Sunday, July 19, 2020

ಶೈಕ್ಷಣಿಕ ಬರಹ -ಜಿಲ್ಲಾ ಶಿಕ್ಷಕರ ಸಮ್ಮೇಳನದಲ್ಲಿ ಬಿಡುಗಡೆಗೊಂಡ ಸಂಚಿಕೆಯಲ್ಲಿ ಪ್ರಕಟಿತ....


                                   ನಲಿ-ಕಲಿ ಮಕ್ಕಳ ಕಲಿಕೆಯಲ್ಲಿ ಕ್ರಾಫ್ಟ್‌ ಗಳ ಪಾತ್ರ .

                         ಕರ್ನಾಟಕ ಸರ್ಕಾರವು ರಾಜ್ಯದಾದ್ಯಂತ ಸಾರ್ವಜನಿಕ ಶಿಕ್ಷಣ ಇಲಾಖೆಯ ಮುಖೇನ ಗುಣಾತ್ಮಕ ಶಿಕ್ಷಣವನ್ನು ಸಾಕಾರಗೊಳಿಸಲು ನಾನಾ ಸ್ತರಗಳಲ್ಲಿ ನಿರಂತರವಾಗಿ ಶ್ರಮಿಸುತ್ತಿದೆ. ಹತ್ತು ಹಲವು ಯೋಜನೆಗಳ ಮೂಲಕ ಹಗಲಿರುಳು ಮಗುವಿನ ಸರ್ವತೋಮುಖ ಬೆಳವಣಿಗೆಯ ಮಹತ್ವಾಕಾಂಕ್ಷೆಯನ್ನು ಸಾಧಿಸುವ ಕೈಂಕರ್ಯವನ್ನು ಹೊಂದಿ ಸಾಕ್ಷೀಭೂತವಾಗಿ ಪರಿಶ್ರಮಿಸುತ್ತಿದೆ. ಮಕ್ಕಳ ಕಲಿಕೆಯೆಂಬುದು ಅಗಣಿತ ಸಂದರ್ಭಗಳ ಅವಕಾಶಗಳೊಂದಿಗೆ ಮಗು ತನ್ನನ್ನು ತಾ ತೊಡಗಿಸಿಕೊಂಡು, ಆಸಕ್ತಿಯಿಂದ ಪಾಲ್ಗೊಂಡು ಕ್ರಿಯಾತ್ಮಕತೆಯನ್ನು ಹೊರಹಾಕುವುದರಲ್ಲಿ ಉದ್ದೀಪನೆಗೊಳ್ಳುತ್ತದೆ.

     ಪ್ರಸಕ್ತ ರಾಜ್ಯದ ಸರ್ಕಾರಿ ಕಿರಿಯ ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಒಂದರಿಂದ ಮೂರನೇ ತರಗತಿಯವರೆಗೆ ನಲಿ-ಕಲಿ ಬೋಧನಾ ಪದ್ಧತಿಯು ಜಾರಿಯಲ್ಲಿರುವುದು ತಿಳಿದ ಸಂಗತಿ. ಅಲ್ಲದೇ ಇದರ ಬೆಳವಣಿಗೆಗೆ ಅದರ ಪ್ರಮುಖ ತತ್ವಗಳಾದ ಸ್ವ-ಕಲಿಕೆ,ಸ್ವವೇಗದ ಕಲಿಕೆ,ಸಂತಸದಾಯಕ ಕಲಿಕೆಯು ಇಂಬನ್ನು ನೀಡಿವೆ. ನಲಿ-ಕಲಿ ವಿಧಾನದಲ್ಲಿ ಶಿಕ್ಷಕರು ತಮ್ಮನ್ನು ಸಕ್ರೀಯವಾಗಿ ತೊಡಗಿಸಿಕೊಂಡು ಹಲವು ಕಲಿಕಾ ಸಾಧನೆಗಳನ್ನು ಮಾಡಿ ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಗಮನಾರ್ಹವಾಗುವಂತೆ ಮಾಡಿದ ಪರಿ, ವಿವಿಧ ಆಧ್ಯಯನ ಮತ್ತು ಸಂಶೋಧನಾ ಉಪಕ್ರಮಗಳು, ಖಾಸಗಿ ಮಂಡಳಿಗಳು ಸರ್ಕಾರದ ಈ ನಲಿ-ಕಲಿ ವಿಧಾನದತ್ತ ಮುಖ ಮಾಡಿರುವುದು ಹೆಮ್ಮೆಯ ಸಂಗತಿ. ಈ ದೃಷ್ಟಿಯಲ್ಲಿ ಮೈಕ್ರೋ ಮತ್ತು ಮ್ಯಾಕ್ರೋ ಅಧ್ಯಯನಗಳ ಪಾತ್ರವೂ ಅನನ್ಯ. ಅವುಗಳ ಫಲಿತವೆಂಬಂತೆ ಪ್ರತಿ ಜಿಲ್ಲೆಯ ಪ್ರತಿ ತಾಲೂಕಿನ ಮೂರು ಅತ್ಯುತ್ತಮ ನಲಿ-ಕಲಿ ಶಾಲೆಗಳನ್ನು ಗುರುತಿಸಿ ಸರ್ಕಾರವು ಪ್ರಸಕ್ತ 2019-2020 ನೇ ಶೈಕ್ಷಣಿಕ ಸಾಲಿನಲ್ಲಿ ಪ್ರೋತ್ಸಾಹಿಸಿರುವುದು ಸಾಧಕರಿಗೆ ಸಂದ ಮನ್ನಣೆ ಹಾಗೂ ಉಳಿದ ನಲಿ-ಕಲಿ ಶಿಕ್ಷಕರನ್ನೂ ಸ್ವಯಂ ಆಸಕ್ತಿಯಿಂದ ತಮ್ಮನ್ನುವಿಶೇಷವಾಗಿ ನಲಿ-ಕಲಿ ಬೋಧನೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹದಾಯಕವಾಗಿದೆ.

     ಪ್ರತಿ ವರ್ಷವೂ ಸರ್ಕಾರ ನಲಿ-ಕಲಿ ಬೋಧನೆಗೆ ಅಗತ್ಯ ಸಾಮಗ್ರಿಗಳ ಪೂರೈಕೆಯನ್ನು ಮಾಡುತ್ತ ಬಂದಿದೆ. ನಲಿ-ಕಲಿ ಮಕ್ಕಳ ತರಗತಿ ನಿರ್ವಹಣೆಯ ಸಂದರ್ಭದಲ್ಲಿ ಮಕ್ಕಳ ಕಲ್ಪನಾ ಶಕ್ತಿಯ ಬೆಳವಣಿಗೆಯಲ್ಲಿ ಮತ್ತು ಕಲಿಕೆಯ ಪೂರಕ ಅಂಶಗಳ ಕಲಿಕೆಯಲ್ಲಿ ಸಂತಸದಾಯಕವಾದ ರೀತಿಯಲ್ಲಿ ಕಲಿಕೆಯನ್ನುಂಟು ಮಾಡಲು ಕ್ರಾಫ್ಟ್‌ಗಳ ಬಳಕೆಯ ಮಹತ್ವ ಅಪರಿಮಿತವಾದುದು.ಕನ್ನಡ,ಗಣಿತ,ಪರಿಸರ ಅಧ್ಯಯನ ವಿಷಯ ಬೇಧಗಳಿಲ್ಲದೆ ಬೋಧನೆಯ ಸಂದರ್ಭದಲ್ಲಿ ಮತ್ತು ನಲಿ-ಕಲಿ ಕೊಠಡಿಗಳಲ್ಲಿ ಆಯಾ ವಿಷಯದ ಗೋಡೆಗಳಲ್ಲಿ ಕ್ರಾಫ್ಟ್‌ಗಳನ್ನು ಬಳಸುವ ಮೂಲಕ ಮಕ್ಕಳ ಏಕಾಗ್ರತೆಯನ್ನು ಇಂದೀಕರಿಸಬಹುದಾಗಿದೆ.

      ಇತ್ತೀಚೆಗಷ್ಟೇ ಇಂಗ್ಲೀಷ್‌ ವಿಷಯದ ಕಾರ್ಡುಗಳು ಮಕ್ಕಳಲ್ಲಿ ಇಂಗ್ಲೀಷ್‌ ಭಾಷಾ ಕೌಶಲ್ಯಗಳನ್ನು ಎಳೆವೆಯಿಂದಲೇ ಸಾಧಿಸುವ ನಿಟ್ಟಿನಲ್ಲಿ ನಲಿ-ಕಲಿ ತರಗತಿಗಳನ್ನು, ಮಕ್ಕಳನ್ನೂ ತಲುಪಿವೆ. ಹೀಗಿರಲು ಇಂಗ್ಲೀಷ್‌ ವಿಷಯ ಬೋಧನೆಯಲ್ಲಿಯೂ  ಶಿಕ್ಷಕರು ಕ್ರಾಫ್ಟ್‌ಗಳನ್ನು ಬಳಸಿಕೊಳ್ಳಬಹುದಾಗಿದೆ. ನಲಿ-ಕಲಿ ಬೋಧನಾ ಕ್ರಮವನ್ನು ಬಲವರ್ಧನೆಗೊಳಿಸಲು ಕ್ರಾಫ್ಟ್‌ಗಳ  ರಚನೆಯಲ್ಲಿ ಶಿಕ್ಷಕರು ತೊಡಗುವ ಮೂಲಕ  ತಾವು ಸಕ್ರೀಯರಾಗುವುದರ ಜೊತೆಗೆ ಮಕ್ಕಳನ್ನು ತೊಡಗಿಸಿಕೊಳ್ಳುವ  ಪ್ರಯತ್ನ ಮಾಡುವುದು ಧನಾತ್ಮಕ ಅಂಶವಾಗಿದೆ.

    ಮಕ್ಕಳ ಕಲಿಕೆಯಲ್ಲಿ ನಿರ್ವಿವಾದವಾಗಿ ಬಣ್ಣದ ಪೆನ್ಸಿಲ್‌ಗಳು,ಕ್ರೇಯಾನ್‌ಗಳು,ವಾಟರ್‌ ಕಲರ್‌ಗಳು, ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಲಭ್ಯ ಆಕರ್ಷಣೀಯ ಸಾಮಗ್ರಿಗಳು, ಮಾರುಕಟ್ಟೆಯಲ್ಲಿ ಈಗಾಗಲೇ ದಾಪುಗಾಲಿಟ್ಟಿರುವ ಬಣ್ಣ ಬಣ್ಣದ ಕ್ಲೇಗಳು,ಬಣ್ಣದ ಬಳಕೆಯನ್ನೂ ಗೌಣ ಮಾಡುವಂತೆ ರಾಚಿಸುವ ನಾನಾ ಬಣ್ಣಗಳ ಕ್ರಾಫ್ಟ್‌ ಹಾಳೆಗಳು, ಫೋಮ್‌  ಶೀಟ್‌ಗಳು,ಮಾರ್ಕರ್‌ಗಳು,ಬ್ರಷ್‌ ಪೆನ್ನುಗಳು,ಟೂಥ್‌ ಪಿಕ್‌ ಗಳು, ಬಳಕೆಯಾಗದೆ ಉಳಿದ ಹಳೆಯ ಶುಭಾಶಯ ಪತ್ರಗಳು,ವೆಡ್ಡಿಂಗ್‌ ಕಾರ್ಡುಗಳು,ಓರಿಗಾಮಿ ಚಟುವಟಿಕೆಗಳು,ಪ್ರಸಕ್ತ 2019-2020ನೇ ಸಾಲಿನಲ್ಲಿ ಆಯೋಜನೆಗೊಂಡ ಸರ್ಕಾರದ ವಿನೂತನ ಕಾರ್ಯಕ್ರಮ “ವಿಜ್ಞಾನ ಹಬ್ಬ”ದಲ್ಲಿ  ಬಳಸಿದಂತಹ ಗೊಂಬೆಯ ಮಾದರಿಗಳು, ಮಕ್ಕಳ ಅವಧಾನವನ್ನು ಸುಲಭವಾಗಿ ಮತ್ತು ಬಹುಬೇಗ ಕೇಂದ್ರೀಕರಿಸುತ್ತವೆ.

       ಮಕ್ಕಳ ಭೌತಿಕ,ಜ್ಞಾನಾತ್ಮಕ,ಭಾವನಾತ್ಮಕ,ಸಾಮಾಜಿಕ,ಕರ್ತೃತ್ವ ಶಕ್ತಿಗಳ ಬೆಳವಣಿಗೆಯನ್ನು ಕಲಾತ್ಮಕತೆ ಬೆಳೆಸಬಲ್ಲದು. ಕ್ರಾಫ್ಟ್ ಎಂಬುದು ಕಲಾತ್ಮಕತೆ ಅಥವಾ ಕಲಾ ಶಿಕ್ಷಣದ ಒಂದು ಅವಿಭಾಜ್ಯ ಅಂಗವೂ ಹೌದು. ಸಾಮಾನ್ಯವಾಗಿ ಮಕ್ಕಳ ಕಲಿಕಾ ಚಪ್ಪರವನ್ನು ಸೇರುವ ಕ್ರಾಫ್ಟ್‌ಗಳು ಒಂದನೇ ಏಣಿಯ ಮಕ್ಕಳಿಗೆ ಅವರ ಕಲ್ಪನಾಶಕ್ತಿಯನ್ನು ಪ್ರಚೋದಿಸುವಂತಿರಬೇಕು. ಎರಡನೇ ಮತ್ತು ಮೂರನೇ ಏಣಿಯ ಮಕ್ಕಳಿಗೆ ಅವರ ಕಲಿಕಾಂಶಗಳನ್ನು ದೃಢೀಕರಿಸುವಂತಿರಬೇಕು.

      ಕ್ರಾಫ್ಟ್‌ ಗಳು ಮಕ್ಕಳಲ್ಲಿ ಚಲನಾತ್ಮಕ  ಕೌಶಲ್ಯಗಳು, ವಸ್ತುಗಳ ಬಳಕೆಯ ವೇಗ, ಕಾರ್ಯದಕ್ಷತೆ, ಚುರುಕುತನವನ್ನು ಬೆಳೆಸುತ್ತವೆ. ಕ್ರಾಫ್ಟ್‌ ಚಟುವಟಿಕೆಗಳಲ್ಲಿ ತೊಡಗುವುದರಿಂದ ಮಕ್ಕಳ ಕೈ ಮತ್ತು ಕಣ್ಣಿನ ಮಧ್ಯೆ ಸಹಸಂಬಂಧವನ್ನು ಹೆಚ್ಚಿಸಬಹುದು. ಇದು ಮುಂದಿನ ಹಂತದ ಕಲಿಕೆಯಲ್ಲಿ ಮಕ್ಕಳಿಗೆ  ತುಂಬಾ ನೆರವಾಗುತ್ತದೆ.

     ಸಾಮಾಜಿಕವಾಗಿ ಮಕ್ಕಳು ಕಲಾತ್ಮಕತೆಯನ್ನು,ತನ್ನ ಸಾಂಸ್ಕೃತಿಕ ಆಚರಣೆಗಳನ್ನು ಹೊಗಳುವ, ತನ್ನ ಸಾಮರ್ಥ್ಯದಲ್ಲಿ ನಂಬಿಕೆಯಿಡುವ ಇತರರಲ್ಲಿನ ಕೌಶಲ್ಯಗಳನ್ನು ಮೆಚ್ಚುವಂತಹ ಗುಣಗಳನ್ನು ರೂಢಿಸಿಕೊಳ್ಳಲು ಕ್ರಾಫ್ಟ್‌ಗಳು ಉತ್ತಮ ರೀತಿಯಲ್ಲಿ ಸಹಾಯಕಾರಿಯಾಗಬಲ್ಲವು.

         ಕ್ರಾಫ್ಟ್‌ ಗಳು ಮಕ್ಕಳ ಸ್ವಯಂ ಅಭಿವ್ಯಕ್ತಿಯನ್ನು ಅಭಿವ್ಯಕ್ತಪಡಿಸಲು ಇರುವ ಸಾಧನವೆಂದರೆ ತಪ್ಪಾಗಲಿಕ್ಕಿಲ್ಲ.ಇದರಿಂದ ಪ್ರತಿಯೊಂದು ಮಗುವಿನ ಸಾಮರ್ಥ್ಯ, ಆತ್ಮವಿಶ್ವಾಸ, ಸ್ವಯಂ ಆಸಕ್ತಿಗಳು, ಅಗತ್ಯತೆಗಳು ಬೆಳಕಿಗೆ ಬರುತ್ತವೆಯಲ್ಲದೇ, ಮಗು ವಸ್ತು-ವಿಷಯದ ಬಗ್ಗೆ ಹೊಂದಿರುವ ತನ್ನದೇ ಆದ ನಿಲುವು,ಭಾವಾಭಿವ್ಯಕ್ತಿಯನ್ನು ಹೊರಹಾಕಲು ಅವಕಾಶವನ್ನು ಕಲ್ಪಿಸುತ್ತದೆ.

       ಕ್ರಾಫ್ಟ್‌ ತಯಾರಿಕೆಯಲ್ಲಿ ಮಕ್ಕಳು ತೊಡಗುವುದರಿಂದ ಅವರ  ಸೃಜನಾತ್ಮಕತೆ ಹೆಚ್ಚುತ್ತದೆಯಲ್ಲದೆ,ಮಕ್ಕಳಲ್ಲಿ ತಮಗರಿವಿಲ್ಲದಂತೆ ನಿರ್ಧಾರಕ ಶಕ್ತಿ ಬೆಳೆಯಲು ಪ್ರಾರಂಭವಾಗುತ್ತದೆ. ಸಮಸ್ಯೆಗಳಿಗೆ ಸ್ವಪ್ರಯತ್ನದಿಂದ ಪರಿಹಾರ ಕಂಡುಕೊಳ್ಳುವ ಕಲೆ ರೂಢಿಗತವಾಗುತ್ತ ಹೋಗುತ್ತದೆ.ಮಕ್ಕಳ ನೆನಪಿನ ಶಕ್ತಿಯ ಊರ್ಜಿತಕ್ಕೆ ಇದೊಂದು ಸಕಾರಣವೂ ಆಗಬಲ್ಲದು. ಅಲ್ಲದೇ ಚಿತ್ರಗಳೊಂದಿಗೆ ಮಕ್ಕಳು ಕಲಿಕಾಂಶವನ್ನು ಊಹಿಸುವ,ಗ್ರಹಿಸುವ ವಿವೇಚನೆ ಅರಳುತ್ತದೆ.ಕ್ರಾಫ್ಟ್‌ ಗಳಿಂದ ಮಕ್ಕಳು ವಸ್ತುಗಳ ಸರಳ ಹಾಗೂ ಸಂಕೀರ್ಣ ಅಕಾರ,ವಿನ್ಯಾಸಗಳನ್ನುಸರಿಯಾಗಿ ಗುರುತಿಸುವ ನಿಟ್ಟಿನಲ್ಲಿ ಸಹಾಯಕಾರಿ, ಇದು ಮುಂದೆ ಗಣಿತ ಕಲಿಕೆಯಲ್ಲಿ ಮಕ್ಕಳಿಗೆ ಸೇತುವೆಯಾಗಬಲ್ಲದು.

       ಮಕ್ಕಳಲ್ಲಿ ವಿನೋದಾತ್ಮಕ ಭಾವಾಭಿವ್ಯಕ್ತಿ,ಹಾಸ್ಯಪ್ರಜ್ಞೆ,ನೈತಿಕ ಪ್ರಜ್ಞೆಯನ್ನು ಮೂಡಿಸುವ ಇಷ್ಟೊಂದು ಪ್ರಯೋಜನಕಾರಿಯಾದ ಕ್ರಾಫ್ಟ್‌ ಚಟುವಟಿಕೆಗಳಿಗೆ ಶಾಲಾ ಹಂತದಲ್ಲಿ ಸಹಶಿಕ್ಷಕರ, ಮುಖ್ಯ ಶಿಕ್ಷಕರ ಸಹಕಾರ ಅತ್ಯಗತ್ಯ. ಮಕ್ಕಳದ ವಿಕಾಸದ ದೃಷ್ಟಿಯಿಂದ ಕ್ರಾಫ್ಟ್‌ ಬಳಕೆಯನ್ನು ಒಂದು ಪೂರಕ ಕಲಿಕಾ ಮಾರ್ಗವಾಗಿ ಬಳಸುವುದು ಒಳ್ಳೆಯದು. ಕ್ರಾಫ್ಟ್‌ ಬಳಕೆಯ ಸಂದರ್ಭದಲ್ಲಿ ಅವಘಡಗಳು ಸಂಭವಿಸದಂತೆ, ಶಿಕ್ಷಕರು ಹರಿತವಾದ ಕತ್ತರಿ,ಕಟರ್‌ ಮುಂತಾದ ಸಾಧನಗಳನ್ನುಮಕ್ಕಳು ಅತ್ಯಂತ ಜಾಗರೂಕತೆಯಿಂದ ಬಳಸುವಂತೆ ನೋಡಿಕೊಳ್ಳಬೇಕಾಗುತ್ತದೆ. ಒಟ್ಟಾರೆಯಾಗಿ ಸಂತಸದಾಯಕ ಕಲಿಕಾ ವಾತಾವರಣವನ್ನು ನಿರ್ಮಿಸಲು ಶಿಕ್ಷಕರಿಗೆ ಕ್ರಾಫ್ಟ್‌ ಎಂಬುದು ಒಬ್ಬ ಉತ್ತಮ ಸ್ನೇಹಿತನೇ ಸರಿ.

No comments:

Post a Comment