Sunday, July 19, 2020

ಫಲ ಶೃತಿ.


                                                        ಪುಷ್ಟಿದಾಯಕ ಹಣ್ಣು "ಕಿತ್ತಳೆ"
                                            --------------------------------------------------------

  ಕಿತ್ತಳೆ ಹಣ್ಣು ಜಗತ್ತಿನಾದ್ಯಂತ ದೊರೆಯುವ ಸಿಟ್ರಸ್ ಜಾತಿಯ ಫಲವಾಗಿದೆ.ರಸಪೂರಿತ ಹಾಗೂ ರುಚಿಕರ ಹಣ್ಣಾಗಿರುವ ಇದು ಅತ್ಯಂತ ಪುಷ್ಟಿದಾಯಕ ಹಣ್ಣುಗಳಲ್ಲಿ ಒಂದಾಗಿದೆ.12ಮೀಟರ್ ಗಳಷ್ಟು ಎತ್ತರ ಬೆಳೆವ ಕಿತ್ತಳೆ ಮರವು 12 ಸೆಂಟಿಮೀಟರ್ ನಷ್ಟು ವ್ಯಾಸವಿರುವ ಕಿತ್ತಳೆ ಹಣ್ಣನ್ನು ಕೊಡುಗೆ ಕೊಡುತ್ತದೆ.ಸಡಿಲವಾದ ಸಿಪ್ಪೆಯನ್ನು ಹೊಂದಿದ ಹಣ್ಣುಗಳು ನಮ್ಮ ದೇಶದಲ್ಲಿ ಸಾಮಾನ್ಯವಾಗಿ ನಾಗ್ಪುರ್,ಪುಣೆ,ಕೊಡಗು,ಅಸ್ಸಾಂಗಳಲ್ಲಿ ಬೆಳೆಯಲಾಗುತ್ತದೆ.

ಆಹಾರ-ಆರೋಗ್ಯ ಅಂಶಗಳು:-
--------------------------------------------------------
 ಮಲಬದ್ಧತೆಯ ಚಿಕಿತ್ಸಾ ವಿಧಾನದಲ್ಲಿ ಕಿತ್ತಳೆ ರಸವು ಬಹುಮುಖ್ಯವಾಗಿದೆ.ರಾತ್ರಿ ಮಲಗುವ ಮುನ್ನ ಹಾಗೂ ಬೆಳಿಗ್ಗೆ ಎದ್ದಕೂಡಲೇ ಒಂದೆರಡು ಕಿತ್ತಳೆಹಣ್ಣು ಸೇವಿಸುವುದರಿಂದ ಮಲಕೋಶದ ಚಟುವಟಿಕೆಗಳು ಚುರುಕುಗೊಂಡು,ಮಲಬದ್ಧತೆಯ ತೊಂದರೆ ನೀಗುತ್ತದೆ.

ಕಿತ್ತಳೆಯು ಸುಣ್ಣ ಹಾಗೂ 'ಸಿ'ಜೀವಸತ್ವಗಳಿಂದ ಸಮೃದ್ಧವಾಗಿರುವುದರಿಂದಾಗಿ ಮೂಳೆ ಹಾಗೂ ಹಲ್ಲು ಸಂಬಂಧಿಸಿದ ಕಾಯಿಲೆಗಳ ನಿವಾರಣೆಯಲ್ಲಿ ಅತ್ಯುಪಯುಕ್ತವಾಗಿದೆ.

ದೀರ್ಘಕಾಲಿಕ ಅಜೀರ್ಣದ ಚಿಕಿತ್ಸೆಯಲ್ಲಿ ಕಿತ್ತಳೆಯು ಉತ್ತಮ ಆಹಾರ ಪಥ್ಯವೆಂದು ಪರಿಗಣಿಸಲ್ಪಟ್ಟಿದೆ.ಪಚನಕ್ರಿಯೆಗೆ ಅಗತ್ಯ ಪೌಷ್ಟಿಕಾಂಶಗಳನ್ನು ಒದಗಿಸುವ ಮೂಲಕ ಜೀರ್ಣಾಂಗಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ.ಹಸಿವನ್ನು ಹೆಚ್ಚಿಸುತ್ತದೆ.ಕರುಳಿನ ಸಹಾಯಕಾರಿ ದಂಡಾಣುಗಳು ಉತ್ಪತ್ತಿಯಾಗಲು ನೆರವಾಗುತ್ತದೆ.

ಮೊಡವೆಗಳಿಂದಾಗುವ ಆಕ್ನೆಯಂತಹ ಚರ್ಮವ್ಯಾಧಿಗಳ ಚಿಕಿತ್ಸೆಯಲ್ಲಿ ಕಿತ್ತಳೆ ಹಣ್ಣಿನ ಸಿಪ್ಪೆಯು ಉಪಯೋಗಕಾರಿಯಾಗಿದೆ.ಸ್ವಲ್ಪ ನೀರಿನೊಂದಿಗೆ ಹಣ್ಣಿನ ಸಿಪ್ಪೆಯನ್ನು ಅರೆದು ಮೊಡವೆಗಳ ಮೇಲೆ ಲೇಪಿಸಬೇಕು.
ಮಳೆಯ ನೀರಿನಲ್ಲಿ ಸಿಪ್ಪೆಯನ್ನು ಅರೆದರೆ ಹೆಚ್ಚಿನ ಪರಿಣಾಮ ಕಾಣಬಹುದು.

ಜೇನುತುಪ್ಪವನ್ನು ಬೆರೆಸಿ ಸಿಹಿಯಾಗಿಸಿದ ಕಿತ್ತಳೆರಸವು ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳಿಗೆ ಅತ್ಯುತ್ತಮ ಪರಿಹಾರವಾಗಿದೆ.

ಒಂದು ಚಿಟಿಕೆ ಉಪ್ಪು ಹಾಗೂ ಒಂದು ಚಮಚದಷ್ಟು ಜೇನುತುಪ್ಪವನ್ನು ಬೆರೆಸಿದ ಕಿತ್ತಳೆಯ ರಸವು ಕ್ಷಯ,ಅಸ್ತಮಾ,ನೆಗಡಿ ಹಾಗೂ ಕೆಮ್ಮುಗಳಂಥ ವ್ಯಾಧಿಗಳಲ್ಲಿ ಕಾಣಿಸಿಕೊಳ್ಳುವ ಕಫವನ್ನು ಹೊರಹಾಕುವಲ್ಲಿನ ತೊಂದರೆಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆಯಾಗಿದೆ.

ಕಿತ್ತಳೆಹಣ್ಣಿನ ನಿಯಮಿತ ಸೇವನೆಯು ನೆಗಡಿ,ಶ್ಲೇಷ್ಮ ಜ್ವರ,ರಕ್ತಸ್ರಾವಗಳಂತಹ ಕಾಯಿಲೆಗಳನ್ನು ತಡೆಗಟ್ಟಲು ರಾಮಬಾಣವಾಗಿದೆ.

ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಕುಂದಿಸುವ ಎಲ್ಲ ಬಗೆಯ ಜ್ವರಗಳ ಉಪಚಾರದಲ್ಲೂ ಕಿತ್ತಳೆ ರಸವು ಅತ್ಯುತ್ತಮವೆನಿಸಿದೆ.ಇದು ರೋಗಿಯಲ್ಲಿ ಶಕ್ತಿಯನ್ನು ತುಂಬಿ ಮೂತ್ರ ವಿಸರ್ಜನೆಯ ಪ್ರಮಾಣವನ್ನು ಹೆಚ್ಚಿಸುವ ಮೂಲಕ ಸೋಂಕುಗಳ ವಿರುದ್ಧ ಹೋರಾಡುವ ಪ್ರತಿರೋಧಕ ಶಕ್ತಿಯನ್ನು ಅಧಿಕಗೊಳಿಸುತ್ತದೆ.

ಎದೆಯ ಹಾಲಿನಿಂದ ವಂಚಿತರಾದ ಶಿಶುಗಳಿಗೆ ಕಿತ್ತಳೆ ರಸವು ಅತ್ಯುತ್ತಮ ಆಹಾರವಾಗಬಲ್ಲದೆಂದು ಪರಿಗಣಿಸಲಾಗಿದೆ.

ಕಿತ್ತಳೆಯಿಂದ ಜಾಮ್ ಮುರಬ್ಬಗಳನ್ನು ತಯಾರಿಸಲಾಗುತ್ತದೆ.ಕಿತ್ತಳೆ ಹಣ್ಣಿನ ಬೀಜಗಳ ತೈಲವನ್ನು ಸುವಾಸನಾ ಹಾಗೂ ಸುಗಂಧ ದ್ರವ್ಯಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.ಕಿತ್ತಳೆಯನ್ನು ನೇರವಾಗಿ ಫಲದ ರೂಪದಲ್ಲಿ ಸೇವಿಸಬಹುದು.ಇಲ್ಲವೇ ಸಂಸ್ಕರಿಸಿದ ರಸವನ್ನು ಸೇವಿಸಬಹುದು. ಹಣ್ಣಿನಲ್ಲಿರುವ ಸಿ ಜೀವಸತ್ವದ ಅಂಶವು ಅಂಗಾಂಶಗಳು,ಆಹಾರದಲ್ಲಿರುವ ಸುಣ್ಣದಂಶವನ್ನು ಹೀರಿಕೊಳ್ಳುವಲ್ಲಿ ಸಹಾಯಕಾರಿಯಾಗಿದೆ.

ಬಹುಪಯುಕ್ತ ಕಿತ್ತಳೆಯನ್ನು ಆಹಾರವಾಗಿ ಆರೋಗ್ಯಕ್ಕಾಗಿ ಆಶ್ರಯಿಸಿದರೆ ತಪ್ಪಿಲ್ಲ.

No comments:

Post a Comment