ಸಂತಸ-ಸಂಭ್ರಮದ “ಮಕ್ಕಳ
ವಿಜ್ಞಾನ ಹಬ್ಬ”
2019-2020 ನೇ ಶೈಕ್ಷಣಿಕ
ಸಾಲಿನಲ್ಲಿ ಮಕ್ಕಳ ಕಲಿಕೆಯನ್ನು ಆಸಕ್ತಿದಾಯಕವಾಗಿ ಉದ್ದೀಪನಗೊಳಿಸುವ, ಸಂತಸದಾಯಕವಾದ ಕಲಿಕಾ ವಾತಾವರಣವನ್ನು
ವಿನೂತನಗೊಳಿಸುವ, ಹಬ್ಬದ ಸಂಭ್ರಮಾಚರಣೆಯನ್ನು ಶಾಲೆಗಳಲ್ಲಿ ನಿರ್ಮಿಸುವ, ತನ್ಮೂಲಕ ಗುಣಾತ್ಮಕ ಶಿಕ್ಷಣವನ್ನು
ಸಾಕಾರಗೊಳಿಸುವ ನಿಟ್ಟಿನಲ್ಲಿ ಆಯೋಜಿಸಿದ ವಿಶಿಷ್ಟವಾದ ಕಾರ್ಯಕ್ರಮವೇ “ಮಕ್ಕಳ ವಿಜ್ಞಾನ ಹಬ್ಬ”.
ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವನೆಯನ್ನು ಮೂಡಿಸುವ, ಕ್ರಿಯಾತ್ಮಕವಾಗಿ ಮಕ್ಕಳನ್ನು ವೈಜ್ಞಾನಿಕ
ಚಿಂತನೆಯಲ್ಲಿ ತೊಡಗಿಸುವುದರೊಂದಿಗೆ ಹಲವು ಚಟುವಟಿಕೆಗಳನ್ನು ಸುಸಜ್ಜಿತವಾಗಿ ಪೂರ್ವ ನಿಯೋಜಿಸಿಕೊಂಡು,
ಮಕ್ಕಳಲ್ಲಿ ವಿಜ್ಞಾನ ಕಲಿಕೆಗೆ ಹೆಚ್ಚಿನ ಇಂಬು ನೀಡಲೋಸುಗ ಈ ಬಗೆಯ ಹಬ್ಬದ ವಾತಾವರಣವು ಶಾಲೆಗಳಿಗೆ
ಅಗತ್ಯವೆಂಬುದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶಯವಾಗಿರುವ ವಿಚಾರವು ಅತ್ಯಂತ ಮನೋಜ್ಞವಾಗಿದೆ. ಸಾರ್ವಜನಿಕ
ಶಿಕ್ಷಣ ಇಲಾಖೆ, ಸಮಗ್ರ ಶಿಕ್ಷಣ-ಕರ್ನಾಟಕ, ಭಾರತ ಜ್ಞಾನ ವಿಜ್ಞಾನ ಸಮಿತಿ ಕರ್ನಾಟಕದ ಸಮನ್ವಯದಲ್ಲಿ
“ಪ್ರಶ್ನೆಯು ಪ್ರಜ್ಞೆಯಾಗಲಿ!” ಎಂಬ ಧ್ಯೇಯ ವಾಕ್ಯದೊಂದಿಗೆ ಮಕ್ಕಳ ವಿಜ್ಞಾನ ಹಬ್ಬ ಎಂಬ ವಿಶಿಷ್ಟ
ಕಾರ್ಯಕ್ರಮವನ್ನು ಈ ವರ್ಷ ಎಲ್ಲಾ ಜಿಲ್ಲೆಗಳ ಆಯ್ದ
ಸರ್ಕಾರಿ ಶಾಲೆಗಳಲ್ಲಿ ಮುಖ್ಯವಾಗಿ 6 ರಿಂದ 8ನೇ ತರಗತಿಯ ವಿದ್ಯಾರ್ಥಿಗಳನ್ನು ಕೇಂದ್ರವಾಗಿಟ್ಟುಕೊಂಡು
ಸಂಘಟಿಸಲಾಗಿದೆ. ಮೂರು ಹಂತಗಳಲ್ಲಿ ಈ ಹಬ್ಬವು ಅನುಷ್ಠಾನಗೊಂಡಿದ್ದು ಶ್ಲಾಘನೀಯವಾದ ಅಂಶವಾಗಿದೆ.
ಸನ್ಮಾನ್ಯ ಶ್ರೀ ಸುರೇಶ್ ಕುಮಾರ್ ಪ್ರಾಥಮಿಕ
ಮತ್ತು ಪ್ರೌಢ ಶಿಕ್ಷಣ ಸಚಿವರು ಕರ್ನಾಟಕ ಸರ್ಕಾರ ಇವರ ಅಶಯದಂತೆ “ಮಕ್ಕಳ ವಿಜ್ಞಾನ ಹಬ್ಬ”ವು ಮಕ್ಕಳಲ್ಲಿ ಸ್ಪರ್ಧೆಯನ್ನು ಏರ್ಪಡಿಸದೆ, ಹಲವು ಶಾಲೆಯ ಮಕ್ಕಳು
ಪರಸ್ಪರ ಸಹಕಾರದಿಂದ ಜೊತೆ ಜೊತೆಯಾಗಿ ಆಡುತ್ತಾ, ಹಾಡುತ್ತಾ, ವಿಜ್ಞಾನ ಮಾದರಿ, ಪ್ರಯೋಗ, ಆಟಿಕೆಗಳ
ಮೂಲಕ ಕಲಿಯಲು ಅವಕಾಶ ಕಲ್ಪಿಸುವಲ್ಲಿ, ಶಿಕ್ಷಕರೂ ಮಕ್ಕಳೊಂದಿಗೆ ಮಕ್ಕಳಾಗಿ ಪಾಲ್ಗೊಳ್ಳಲು ಸಹಕಾರಿಯಾಗಿದೆ.
ವಿಜ್ಞಾನ ಹಬ್ಬವು ಶಾಲೆಯ ಅಂಗಣಕ್ಕೆ ಸೀಮಿತಗೊಳ್ಳದೆ ಒಂದು ಗ್ರಾಮದ ಹಬ್ಬವಾಗಿ, ಇಡೀ ಸಮುದಾಯವೇ
ಭಾಗವಹಿಸುವಂತೆ ಮಾಡುವ ಇರಾದೆಯನ್ನೂ ಹೊಂದಿದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆಯ ಪ್ರಧಾನ
ಕಾರ್ಯದರ್ಶಿಗಳಾದ ಶ್ರೀ ಎಸ್.ಆರ್. ಉಮಾಶಂಕರ್ ರವರು ಅಭಿಪ್ರಾಯ ಪಡುತ್ತಾರೆ.ಇದರ ಮೂಲಕ ಉತ್ತಮ
ಸಾಂವಿಧಾನಿಕ ಮೌಲ್ಯಗಳನ್ನು ಸಮಾಜದಲ್ಲಿ ಬಿತ್ತರಿಸುವ ಸಣ್ಣ ಕನಸು ನನಸಾಗಲಿದೆ ಎಂದೂ ಆಶಯ ವ್ಯಕ್ತಪಡಿಸಿರುತ್ತಾರೆ.
ಮಕ್ಕಳ ಮನಸುಗಳಲ್ಲಿ ಆತ್ಮೀಯ ಬಾಂಧವ್ಯ,ಅಪರಿಚಿತರನ್ನು ಪರಿಚಯ ಮಾಡಿಕೊಳ್ಳುವ,ಪರಸ್ಪರ ಕಾಳಜಿ, ಇತರರಿಗಾಗಿ
ಸ್ಪಂದಿಸುವ ಮನೋಭಾವನೆಗಳು ಮಕ್ಕಳಲ್ಲಿ ಒಡಮೂಡಲೆಂಬ ಇಚ್ಛೆಯನ್ನು ಹೊಂದಿರುವುದು ಸ್ವಗತಾರ್ಹ.
# ಮಕ್ಕಳ
ವಿಜ್ಞಾನ ಹಬ್ಬ:-ಇದರ ಹಿಂದಿರುವ ಅಂಶಗಳು.
ಏಕೆ?,ಹೇಗೆ?,ಎಲ್ಲಿ?,ಎಂತು?ಹೀಗೇಕೆ?,ಹಾಗೆಯೇ
ಏಕೆ? ಮುಂತಾದ ಪ್ರಶ್ನೆಗಳಿಂದಲೇ ಆರಂಭವಾಗುವ ವಿಜ್ಞಾನ ಕಲಿಕೆಯನ್ನು ಮಕ್ಕಳಲ್ಲಿ ವೈಜ್ಞಾನಿಕ ಮನೋಧೋರಣೆಯನ್ನೂ,
ವಿಸ್ತರಿಸುವ ಕಾರ್ಯವನ್ನು ಸರ್ಕಾರ ಹಲವಾರು ಹೊಸ ಕಾರ್ಯಕ್ರಮಗಳ
ಮೂಲಕ ಸಾಕಾರಗೊಳಿಸುತ್ತಲೇ ಬಂದಿದೆ.ಈ ಪ್ರಶ್ನೆಗಳ ಪ್ರಜ್ಞೆಯುಳ್ಳ ಮಕ್ಕಳನ್ನು ನಿಂತಲ್ಲಿಯೇ ಬಿಡಲಾಗದು,ಬಿಡಲೂಬಾರದು.ಈ
ಒಂದು ವಿಕಾಸದ ಹಾದಿಯಲ್ಲಿ ಶಾಲಾ ಮಕ್ಕಳೊಂದಿಗೆ ಶಿಕ್ಷಕರು, ಎಲ್ಲರೂ ಕಲಿಯಲು ಎಲ್ಲರೂ ಬೆಳೆಯಲು ಮಕ್ಕಳಿಗೆ
ಸಮಾಜವೂ ಪ್ರೋತ್ಸಾಹದಾಯಕವಾಗಿ ನಿಲ್ಲುವಂತಾಗಬೇಕು ಎಂಬಿತ್ಯಾದಿ ವೈಚಾರಿಕತೆಯ ಅಂಶಗಳನ್ನೊಳಗೊಂಡಂತೆ
ಶಾಲಾ ತರಗತಿ ಕೋಣೆಯ ಒಳಗಿನ ಚಟುವಟಿಕೆಗಳನ್ನು ಪುಷ್ಟೀಕರಿಸುವ ನಿಟ್ಟಿನಲ್ಲಿ ಸಾಮಾಜಿಕ ಸಂಪರ್ಕವೂ
ನೆರವಾಗಬಲ್ಲದು. ಸಮುದಾಯದ ಪಾಲ್ಗೊಳ್ಳುವಿಕೆಯ ಮೂಲಕ
ಮಗು ಸಾಮಾಜೀಕರಣಗೊಳ್ಳುವುದಲ್ಲದೇ ಸಾಂಸ್ಕೃತಿಕ ಸಂವಹನಕ್ಕೂ ಈ ಹಬ್ಬವು ದಾರಿ ಮಾಡಿಕೊಡುತ್ತದೆ.
ಸೃಜನಶೀಲ
ಕೌಶಲ್ಯ ಮತ್ತು ಸಂತಸದ ಕಲಿಕೆಗೆ ಪೂರಕವಾದ ಚಟುವಟಿಕೆಗಳನ್ನು ವಿಜ್ಞಾನ ಹಬ್ಬವು ಒದಗಿಸುತ್ತದೆ. ಮಕ್ಕಳು
ಕ್ರಿಯಾಶೀಲರಾಗಿ ಚಟುವಟಿಕೆಗಳನ್ನು ನಿರ್ವಹಿಸುತ್ತಾರೆ. ಕಲಿಕೆ ಅನಿವಾರ್ಯವಾಗದೇ ಮಕ್ಕಳು ಕಲಿಕೆಯನ್ನು
ಹೆಚ್ಚು ಸಂಭ್ರಮದಿಂದ ನೋಡಲು ಸಹಾಯಕಾರಿಯಾಗುವುದಲ್ಲದೇ, ಕಲಿಕೆಯ ಸಂದರ್ಭದಲ್ಲಿ ಎದುರಾಗುವ ಪ್ರಶ್ನೆಗಳಿಗೆ
ಉತ್ತರಿಸುವ ಚಟುವಟಿಕೆಗಳನ್ನು ಮಕ್ಕಳಿಗೆ ತಲುಪಿಸುವ ಹಿನ್ನೆಲೆಯನ್ನು ವಿಜ್ಞಾನ ಹಬ್ಬವು ಹೊಂದಿದೆ.
ಈ ಕಾರ್ಯಕ್ರಮದ ರೂಪುರೇಷೆ, ವಿನ್ಯಾಸ, ನಿರ್ವಹಣೆ ಮತ್ತು ಸಂಘಟನೆಯ ಹೊಣೆಯನ್ನು ಹೊತ್ತವರು ಶಿಕ್ಷಕರೇ
ಆಗಿದ್ದಾರೆ. ಮಕ್ಕಳೊಂದಿಗೊಡಗೂಡಿ ಈ ಚಟುವಟಿಕೆಗಳನ್ನು ತಲುಪಿಸುವವರು ಅವರೇ ಆಗಿರುವುದೂ ವಿಶಿಷ್ಟಕರವಾಗಿದೆ.
ಸದಾ ಪ್ರಶ್ನಿಸುವ ಎದೆಗಾರಿಕೆ, ಕುತೂಹಲ, ದೂರದೃಷ್ಟಿತ್ವ, ಪ್ರಯೋಗಶೀಲತೆ ಮತ್ತು ಒಳಗೊಳ್ಳುವಿಕೆಯ
ಮೂಲಕ ವೈಜ್ಞಾನಿಕ ಮನೋವೃತ್ತಿಯು ಪ್ರಕಟಗೊಳ್ಳಲು ಮಕ್ಕಳ ಸಂತಸ ಮತ್ತು ಚೈತನ್ಯವನ್ನು ಬಂಡವಾಳ ಮಾಡಿಕೊಂಡು
ವಿಜ್ಞಾನ ಹಬ್ಬವು ಜೀವ ತಳೆವ ಎಲ್ಲಾ ಸಿದ್ಧ ಅಂಶಗಳನ್ನು
ಒಳಗೊಂಡಿದೆ.
ಹಬ್ಬದ ಸಂಘಟನಾ ದೃಷ್ಟಿಕೋನವು ವಿಭಿನ್ನವಾಗಿದ್ದು,ಜನಸಮುದಾಯವನ್ನು ಆಕರ್ಷಿಸಿ ಈ ಹಬ್ಬದಲ್ಲಿ
ಪಾಲ್ಗೊಳ್ಳುವಂತೆ ಮಾಡಿ ಸರಕಾರಿ ಶಾಲಾ ವ್ಯವಸ್ಥೆಯನ್ನು ಭದ್ರಪಡಿಸುವ ದೂರದರ್ಶಿತ್ವ ಪ್ರಜ್ಞೆಯನ್ನೊಳಗೊಂಡಿದೆ.
ಸಾಕಷ್ಟು ಕೊಠಡಿಗಳಿರುವ,ಸ್ವಚ್ಛ ಶಾಲಾ ಪರಿಸರವುಳ್ಳ, ಸುಸಜ್ಜಿತ ಶೌಚಾಲಯಗಳುಳ್ಳ ವಿಶಾಲವಾದ ಆಟದ ಮೈದಾನವಿರುವಂತಹ
ಭೌತಿಕ ಸಂಪನ್ಮೂಲಗಳು ಲಭ್ಯವಿರುವ ಶಾಲೆಗಳಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲು ಆಯ್ದುಕೊಳ್ಳುವ, ಶಾಲಾ
ಅಭಿವೃದ್ಧಿ ಹಾಗೂ ಮೇಲುಸ್ತುವಾರಿ ಸಮಿತಿಗಳ ಸಭೆಯ ಮೂಲಕ ಚರ್ಚಿಸಿ ಕಾರ್ಯಕ್ರಮದ ಉದ್ದೇಶಗಳಂತೆ ಸಾಕಾರಗೊಳಿಸುವ,
ಸ್ವಾಗತ ಸಮಿತಿಯನ್ನು ರಚಿಸುವ, ಸ್ಥಳೀಯ ದಾನಿಗಳಿಂದ ದೇಣಿಗೆಗಳನ್ನು ಸಂಗ್ರಹಿಸಿ, ಅಗತ್ಯ ಹಬ್ಬದ ವಾತಾವರಣವನ್ನು
ನಿರ್ಮಾಣ ಮಾಡಿಕೊಂಡು, ಸಾಧ್ಯತೆಗಳಿದ್ದಲ್ಲಿ ವಿಶೇಷ ಪ್ರದರ್ಶನಗಳಿಗೆ ಅವಕಾಶ ಕಲ್ಪಿಸುವ, ಮಕ್ಕಳ ಸಭೆ,
ಕಾರ್ಯಕ್ರಮದ ಅನುಷ್ಠಾನಕ್ಕೆ ಅಗತ್ಯ ಪೂರ್ವ ತಯಾರಿಯ ಬಗೆಗಿನ ಚರ್ಚೆಗಳನ್ನು ಹಮ್ಮಿಕೊಳ್ಳುವ ಮಕ್ಕಳ ವಿಜ್ಞಾನ ಹಬ್ಬವನ್ನು ಉದ್ಘಾಟನೆಯಿಂದ ಮೊದಲ್ಗೊಂಡು
ಸಮಾರೋಪ ಸಮಾರಂಭವನ್ನು ಕೈಗೊಳ್ಳುವವರೆಗಿನ ಸಕಲ ಪೂರ್ವ ಸಿದ್ಧತೆಯನ್ನು ಮಾಡಿಕೊಳ್ಳವ, ವಿಜ್ಞಾನ ಹಬ್ಬದ
ಪ್ರತಿಹಂತದ ದಾಖಲೀಕರಣವನ್ನು ಫೋಟೋ ಸಮೇತ ಕೈಗೊಳ್ಳುವವರೆಗಿನ ನಾನಾ ಕ್ರಮವಿಧಿಗಳನ್ನು ಒಳಗೊಂಡಿರುತ್ತದೆ.
ಮಕ್ಕಳ ವಿಜ್ಞಾನ ಹಬ್ಬಕ್ಕಾಗಿ ಸಂಪನ್ಮೂಲ
ಶಿಕ್ಷಕರ ಉಪಸ್ಥಿತಿಯಲ್ಲಿ ಮಕ್ಕಳನ್ನು ತಲುಪುವ ನಾನಾ ಚಟುವಟಿಕೆಗಳನ್ನು ಚುಕ್ಕಿ ಚಂದ್ರಮ, ಊರು ತಿಳಿಯೋಣ,
ಮಾಡು ಆಡು, ಕಾಗದ ಕತ್ತರಿ, ಹಾಡು ಆಡು, ಆಡು ಆಟ ಆಡು, ಅಕ್ಷರದಾಟ ಮುಂತಾದ ಆಕರ್ಷಣೀಯ ತಲೆಬರಹಗಳಡಿಯಲ್ಲಿ
ಸೇರ್ಪಡೆ ಮಾಡಲಾಗಿದೆ. ಬಾಲ್ ಮೌಂಟ್ ಪ್ರೊಜೆಕ್ಟರ್, ಟೆಲಿಸ್ಕೋಪ್, ಸೂಜಿ ರಂಧ್ರ ಬಿಂಬಗ್ರಾಹಿ
ತಯಾರಿಕೆ, ಜೀವಜಾಲದ ಆಟ, ಏರುವ ಹಲ್ಲಿ, ಸುರುಳಿ ಹಾವು, ನೀರಿನ ಚಿಮ್ಮುವ ಕಾರಂಜಿ, ಮರಕುಟಿಗ, ಸ್ಪೆಕ್ಟ್ರೋಸ್ಕೋಪ್,
ಬಾಟಲ್ ರಾಕೇಟ್, ಎಲೆಗಳ ನೆರಳಚ್ಚು ರಚನೆ, ದೃಷ್ಟಿ ಭ್ರಮೆಯ ಗೊಂಬೆಗಳು, ಓಡುವ ಕುದುರೆ, 3ಡಿ ಕನ್ನಡಕ,
ನ್ಯೂಟನ್ ಬೆನ್ ಹ್ಯಾಮ್ ಗಿರಗಿಟ್ಲೆ, ಮಂತ್ರದ ಗೊಂಬೆ. ಸೋಪಿನ ಗುಳ್ಳೆಗಳ ಆಕೃತಿಗಳ ರಚನೆ, ಹರಟೆ
ಬೆಕ್ಕು, ಕುಪ್ಪಳಿಸುವ ಕಪ್ಪೆ, ರಾಜಾ ಕಿರೀಟ ಮುಂತಾದ
ಚಟುವಟಿಕೆಗಳು ಮಕ್ಕಳ ವಿಜ್ಞಾನ ಹಬ್ಬದ ರಂಗನ್ನು ಹೆಚ್ಚಿಸಿವೆ.
ನಾಡಿನ ಪ್ರಸಿದ್ಧ ಕವಿಗಳ ಶಿಶುಗೀತೆಗಳು ಮಕ್ಕಳ
ಮನಸ್ಸುಗಳನ್ನು ರಂಜಿಸುತ್ತವೆ. ಕುವೆಂಪುರವರ ಓ ಬನ್ನಿ ಸೋದರರೇ…, ನಾರಾಯಣ ಸ್ವಾಮಿಯವರ ಮಾನವರಾಗೋಣ
ಮುಂತಾದವುಗಳು ವಿಶ್ವ ಮಾನವತೆಯ ಸಂದೇಶವನ್ನು ಸಾರುವ ನಿಟ್ಟಿನಲ್ಲಿ ಸಹಕಾರಿಯಾಗಿವೆ.
ಅಂತೆಯೇ ಆಡೊ ಆಡೊ ಆಟ, ಟಾಮ್ ಅಂಡ್ ಜೆರಿ,
ರಾಣಿಯ ಬಯಕೆ, ಪೇರ್ ಕೇರ್, ಜೀವ ಭಾವ ಮುಂತಾದ ಆಟಗಳು ಮಕ್ಕಳ
ಸಂತೋಷಕ್ಕೆ ಪಾರವೇ ಇಲ್ಲ ಎನ್ನುವಂತೆ ಮಾಡುವುದರಲ್ಲಿ ಸಂದೇಹವೇ ಇಲ್ಲ.
ಹತ್ತು ಹಲವು ಧನಾತ್ಮಕ ಧ್ಯೇಯೋದ್ದೇಶಗಳಿಂದ
ಪೂರಿತ ಮಕ್ಕಳ ವಿಜ್ಞಾನ ಹಬ್ಬವು ಈಗಾಗಲೇ ನಾಡಿನಾದ್ಯಂತ ಸರಕಾರಿ ಪ್ರಾಥಮಿಕ ಶಾಲೆಗಳಲ್ಲಿ ವಿಜೃಂಭಣೆಯಿಂದ,
ಸಡಗರ ಸಂಭ್ರಮದಿಂದ ಮಕ್ಕಳಲ್ಲಿ ಅಗಣಿತ ಸಂತಸವನ್ನು ಮೇಳೈಸಿ, ಗ್ರಾಮಗಳಲ್ಲಿ ಸಂತೋಷಕರ ವಾತಾವರಣವನ್ನು
ಮೂಡಿಸಿ, ಸಮೂಹ ಮಟ್ಟದ ಶಾಲಾ ಮಕ್ಕಳಲ್ಲಿ ಅನ್ಯೋನ್ಯ ಬಾಂಧವ್ಯವನ್ನು ಮೂಡಿಸಿ, ವಿಸ್ಮಯಕರವಾದ ಸರಕಾರಿ
ಕಾರ್ಯಕ್ರಮವೆನಿಸಿದೆ. ಮಕ್ಕಳಲ್ಲಿ ಕ್ರಿಯಾಶೀಲತೆಯನ್ನು ಹೆಚ್ಚಿಸುತ್ತ, ಶಿಕ್ಷಕರಲ್ಲಿ ಅನ್ವೇಷಣಾ
ಪ್ರವೃತ್ತಿಯನ್ನು ಹೆಚ್ಚಿಸಿ ವೃತ್ತಿ ಬೆಳವಣಿಗೆಗೂ ಸಹಕಾರಿಯಾಗಿದೆ. ಮುಂದಿನ ದಿನಮಾನಗಳಲ್ಲಿ ಮಕ್ಕಳ ವಿಜ್ಞಾನ ಹಬ್ಬವು ಪ್ರತಿ ಶಾಲೆಯಲ್ಲಿ ಯಶಸ್ವಿಯಾಗಿ
ಆಯೋಜಿಸುವ ಪರಿಪಾಠ ಪ್ರಾರಂಭವಾಗಲಿ ಎಂದು ಹಾರೈಸುವ ಮಹತ್ವಾಕಾಂಕ್ಷೆ ಎಲ್ಲರದ್ದಾಗಲಿ.
No comments:
Post a Comment