ವಶವಾದೆ ನಾ ವಶವಾದೆ ನಾ
ಗೊತ್ತಾಗದೇ ನಿನ್ನೊಲವಲಿ
ಅಸುನೀಗಿದೆ ಅರಿವಿಲ್ಲದೆ!
ಯಾವ ಮೋಹದ ಸುಳಿಗೆ ಸಿಲುಕಿ
ಬಿದ್ದೆ ನಾ
ಯಾವ ಮಾಯೆಯ ಕತೆಗೆ ಪುಟವಾಗಿ
ಹೋದೆ ನಾ.
ಸಾವೇ ಇರದ ಮನೆಯ ಸಾಸಿವೆ
ತಂದೋಳು...
ಯಾರಿಹರು ಹೇಳು ನೀ ಇಲ್ಲಿ
ಅಂಥೋಳು!
ಯಾವ ದೇಶ ಆದರೇನು? ಯಾವ ಜನ್ಮ
ಆದರೇನು
ಸಾವಿಗೆ ಕೊನೆಯಿಲ್ಲ ಸಾಯದೇ
ಅಳಿವೆಂಬುದಿಲ್ಲ
ಮಿಡಿಯದ ಹೃದಯಕೆ ಪ್ರೀತಿ
ತಂದಳು
ಅರಿಯದ ಬಯಕೆಗೆ ತೃಪ್ತಿ ತಂದಳು
ಅವಳ ಆ ತನ ತಂತು ಹೊಸತನ
ಅವಳ ಆ ಮನ ಕಂಡು ಅರಿತೆ ನಾ
ಸೋತ ದಾರಿಗೆ ಗೆಲುವ ಚುಂಬಿಸಿ
ಅವಳ ಎದೆಯಲ್ಲಿ ನನ್ನನೇ ಸೇರಿಸಿ.
Come come come
To my heart
I welcome you
And only you, as
You are my sweet
heart
As it always beats
for you
And always wants to
reside with you.
ಮುತ್ತು ಮುತ್ತು ಮಳೆ ಹನಿಯೇ...
ಮೆಲ್ಲ ಮೆಲ್ಲನೆ ನೀ ಸುರಿಯೇ...
ಸುತ್ತಮುತ್ತ ಯಾರೂ ಇರದಂತೆ
ಮಾಡಿ ನೀ ಸುರಿಯೇ...ರಭಸವಾಗಿ
ನೀ ವಿವಶವಾಗಿ...
ಮೂಡಣ ಪಡುವಣ,
ತೆಂಕಣ ಬಡಗಣ ಎಲ್ಲೇ
ಸುತ್ತಿ ಯಾರನ್ನೇ ಕೇಳಿ ನೋಡಿ
ಅವರು ಮರೆತಿರಲಾರರು
ಮಧುರ ಪ್ರೇಮದ ಅವರ
ಮಧುರ ತಲ್ಲಣ
ಕಂಪನ,ಬಾಹುಬಂಧನ
ಆ ಮೊದಲ ಚುಂಬನ.
ನಾನೊಬ್ಬ ಕ(ಳ್ಳ)ವಿ
ನನ್ನದೊಂದು ಬಳಗ
ನನ್ನದೂ ಒಂದು ಕರ್ತವ್ಯ
ಒಡವೆ/ಒಲವೇ ನಮ್ಮ ಬದುಕು
ಜೀವನವೇ ಒಂದು
ಸಾಕ್ಷಾತ್ಕಾರ!
ಹರಕೆ
~~~~~
ನಾನ್ ಅಳಿದು
ನೀನ್ ಉಳಿದು
ಈ ಒಲವು
ಒಲಿದು ಬರಲಿ
ಜಗ-ಜನ ಮಣಿದು
ನೊಗ ದಣಿದು
ಪ್ರೀತಿ ತಣಿದು
ಮೆರೆಯಲಿ.
ಚೆನ್ ಚೆನ್ನಾಗಿ
ಪದ್ಯ ಬರಿತೀನಿ
ಅಂತ ಮೆಚ್ಚಲಿಲ್ಲ
ಆಕಿ ನನ್ನ
ನೋಡಾಕ ಆಟೋ-ಈಟೋ
ಸುದೀಪನ ದಿಟೋ
ಚೆನ್ನಾಗ್ ಅವ್ನೀ ಅಂತ
ಬಿಡ್ಲಿಲ್ಲ ಆಕೀ ನನ್ನ!
ಸುಮ್ ಸುಮ್ನೇ ಯಾಕೆ
ಈ ತುಟಿಯ ಚುಂಬಿಸಿದೆ!
ತಡೆಯೋಕೆ ಆಗ್ದೆ
ನಾನು ಸಾಯುತಿಹೆ. . .
ಅಂದಿನಂತೆ ಇಂದು
ಉಳಿದಿದ್ದರೆ
ಕುವೆಂಪು ಹತ್ರ
ಒಯ್ಯುತ್ತಿದ್ದೆ
ನನ್ನೆಲ್ಲ ಕಾವ್ಯ!
ಅವ್ರು ಚೆನ್ನಾಗ್
ಉಗಿದಿರ್ತಿದ್ರು(?!)
ʼʼಮಗು ಬಾಯ್ಗೆ
ಬಂದಂಗೆ ಬರೆದಿದ್
ಎಲ್ಲಾ ಅಲ್ವೇ ಅಲ್ಲ
ನವ್ಯ!”
ಅವಳ ತನುಮನವ
ನಾ ಮುತ್ತಲು
ನಾ ಮುಟ್ಟಲು
ಮುತ್ತಿನ ಮಳೆಗರೆದು
ಮುತ್ತಿನ ರಂಗು ಚೆಲ್ಲಿ
ದೂರ ಸರಿ(ಸಿ)ದಳು.
ದೂರ ಇದ್ದ ಅವಳ
ಧ್ವನಿಯನ್ನು
ದೂರವಾಣಿಯಲ್ಲೇ
ಮೊದಲು ಕೇಳಿದ್ದು
ಅವಳನ್ನೆಂದೂ
ನೋಡಿರಲಿಲ್ಲ!
ಅದು ಅಶರೀರವಾಣಿಯೇ
ಅಹುದು ಆದರೂ
ಅದರ ಕಂಪನಾಂಕ
ಪ್ರೀತಿಯ ಶೃತಿಯನು
ಹೊಮ್ಮಿಸಿತು
ನನ್ನ ಮನಸೆಂಬ
ಮಾಧ್ಯಮದಲ್ಲಿ.
ನಿರಾತಂಕವಾಗಿ
ಈ ಕತೆಯನು
ನೀ ಓದಬಹುದು
ಕತೆಯ ಶೀರ್ಷಿಕೆ
ಮಾತ್ರ “ಆತಂಕ”
ಅಷ್ಟೇ!
ಸ(ಪ)ತಿ.
~~~~~~
ಅಂದು ಇಂದು
ಎಂದೆಂದೂ ನೀ
ನನ್ನ ಸತಿ...
ಅದಕ್ಕೇ
ಆಗಿಹೆನು ಸದಾ
ಜೊತೆಗೆ ಇರಲೆಂದು
ನಾ ನಿನ್ನ ಪತಿ!
ನಿನ್ನ ಕಂಗಳ ತುಂಬ
ಸ್ಫುರಿಸಿ ಹೊಳೆಯುತಿದೆ
ಪ್ರೇಮದ ಬಿಂಬ
ಅದನು ನೋಡುತ್ತಲೇ
ಕುಂತಾಗ
ಅಲ್ಲಿ ಕಂಡಿದ್ದು ಬರೀ
ನನ್ನ ಮನಸ್ಸಿನದೇ
ಪ್ರತಿಬಿಂಬ!
ಮದುವೆಗೂ ಮುನ್ನ
ಅವಳು-ನಾನು
ಬೇರೆ ಬೇರೆಯಾಗಿ
ಮಲಗುತ್ತಿದ್ದೆವು
ಒಂದೇ ಮನಸ್ಸಿನಲ್ಲಿ...
ಈಗ ಜೊತೆಗೆ
ಮಲಗುತ್ತೇವೆ
ಮನಸುಗಳು
ಎಲ್ಲಿ ಬೇಕೆಂದರಲ್ಲಿ!
ನನ್ನ ಮನದ
ಗೊಂದಲ-ಗೋಜಲುಗಳೆಲ್ಲ
ಪದ್ಯದ ಒಳಗೆ
ಸಿಕ್ಕಬಹುದೇನೋ
ಅದು ನಿಜ!
ಪದಗಳಲಿ ಅದರ
ಸುಳಿವು ಎಲ್ಲಿಯೂ
ಇಲ್ಲ ಇದೂ ನಿಜ.
Some-ಸಾರ.
~~~~~~~~~~
ಸಂಸಾರದ ಇಂಗಿತವನು
ಇಟ್ಟುಕೊಂಡು
ಸಂಸಾರ ಕಟ್ಟಿಕೊಂಡೆ!
ನಿಭಾಯಿಸುತ್ತ
ಹೋದಂತೆ,ಅನುದಿನವೂ
Some-ಕ್ಷಾರವೇ
ಸಿಗುತ್ತ ಸಾಗಿತು,.
ಗಂಟೆ.
~~~~~~
ಗಂಟೆಗೊಂದಾವರ್ತಿ
ಫೋನು ಮಾಡು ಎಂದು
ನನ್ನಾಕೆ ರಚ್ಚೆ ಹಿಡಿಯುತ್ತಾಳೆ
ಅಯ್ಯೋ ಪಾಪ! ಎಂದು
ಕರೆ ಮಾಡಿದರೆ,
ಬಿಟ್ಟೂ-ಬಿಡದಂತೆ
ಗಂಟೆಗಟ್ಟಲೇ
ಮಾತನಾಡುತ್ತಾಳೆ!
ನಲ್ಲ-ನಲ್ಲೆಯರ
ಮಧುರ ಸವಿ
ಸಮಯ...
ಕವಿಗಳಿಗೆ
ವರ್ಣಿಸಲು
ಅನುದಿನವೂ
ಹೊಸ ವಿಷಯ!
ಅವಳ ಹತ್ತಿರ ಎಲ್ಲರೂ
ಮಿಂಚಿನಂತೆ
ಧಾವಿಸಿ ಬರ್ತಾರೆ!
ಏಕೆಂದರೆ ಸಂಚು
ಮಾಡಲು ಹೇಳಿದರೆ
ಪ್ರತಿ ಇಂಚು-ಇಂಚಿನಲ್ಲೂ
ತಪ್ಪಾಗದಂತೆ
ಎಚ್ಚರವಹಿಸುತ್ತಾಳೆ!
ಕತ್ತಲನು ಕರಗಿಸಿ
ಹಗಲು ಮಾಡಬಲ್ಲಳು
ನನ್ನವಳು...
ತನಗೆ ಬೇಕೆನಿಸಿದರೆ
ಗಂಡನ ಕೆಲಸವನೂ
ಮರೆಸಿ
ಹಗಲನೂ ಕರಗಿಸಿ
ರಾತ್ರಿಯನ್ನಾಗಿಸುವಳು
ಅವಳು!
ಇನ್ನು ನೀ ಎಷ್ಟೇ
ಬಡಕೊಂಡರೂ
ಕೇಳುವುದಿಲ್ಲ
ನಾನು ಬೆವತು
ನಿನ್ನ ಯಾವ ಮಾತೂ
ಗೊತ್ತಾಗಿ ಹೋಯ್ತು
ನನಗೂ ನಿನ್ನ
ಪ್ರತಿಮಾತಿನಲ್ಲೂ
ಬರೀ ಬೇಡಿಕೆಗಳೇ
ಹೋಗಿವೆ ಹೂತು!
ಪರಿ ಪರಿಯಾಗಿ ಎಷ್ಟು
ಬೇಡಿಕೊಂಡರೂ ಈ
ಪರಿಯಾಗಿ
ಕವನಗಳನು
ಬರೆದರೆ ಹೇಗೆ
ಓ ನನ್ನ ನಲ್ಲ!
ಕೊಟ್ಟೇನು ಬೇಕಿದ್ದರೆ
ದಿನವಿಡೀ ನನ್ನ ಗಲ್ಲ
ನಿನ್ನ ಕವನಗಳನ್ನು
ನನಗೆ ಇನ್ನು
ಓದಲು ಆಗುವುದಿಲ್ಲ!
ವಿಪರ್ಯಾಸ.
~~~~~~~~~~
ಎಂಥೆಂಥ ಕೇಸ್ ಗಳನ್ನ
ಮುಚ್ಚಿ ಹಾಕಿ
ನಿರಪಾರಾಧಿಯಾಗಿ
ಹೊರಗೆ ಬಂದ
ನನ್ನನ್ನು
ಹೇಳದೆ ಕೇಳದೇ
ಅವಳ ಹೃದಯ ಕದ್ದ
ತಪ್ಪಿಗೆ ಅವಳ
ಬದುಕಿನ ಸೆರೆಮನೆಯಲ್ಲಿ
ನಿರಂತರ ಅಪರಾಧಿ
ಮಾಡಿ ಬಿಟ್ಟಿದ್ದೇ
ಅರ್ಥವೇ ಆಗದ ವಿಪರ್ಯಾಸ!
ನಿಜಕ್ಕೂ ನಾನು
ಬೆಳೆದಿದ್ದೇನೆ
ಒಂದಷ್ಟು ದಪ್ಪ
ಆರಡಿಯಷ್ಟೆತ್ತರ
ಇಷ್ಟು ಸಾಲದೇ
ನನ್ನ ಬೆಳವಣಿಗೆ!
ಸಾಗಿಸೋಕೆ ಬದುಕಿನ
ಮೆರವಣಿಗೆ
ಮಾಡಿ ಒಂದಷ್ಟು
ಉರವಣಿಗೆ!
ಅವಳನ್ನು ಬಯಲಲ್ಲಿ
ಕುಳ್ಳಿರಿಸಿ ಜೊತೆಗೆ ಕುಂತಾಗ-
ಇಂದ್ರ-ಚಂದ್ರರೂ
ಬೆಕ್ಕಸ ಬೆರಗಾಗಿ
ನೋಡಹತ್ತಿದರು
ಅವಳಂದವನು
ನಂಗೂ ಹೊಟ್ಟೆಯಲ್ಲಿ
ಕಿಚ್ಚು ಬೆಳೆದು
ಏನೋ ನೆಪ ಹೇಳಿ
ಅವಳನು ಒಳಗೆ
ಕರೆದೊಯ್ದೆನು...
ಇನ್ನೆಂದೂ ರಾತ್ರಿ ವೇಳೆ
ಹೊರಗೆ ಅವಳನು
ಕರೆತರೆನು ಎಂದುಕೊಂಡು
ಮನದಲ್ಲೇ.
ತಾನು ಅಣಕಿಸಿದರೆ
ನನಗೆ ಕೋಪ
ಬರುವುದೆಂದು
ಅವಳಿಗೆ ಗೊತ್ತು...
ನನಗೆ ಕೋಪ ಬರಿಸಿ
ರೇಗಿಸಬೇಕೆನಿಸಿದರೆ
ಅಣಕಿಸಬೇಕೆಂಬುದು
ಅವಳಿಗೆ ಚೆನ್ನಾಗಿ ಗೊತ್ತು!
ಮತದಾನ.
~~~~~~~~~
ನಿಜಕ್ಕೂ ಅದು
ಮತದಾನವೇ ಸಹಿ
ಏಕೆಂದರೆ,
ಆಯಾ ಮತದವರು
ತಮ್ಮ ಮತದ
ಸ್ಪರ್ಧಾಳುಗಳಿಗೆ
ಅಮೂಲ್ಯ ಮತವ
ದಾನ
ಮಾಡುತ್ತಿದ್ದಾರೆ
ಆಯ್ಕೆ ಮಾಡದೆ(?!)
ಲಜ್ಜೆ ಬಿಟ್ಟು ನೀ
ಹೆಜ್ಜೆ ಇಟ್ಟು ಸಜ್ಜಾಗಿ
ಬಂದ ಘಳಿಗೆಯಲ್ಲಿ
ಕುಡಿಯೊಡೆಯಿತು
ಪ್ರೇಮ...
ಅಂದಿನಿಂದಲೇ
ಶುರುವಾಯ್ತು
ಎದೆಯಲ್ಲಿ
ವಿರಹದಾ ಹೋಮ!
ಅಲ್ಲಿ ಇಲ್ಲಿ ಎಲ್ಲಿಯೂ
ಹುಡುಕುವ ಪ್ರಸಂಗ
ಬರಲಿಲ್ಲ ಎನಗೆ
ನೀನೇ ನನ್ನ ಬಳಿ
ನೇರ ಬಂದಾಗ-
ಪ್ರೀತಿಯ ಹಿಡಿದು ನಿಂತಾಗ
ಜಗದ ಮಂದೆ
ನನ್ನವಳೆಂದು ಸಾರಿ
ಬಂದಾಗ.
ಕತ್ತಲು ಹಿಂದಕ್ಕೆ
ಸರಿದಂತೆ ಬೆಳಕು
ಹರಡಬೇಕಿರುವುದು
ಲೋಕಾರೂಢಿ
ಆದರೆ-
ನನ್ನ ಮನದ ಕತ್ತಲು
ಸರಿದಾಗ ಅರಳಿ
ನಿಂತಿತು ಪ್ರೀತಿ.
ಬದುಕಿನ ಜಂಜಾಟಕ್ಕೆ
ಸಿಕ್ಕು ನಾನು ನನ್ನ
ಹೃದಯವನ್ನು ಕಲ್ಲು
ಮಾಡಿಕೊಳ್ಳುತ್ತೇನೆ
ನನಗೆ ಗೊತ್ತು ಅದನು
ಮತ್ತೆ ಕರಗಿಸುವ ಶಕ್ತಿ
ನಿನಗೆ ಮಾತ್ರ ಇದೆಯೆಂದು.
ಜೀವನದ
ಏಕತಾನತೆಯ
ಹೋಗಲಾಡಿಸಲೆಂದೇ
ಜೊತೆಯಾಗುವವಳೇ
ಮನೆಯೊಡತಿ
ಅವಳು ಮನದೊಡತಿ.
ನೀನಿಲ್ಲದ ಜಗವು
ಶೂನ್ಯ
ನೀನಿದ್ದರೆ ನನ್ನ
ಈ ಬದುಕಿಗೆ
ಮಾನ್ಯ.
ಈಗಷ್ಟೇ ಕೇಳಿದಂತಿತ್ತು
ಈಗಷ್ಟೇ ಕೆಣಕಿದಂತಿತ್ತು
ಈಗಷ್ಟೇ ಕಾಡಿದಂತಿತ್ತು
ಈಗಷ್ಟೇ ಉಸಿರಿದಂತಿತ್ತು
ಮನಪೂರ್ವಕವಾಗಿ
ಅವಳ ಧ್ವನಿಯು
ಆದರೆ ಏಕೋ
ಅದೃಶ್ಯವಾಗುತಿದೆ
ಭಯವನುಳಿಸಿ
ಬಯಕೆಗಳನು ಅಳಿಸಿ.
ಬಿಸಿಯುಸಿರ ಬಯಕೆಗಳು
ಬೆಚ್ಚಗೆ ಇರಿಸಿದವು
ಮನಸುಗಳಲ್ಲಿ ಪ್ರೀತಿಯ
ಸುಧೆಯ ಹರಿಸಿದವು
ಪ್ರೇಮದ ಸರಸದಲಿ
ಬದುಕನು ತಣಿಸಿದವು.
ಹೆಣ್ಣಿನ ಸಹಚರ್ಯದಲ್ಲಿ
ಇದ್ದವರಾರೂ ಅವಳ
ಆಂತರ್ಯವನು
ಅರಿಯಲೇ ಇಲ್ಲ
ಅವಳು ಹೇಳ ಬಯಸಿದರೂ
ಕೇಳುವವರಿಗೆ
ತಾಳ್ಮೆಯೇ ಇರಲಿಲ್ಲ.
ಸಾವಿರ ಪದಗಳು
ಬಿಟ್ಟೂ ಬಿಡದಂಗೆ
ಹೇಳ್ತೀನಿ ಅಂತಾಳೆ
ಅರೆ, ಎದೆಯುಬ್ಬಿಸಿ...
ಸರಿ ಹೇಳು ಅಂತ
ಪಟ್ಟು ಹಿಡಿದು ಕುಂತಾಗ
ಗೊತ್ತಾಯ್ತು ನೋಡು-
ಆಕೀನೂ ಒಬ್ಳು
ಟ.ವಿ.ಯಾಗ ಬರೋ ಹಂಗೇ
ದೊಡ್ಡ ಸುಪ್ನಾತಿ ಸುಬ್ಬಿ
ಅಂತ.
ತಲ್ಯಾಗ ಹೊಳೆದಿದ್ದು
ಬಾಯಾಗ್ ಬಂದಿದ್ದು
ಬೇಕಿದ್ರ ಈಗ್ಲೂ
ಬರಿತೀನ್ ನಾನು ಪದ್ಯ
ಯಾಕೋ ಗೊತ್ತಿಲ್ಲ
ಅರ್ಥಾನೂ ಆಗ್ತಿಲ್ಲ
ಓದೋಕೆ ಯಾಕೋ
ಜನ ಮುಂದೆ ಬರ್ತಿಲ್ಲ
ಈತನ್ಮಧ್ಯ!
ಬತ್ತಿದೆದೆಯಲಿ
ಬಿತ್ತಿದಳವಳು
ಪ್ರೀತಿಯ ಹಸಿರು
ಆಗಲಿಂದಲೇ
ಸಿಗಲು ಶುರುವಾಯ್ತು
ನಂಗೂ ಈ
ಬದುಕಲ್ಲಿ ಹೆಸರು.
ಪ್ರೀತಿ.
~~~~~~
ನವಿರು ನವಿರು
ಕಂಪನ
ಸೇರಲು ಅವಳ
ಮೈಮನ
ನಕ್ಕುನಲಿದಾವು
ಹೂ ಬನ!
ಹೇಗೆ ಬಂತು ಈ
ಹೊಸತನ?!
ಪ್ರೀತಿಯೇ ಇದಕೆ
ಕಾರಣ!
ಗೊತ್ತು ಗುರಿಯೆಂಬುದು
ಇರಲಿಲ್ಲ
ನನಗೆ ಅವಳು
ಗೊತ್ತಾಗುವವರೆಗೂ
ಅವಳೇ ನನ್ನ
ಗುರಿಯಾಗೋವರೆಗೂ-
ನನ್ನ ಗುರಿಯೂ
ಅವಳಿಗೆ
ಗೊತ್ತಾಗುವವರೆಗೂ!
ನನ್ನನು ವರಿಸುವ
ವಿಷಯದಲ್ಲಿ
ಅವನಿಟ್ಟ ದಿಟ್ಟ
ಹೆಜ್ಜೆಯಿಂದ ದಿಕ್ಕೆಟ್ಟು
ಅಸ್ಪಷ್ಟವಾಗಿದ್ದ ನನ್ನ
ಬದುಕು ಸ್ಪಷ್ಟವಾಗಿ
ಕಷ್ಟ ನಷ್ಟವನು
ತೊಲಗಿಸಿ ಇಷ್ಟದಂತೆ
ನೇರವೇರಿತು!
ಒಂದೊಂದು ತಾರೆ
ಹೊಳೆದಾಗಲೂ
ಒಂದೊಂದು ಹೊಸ
ಕವನವು ಹೊಳೆಯುತ್ತದೆ
ಬರೆಯಲು
ನನ್ನವಳ
ಹೊಳೆವ ಕಂಗಳಲ್ಲಿ
ಕಣ್ಣಿಟ್ಟಾಗ...
ಮರೆತು ಹೋಗಿರುತ್ತವೆ
ನಾನೇ ಬರೆದ ಹಳೆಯ
ಕವನಗಳು.
ಸತ್ಯ.
~~~~
ನಾನೂ ಒಂದು
ಈ ಪ್ರಪಂಚದ ಹುಳು
ಆಗುವವರೆಗೂ ಈ
ಪ್ರೇಮದ ಬದುಕು
ಒಂದು ಮುಳ್ಳು.
ತುಂತುಂಬಿ ತುಳುಕೋ
ನಿನ್ನ ಯೌವ್ವನದ
ಚಮತ್ಕಾರೀ ಮಾತಿನ
ವೈಖರಿಗೆ ಬೆರಗಾದ ಮೇಲೆ
ಮಾಡಬೇಕಾಯ್ತು ನಾನು
ಈ ಮೂವತ್ತೈದು ವರ್ಷ
ಒಂದೇ ಸರ್ಕಾರಿ ನೌಕರಿ!
ನನಗೂ ಹೆದರಿಕೆ ಅಂದರೆ
ಏನೂಂತ ಅರ್ಥವಾಯ್ತು
ಅವಳನ್ನು ನಾ
ಮದ್ವೆಯಾದ ಮೇಲೆ!
ಮೇಲಿಂದ ಮೇಲೆ
ಕರೆ ಮಾಡಿದರೂ
ಅವಳು
ಮಾತನಾಡುವುದಿಲ್ಲ
ಹಾಗೆಂದು ಅವಳು
ನನ್ನ ಪ್ರೀತಿಸುವುದಿಲ್ಲವೆಂದಲ್ಲ!
ಅದಕೆ ಕಾರಣ
ಅವಳಪ್ಪನಿಗೆ
ಅವಳು ಹೆದರುತ್ತಾಳೆ
ನಾನೂ ಕರೆಮಾಡಿ
ಮೌನವಾಗುತ್ತೇನೆ...
ಪ್ರೀತಿಯು ಹಾಗೆ
ಮುಂದುವರೆಯುತ್ತ-
ಮಾತಿಲ್ಲದ ಮೌನ
ನಮ್ಮಿಬ್ಬರ
ಮನದ ಮುಖ
ಭಾವಗಳಲ್ಲಿ!
ಗಂಡಿಗೆ
ನಯ ವಿನಯ
ತಗ್ಗಿ-ಬಗ್ಗಿ
ನಡೆಯುವ ಗುಣ
ಬರುವುದೇ
ಮದುವೆಯಾದ ಮೇಲೆ
ಅವುಗಳನು
ಕಲಿಸದ ಹೆಂಡತಿಯಾದರೂ
ಇರುವಳೇ ಈ ಭುವಿಯಲ್ಲಿ!
ನನಗೂ ನಿದ್ರೆ
ಬರುತ್ತದೆ...
ನನ್ನವಳು-ತನ್ನ
ದಿನನಿತ್ಯದ
ವೃತ್ತಾಂತವನ್ನು
ಒಂದೇ ಸಮನೇ
ಪಿಟಿಲಿನಂತೆ
ಕೊರೆಯುವಾಗ!
ಈ ತಪ್ಪಿಸಿಕೊಳ್ಳುವ
ಗುಣ ಎನಗೆ
ಬಂದಿದ್ದೇ-
ನನ್ನವಳಿಂದ
ಆದರೆ ಅದಾವ ತಂತ್ರ
ಬಳಸಿದರೂ
ಅವಳಿಂದ
ತಪ್ಪಿಸಿಕೊಂಡು
ಹೋಗಲು ಆಗುತ್ತಿಲ್ಲ!
ನನಗೆ ಮದುವೆ
ಆಗೋ ಆಸೆ
ಏನೋ ಇದೆ!
ನನ್ನ ಮದುವೆ
ಆಗೋ ಯೋಗ
ಯಾವ ಹುಡುಗಿಗೂ
ಬರೆದಂತಿಲ್ಲ...
ಅದಕೆ ನನಗಿನ್ನೂ
ನಲವತ್ತಾದರೂ
ಮದ್ವೆಯಾಗಿಲ್ಲ!
ಹುಡುಗಿಯರ
ಕಂಗಳ ಬಲೆಗೆ
ಸಿಕ್ಕಿ ಬೀಳಬಾರದು
ಬಿದ್ದರೆ
ತಪ್ಪಿಸಿಕೊಳ್ಳಬಾರದು!
ತಪ್ಪಿಸಿಕೊಳ್ಳುವವರನು
ತಡೆ ಹಿಡಿಯುವ
ಕಲೆಯಲ್ಲಿ ಅವರು
ಪರಿಣಿತರು
ಹುಡುಗರು ವ್ಯರ್ಥ
ಪ್ರಯತ್ನ ಮಾಡಿ
ಸೋಲಬಾರದು!
ನನ್ನವಳದು
ಅಪರೂಪದ ರೂಪ
ಅದಕೆ-
ಮದ್ವೆಯಾಗುವಾಗ
ತೋರಿಸಬೇಕಾಯ್ತು
ನಾ ನಾನಾ ಪ್ರತಾಪ!
ಶೈ(ಮೈ)ಲಿ.
~~~~~~~~
ನನ್ನ ಕವನಗಳಲ್ಲಿ
ನನ್ನದು ನನ್ನದೇ ಆದ
ವಿಶೇಷ ಶೈಲಿ...
ಅದಕೆ ಜನ ಕೇಳಲು
ಆಗದೇ ಓಡುತ್ತಾರೆ
ನೂರು ಮೈಲಿ!
ನಾನು ಕಿವಿಯಿಲ್ಲದ ಕವಿ
ಪುಣ್ಯ! ಇಲ್ಲದಿದ್ದರೆ ನಾ
ಓದೋ ನನ್ನ ಕವನಗಳನ್ನು
ಕೇಳಿ ಶ್ರೋತೃಗಳು
ಕ್ಯಾಕರಿಸಿ ಉಗಿಯೋ ಮಾತನ್ನ
ಕೇಳಬೇಕಾಗುತ್ತಿತ್ತು
ಸ್ವಲ್ಪ(?!)
ಕೊರಗಬೇಕಾಗುತ್ತಿತ್ತು.
ನಿನ್ನ ಹೆಜ್ಜೆಗೂ
ನಿನ್ನಷ್ಟೇ ತೂಕ!
ಆದಾಗ್ಯೂ...
ನನ್ನ ಹೃದಯದ
ಒಳಗೆ ನೀ ಹೆಜ್ಜೆಯಿಟ್ಟಾಗ
ಅದು ಏಕೆ ಪಡ್ಚಾ
ಆಗಲಿಲ್ಲ!
ಕೆಲವು ವಿಷಯಗಳೇ ಹೀಗೆ
ಆಶ್ಚರ್ಯ ಹುಟ್ಟಿಸುತ್ತವೆ!
ನನ್ನವಳೆಂದರೆ ನನಗೆ
ಬೆಟ್ಟದಷ್ಟು ಆಸೆ...
ಅದಕೆಂದೇ
ಈಡೇರಿಸಿಕೊಳ್ಳುವೆ
ಕೇಳಿದ ಕೂಡಲೇ
ಮಾಡದೇ ನಿರಾಶೆ.
ಪ್ರೀತಿಯ ರೂಪವೇ
ಹಾಗೇ...
ಕೆಲವರು ಹೆಂಡತಿಯನ್ನು
ತಮ್ಮ ಪ್ರಾಣಕ್ಕಿಂತ
ಹೆಚ್ಚಾಗಿ ಪ್ರೀತಿಸುತ್ತಾರೆ
ಇನ್ನು ಕೆಲವರು
ಹೆಂಡತಿಯ ಪ್ರಾಣವನ್ನೇ
ತೆಗೆಯುತ್ತಾರೆ!
ಮದುವೆಗೂ ಮುನ್ನ
ನನ್ನವಳನ್ನು
ಕಾಡುವವರಿಗೆ
ನನ್ನ ಕೋಟಿ ಧಿಕ್ಕಾರ
ಆದ ಮೇಲೆ ಅವಳ
ಮೇಲೆ ನನ್ನ ಪ್ರೀತಿಯದೇ
ಸಂಪೂರ್ಣ ಅಧಿಕಾರ!
ಅನಿಸೋದನ್ನೇ
ಪ್ರಿಯತಮೆ ಮತ್ತು
ಪ್ರಿಯಕರ ಇಬ್ಬರೂ
ಹಂಚಿಕೊಳ್ಳೋದು
ಅದನು ಕೊನೆವರೆಗೂ
ಸವಿಯಲೆಂದೇ
ಇಬ್ರೂ ವರಿಸೋದು!
ಮನದ ಮಾತಿಗೆ
ಮೌನ ಬೇಲಿಯಾಗಬಾರದು
ಅದಕ್ಕೇ ನೋಡಿ
ನಾನು ನನ್ನಾಕೆ
ಒಂದೇ ಸಮನೆ
ವಟಗುಟ್ಟುತ್ತ
ವಾಚಾಳಿಗಳಾಗಿಬಿಟ್ಟಿದ್ದೇವೆ
ನಮ್ಮ
ʼವಾಕ್‌ಪಟುತ್ವʼ
ಯಾರ್ಗೂ ಗೊತ್ತಾಗೊಲ್ಲ
ನಮಗೂ ಸಹಾ!
ಪ್ರೇಮವೆಂದರೆ....
ನವಿರಾದ ಯಾತನೆ
ಮಧುರವಾದ ಭಾವನೆ
ಸುಖವಾದ ಸೂಚನೆ
ಹಿತವಾದ ಕಲ್ಪನೆ
ನಿರಂತರ ಯಾಚನೆ
ಅನಿತ್ಯ ಯೋಚನೆ!
ಅಂಗಲಾಚಿ ಬೇಡುವುದು
ನನ್ನಿಂದಾಗದ ಮಾತು
ಪ್ರೀತಿಸುವುದು
ನಿಜವೇ ಇದ್ದರೆ-
ಮನವಿಟ್ಟು ಒಮ್ಮೆ
ಹೇಳಿಬಿಡು
ನೀ ನನ್ನ ಬಳಿ ಬಂದು
ಈಗಲೇ ಸೇರಿಬಿಡು.
ಮನಸೇ ಮನಸೇ ಮಗುವಿನಂತಿರು
ನಗುವ ತುಂಬಿರು
ಒಳಗೂ ಹೊರಗೂ ಬದುಕಿದಂತಿರು
ಮನಸೇ ಮನಸೇ ಅಳುಕದಂತಿರು
ಬೆಳಕಿನಂತಿರು
ಒಳಗೂ ಹೊರಗೂ ಸಿಲುಕದಂತಿರು
ಬಾಳಿನ ಪುಟಗಳನು ಮರೆಯದಂತಿರು
ನಾಳೆಯ ಚಿಂತೆಯ ಬಿಟ್ಟು ದೂರ
ನೀನಿರು
ಆಸೆಯ ಅಂಕೆಯ ತೊರೆದು ನಿಂತಿರು
ಪ್ರೀತಿಯು ಸಿಕ್ಕರೆ ನೀ ಜಾರದಂತಿರು.
ಅನುಕ್ಷಣವೂ
ನಿನ್ನ ಚಿಂತೆಯಲ್ಲೇ
ಕಳೆವ ನನಗೆ
ಜಗದ ಚಿಂತನೆಯಾದರೂ
ಯಾಕೆ ಬೇಕು?
ನೀನು ಇಲ್ಲದಾ ಮೇಲೆ
ನಿನ್ನ ನಲಿವು ಅಳಿದಾ ಮೇಲೆ.
ಈ ಜಗತ್ತು ಎಂದೂ
ಬದಲಾಗೋದಿಲ್ಲ...
ಅದನು ತಿಳಿದೇ ನಾನು
ಅವಳು ಹಟಬಿಡುವುದಿಲ್ಲ
ಎಂದು ಅರಿತು
ನಾನೇ ಬದಲಾದೆ
ಅವಳ ಪ್ರೀತಿಗೆ
ಶರಣಾದೆ
ಸಂಪೂರ್ಣ ವಶವಾದೆ.
ಸದ್ದಿಲ್ಲದಂತೆ
ಶುರುವಾಗೋ
ಈ ಪ್ರೇಮ-
ಸದ್ದೇ ಇಲ್ಲದಂತೆ
ಮರೆಯಾಗುವ ಸುದ್ದಿ
ಅಸಹನೀಯ!
ಪ್ರೇಮಕ್ಕೆ ಕೊನೆಯಿಲ್ಲ
ಪ್ರೇಮಿಗಳಿಗೆ ಅಳಿವುಂಟು
ಆದರೂ ಪ್ರೇಮಿಗಳನು
ಅಲ್ಪಕಾಲವಾದರೂ
ಬದುಕಲು ಬಿಡಬೇಕು
ವಿಧಿಯು!
ನಿನ್ನುಸಿರು
ನಿನ್ನ ಹೃದಯ
ನನ್ನ ದೇಹದ
ಒಳಗಿದೆ-
ಹೆದರದಿರು
ನಿನ್ನ ದೇಹ
ಸತ್ತರೆ ನಾನು
ಸತ್ತಂತೆ!
ನಾನು ನೀನು
ಇಬ್ಬರೂ ದೇಹಧಾರಿ
ಮನುಷ್ಯರೇ!
ನೀನು ಹೆಣ್ಣು
ನಾನು ಗಂಡು
ಭೌತಿಕ ಅಂತರ ಇಷ್ಟೇ!
ಈ ಅಂತರವ
ದೂರ ಮಾಡಿದ್ದು
ಮಾತ್ರ
ನಮ್ಮನ್ನು ಹತ್ತಿರ ತಂದ
ಈ ಮಧುರ ಪ್ರೇಮ!
ನೋವಿನ ಕಲೆಗಳೇ
ತುಂಬಿದ ನನ್ನ
ಹೃದಯದ ಮೇಲೆ
ನಿನ್ನ ಪ್ರೇಮಾಮೃತದ
ಹನಿಗಳ ಪ್ರೋಕ್ಷಣೆ
ಮಾಡಿದ ಘಳಿಗೆಯ
ಮಹಿಮೆಯೋ?!
ಏನೋ?!ಇಂದು
ನನ್ನ ಮನಸು
ಸಂತಸದಿ
ಹಗುರಾಗಿಹುದು.
ನನ್ನ-ನಿನ್ನ
ಅಂತರಂಗದಲ್ಲಿ
ನಮ್ಮ ಪ್ರೇಮದ
ಅನಂತ ನೆನಪುಗಳನು
ಪ್ರತಿಫಲಿಸುವ
ಪ್ರತಿಬಿಂಬಗಳೇ
ಸಾಕ್ಷಿ ಹೇಳುತ್ತವೆ
ಈ ಪ್ರೀತಿಯ
ಗಾಢತೆಯನು
ಮರೆಮಾಚದಂತೆ!
No comments:
Post a Comment