Sunday, July 19, 2020

“ನಲಿ-ಕಲಿ ಮಾದರಿಯಲ್ಲಿ ಇಂಗ್ಲೀಷ್ ವಿಷಯದ ಬೋಧನೆ.“



                         ಕರ್ನಾಟಕ ಸರ್ಕಾರವು ಶಿಕ್ಷಣ ಕ್ಷೇತ್ರದ ಗುಣಾತ್ಮಕ ಅಭಿವೃದ್ಧಿಗಾಗಿ ಹಮ್ಮಿಕೊಂಡ ಹಲವಾರು ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ, ಪ್ರಸಕ್ತ 2019-2020 ನೇ ಶೈಕ್ಷಣಿಕ ಸಾಲಿನಲ್ಲಿ ಜಾರಿಗೆ ತಂದ ವಿನೂತನ ಕಾರ್ಯಕ್ರಮಗಳಲ್ಲಿ ರಾಜ್ಯದ ಆಯ್ದ ಶಾಲೆಗಳ ನಲಿ-ಕಲಿ ಕೊಠಡಿಗಳಲ್ಲಿ ನಲಿ-ಕಲಿ ಮಾದರಿಯ ಬೋಧನಾ ವಿಧಾನವನ್ನು ಇಂಗ್ಲೀಷ್‌ ಭಾಷೆಗೂ ಅಳವಡಿಸಿರುವುದೂ ಒಂದಾಗಿದೆ. ಇದರ ಕಾರ್ಯಾನುಷ್ಠಾನಕ್ಕಾಗಿ ಆಯಾ ಆಯ್ದ ಶಾಲೆಯ ನಲಿ-ಕಲಿ ತರಗತಿ ನಿರ್ವಹಿಸುವ ಶಿಕ್ಷಕರನ್ನುತರಬೇತಿಗೊಳಿಸುವ ಕ್ರಿಯಾತ್ಮಕ ಮಾರ್ಗವನ್ನು ಅನುಸರಿಸಿ, ತನ್ಮೂಲಕ ಇಂಗ್ಲೀಷ್‌ ಭಾಷೆಯ ಪ್ರಮುಖ ಮೂಲ ಭಾಷಾ ಕೌಶಲ್ಯಗಳನ್ನು ಪ್ರಾಥಮಿಕ ಶಾಲೆಯ ಶಿಕ್ಷಣದ ಎಳೆವೆಯಿಂದಲೇ ಮಕ್ಕಳಲ್ಲಿ ಒಡಮೂಡಿಸುವ ಆಲೋಚನೆ ಸ್ತುತ್ಯರ್ಹವಾಗಿರುತ್ತದೆ.

      ಈ ಒಂದು ನಿಟ್ಟಿನಲ್ಲಿ ಆಯ್ಕೆಯಾಗಿ,ನಲಿ-ಕಲಿ ಇಂಗ್ಲೀಷ್‌ ಭಾಷೆಯ ಬೋಧನೆಯನ್ನು,ನಲಿ-ಕಲಿ ಬೋಧನಾ ವಿಧಾನವನ್ನು ಅನುಸರಿಸುತ್ತಿರುವ ಶಾಲೆಗಳಲ್ಲಿ ನಮ್ಮ ಸ.ಮಾ.ಹಿ.ಪ್ರಾ.ಶಾಲೆ ಅಗಳಕೇರಾವೂ ಒಂದು. ಒಂದನೇ ಹಂತದ ಈ ಇಂಗ್ಲೀಷ್‌ ನಲಿ-ಕಲಿ ವಿಧಾನದ ತರಬೇತಿಯ ಉದ್ದೇಶಗಳು ಮತ್ತು ಪ್ರಾಮುಖ್ಯತೆಯನ್ನು ಈ ರೀತಿಯಾಗಿ ಸಮೀಕರಿಸ ಬಹುದಾಗಿದೆ.

* ನಲಿ-ಕಲಿಯಲ್ಲಿ ಇಂಗ್ಲೀಷ್‌ ವಿಷಯ ಬೋಧನೆಯ ಬಗ್ಗೆ ಸಮಗ್ರ ಪರಿಚಯವನ್ನು ಮಾಡಿಕೊಡುವುದು.
* ನಲಿ-ಕಲಿ ಇಂಗ್ಲೀಷ್‌ ತರಗತಿಯಲ್ಲಿ ಬಳಸಬೇಕಾದ ವಿಶೇಷ ಪದ  ಮತ್ತು ಪಾರಿಭಾಷಿಕ ಪದಗಳನ್ನು ಶಿಕ್ಷಕರಿಗೆ ಪರಿಚಯ ಮಾಡಿಕೊಡುವುದು.
* ವಿವಿಧ ಚಟುವಟಿಕೆಗಳು, ಲೋಗೋ, ರೈಮ್ಸ್‌, ಭಾಷಾ-ಆಟಗಳು, ಅವುಗಳ ಸಂಖ್ಯೆ ಮತ್ತು ನಿರ್ವಹಣೆಯ ಉದ್ದೇಶಗಳನ್ನು ಮನವರಿಕೆ ಮಾಡಿಸುವುದು.
* ದಾಖಲೆಗಳ ನಿರ್ವಹಣೆಯ ಬಗ್ಗೆ ಮಾಹಿತಿ ನೀಡುವುದು.
* ತರಗತಿ ನಿರ್ವಹಣೆಯ ಕ್ರಮವನ್ನು ಪರಿಚಯ ಮಾಡಿಸಿ ಶಿಕ್ಷಕರು ಸಕ್ರೀಯರಾಗುವಂತೆ ಸಶಕ್ತಗೊಳಿಸುವುದು.
* ಮೈಲಿಗಲ್ಲು ಮತ್ತು ಮೆಟ್ಟಿಲುಗಳ  ಪರಿಚಯವನ್ನು ಮಾಡಿಕೊಡುವುದು.
* ಚಟುವಟಿಕೆಗಳಿಗೆ ಅನುಗುಣವಾಗಿ ಗುಂಪು ತಟ್ಟೆಗಳಲ್ಲಿ ಸಾಗುವ, ವಿದ್ಯಾರ್ಥಿಗಳ ಕಲಿಕಾ ಚಲನೆಯ ಕ್ರಮವನ್ನು ಅಮೂಲಾಗ್ರವಾಗಿ ಪರಿಚಯ ಮಾಡಿಕೊಡುವುದು.

                 ಸರ್ಕಾರಿ ನಲಿ-ಕಲಿ ವಿಧಾನದ ಕಲಿಕಾ ಪ್ರಕ್ರಿಯೆಯಲ್ಲಿ ಇಂಗ್ಲೀಷ್‌ ಕಲಿಕೆಯನ್ನು ಅದೇ ಮಾರ್ಗವನ್ನು ಅನುಸರಿಸುವ ಮೂಲಕ ಕಲಿಸುವ ವಿಧಾನವು ತನ್ನದೇ ಆದ ವಿಶೇಷ ಮಾನ್ಯತೆಯನ್ನು ಪಡೆದಿದೆ.

                ಸರ್ಕಾರಿ ಶಾಲೆ ನಮ್ಮ ಹೆಮ್ಮೆಯೆಂಬುದರ ಮನವರಿಕೆ ಮಾಡಲು ಇದೂ ಒಂದು ಅವಕಾಶವಾಗಿದೆ. ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳಲ್ಲಿ ಅಂತರರಾಷ್ಟ್ರೀಯ ಭಾಷೆಯಾದ ಇಂಗ್ಲೀಷ್‌ ನ ಮಹತ್ವವನ್ನು ಪ್ರಾರಂಭಿಕ ಹಂತದಲ್ಲಿಯೇ ಮಕ್ಕಳಿಗೆ ತಿಳಿಸಿಕೊಡಲು ಉಪಯುಕ್ತವಾದ ವೇದಿಕೆ ಇದಾಗಿದೆ. ತ್ವರಿತ ಗತಿಯಲ್ಲಿ ಸಾಗುತ್ತಿರುವ ಜಗತ್ತಿನ ಬೆಳವಣಿಗೆಯ ವೇಗಕ್ಕೆ ಮಕ್ಕಳನ್ನು ಅಣಿಗೊಳಿಸುವ ಪ್ರಯತ್ನ ಇದರಿಂದ ಕಿಂಚಿತ್ತಾದರೂ ಸುಲಭವಾಗಿದೆ ಎನ್ನಬಹುದು.

* ನಲಿ-ಕಲಿಯಲ್ಲಿ ಇಂಗ್ಲೀಷ್‌ ವಿಷಯದ ಪರಿಚಯದಿಂದ ಮಕ್ಕಳಲ್ಲಿ ಕಲಿಕಾ ಆಸಕ್ತಿಯನ್ನು ಹೆಚ್ಚಿಸಬಹುದಾಗಿದೆ.
* “ಆಟದೊಂದಿಗೆ ಪಾಠ” ಎಂಬ ಸಿದ್ಧಾಂತಕ್ಕೆ ಇದು ಇಂಬು ನೀಡುತ್ತದೆ.
* ಸರಳವಾಗಿ ಇಂಗ್ಲೀಷ್‌ ಆಲಿಸುವ ಮತ್ತು ಮಾತನಾಡುವಿಕೆಯ ಕೌಶಲ್ಯವನ್ನು ಬೆಳೆಸುವುದಾಗಿದೆ.
* ಇಂಗ್ಲೀಷ್‌ ಬರವಣಿಗೆ ಮತ್ತು ಓದುವಿಕೆಯ ಪದ್ಧತಿಯನ್ನು ಮನದಟ್ಟು ಮಾಡಿಸುವ ಮಾರ್ಗೋಪಾಯ ಇದಾಗಿದೆ.

               ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಒಂದನೇ ಏಣಿಯಲ್ಲಿ ಮಾತ್ರ ನಲಿ-ಕಲಿಯ ಪಾರಂಪರಿಕ ವಿಧಾನದಂತೆಯೇ ಇಂಗ್ಲೀಷ ವಿಷಯ ಬೋಧನೆಯನ್ನು ನಮ್ಮ ಶಾಲೆಯಲ್ಲಿ ಇಲಾಖೆಯ ನಿರ್ದೇಶನದಂತೆ ಕೈಗೊಳ್ಳಲಾಗುತ್ತಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಶಾಲೆಗಳ ಎಲ್ಲಾ ನಲಿ-ಕಲಿ ಕೊಠಡಿಗಳಿಗೂ ಹಾಗೂ  ಎರಡನೇ ಮತ್ತು ಮೂರನೇ ಏಣಿಗಳಿಗೂ ವಿಸ್ತರಿಸುವುದು ಸೂಕ್ತ ಎನಿಸುತ್ತದೆ. ಈಗಾಗಲೇ ಸರ್ಕಾರದ ವತಿಯಿಂದ ಸರಬರಾಜಾದ, ಸಾರ್ವಜನಿಕ ಶಿಕ್ಷಣ ಇಲಾಖೆ ಕೊಪ್ಪಳದ ಮೂಲಕ ವಿತರಿಸಿದ ಕಲಿಕಾ ಸಾಮಗ್ರಿಗಳನ್ನು ಬಳಸಿಕೊಂಡು ಪಾಠಬೋಧನೆಯ ಸಂದರ್ಭದಲ್ಲಿ ನಮ್ಮ ಶಾಲೆಯ ನಲಿ-ಕಲಿ ಒಂದನೇ ಕೊಠಡಿಯಲ್ಲಿ ನಲಿ-ಕಲಿ ವಿಧಾನದ ಮೂಲಕವೇ ಇಂಗ್ಲೀಷ್‌ ಕಲಿಕೆಯನ್ನು ಮಕ್ಕಳಲ್ಲಿ ಉಂಟು ಮಾಡುವ ಪ್ರಯತ್ನವನ್ನು ಮಾಡಲಾಗಿದೆ. ಪ್ರಮುಖ ಭಾಷಾ ಕೌಶಲ್ಯಗಳಾದ LISTENING & UNDERSTANDING, SPEAKING, READING, WRITING ಗಳನ್ನು ಮಕ್ಕಳಿಗೆ ನಿರಂತರ ಅಭ್ಯಾಸ, Drilling, Repeatation, ಪಾಠೋಪಕರಣಗಳ ವೀಕ್ಷಣೆಯ ಮೂಲಕ, ರಾಗ ಬದ್ಧವಾಗಿ Rhymes ಗಳನ್ನು ಹಾಡಿಸುವ ಮೂಲಕ ನಲಿ-ಕಲಿ ಇಂಗ್ಲೀಷ್‌ ಬೋಧನಾ ಪ್ರಕ್ರಿಯೆಯನ್ನು ಮಾಡುವ ಮೂಲಕ ಉದ್ದೇಶಗಳ ಸಾಕಾರಗೊಳಿಸುವ ಪ್ರಯತ್ನವನ್ನು ಮಾಡಲಾಗಿದೆ. ಮಕ್ಕಳನ್ನು ಕಲಿಕೆಯಲ್ಲಿ ಸಕ್ರೀಯರಾಗಿ ತೊಡಗಿಸಿಕೊಳ್ಳಲೂ ಉತ್ತಮ ರೀತಿಯಲ್ಲಿ ಸಾಧ್ಯವಾಗಿದೆ.

No comments:

Post a Comment