Sunday, July 19, 2020

ಕೌಟುಂಬಿಕ ಹಿನ್ನೆಲೆ.


ಧ್ರುವ ನಾರಾಯಣ ರವರ  “ನಾರಾಯಣ ದೇವರಕೆರೆ”  ಪುಸ್ತಕದ ಪುಟ 123 ಮತ್ತು 124 ರಲ್ಲಿ ವ್ಯಕ್ತಿ ಚಿತ್ರಮಾಲೆಯ 39ನೇ ವ್ಯಕ್ತಿಯಾಗಿ ನಮ್ಮ ತಾತನವರಾದ  ಶ್ರೀ.ದಿ.ಬಸಾಭಟ್ಟರ ನಾರಾಯಣ ಭಟ್ಟರ ಬಗ್ಗೆ ಪರಿಚಯ ಮಾಡಲಾಗಿದೆ. ಪುಸ್ತಕದ ಯಥಾವತ್‌  ಪರಿಚಯವನ್ನು ಇಲ್ಲಿ ಕೊಡಲಾಗಿದೆ.

       39.ಬಸಾಭಟ್ಟರ ನಾರಾಯಣ ಭಟ್ಟರು:- ಆರಡಿಗೆ ಮೀರಿದ, ಎತ್ತರದ ಆಳು ನಾರಾಯಣಭಟ್ಟರು. ಇವರ ಮನೆಯ ಮೂಲ ಪುರುಷರು ಮಹಾದೇವ ಭಟ್ಟರು. ಜಮದಗ್ನಿ ಗೋತ್ರದವರು ಹಾಗೂ ಅಶ್ವಲಾಯನ ಸೂತ್ರದವರೆಂದು, ಇವರ ಮನೆಯಲ್ಲಿರುವ ಸುಮಾರು ನಾಲ್ಕು ನೂರು ವರ್ಷಗಳ ಹಿಂದಿನ ದಾನಪತ್ರದಿಂದ ತಿಳಿದುಬಂದ ವಿಷಯವಾಗಿದೆ. ಈ ಮನೆತನದವರು ವೈದಿಕವೃತ್ತಿಯಿಂದಲೂ, ಮತ್ತು ವೈಶ್ಯ ಗುರುಗಳಾದ ಭಾಸ್ಕರಾಚಾರ್ಯರ ಆಶ್ರಯದಿಂದಲೂ ಜೀವನ ನಡೆಸಿಕೊಂಡು ಬಂದಿದ್ದಾರೆ. ನಾರಾಯಣಭಟ್ಟರ ಕಕ್ಕಂದಿರಾದ ಬಿಟ್ಟೇಶ ಭಟ್ಟರು ಗಣ್ಯ ಉಪಾಧ್ಯಾಯರಾಗಿದ್ದರು. ನಾರಾಯಣಭಟ್ಟರು ತಮ್ಮ ವಿದ್ಯಾರ್ಥಿ ಜೀವನವನ್ನು, ರಾಜಪುರೋಹಿತರಾದ ಸುಬ್ಬಾಶಾಸ್ತ್ರಿಗಳು, ದೇವೇಂದ್ರ ಕೃಷ್ಣಾಚಾರ್ಯರು  ಹಾಗೂ ಅರುಣಾಚಲ ಸ್ವಾಮಿಗಳ ಸನ್ನಿಧಿಯಲ್ಲಿ, ಸಂಸ್ಕೃತ, ಜ್ಯೋತಿಷ್ಯ, ಹಾಗೂ ವೇದಾಧ್ಯಯನದಲ್ಲಿ ಕಳೆದರು. ಶ್ರೀಯುತರು ನಮ್ಮೂರಿನ ಶಾಲೆಯ ವಿದ್ಯಾರ್ಥಿಗಳು. ಹಿಂದಿನ ಮದ್ರಾಸು ಪ್ರಾಂತದಲ್ಲಿ ಶಂಕರಮತ  ಪ್ರವಚನಕ್ಕೆ ತುಂಬಾ ಹೆಸರುವಾಸಿಯಾದವರು. ನಮ್ಮೂರಿನ ಶ್ರೀ ಶಂಕರಜಯಂತಿ ಸಭೆಯ ಕಾರ್ಯದರ್ಶಿಗಳಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ. ಈ ಸಭೆಯ ಆಶ್ರಯದಲ್ಲಿಯೇ ಸುಮಾರು ನಲವತ್ತೆರಡು ಹೊತ್ತಿಗೆಗಳನ್ನು ಹೊರತಂದಿದ್ದಾರೆ. ಈ ಸಂಘದ ಆಶ್ರಯದಲ್ಲಿಯೇ ಉಚಿತ ಉಪನಯನ ಕಾರ್ಯವನ್ನು ಕಳೆದ ಮೂರು ದಶಕಗಳಿಂದಲೂ ನಡೆಸಿಕೊಂಡು ಬಂದಿದ್ದಾರೆ. ಊರು ಮುಳುಗಿದ  ಸಮಯದಲ್ಲಿ, ನಾರಾಯಣಸ್ವಾಮಿ ದೇವಾಲಯವನ್ನು ಮರಿಯಮ್ಮನಹಳ್ಳಿಗೆ ಸ್ಥಳಾಂತರಿಸುವ ಕಾರ್ಯದಲ್ಲಿ ಮಹತ್ತರ ಪಾತ್ರವನ್ನು ವಹಿಸಿದ್ದರು. ಇವರ ಹಿರೇ ಮಗನಾದ ಶ್ರೀ ಶಂಕರ ಭಟ್ಟನು, ಮೇಧಾವಿಯಾಗಿದ್ದು, ಹೊಸಪೇಟೆಯ ಪೌಢಶಾಲೆಯಲ್ಲಿ ಉಪಾಧ್ಯಾಯನಾಗಿ ಸೇವೆ ಸಲ್ಲಿಸುತ್ತಾ ಇದ್ದಾನೆ.

No comments:

Post a Comment