ಮೆ ನಿನ್ನ ಕಂಡ ಮೇಲೆ.

ಕಾಲರ್‌ ಟ್ಯೂನ್‌ ಗೆಳತಿಯೇ
ಕಾಲ್‌ ಮಾಡಲೇ
ಹಲೋ ಟ್ಯೂನ್‌ ಗೆಳತಿಯೇ
ಹಲೋ ಅನ್ನಲೇ
ಹೃದಯಗಳ ಬೆಸುಗೆಗೆ ಈ ಮೊಬೈಲು
ಪ್ರೀತೀಲಿ ಹೆಣ್ಣು ಗಂಡು ಇಬ್ರೂ ಇಕ್ವಲ್ಲು!

ಕಣ್ಣಲ್ಲೇ ಕಣ್ಣಲ್ಲೇ ಕೊಲ್ಲುವೆ ಓ ನಲ್ಲೆ-
ಕುಂತಲ್ಲೇ ನಿಂತಲ್ಲೇ ಮನಸು ನಿನ್ನಲ್ಲೇ
ಇದು ಯಾಕೆ ಈ ತರಹ ಮಾತು ನಿಂತು ಹೋಗಿದೆ
ಏನೋ ಇಂಥ ಹೊಸತನ-ಮೌನ ಬಂದು ಸೇರಿದೆ-
ಇದು ಯಾಕೆ ಈ ದಿನ ಹೃದಯ ಹಾಡು ಹಾಡಿದೆ
ಯಾಕೋ ಇಂಥ ಹೊಸ ಕ್ಷಣ ನನ್ನ ಕಾಡಿ ಹೋಗಿದೆ.

ಎಂದೂ ಇಲ್ಲದ ಈ ಬಗೆ
ತಂದು ಕೊಟ್ಟೆ ಹೂ ನಗೆ-
ಎಂದೂ ಆಗದ ಅನುಭವ
ತಂದು ಕೊಟ್ಟೆ ಕಲರವ
ಪ್ರೀತಿಯ ದಾರಿಗೆ ಹೋಗದ ನನ್ನ ಮನಸನು-
ಅದಲು ಬದಲು ಮಾಡಿದೆ ಹೇಗೆ ನೀನಿನ್ನು!

ಅವಳು ಇರದೇ-
ಬಾಳಾಗಿದೆ ಬರಡು
ಹೇಳಿ ಹೋದಳು
ಈ ಪ್ರೀತಿ ಕುರುಡು.

ಹೇಗೆ ಹೇಳಲಿ ನನ್ನ ಮನದ ಆಸೆಯ
ಹೇಗೆ ತಿಳಿಸಲಿ ನಾನು,ಹೃದಯ ಭಾಷೆಯ!
ನನಗಾಗಿ ನೀನೆಂದು ನಿನಗಾಗಿ ನಾನೆಂದು-
ಮರೆಯಲಾಗದೆಂದೆಂದೂ ಪ್ರೇಮ ಸಿಂಚನ
ಏನೋ ಏನೋ ಏನೋ ನನಗೆ ಆಗಿ ಹೋಗಿದೆ
ನಿನ್ನ ಬಿಟ್ಟು ಇರದ ಹಾಗೆ, ಮನಸ್ಸಾಗಿದೆ.

ಬಾನಿನಲಿ ನಕ್ಷತ್ರಗಳು ಮೂಡುವಂಥ ವೇಳೆ-
ಹರೆಯದ ಆಸೆಗಳ ಹೊತ್ತು ತಂದಿದೆ...
ಚಂದ್ರಮನು ಜೊತೆಗೆ ಬರುವ ಸೊಬಗಲಿ
ನಾನಿರಲು,ನೀನನ್ನ ಚಂದ್ರ ಅನ್ನೋ
ನೆನಪಾಗಿದೆ-
ಈ ನಿಮಿಷ,ರಸ ನಿಮಿಷ ನೀತಂದೆ ಈ ಹರುಷ...

ಮನಸಿನ ಅಂಗಳಕೆ
ಪ್ರೀತಿಯ ʼಸುಧೆʼ ಹರಿಸಿ
ಕನಸಿನ ತೊಟ್ಟಿಲಲಿ
ನಿನ್ನನು ಕುಳ್ಳಿರಿಸಿ
ನಾ ಹಾಡೋ ಜೋಗುಳದಿ
ನಿನ್‌ ಹೆಸರೇ ಉಚ್ಛರಿಸಿ
ಕಳೆಯುವ ಪ್ರತಿ ನಿಮಿಷ
ಶುಭವನ್ನೇ ನಾ ಹರಸಿ.

ಮರೀಚಿಕೆ ಮರೀಚಿಕೆ
ನಿನ್ನಲ್ಲೇ ನಾ ಹಂಚಿಕೆ
ಮರೀಚಿಕೆ ಮರೀಚಿಕೆ
ಪ್ರೀತಿಯದೇ ಈ ಸಂಚಿಕೆ
ಯಾರೇ ಎದುರಾಗಲಿ,
ನಿನ್ನನ್ನೇ ಹಂಬಲಿಸುವೆ.

He: ಈ ಸುಂದರ ತಂಪು ಬೆಳದಿಂಗಳ
       ನಿನ್ನ ಕಂಗಳಲಿ ನಾನು ಕಂಡೆ ನಿನ್ನ ಮನಸ
She:ಈ ಸುಂದರ ದೇವ ಮಂದಿರ
       ಗರ್ಭಗುಡಿಯಲಿ ಕಂಡೆ ನಿನ್ನ ಸೊಗಸು
He:  ನೀ ಇರದೇ ನಾನು ಇಲ್ಲ ನೀ ಬರದೇ ಏನೂ ಇಲ್ಲ-
She: ನೀನಿರದೇ ಜೀವ ಇಲ್ಲ ನೀ ಬರದೇ ನೋವೇ ಎಲ್ಲ...
He: ನೀನೇ ನೀನೇ ಪಾರಿಜಾತ
She :ನೀನೇ ನನ್ನ ಪ್ರಾಣದಾತ
He: ನೀನೇ ನೀನೇ ಹಂಸಗೀತೆ
She: ನೀನೇ ನನ್ನ ಭಾವಗೀತೆ
He: ನೀನೇ ನೀನೇ ಸರ್ವಸ್ವ
She: ನೀನೇ ನನ್ನ ಸಂದೇಶ
He: ನೀನೇ ನೀನೇ ಸೌಂದರ್ಯ
She: ನೀನೇ ನನ್ನ ಆಂತರ್ಯ
 He: ನೀನೇ ನೀನೇ ಸಿದ್ದಾಂತ
She: ನೀನೇ ನನ್ನ ವೇದಾಂತ
He:  ನೀನೇ ನೀನೇ ಸಾಹಿತ್ಯ

She: ನೀನೇ ಬದುಕಿನ ಲಾಲಿತ್ಯ.

No comments:

Post a Comment