Sunday, July 19, 2020

ಲಘು ಕತೆ.



                                           ಯಾರಿವನು ಮನ್ಮಥನು.....?
                          -----------------------------------------------------------
    
          
ಆತ ಫೋನುಮಾಡಿ ತನ್ನ ನೂತನ ಗೃಹಪ್ರವೇಶಕ್ಕೆ ಬರಬೇಕೆಂದು ಕರೆದಾಗ ಆಶ್ಚರ್ಯವೇನೋ ಆಯಿತು.ತನ್ನ ಎರಡನೆಯ ಹೆಂಡತಿಯೊಂದಿಗೆ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ಅವನಿಗೆ ಹೆಮ್ಮೆಯ ವಿಷಯ ಇರಬಹುದು! ಮೊದಲನೇ ಹೆಂಡತಿಯು ತೀರಿದ ಬಳಿಕವೂ ಆಕೆಯ ಕುಟುಂಬದವರ ಒಡನಾಟ ಬೇಕೆಂದು ಬಯಸುತ್ತಿರುವ ಅವನದು ಅದೆಂತಹ ಪರಿಪಾಠ! ಅಕ್ಕ ತಾನಾದರೋ ಸಹಜ,ತೃಪ್ತಿಕರ ಸಾವು ಕಂಡಿದ್ದರೆ ಬಹುಶಃ ನಾನು ಇಂದು ಅವನ ವಿಚಾರದಲ್ಲಿ ತಲೆಕೆಡಿಸಿಕೊಳ್ಳುವ ಗೋಜಿಗಾಗಲಿ ಅವನ ಬಗ್ಗೆ ಅಸಡ್ಡೆ ತೋರಲಾಗಲಿ ಹೋಗುತ್ತಿರಲಿಲ್ಲವೇನೋ ಎಂದು ಮನದಲ್ಲೇ ಏನೇನೋ ನೆನಪಿಸಿಕೊಳ್ಳಲಾರಂಭಿಸಿದಳು ರೇವತಿ.
ಹೌದು,ಅವಳ ನೆನಪು ಕಾಡಬೇಕಾದ್ದೇ ಜೀವನದ ಬಗ್ಗೆ ತಿಳಿಯದೆ, ಮದುವೆಯಾನಂತರದ ಬದುಕೇನೆಂಬ ಪರಿಕಲ್ಪನೆ ಇಲ್ಲದೆ, ಸಿನಿಮೀಯ ಪ್ರೇಮಕಥೆಗಳಂತೆಯೇ ನಿಜ ಬದುಕಿದೆ ಎಂದು ಪರಿಭಾವಿಸುತ್ತ ಪ್ರೇಮಲೋಕ ಚಿತ್ರ ಬಂದಾಗ ಯೌವ್ವನಾವಸ್ಥೆಯಲ್ಲಿದ್ದ ಅವಳು ತಾನು ಕನಸು ಕಂಡ ಯುವಕನನ್ನು ನೆನೆಯುತ್ತ "ಯಾರಿವನು ಮನ್ಮಥನು..." ಎಂದು ಕನಸಲ್ಲೇ ಡ್ಯುಯೆಟ್ ಹಾಡಿದ್ದವಳು. ಟಿ.ವಿ, ಸಿನಿಮಾಗಾಗಿ ಥಿಯೇಟರ್ ಗಳಿಗೆ ಅಲೆಯುತ್ತಾ, ನಗರದಲ್ಲೆಲ್ಲ ಸುತ್ತುವ,ಬೈಕಿನಲ್ಲಿ ಜಾಲಿ ರೈಡ್ ಕನಸು ಕಾಣುತ್ತ,ಸಿರಿವಂತಿಕೆಯ ಸೋಗಿನಲ್ಲಿ ಬದುಕು ನಡೆಸಬೇಕೆಂಬ ಅವಾಸ್ತವಿಕ ಪರಿಕಲ್ಪನೆಗಳ ಗುಂಗಲ್ಲೇ ಕಾಲ ತಳ್ಳಿದವಳು. ವಯಸ್ಸೇ ಹಾಗೆ ಆಕೆಯನ್ನೂ ಹೊರತುಪಡಿಸಲಾಗದು!

ದಿನಗಳು ಕಳೆದವು,ವಯಸ್ಸಾಗುತ್ತಾ ಬಂತು,ಮನೆಯಲ್ಲಿ ಅಕ್ಕಂದಿರೇ ಜಾಸ್ತಿ ಇದ್ದು ಅಣ್ಣತಮ್ಮಂದಿರು ಮೂವರೇ ಎಲ್ಲರನ್ನೂ ನಿಭಾಯಿಸುವ ಹೊಣೆಗಾರಿಕೆಯಲ್ಲಿ ಸೋಲುತ್ತ,ಗೆಲ್ಲಲಾಗದೇ ಬದುಕುತ್ತ ಇರಲು,ಗಂಡು ಸಿಕ್ಕಿದ್ದೇ ತಡ ಪೂರ್ವಾಪರ ವಿಚಾರಿಸುವ ಗೋಜಿಗೆ ಹೋಗದೆ ಮದುವೆ ಮಾಡಿಬಿಟ್ಟರು.

ಮನೆಯಲ್ಲೊಂದು ನೆನಪಿನ ಆಲ್ಬಂ ಒಂದಿರಿಸುವ,ಅಣ್ಣಂದಿರು ತಂಗಿಯ ಮದುವೆ ಮಾಡಿದರೆಂಬ ಊರವರ ಹೊಗಳಿಕೆಗೆ ಪಾತ್ರರಾಗುವ ಧಾವಂತವೊಂದು ಬಿಟ್ಟರೆ ಆಕೆಯ ಬದುಕಿನ ಬಗ್ಗೆ ಜವಾಬ್ದಾರಿಯಾಗಲಿ, ಕಾಳಜಿಯಾಗಲಿ ಯಾರಿಗೂ ಇರಲಿಲ್ಲ.

ಮದುವೆಯೇನೋ ಆಯಿತು.ಗಂಡ ಸರ್ಕಾರಿ ನೌಕರನಲ್ಲ.ಆಕೆಯಂದುಕೊಂಡ ಯಾವ ಕನಸುಗಳನ್ನೂ ಈಡೇರಿಸುವವನಲ್ಲ.ಈಕೆಯ ಮಾತಿಗೆ ಬೆಲೆಕೊಡುವವನಲ್ಲ.ಅವನ ಮನೆಯವರು ಯಾರೂ ಈಕೆಯನ್ನು ಸಹಿಸುವವರು ಖಂಡಿತಾ ಇರಲಿಲ್ಲ.

ಮೊದಲ ರಾತ್ರಿಯ ವಾಸ್ತವಿಕ ಕಲ್ಪನೆಯಿಲ್ಲದ( ಬಗ್ಗೆ ಎಲ್ಲರಲ್ಲೂ ಕಲ್ಪನೆ ಇರುತ್ತೆ,ವಾಸ್ತವಿಕ ಕಲ್ಪನೆ ಯಾರಲ್ಲೂ ಇರೊಲ್ಲ ಅನ್ನುವುದೂ ನಿಜವೇ!) ಆಕೆಯ ಸುಖಕ್ಕಾಗಿ ತುಂಬಾ ಕಾದಿದ್ದ ಅವನ ಹಾರ್ಷ್ ನಡಾವಳಿಗೆ ಸ್ಪಂದಿಸಲಾಗದೆ ಭಯಭೀತಳಾದ ಆಕೆ ತೌರುಮನೆಗೆ ಬಂದು ಠಿಕಾಣಿ ಹೂಡಿ,ಡೈವರ್ಸನ್ನೂ ಕೊಡದೆ,ಮತ್ತೆ ಗಂಡನನ್ನು ಸೇರದೆ ಹಾಗೆಯೇ ಕಳೆದುಹೋದ ಹದಿನೈದು ವರ್ಷಗಳ ಅಸಹನೆಯಲ್ಲೇ ಸಹಿಸಿಕೊಳ್ಳುತ್ತಾ ಅಂತ್ಯವಾದ ಅವಳ ಬದುಕಿನ ಯಶೋಗಾಥೆ...ಅವಳ ಸಾವಿನ ಸಂದರ್ಭದಲ್ಲಿ ಆಕೆಯ ತವರು ಮನೆಗೆ ಬಂದು ಶಾಸ್ತ್ರೋಕ್ತವಾಗಿ ಎಲ್ಲ ನಿಭಾಯಿಸಿ ಈತನ್ಮಧ್ಯೆ ಬದುಕಲ್ಲಿ ಬಹಳ ಬದಲಾದವನಾಗಿ ಕಂಡು ಎಲ್ಲರಿಗೂ ಅವನು ಪ್ರಿಯನಾದ ಪರಿ ಹೇಗೆಂಬುದನ್ನು ವಿವರಿಸಲಾಗದ ಅವ್ಯಕ್ತತೆ ಮನೆಯವರೆಲ್ಲರಲ್ಲೂ ಹುದುಗಿದೆ.
ಆದರೂ ಯಾವ ಸೋಗಿಗೆ ಸ್ವಚ್ಛಂದವಾದ(!)ಅವನ ಹೊಸ ಎರಡನೆಯ ಸಂಸಾರದಲ್ಲಿರುವ ಅವನನ್ನು ನೋಡಲು ತಾನೇಕೆ ಹೋಗಬೇಕೆಂಬ ಯಕ್ಷಪ್ರಶ್ನೆಯಲ್ಲೇ ರೇವತಿ ಮಲಗಿ ವಿರಮಿಸಿದಳು.

No comments:

Post a Comment